ಆಂಧ್ರ ಅಸೆಂಬ್ಲಿ ಚುನಾವಣೆ: ಚಂದ್ರಬಾಬು ನಾಯ್ಡುಗೆ ಅಳಿವು ಉಳಿವಿನ ಪ್ರಶ್ನೆ, ಟಿಡಿಪಿಗೆ ಮತ್ತೆ ‘ಅಳಿಯನ ಕಂಟಕ’ ಎದುರಾಗಬಹುದೇ?

175 ಸದಸ್ಯರ ಆಂಧ್ರ ಪ್ರದೇಶ ವಿಧಾನಸಭೆಗೆ ಮುಂದಿನ ತಿಂಗಳು ಮೇ 13 ರಂದು ಚುನಾವಣೆ ನಡೆಯಲಿದೆ. ಜೈಲುವಾಸಿ ಚಂದ್ರಬಾಬು ನಾಯ್ಡುಗೆ ಈ ಚುನಾವಣೆ ಬಹಳ ಮಹತ್ವದ್ದು. ಖಚಿತವಾಗಿ ಗೆಲ್ಲಲೇಬೇಕು. ಇಲ್ಲವಾದಲ್ಲಿ ಅದರ ನಂತರ ಟಿಡಿಪಿ ಪಕ್ಷದ ಸ್ಥಿತಿ ಏನಾಗಬಹುದು ಎಂಬುದು ಎಲ್ಲರಿಗಿಂತಲೂ ಬಾಬುಗೇ ಚೆನ್ನಾಗಿ ಗೊತ್ತು! ಈ ಮಧ್ಯೆ, ಪಕ್ಷಕ್ಕೆ ಅಂಟಿಕೊಂಡಿರುವ ಅಳಿಯನ ಕಂಟಕ ಏನು? ಪಕ್ಷದ ಏಳುಬೀಳುಗಳ ಒಂದು ಅಧ್ಯಯನ ಇಲ್ಲಿದೆ.

ಆಂಧ್ರ ಅಸೆಂಬ್ಲಿ ಚುನಾವಣೆ: ಚಂದ್ರಬಾಬು ನಾಯ್ಡುಗೆ ಅಳಿವು ಉಳಿವಿನ ಪ್ರಶ್ನೆ, ಟಿಡಿಪಿಗೆ ಮತ್ತೆ 'ಅಳಿಯನ ಕಂಟಕ' ಎದುರಾಗಬಹುದೇ?
ಟಿಡಿಪಿಗೆ ಮತ್ತೆ 'ಅಳಿಯನ ಕಂಟಕ' ಎದುರಾಗಬಹುದೇ?
Follow us
|

Updated on: Apr 20, 2024 | 1:26 PM

ನಾರಾ ಚಂದ್ರಬಾಬು ನಾಯ್ಡು… ಟಿಡಿಪಿ ನಾಯಕ… ಆಂಧ್ರಪ್ರದೇಶ ರಾಜಕೀಯದಲ್ಲಿ ಮಾತ್ರವಲ್ಲದೆ ರಾಷ್ಟ್ರ ರಾಜಕಾರಣದಲ್ಲೂ ಸುದೀರ್ಘ ಅನುಭವ ಹೊಂದಿರುವ ನಾಯಕ. ತಮ್ಮ ರಾಜಕೀಯ ಜಾಣ್ಮೆಯಿಂದ ಪಕ್ಷವನ್ನು ಹಲವು ಬಿಕ್ಕಟ್ಟುಗಳಿಂದ ಪಾರು ಮಾಡುತ್ತಾ ಬಂದಿರುವ ಅವರು… ಅಖಂಡ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ, ವಿಭಜನೆಯ ನಂತರವೂ ತಮ್ಮದೇ ಶೈಲಿಯಲ್ಲಿ ಆಡಳಿತ ನಡೆಸಿದ ನಾಯಕ. ಆದರೆ ಇಷ್ಟು ವರ್ಷ ಎದುರಿಸಿದ ಪರೀಕ್ಷೆಗಳೇ ಬೇರೆ, ಇನ್ನು ಮುಂದಿನ ಪರೀಕ್ಷೆಯೇ ಬೇರೆ. ವಾಸ್ತವವಾಗಿ ಮೇ 13ರಂದು ನಡೆಯಲಿರುವ ಚುನಾವಣೆ ಅವರ ಪಕ್ಷದ ಭವಿಷ್ಯವನ್ನಷ್ಟೇ ಅಲ್ಲ ಅವರ ರಾಜಕೀಯ ಭವಿಷ್ಯವನ್ನೂ ನಿರ್ಧರಿಸಲಿದೆ. ಮತ್ತು ಅವರಿಗೂ ಇದರ ಬಗ್ಗೆ ತಿಳಿದಿದೆಯೇ? ಅದಕ್ಕೇ ಇಷ್ಟೆಲ್ಲಾ ದುಡಿಯುತ್ತಿದ್ದಾರಾ..? ಅವರು ಬಯಸಿದ ಫಲಿತಾಂಶವನ್ನು ಪಡೆಯದಿದ್ದರೆ… ವಾಟ್ ನೆಕ್ಸ್ಟ್​​​?

