ಹಿಜಾಬ್ ವಿವಾದ: ಅತ್ತ ದರಿ, ಇತ್ತ ಪುಲಿ ಎಂಬಂತಾಗಿದೆ ಕರ್ನಾಟಕ ಕಾಂಗ್ರೆಸ್​ ಪರಿಸ್ಥಿತಿ! ಮುಂದೆ ಯಾವುದಯ್ಯಾ ದಾರಿ?

ಹಿಜಾಬ್ ವಿವಾದ: ಅತ್ತ ದರಿ, ಇತ್ತ ಪುಲಿ ಎಂಬಂತಾಗಿದೆ ಕರ್ನಾಟಕ ಕಾಂಗ್ರೆಸ್​ ಪರಿಸ್ಥಿತಿ! ಮುಂದೆ ಯಾವುದಯ್ಯಾ ದಾರಿ?
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ

ಇನ್ನು ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಬಲಿಷ್ಠ ಮುಸ್ಲಿಂ ನಾಯಕರು ಇದ್ದಾರಾ ಅಂದರೆ ಅದೂ ಇಲ್ಲ. ಅಲ್ಪಸಂಖ್ಯಾತ ಸಮುದಾಯವು ತನ್ನ ಪರ ಮಾತಾಡಲು ಕಾಂಗ್ರೆಸ್ ನಾಯಕರನ್ನೇ ನೆಚ್ಚಿಕೊಳ್ಳುವಾಂತಾಗಿದೆ ಕರ್ನಾಟಕದಲ್ಲಿ. ​​ಇದು ಪಕ್ಷದ ಗುರುತ್ವವನ್ನು ಪ್ರಶ್ನಿಸುವಂತಿದೆ. ಅದು ಅ ಕಡೆ ಈ ಕಡೆ ವಾಲಿದರೆ ಅದು ಪಕ್ಷವನ್ನು ಅಸಮತೋಲನಗೊಳಿಸಿಬಿಡುತ್ತದೆ ಎಂಬುದೇ ಅದರ ಆತಂಕವಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

TV9kannada Web Team

| Edited By: sadhu srinath

Feb 17, 2022 | 12:45 PM

ಬೆಂಗಳೂರು: ಹಿಜಾಬ್ ಧಾರಣೆ ವಿಚಾರ ಕರ್ನಾಟಕದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಸಾಕಷ್ಟು ಮುಜುಗರ ತಂದಿದ್ದು, ಹಿಜಾಬ್​ ಬಿರುಗಾಳಿಗೆ (Hijab row) ತರಗುಟ್ಟಿದಂತಿದೆ. ಈ ಮಧ್ಯೆ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ನಲ್ಲಿಯೂ ಭಿನ್ನ ಅಭಿಪ್ರಾಯಗಳ ಬಿರುಗಾಳಿಯನ್ನು ಎಬ್ಬಿಸಿದೆ. ಒಂದೆಡೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ (Congress Legislative Party Leader -CLP) ಸಿದ್ದರಾಮಯ್ಯ (Siddaramaiah) ಆಕ್ರಮಣಕಾರಿಯಾಗಿ ವಿಷಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಹಾತೊರೆಯುತ್ತಿದ್ದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ (Karnataka Pradesh Congress Committee- KPCC)) ಡಿಕೆ ಶಿವಕುಮಾರ್​ ಅವರ (DK Shivakumar) ಚಲನವಲನ, ಕಾರ್ಯತಂತ್ರ ನಿಧಾನಗತಿಯಿಂದ ಕೂಡಿದೆ. ಮುಖ್ಯವಾಗಿ ಅಧಿವೇಶನ ನಡೆಯುವಾಗ ಈ ವಿಷಯ ಮುನ್ನೆಲೆಗೆ ಬಂದಿರುವುದು ರಾಜಕೀಯ ಚದುರಂಗದಾಟಕ್ಕೆ ಮಣೆ ಹಾಕಿದಂತಾಗಿದೆ. ಒಬ್ಬೊಬರೂ ತಮ್ಮದೇ ಆದ ಕಾರ್ಯತಂತ್ರ, ಅನಿಸಿಕೆ- ಅಭಿಪ್ರಾಯಗಳನ್ನು ಹೊಂದಿದ್ದಾರೆ. ರಾಜಕೀಯ ದಾಳಗಳನ್ನು ಉರುಳಿಸುತ್ತಿದ್ದಾರೆ.

