No Delete Option: ಮಾರುವೇಷದ ಹದ್ದುಗಳು; ವ್ಯವಸ್ಥಿತ ಮತಬ್ಯಾಂಕ್ ರಾಜಕೀಯದಾಟವಿದು, ಅರಿಯದ್ದೇನಲ್ಲ
Hijab Controversy : ‘ಅವಳು ದಿನವೂ ಬುರ್ಖಾ ಹಾಕಿಕೊಂಡು ಕಚೇರಿಗೆ ಬರುತ್ತಿದ್ದಳು. ರಕ್ಷಣಾ ತಪಾಸಣೆಗೆ ಅಡ್ಡಿಯಾಗುತ್ತದೆ ಮುಖ ತೆರೆದೇ ಇರಬೇಕು ಎಂದ ಸೆಕ್ಯೂರಿಟಿ. ಇದು ನನ್ನ ವೈಯಕ್ತಿಕ ಹಕ್ಕುಚ್ಯುತಿ ಮಾಡುತ್ತದೆ ಎಂದ ಆಕೆ, ಈ ವಿಷಯವನ್ನು ಪತ್ರಿಕೆಗಳಿಗೆ ತಿಳಿಸುವೆ ಎಂದು ಹೆದರಿಸಿದಳು.’ ನೂತನ ದೋಶೆಟ್ಟಿ
ನೋ ಡಿಲೀಟ್ ಆಪ್ಷನ್ | No Delete Option : ದಶಕದ ಹಿಂದಿನ ಘಟನೆ. ಅವಳು ಕಚೇರಿಗೆ ಹೊಸದಾಗಿ ಸೇರಿದ್ದಾಗ ಬುರ್ಖಾ ಹಾಕಿ ಬರುತ್ತಿದ್ದಳು. ಒಂದೆರಡು ದಿನ ಅವಳನ್ನು ಗಮನಿಸುತ್ತಿದ್ದ ಸೆಕ್ಯುರಿಟಿ ಗಾರ್ಡ್ ಮೂರನೇ ದಿನ ಮುಖ ಮುಚ್ಚಿ ಕಚೇರಿಗೆ ಬರಬಾರದು. ಇದರಿಂದ ನಮ್ಮ ರಕ್ಷಣಾ ತಪಾಸಣೆಗೆ ಅಡ್ಡಿಯಾಗುತ್ತದೆ. ಮೇಲಾಗಿ ಇದು ಸಾರ್ವಜನಿಕರಿಗೆ ನಿರ್ಬಂಧಿತ ಪ್ರದೇಶ ಎಂದು ಅವಳಿಗೆ ಹೇಳಿದರು. ಅದಕ್ಕೆ ಕೋಪದಿಂದ ಅವಳು ಇದರಿಂದ ನನ್ನ ವೈಯುಕ್ತಿಕ ಹಕ್ಕುಚ್ಯುತಿ ಆಗುತ್ತದೆ ಎಂದು ಆವರಣದಲ್ಲಿ ಎಲ್ಲರಿಗೂ ಕೇಳುವಂತೆ ಕೂಗಾಡಿದಳು.. ಇದು ಸೆಕ್ಯುರಿಟಿಯವರಿಗೂ ಇರುಸು ಮುರುಸಾಯಿತು. ಅವಳಿಗೆ ಎಚ್ಚರಿಕೆ ನೀಡಿ ನಾಳೆಯಿಂದ ಕಚೇರಿಯ ಒಳಗೆ ಬರುವಾಗ ಮುಖ ಕಾಣುವಂತಾಗಿರಬೇಕು ಎಂದರು. ಅವಳು ತಾನು ಇದನ್ನು ಪತ್ರಿಕೆಗೆ ಬರೆಯುವುದಾಗಿ ಹೆದರಿಸಿದಳು. ಅದಕ್ಕೆ ಅವರು ತಮ್ಮ ಡ್ಯೂಟಿ ತಾವು ಮಾಡುತ್ತಿದ್ದೇವೆ. ನೀವು ಹಠ ಹಿಡಿದರೆ ನಾಳೆಯಿಂದ ಒಳ ಬಿಡುವುದಿಲ್ಲ ಎಂದರು. ಅವಳಿಗೆ ಆ ಜಾಗದ ಸೂಕ್ಷ್ಮತೆಯ ಅರಿವಾಗಿರಬೇಕು. ಮಾರನೇ ದಿನದಿಂದ ಮುಖ ಕಾಣಿಸುವಂತೆ ಬರುತ್ತಿದ್ದಳು. ಸಮಸ್ಯೆ ಬಗೆ ಹರಿಯಿತು. ನೂತನ ದೋಶೆಟ್ಟಿ, ಲೇಖಕಿ