ಚಂದ್ರಬಾಬು ನಾಯ್ಡು – ದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರಧಾರಿ

ನಾರಾ ಚಂದ್ರಬಾಬು ನಾಯ್ಡು ಅವರು ಟಿಡಿಪಿ ಮುಖ್ಯಸ್ಥರಾಗಿ ದೇಶಾದ್ಯಂತ ಹೆಸರುವಾಸಿಯಾಗಿದ್ದಾರೆ. ಹೆಸರಿಗೆ ಅವರದು ಪ್ರಾದೇಶಿಕ ಪಕ್ಷವಾದರೂ ಅದೊಮ್ಮೆ NDA ಸಂಚಾಲಕರಾಗಿ ದೇಶ ರಾಜಕೀಯದಲ್ಲಿ ಚಕ್ರ ಉರುಳಿಸಿದ ವ್ಯಕ್ತಿ. ದೇಶದ ರಾಷ್ಟ್ರಪತಿ ಯಾರಾಗಬೇಕು? ಲೋಕಸಭೆಯ ಸ್ಪೀಕರ್ ಯಾರಾಗಬೇಕು… ಅಂದಿನ ಎನ್ ಡಿಎಗೆ ಯಾವ ಪಕ್ಷವನ್ನು ಹೇಗೆ ತರುವುದು…? ಹೀಗೆ ಬರೀ ರಾಜಕೀಯಕ್ಕಷ್ಟೇ ಅಲ್ಲ.. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಹೈಟೆಕ್ ಸಿಟಿ ನಿರ್ಮಾಣದೊಂದಿಗೆ ಬಿಲ್ ಗೇಟ್ಸ್, ಬಿಲ್ ಕ್ಲಿಂಟನ್ ರಂತಹ ಮಹಾನ್ ವ್ಯಕ್ತಿಗಳನ್ನು ಹೈದರಾಬಾದ್ ಗೆ ಕರೆತಂದ ಮುಖ್ಯಮಂತ್ರಿಯಾಗಿ… ವಿಷನ್ 2020, ಜನ್ಮಭೂಮಿ, ಆರ್ಥಿಕ ಸುಧಾರಣೆಗಳು ಒಂದಲ್ಲ ಎರಡಲ್ಲ.. ರಾಜಕೀಯವಾಗಿಯೂ ಮತ್ತು ಆಡಳಿತದ ದೃಷ್ಟಿಯಿಂದಲೂ ಅವರು ದೇಶದಾದ್ಯಂತ ಎಪಿ ಹೆಸರನ್ನು ವಿಶೇಷವಾಗಿ ಹೈದರಾಬಾದ್ ಹೆಸರನ್ನು ಬದಲಾಯಿಸಿದ ವ್ಯಕ್ತಿ ಎಂದು ಪ್ರಸಿದ್ಧರಾಗಿದ್ದಾರೆ. ಇನ್ನು ಇವರನ್ನು ಇಷ್ಟಪಡದವರೂ… ವಿರೋಧಿಗಳೂ ಇವರ ಬಗ್ಗೆ ನಾನಾ ರೀತಿಯ ಮಾತುಗಳನ್ನಾಡುತ್ತಾರೆ; ಅದು ಬೇರೆಯದ್ದೇ ವಿಷಯ.