ಹಿಜಾಬ್ ಧಾರಣೆ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ಇಲ್ಲಸಲ್ಲದ್ದನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ತೀರ್ಮಾನಕ್ಕೆ ಬಂದಂತಿದೆ. ಆದರೆ ಕಾಂಗ್ರೆಸ್ ಶಾಸಕಾಂಗದ ನಾಯಕ ಆಕ್ರಮಕಾರಿಯಾಗಿರಲು ಬಯಸಿದ್ದಾರೆ. ಪಕ್ಷದೊಳಗಿನೀ ಭಿನ್ನ ಅಭಿಪ್ರಾಯಗಳು ತಾರಕಕ್ಕೆ ಹೋಗಿದ್ದು ಮಂಗಳವಾರ ಸಂಜೆ ಪಕ್ಷದ ಹೈ ಕಮಾಂಡ್​​ವರೆಗೂ ವಿಷಯ ಹೋಗಿದೆ. ಹೈ ಕಮಾಂಡ್ ಸೂಚನೆಯ ಮೇರೆಗೆ ಹಿಜಾಬ್ ಧಾರಣೆ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿ ನಾಯಕರು ನೀಡುವ ವಿವಾದಿತ ಹೇಳಿಕೆಗಳಿಗೆ ಮಾತ್ರ ಎಚ್ಚರಿಕೆಯ ಪ್ರತಿಕ್ರಿಯೆ ನೀಡುದೆಂದೂ ಅದತ ಹೊರತಾಗಿ ಶಾಲಾ ಕಾಲೇಜುಗಳ ಆವರಣದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಮೃದು ಪ್ರತಿಕ್ರಿಯೆ ನೀಡಬೇಕು ಎಂದೂ ತೀರ್ಮಾನಿಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿರುವ ಕಾಂಗ್ರೆಸ್​ ಕಚೇರಿಯಲ್ಲಿ 3 ಗಂಟೆಗಳ ಸುದೀರ್ಘ ಸಮಾಲೋಚನೆ ಬಳಿಕ ಮಾತನಾಡಿದ ಸಿದ್ದರಾಮಯ್ಯ ಹಿಜಾಬ್ ಧಾರಣೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವಿನ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಹಾಗಾಗಿ ಸಮ್ಮತದ ಸಮಾಲೋಚನೆ ಸಾಧಿಸಲು ಸಭೆ ಆಯೋಜಿಸಲಾಗಿತ್ತು. ಅದರಂತೆ ಸಭೆ ನಡೆಯಿತು. ಕಾಂಗ್ರೆಸ್​ ಪಕ್ಷ ಸದಾ ಅಲ್ಪ ಸಂಖ್ಯಾತರ ಪರ ನಿಲ್ಲುತ್ತದೆ. ನಾವು ಅಲ್ಪ ಸಂಖ್ಯಾತರು ಮತ್ತು ಸಂವಿಧಾನದ ಪರ ನಿಲ್ಲುತ್ತೇವೆ. ಸಂವಿಧಾನದಲ್ಲಿನ ಜಾತ್ಯಾತೀತ ನೀತಿಯನ್ನು ಎತ್ತಿಹಿಡಿಯುವುದು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ ಹಿಜಾಬ್ ಧಾರಣೆ ವಿಚಾರದಲ್ಲಿ ನಮ್ಮ ನಿಲುವಿನಲ್ಲಿ ಸ್ಪಷ್ಟತೆ ಇರಲಿಲ್ಲ. ಅದನ್ನೇ ನಾವು ಹಿರಿಯ ನಾಯಕರು ಸೇರಿಕೊಂಡು ಚರ್ಚಿಸಿ, ಒಂದು ತೀರ್ಮಾನಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಡಿಕೆ ಶಿಕುಮಾರ್ ಅವರು ರಾಷ್ಟ್ರಧ್ವಜ ಕುರಿತಾದ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡತುಂಡವಾಗಿ ಟೀಕಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಳ್ಳಹಿಡಿದಿದೆ. ಸರ್ಕಾರವು ಸಮಾಜದಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆಸಿದೆ. ನೊಂದ ಸಮಾಜಕ್ಕೆ ನಾವು ಧ್ವನಿಯಾಗಬೇಕಿದೆ. ಇದು ಕಾಂಗ್ರೆಸ್​​ ನಿಲುವಾಗಿದೆ ಎಂದು ಪಕ್ಷದ ಹಿರಿಯ ನಾಯಕರು News9 ಗೆ ತಿಳಿಸಿದ್ದಾರೆ. ಹಿಜಾಬ್ ವಿಷಯದಲ್ಲಿ ಎಚ್ಚರಿಕೆಯ ನಡೆಯಿಡಲು ಹೈಕಮಾಂಡ್​ ಕಿವಿಮಾತು ಹೇಳಿದೆ. ಈ ವಿಷಯದಲ್ಲಿ ಬಿಜೆಪಿ ಮೃಲುಗೈ ಸಾಧಿಸದಂತೆ ಎಚ್ಚರಿಕೆಯಿಂದ ಇರುವಂತೆ ತಾಕೀತು ಮಾಡಿದೆ. ಹಿಜಾಬ್ ವಿಷಯ ನ್ಯಾಯಾಲಯದಲ್ಲಿದ್ದು, ಯಾವುದೇ ಕೋಮು ಘಟನೆಗಳು ಸಂಭವಿಸಿದರೆ ಅದಕ್ಕೆ ಸರ್ಕಾರವನ್ನೇ ಹೊಣೆಯಾಗಿಸುವಂತೆ ಮಾಡಬೇಕು ಎಂದೂ ಹೈಕಮಾಂಡ್​ ಹಿತವಚನ ನುಡಿದಿರುವುದಾಗಿ ಅವರು ಹೇಳಿದ್ದಾರೆ.