*
(ಭಾಗ 1)
ಇನ್ನೊಂದು ಘಟನೆ . ಪಿಕ್ನಿಕ್ಗೆ ಹೋದ ಹುಡುಗಿಯರು ಹಬ್ಬಗಳ ಬಗ್ಗೆ ಮಾತನಾಡುತ್ತ ಬಹುತೇಕ ಹಿಂದೂ ಹಬ್ಬಗಳ ಕುರಿತೇ ಹೇಳಿದರು. ಕೆಲ ಹೊತ್ತು ಕೇಳಿದ ಅವಳು ಸಿಡಿಯುತ್ತಾ ಹಬ್ಬ ಎಂದರೆ ಇಷ್ಟೇನೇ? ಇದರಲ್ಲಿ ಈದ್ ಏಕೆ ಸೇರಿಲ್ಲ ಎಂದಾಗ ದಂಗಾದ ಅವಳ ಸ್ನೇಹಿತರಿಗೆ ತಮ್ಮ ತಪ್ಪಿನ ಅರಿವಾಗಿ ಬೇಗ ಬೇಗ ಈದ್, ಕ್ರಿಸ್ಮಸ್ ಮೊದಲಾದ ಹಬ್ಬಗಳನ್ನೂ ಸೇರಿಸಿದರು. ವಾತಾವರಣ ತಿಳಿಯಾಯಿತು. ಇದು ದಶಕದ ಹಿಂದಿನ ಮಾತು.
ಆಗ ಈಗಿನಷ್ಟು ಅಸಹನೆ. ಇರಲಿಲ್ಲ. ಸ್ನೇಹ- ಬಾಂಧವ್ಯಗಳು ಎಲ್ಲರಿಗೂ ಮುಖ್ಯವಾಗಿತ್ತು . ಈದ್ ನಲ್ಲಿ ಶಿರ್ ಖುರ್ಮಾವನ್ನು ಸವಿದರೆ, ಕ್ರಿಸ್ಮಸ್ನಲ್ಲಿ ಕೇಕ್, ಉಳಿದಂತೆ ಹೋಳಿಗೆ, ಕಡುಬು, ಕರ್ಜಿಕಾಯಿ ಮೊದಲಾದ ಬಗೆಬಗೆ ಭಕ್ಷ್ಯಗಳನ್ನು ಎಲ್ಲರೂ ಸೇರಿ ಸವಿಯುತ್ತಿದ್ದರು. ಹದಿಹರೆಯದವರಲ್ಲಿ ಇಂಥ ಒಡನಾಟ ಸಾಮಾನ್ಯವಾಗಿತ್ತು. ಹಾಗೆಂದು ಹಿರಿಯರಲ್ಲೂ ಅಂಥ ಮುಜುಗರಗಳೇನಿರಲಿಲ್ಲ. ಪಾರ್ಕಿನ ಬೆಂಚಿನ ಮೇಲೆ ಎಲ್ಲರೂ ಸಾಲಾಗಿ ಕುಳಿತು ಮಾತಾಡುವುದು ಸಾಮಾನ್ಯ ದೃಶ್ಯವಾಗಿತ್ತು. ಹಬ್ಬಗಳಲ್ಲಿ ಸಿಹಿತಿಂಡಿಗಳ ಅದಲು ಬದಲೂ ಆಗುತ್ತಿತ್ತು. ಉಡುಪುಗಳಲ್ಲೂ ಬದಲಾವಣೆಗಳಿರಲಿಲ್ಲ.
ಡಾ. ಶಿವು ಅರಕೇರಿ ಬರೆದ ಇದನ್ನೂ ಓದಿ : No Delete Option: ಅಂದಿನ ಹಸಿವು ನಾಣ್ಯದಂತೆ ಸದ್ದು ಹೊರಡಿಸುತ್ತಿತ್ತು, ಇಂದಿನ ಹಸಿವು ನೋಟಿನಂತೆ ಮಲಗಿರುತ್ತದೆ
ಕೇವಲ ಒಂದು ದಶಕದಲ್ಲಿ ಪರಸ್ಪರರ ಉಡುಗೆ, ಆಚರಣೆಗಳನ್ನು ದ್ವೇಷಿಸುವ ಹಂತಕ್ಕೆ ಹೋದದ್ದಾದರೂ ಹೇಗೆ?