ಚಂದ್ರಬಾಬು ನಾಯ್ಡು- ಜೀವನದ ಪ್ರಮುಖ ಕ್ಷಣಗಳು

ನಿಜವಾಗಿ ಅವರಿಗೆ ಮುಖ್ಯಮಂತ್ರಿ ಹುದ್ದೆ ಹೊಸದೇನಲ್ಲ… ಆ ದಿನಗಳಲ್ಲಿ ಅವರು ದೇಶ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಅವರಿಗೆ ಪ್ರಧಾನಿಯಾಗಿ ಅಧಿಕಾರ ಹಿಡಿಯುವ ಅವಕಾಶವಿದ್ದರೂ ಅದನ್ನು ನಿರಾಕರಿಸಿದರು. ಅವಿಭಜಿತ ಎಪಿ ರಾಜ್ಯದ ಸಿಎಂ ಆಗಿ ಕೆಲಸ ಮಾಡಿದ್ದಾರೆ. ವಿಭಜನೆಯ ನಂತರವೂ ಅವರು ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಆದರೆ ಇದೆಲ್ಲಾ ಗತವೈಭವ… ಐದು ವರ್ಷ ಅವರ ಪಕ್ಷ ವಿರೋಧ ಪಕ್ಷವಾಗಿತ್ತು. ಭ್ರಷ್ಟಾಚಾರ ಪ್ರಕರಣಗಳು ಅವರನ್ನು ಸುತ್ತುವರಿದಿದ್ದವು. ಅವರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಜೈಲು ಪಾಲಾದರು. ಒಂದಲ್ಲ.. ಎರಡಲ್ಲ 50 ದಿನಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ. ಇದುವರೆಗೂ ಎದುರಿಸದ ಪ್ರಬಲವಾದ ಶತ್ರು, ಅದು ಅಧಿಕಾರದಲ್ಲಿರುವ ಶತ್ರುವಾಗಿದ್ದು ತಮ್ಮ ಟಿಡಿಪಿ ಪಕ್ಷವನ್ನು ಅಂತ್ಯಗೊಳಿಸುವುದಾಗಿ ಪ್ರತಿಜ್ಞೆ ಮಾಡಿ ಅಖಾಡಕ್ಕೆ ಇಳಿದು ತೊಡೆತಟ್ಟಿದ್ದಾರೆ. ಚಂದ್ರಬಾಬು ಈಗ ಎಪಿ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಅವರನ್ನು ಎದುರಿಸುತ್ತಿದ್ದಾರೆ. ಅವರು ತನಗಿಂತ 23 ವರ್ಷ ಚಿಕ್ಕವರಾಗಿದ್ದಾರೆ. ಒಂದು ಕಾಲದಲ್ಲಿ ತಂದೆ ವೈ.ಎಸ್. ರಾಜಶೇಖರ ರೆಡ್ಡಿಯ ಕಟ್ಟಾ ವಿರೋಧಿಯಾಗಿದ್ದ ಚಂದ್ರಬಾಬು.. ಈಗ ಬಲಿಷ್ಠ ನಾಯಕನಾಗಿ ಹೊರಹೊಮ್ಮುತ್ತಿರುವ ಅತನ ಪುತ್ರನ ವಿರುದ್ಧ ಸೆಣಸಬೇಕಾಗಿರುವುದು ನಿಜಕ್ಕೂ ಒಂದು ವಿಧಿ ವಿಚಿತ್ರವೇ ಸರಿ.

ಆಂಧ್ರಪ್ರದೇಶದಲ್ಲಿ ಹಳೆಯ ರಾಜಕೀಯ ಈಗ ನಡೆಯುವುದಿಲ್ಲ. ಕೇವಲ 2 ಪಕ್ಷಗಳ ನಡುವೆಯಷ್ಟೇ ಸ್ಪರ್ಧೆ ಅಲ್ಲ. ಆ ದಿನಗಳಲ್ಲಿ ಆಂಧ್ರದಲ್ಲಿ ರಾಜಕೀಯ ಎಂಬುದಿದ್ದರೆ, ಕಾಂಗ್ರೆಸ್ ಅಥವಾ ಟಿಡಿಪಿ ಈ ಎರಡು ಪಕ್ಷಗಳ ನಡುವಣ ಕಾಳಗವಾಗಿತ್ತು. ಹಾಗಾಗಿಯೇ ಹತ್ತು ವರ್ಷ ವಿರೋಧ ಪಕ್ಷದಲ್ಲಿದ್ದರೂ ಪಕ್ಷವನ್ನು ಉಳಿಸಿಕೊಂಡು, ಮತ್ತೆ ಅಧಿಕಾರಕ್ಕೆ ತರಲು ಚಂದ್ರಬಾಬು ಅವರಿಗೆ ಸಾಧ್ಯವಾಯಿತು. ಆದರೆ ಈಗ ಆ ಪರಿಸ್ಥಿತಿಗಳು ಹಾಗಿಲ್ಲ.

ಈಗಲ್ಲದಿದ್ದರೆ ಮುಂದಿನ ಚುನಾವಣೆ ವೇಳೆಗೆ ನೋಡಿಕೊಳ್ಳೋಣ ಎಂದು ಯೋಚಿಸುವ ವಯಸ್ಸು ಈಗ ಚಂದ್ರಬಾಬು ಅವರದ್ದಲ್ಲ; ಜಗನ್, ಪವನ್ ಕಲ್ಯಾಣ್ ಅವರಂತೆ ಐವತ್ತರ ಹರೆಯದಲ್ಲಿಲ್ಲ ಬಾಬು. ಈಗ ಅವರ ವಯಸ್ಸು 74. ಹಾಗಾಗಿಯೇ ಈಗಿನ ಚುನಾವಣೆ ಟಿಡಿಪಿಗೆ ನಿರ್ಣಾಯಕ. ಟಿಡಿಪಿ ಈಗ ಗೆಲ್ಲದಿದ್ದರೆ, 2024 ರ ನಂತರ ಪಕ್ಷದ ಸ್ಥಿತಿ ಏನಾಗಬಹುದು ಎಂದು ಯಾರಿಗೂ ತಿಳಿದಿಲ್ಲ. 2029ರ ಚುನಾವಣೆ ವೇಳೆಗೆ ಚಂದ್ರಬಾಬು ಅವರ ವಯಸ್ಸು 79ಕ್ಕೆ ತಲುಪಲಿದೆ. ಹಾಗಾಗಿ ಈಗಿನ ಚುನಾವಣೆಯಲ್ಲಿ ಗೆದ್ದು ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬರುವುದು ಚಂದ್ರಬಾಬು ಅವರಿಗೆ ಮುಖ್ಯವಾಗಿದೆ.

ಚಂದ್ರಬಾಬು ನಾಯ್ಡು ಈಗ ಗೆಲ್ಲದಿದ್ದರೆ ಜೀವನದಲ್ಲಿ ಸೋತಂತೆ?

ಈಗ ಅಧಿಕಾರಕ್ಕೆ ಬರದಿದ್ದರೆ ಚಂದ್ರಬಾಬು ಅವರ ರಾಜಕೀಯ ಜೀವನ ಬಹುತೇಕ ಮುಗಿದಂತೆ. ಇದು ಅವರ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಕಷ್ಟದ ಮಾತಾದರೂ… ಅರಗಿಸಿಕೊಳ್ಳಲಾಗದ ಕಹಿ ಸತ್ಯ. ಇದು ಆ ನೇತಾರನಿಗೂ ಗೊತ್ತು ಎಂಬುದು ವಿಶೇಷ. ಅದಕ್ಕಾಗಿಯೇ ಈ ಬಾರಿಯ ಚುನಾವಣೆಯಲ್ಲಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಐದಾರು ವರ್ಷಗಳ ಹಿಂದೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ದೊಕಿಸಿಕೊಡುವ ವಿಷಯದಲ್ಲಿ ಮೋದಿಯವರನ್ನು ಕೆಣಕಿದ್ದರು. ಈಗ ಅದೇ ಮೋದಿ ಜತೆ ಕೈಜೋಡಿಸಿದ್ದಾರೆ. ಅದೂ ಕಳೆದ ಚುನಾವಣೆಯಲ್ಲಿ ನೋಟಾಕ್ಕಿಂತ ಕಡಿಮೆ ಮತ ಪಡೆದ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆಂದರೆ ಕಾರಣ ಏನಿರಬಹುದು ಎಂಬುದನ್ನು ಊಹಿಸಬಹುದು. ಗೆಲುವಿಗಾಗಿ ದಕ್ಕುವ ಯಾವ ಒಂದು ಅವಕಾಶವನ್ನೂ ಕಳೆದುಕೊಳ್ಳಬಾರದು ಎಂಬುದೇ ಇಲ್ಲಿನ ಬೀಜಮಂತ್ರವಾಗಿದೆ.