ಭಾರತದ ಇತಿಹಾಸದಲ್ಲಿ ದಾಳಿಕೋರರ ಸತತ ಹಾವಳಿಯಿಂದ ಸಾಕಷ್ಟು ಅನಾಹುತವಾಗಿದೆ. ಇದರಲ್ಲಿ ನಿರಂತರ ನಡೆದ ಲೂಟಿಯ ಜೊತೆಗೆ ಮತಾಂತರವೆಂಬ ದೊಡ್ಡ ಪಿಡುಗೂ ಸೇರಿದೆ. ಮೂಲನಿವಾಸಿಗಳ ಮತಾಂತರದ ಸಂಕರ ಇಂದು ಸಾಮಾಜಿಕ ಹಾಗೂ ರಾಜಕೀಯ ಸವಾಲಾಗಿ ನಿಂತಿದೆ. ಇದನ್ನು ಕಾಲಕಾಲಕ್ಕೆ ಹದವರಿತು ಸರಿಪಡಿಸುವ ಬದಲು ರಾಜಕೀಯ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ ಅವುಗಳನ್ನು ಬಳಸಿಕೊಂಡು ಇಂದಿನ ವಿರಾಟ್ ರೂಪದ ಕೂಪಕ್ಕೆ ನೂಕಿವೆ.
ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ, ಸಮಾನ ಹಕ್ಕು ಹಾಗೂ ಅವಕಾಶಗಳ ಬೇಡಿಕೆಗಾಗಿ ನಡೆದ ಚಳುವಳಿಗಳು ನಂತರ ಜಾತಿ, ಧರ್ಮಗಳ ಸ್ವರೂಪವನ್ನು ಪಡೆದದ್ದರ ಹಿಂದೆ ಇರುವ ವ್ಯವಸ್ಥಿತವಾದ ಮತಬ್ಯಾಂಕ್ ರಾಜಕೀಯದ ಆಟ ಅರಿಯದ್ದೇನಲ್ಲ. ಹೀಗೆ ಒಡೆದು ಆಳುವ ಪ್ರಭುಗಳ ನೀತಿ ಜನಸಾಮಾನ್ಯರನ್ನು ದಾಳವಾಗಿ ಕಾಲಕಾಲಕ್ಕೆ ಬಳಸುತ್ತಲೇ ಬಂದಿದೆ. ಇದು ಹೊಸದೂ ಅಲ್ಲ. ಆದರೆ ಇದಕ್ಕೆ ಹಸಿ ಮಣ್ಣಿನಂಥ ವಿದ್ಯಾರ್ಥಿಗಳನ್ನು ಬಳಸಿಕೊಂಡ ಉದಾಹರಣೆಗಳು ವಿರಳ. ಆಂಧ್ರಪ್ರದೇಶ, ಜಾರ್ಖಂಡ್, ಕಾಶ್ಮೀರ ಮೊದಲಾದ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಿರುವ ಕಡೆಗಳಲ್ಲಿ ವಿದ್ಯಾರ್ಥಿಗಳನ್ನು, ಯುವಜನರನ್ನು ಹಿಂಸಾತ್ಮಕ ಕ್ರಿಯೆಗಳಿಗೆ ಪ್ರಚೋದಿಸಿ ಅವರ ಜೀವನವನ್ನು ಮಣ್ಣುಪಾಲಾಗಿಸಿದ ಉದಾಹರಣೆಗಳು ಕಣ್ಣೆದುರು ಇವೆ.
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)
*
ಗಮನಿಸಿ : ನಿಮ್ಮ ಮನಸ್ಸಿನಲ್ಲಿ ಹೂತ ಯಾವ ಘಟನೆ, ಪ್ರಸಂಗ, ನೆನಪುಗಳನ್ನೂ ‘No Delete Option’ ಅಂಕಣದಲ್ಲಿ ಬರೆಯಬಹುದು. ನುಡಿ ಅಥವಾ ಯೂನಿಕೋಡ್ನಲ್ಲಿ ಕನಿಷ್ಟ 300, ಗರಿಷ್ಠ 800 ಪದಗಳಿರಲಿ. ಜೊತೆಗೆ ನಿಮ್ಮ ಭಾವಚಿತ್ರವೂ ಇರಲಿ. ಮೇಲ್ : tv9kannadadigital@gmail.com
ಡಾ. ಜ್ಯೋತಿ ಸಾಮಂತ್ರಿ ಬರೆದ ಇದನ್ನೂ ಓದಿ : No Delete Option: ಮರುದಿನ ಬೆಳಗ್ಗೆ ಪುಳಿಯೋಗರೆ; ಎಳ್ಳಿನ ಮುಖವಾಡ ಹೊತ್ತ ನುಸಿಸೈನ್ಯ ಮತ್ತು ಕರಿಪಾರಿವಾಳ
Published On - 2:57 pm, Sun, 20 February 22