ಇನ್ನು ಪಕ್ಷದ ಬಗ್ಗೆ ಮಾತನಾಡೋಣ. ಟಿಡಿಪಿ ಹುಟ್ಟಿನಿಂದಲೂ ಅನೇಕ ರಾಜಕೀಯ ಬಿಕ್ಕಟ್ಟುಗಳನ್ನು ಕಂಡಿದೆ. ಪಕ್ಷವನ್ನು ಹುಟ್ಟುಹಾಕಿದ ಸಾಕ್ಷಾತ್​​ ಎನ್ ಟಿಆರ್ ಅವರೇ ಊಹಿಸದ ಅನೇಕ ವಿಕ್ಷಿಪ್ತ ಬೆಳವಣಿಗೆಗಳನ್ನು ಕಂಡರು. ವೈಸ್​​​ರಾಯ್ ಹೋಟೆಲ್ ಕಂಡ ಬೆಳವಣಿಗೆಗಳು.. ಅಲ್ಲಿ ಪಾರ್ಟಿಯನ್ನು ಮುಂದೆ ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಾರೋ ಎಂದು ಅಭಿಮಾನಿಗಳು ಚಿಂತಾಕ್ರಾಂತರಾಗಿದ್ದರು. ಅದೇ ಸಮಯದಲ್ಲಿ ಅಳಿಯ ಚಂದ್ರಬಾಬು ಅವರು ತಮ್ಮೆಲ್ಲಾ ರಾಜಕೀಯ ಚಾಣಾಕ್ಯತನವನ್ನೆಲ್ಲಾ ಬಳಸಿ ಇಡೀ ಪಕ್ಷವನ್ನು ದಿನಬೆಳಗಾಗುವುದರೊಳಗೆ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದು ಜನರಿಗೆ ತಡವಾಗಿ ಅರಿವಿಗೆ ಬಂದಿತು. ಈ ವಿಷಯದಲ್ಲಿ ಎಷ್ಟೇ ಟೀಕೆಗಳು ಬಂದರೂ ಬಾಬು ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ವಾಸ್ತವವಾಗಿ ಅಂದಿನ ಹೋಟೆಲ್​​ ವೈಸ್​​ರಾಯ್ ಎಪಿಸೋಡ್​​ ಟಿಡಿಪಿ ದೃಷ್ಟಿಯಲ್ಲಿ, ಆ ಪಕ್ಷದ ನೇತಾರರಲ್ಲಿ, ಕಾರ್ಯಕರ್ತರ ದೃಷ್ಟಿಯಲ್ಲಿ ಹಳತಾದ, ಹಳಸಿದ ಕಥೆಯಾಗಿದೆ. ಆ ಪ್ರಸಂಗದ ನಂತರ ಅವರು ಸುಮಾರು 9 ವರ್ಷಗಳ ಕಾಲ ಒಟ್ಟಿಗೆ ಇದ್ದರು. ಎಪಿಯನ್ನು ಅಕ್ಷರಶಃ ಆಳಿದರು. 2004 ರಲ್ಲಿ ವೈಎಸ್ ರಾಜಶೇಖರರೆಡ್ಡಿ ಪಾದಯಾತ್ರೆಯೊಂದಿಗೆ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದರೊಂದಿಗೆ ಟಿಡಿಪಿಗೆ ಸಂಕಷ್ಟದ ಮಾಲೆ ಶುರುವಾಯಿತು.

ಕಣಕ್ಕೆ ಇಳಿದ ಚಂದ್ರಬಾಬು ನಾಯ್ಡು ವಾರಸುದಾರ

63 ನೇ ವಯಸ್ಸಿನಲ್ಲಿ, ಅವರು 208 ದಿನಗಳ ಕಾಲ 16 ಜಿಲ್ಲೆಗಳು, 86 ವಿಧಾನಸಭಾ ಕ್ಷೇತ್ರಗಳು, 162 ಮಂಡಲಗಳು, 28 ಪುರಸಭೆಗಳು, 5 ನಿಗಮಗಳು ಮತ್ತು 1289 ಹಳ್ಳಿಗಳ ಮೂಲಕ 2,817 ಕಿಲೋಮೀಟರ್‌ ದೂರವನ್ನು 208 ದಿನಗಳಲ್ಲಿ ಕ್ರಮಿಸಿದರು. ರಾಜ್ಯ ವಿಭಜನೆ ಬಳಿಕ… ಆಗ ಬೇರ್ಪಟ್ಟ ಆಂಧ್ರಪ್ರದೇಶವನ್ನು ಮತ್ತೆ ಸುಸ್ಥಿರಗೊಳಿಸಲು ಚಂದ್ರಬಾಬು ಅವರ ಅನುಭವ ಕೆಲಸ ಮಾಡಲಿದೆ ಎಂದು ಎಪಿ ಜನತೆ ಬಲವಾಗಿ ನಂಬಿದ್ದಾರೆ. ಅದಕ್ಕಾಗಿ ದೇಶಾದ್ಯಂತ ಪವನ್ ಕಲ್ಯಾಣ್ ಹಾಗೂ ಮೋದಿ ಗಾಳಿ ಬೀಸಿದ್ದು, ಮೊದಲ ಸಿಎಂ ಆಗಿ ಚಂದ್ರಬಾಬು ಆಗಮನ ವಿಭಜಿತ ಎಪಿ, ಮತ್ತು ಟಿಡಿಪಿ ಗಾಗಿ ಉತ್ತಮ ದಿನಗಳಿವೆ ಎಂಬುದನ್ನು ಸಾರಿ ಹೇಳಿತು. ಅಧಿಕಾರದಲ್ಲಿರುವ ಪಕ್ಷಕ್ಕೆ ಯಾವ/ ಯಾರ ಅಡ್ಡಿ ಅಲ್ಲವಾ!? ಹಾಗಾಗಿಯೇ ಅವರ ಉತ್ತರಾಧಿಕಾರಿಯನ್ನೂ ರಂಗಕ್ಕೆ ಇಳಿಸಲಾಯಿತು. ಅದಕ್ಕೂ ಮುಂಚೆ 2009ರ ಚುನಾವಣೆಯಲ್ಲಿ ಟಿಡಿಪಿಗಾಗಿ ಖಾಕಿ ಬಟ್ಟೆ ಧರಿಸಿ, ಕೊರಳಿಗೆ ಹಳದಿ ಸ್ಕಾರ್ಫ್ ಧರಿಸಿ ಇಡೀ ರಾಜ್ಯವನ್ನು ಸುತ್ತಾಡುತ್ತಾ ಜೂ. ಎನ್‌ಟಿಆರ್ ಅಲ್ಲ; ಸ್ವತಃ ತಮ್ಮ ಪುತ್ರ ಲೋಕೇಶ್‌ಗೆ ಮಣೆ ಹಾಕತೊಡಗಿದರು. ಆ ಸಂದರ್ಭದಲ್ಲಿ ಕೇಳಿಬಂದ ಟೀಕೆಗಳಿಗೆ ಚಂದ್ರಬಾಬು ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ.

ಅಧಿಕಾರದಲ್ಲಿದ್ದುಕೊಂಡು ನಾರಾ ಲೋಕೇಶ್ ಅವರನ್ನು ಜನರಿಗೂ, ಪಕ್ಷಕ್ಕೂ ಅಭ್ಯಾಸವಾಗಿಸಿಕೊಳ್ಳುವಲ್ಲಿ ಚಂದ್ರಬಾಬು ನಿರತರಾದರು. ಆದರೆ ಮುಂದೆ ಲೋಕೇಶ್​​ಗೆ ತಮ್ಮ ತಂದೆಯ ನಂತರ ಪಕ್ಷವನ್ನು ನಡೆಸುವ ಶಕ್ತಿ ಎಷ್ಟಿದೆ ಎನ್ನುವುದನ್ನು ಕಾಲವೇ ಉತ್ತರಿಸಬೇಕು. ಲೋಕೇಶ್ ನನ್ನು ಆಪ್ತವಾಗಿ ಬಲ್ಲವರು ಪಾದಯಾತ್ರೆಯ ಮೊದಲು ಮತ್ತು ಆ ನಂತರವೂ ಲೋಕೇಶ್ ಲೋಕೇಶ್ ಅನ್ನುತ್ತಿದ್ದಾರೆ. ಪಾದಯಾತ್ರೆಯ ನಂತರ, ಜನರ ಜೊರೆ ಬೆರೆಯುವುದನ್ನು ಕಂಡ ಆಪ್ತರು ಅವರ ಶೈಲಿ ಸಾಕಷ್ಟು ಬದಲಾಗಿದೆ ಎಂದು ವಿಶ್ಲೇಷಿಸತೊಡಗಿದರು. ಜೊತೆಗೆ.. ಪಕ್ಷಕ್ಕೆ ಹಾಗೂ ಚಂದ್ರಬಾಬುಗೆ ತುಂಬಾ ಹತ್ತಿರವಾಗಿರುವವರು.. ದೇಶ, ರಾಜ್ಯದ ರಾಜಕೀಯವನ್ನು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುವ ಖ್ಯಾತ ವ್ಯಕ್ತಿಯೊಬ್ಬರಿಂದ ನಾರಾ ಲೋಕೇಶ್​​ ಅವರು ಸುಮಾರು 5-6 ತಿಂಗಳ ತರಬೇತಿ ಪಡೆದಿರುವುದಾಗಿಯೂ ಹೇಳುತ್ತಿದ್ದಾರೆ.

ಬಹುಶಃ ಅದು ಟಿಡಿಪಿಯ ವಿರೋಧಿಗಳಿಗೂ ಆರ್ಥವಾಗಿರಬಹುದು ಎಂದು ಕಾಣುತ್ತದೆ. ಈ ಮಧ್ಯೆ ರಾಜಕೀಯವಾಗಿ ಅವರು ಎಷ್ಟು ಪ್ರಬುದ್ಧರು… ಎಂಬುದನ್ನು ಸಾಬೀತುಪಡಿಸಬೇಕಾಗಿದೆ. ಚಂದ್ರಬಾಬು ಅನುಭವ, ರಾಜಕೀಯ ಚಾಣಾಕ್ಷತೆಯನ್ನು ಹೋಲಿಸಿದಾಗ ಮುಂದೆ ಮುಂದೆ ಭವಿಷ್ಯದಲ್ಲಿ ಲೋಕೇಶ್ ತನ್ನನ್ನು ತಾನು ಹೇಗೆ ಸಾಬೀತುಪಡಿಸಿಕೊಳ್ಳುತ್ತಾರೆ? ಎಂಬುದು ಸದ್ಯಕ್ಕೆ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಆದರೆ ನಿನ್ನೆ ಮೊನ್ನೆಯವರೆಗೂ ಪಕ್ಷದಲ್ಲಿ ಸಕ್ರಿಯರಾಗಿದ್ದ ಲೋಕೇಶ್ ಈಗ ಮಂಗಳಗಿರಿಯಲ್ಲಿ ತಾವು ಸ್ಪರ್ಧಿಸುತ್ತಿರುವ ಕ್ಷೇತ್ರಕ್ಕೆ ಮಾತ್ರವೇ ಸೀಮಿತವಾಗಿದ್ದಾರೆ ಎಂಬುದು ಎದ್ದುಕಾಣುತ್ತಿದೆ. ಎಪಿಯಲ್ಲಿ ಮೂರೂ ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟಾಗ ಲೋಕೇಶ್ ಪಾತ್ರ ಸೀಮಿತವಾಗಿದೆ ಎಂಬಂತೆ ತೋರುತ್ತಿದೆ. ಮಂಗಳಗಿರಿ ಅಸೆಂಬ್ಲಿ ಕ್ಷೇತ್ರದಿಂದ ಹೇಗಾದರರೂ ತಾನು ಯಶಸ್ವಿಯಾಗಲು ನಿರ್ಧರಿಸಿದಂತಿದೆ ಲೋಕೇಶ್​​. ಬಹುಶಃ ಅದಕ್ಕಾಗಿಯೇ ಅವರು ತಮ್ಮೆಲ್ಲಾ ಗಮನವನ್ನು ಆ ಕ್ಷೇತ್ರದತ್ತ ಕೇಂದ್ರೀಕರಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಥ್ಯಾಂಕ್ಸ್ ಟು ಚಂದ್ರಬಾಬು ನಾಯ್ಡು ಟಿಡಿಪಿ ಪಕ್ಷಕ್ಕೆ ಅಳಿಯನೇ ಗಂಡಾಂತರ?

ಅದೇ ವೇಳೆ, ಟಿಡಿಪಿಗೆ ಅಳಿಯನ ಗಂಡಾಂತರ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಹಿಂದೆ ಎನ್ ಟಿಆರ್ ವಿಷಯದಲ್ಲಿ ಅದು ಅನುಭವಕ್ಕೆ ಬಂದಿತ್ತು. ಪ್ರಸ್ತುತ ಟಿಡಿಪಿ ಪಕ್ಷವು ಚಂದ್ರಬಾಬು ನಾಯ್ಡು ಅಧಿಪತ್ಯದಲ್ಲಿಯೇ ಇದ್ದರೂ ಅಥವಾ ಲೋಕೇಶ್ ನಾಯಕತ್ವದಲ್ಲಿಯೇ ಇದ್ದರೂ ಅದು ಅಂಥಾ ದೊಡ್ಡ ಸಮಸ್ಯೆ, ವ್ಯತ್ಯಾಸ ಅಂತೇನೂ ಇಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲದಿದ್ದಲ್ಲಿ ಮತ್ತೊಮ್ಮೆ ಟಿಡಿಪಿಗೆ ‘ಅಳಿಯ” ಸಿಕ್ಕರೂ ಅಚ್ಚರಿ ಪಡಬೇಕಿಲ್ಲ ಎಂಬುದು ಮಾಧ್ಯಮಗಳಲ್ಲಿ ಬರುತ್ತಿರುವ ಕಥೆಗಳಿಂದ ಸ್ಪಷ್ಟವಾಗಿದೆ.

ಅಂದರೆ ಸದ್ಯಕ್ಕೆ ಜ್ಯೂನಿಯರ್ ಎನ್ ಟಿಆರ್ ರಾಜಕೀಯದಿಂದ ದೂರ ಉಳಿದಿದ್ದು, ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಅಂದರೆ ಸಿನಿ ರಂಗದಲ್ಲಿ ಅತ್ಯುತ್ತಮ ಪ್ರತಿಭೆ ತೋರಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅದರ ಸಮ್ಮುಖದಲ್ಲಿ ಪಕ್ಷದಲ್ಲಿ ಈ ಅಳಿಯನ ಪಾತ್ರ ಕಾಣಿಸಿಕೊಳ್ಳದೆ ಇರಬಹುದು. ಇದೇ ವೇಳೆ ಎರಡು ಕುಟುಂಬಗಳ ನಡುವೆ ಹಲವು ವರ್ಷಗಳಿಂದ ನಡೆಯುತ್ತಿರುವ ಶೀತಲ ಸಮರವನ್ನು ಗಮನಿಸಿದರೆ ಆ ಕೋಲ್ಡ್ ವಾರ್ ಕೊನೆಗೊಂಡು ಪಕ್ಷ ಇನ್ನಷ್ಟು ಒಗ್ಗೂಡುವ ಸಾಧ್ಯತೆಯೂ ಇದೆ ಎನ್ನಬಹುದು. ಆದರೆ ಅದೇ ಅಂತರ ಮತ್ತಷ್ಟು ಹೆಚ್ಚಾದರೆ ಮುಂದೆ ಟಿಡಿಪಿಗೆ ಬೇರೆಯದ್ದೇ ರಾಜಕೀಯ ಆಯಾಮ ದೊರೆಯಬಹುದು.

ಗಮನಿಸಿ, ಚಂದ್ರಬಾಬು ಜೈಲಿನಲ್ಲಿದ್ದಾಗ ಜೂನಿಯರ್ ಎನ್‌ಟಿಆರ್ ಅಥವಾ ಅವರ ಸಹೋದರ ಕಲ್ಯಾಣ್ ರಾಮ್ ಅವರಾಗಲೀ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆ ಬೆಳವಣಿಗೆಗಳನ್ನು ನೋಡಿದವರಿಗೆ ಎರಡು ಕುಟುಂಬಗಳ ನಡುವಿನ ಸಂಬಂಧದ ಬಗ್ಗೆ ಅನುಮಾನಗಳು ಹೆಚ್ಚಾಗತೊಡಗಿದವು. ಜೂನಿಯರ್ ಎನ್‌ಟಿಆರ್ ಈಗಾಗಲೇ ರಾಜಕೀಯಕ್ಕಾಗಿ ಜನರ ಬಳಿ ಹೋಗಿದ್ದಾರೆ. ಜೂನಿಯರ್ ಕೂಡ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿದ್ದಾರೆ. ಅದರೂ ನಂತರ ಅವರು ಸಂಪೂರ್ಣವಾಗಿ ಟಾಲಿವುಡ್​ ಗೆ ತಮ್ಮನ್ನು ಅರ್ಪಿಸಿಕೊಂಡರು.

ಒಂದು ವೇಳೆ ಮುಂಬರುವ ಚುನಾವಣೆಯಲ್ಲಿ ಟಿಡಿಪಿ ಛಿದ್ರಗೊಂಡರೆ ಪರಿಸ್ಥಿತಿ ಈಗಿರುವುದಕ್ಕೆ ತದ್ವಿರುದ್ಧವಾಗಲಿದೆ. ಆ ಸಂದರ್ಭದಲ್ಲಿ ಚಂದ್ರಬಾಬು ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಉದ್ಭವಿಸಿದಾಗ.. ಲೋಕೇಶ್ ಮತ್ತು ಜೂ. ಎನ್ ಟಿಆರ್ ನಡುವೆ ಹೋಲಿಕೆ ಬಂದಾಗ ಊಹಿಸಲೂ ಆಗದಂತಹ ಬೆಳವಣಿಗೆಗಳು ನಡೆಯಬಹುದು ಎಂದು ರಾಜಕೀಯ ಪಂಡಿತರು ಹೇಳುತ್ತಾರೆ. ಅದಕ್ಕೇ ಚಂದ್ರಬಾಬುಗೆ ಈ ಚುನಾವಣೆ ಬಹಳ ಮಹತ್ವದ್ದು. ಖಚಿತವಾಗಿ ಗೆಲ್ಲಬೇಕು; ಗೆಲ್ಲಲೇಬೇಕು. ಇಲ್ಲವಾದಲ್ಲಿ ಅದರ ನಂತರ ಪಕ್ಷದ ಸ್ಥಿತಿ ಏನಾಗಬಹುದು ಎಂಬುದು ಎಲ್ಲರಿಗಿಂತಲೂ ಬಾಬುಗೇ ಚೆನ್ನಾಗಿ ಗೊತ್ತು!

ತಾಜಾ ಸುದ್ದಿ