ಹಿಜಾಬ್ ಧಾರಣೆ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್​ನಲ್ಲಿ ತಲೆದೋರಿದ್ದ ಬಿರುಗಾಳಿ ಸದ್ಯಕ್ಕೆ ಶಮನಗೊಂಡಂತಿದ್ದು, ಈ ವಿಷಯದಲ್ಲಿ ದಿಲ್ಲಿ ಹೈಕಮಾಂಡ್​ ನಾಯಕರು ಡಿಕೆ ಶಿವಕುಮಾರ್​ ವಿಚಾರಧಾರೆಗೆ ಮಣೆ ಹಾಕಿದ್ದಾರೆ ಎನ್ನಲಾಗಿದೆ. ಅವರ ನಿಲುವನ್ನು ಎತ್ತಿಹಿಡಿದಿದ್ದಾರೆ. ಇದರಿಂದ ಸಿದ್ದರಾಮಯ್ಯ ಅವರಿಗೆ ಇರುಸುಮುರುಸು ಉಂಟಾಗಿದ್ದು, ಅದರಿಂದ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಧಿವೇಶನದಲ್ಲಿ ನಡೆಯುತ್ತಿರುವ ವಿಷಯಗಳನ್ನೇ ಮುಂದಿಟ್ಟುಕೊಂಡು ಹೋರಾಡುವ ಕಾಂಗ್ರೆಸ್​ ನಿಲುವಿನಂತೆ ಸದ್ಯಕ್ಕೆ ಸಚಿವ ಈಶ್ವರಪ್ಪ ವಿಷಯವನ್ನೇ ಪ್ರಧಾನ ಗುರಿಯಾಗಿಸಿಕೊಳ್ಳಲಾಗಿದೆ. ಬುಧವಾರ-ಗುರುವಾರವೂ ಈಶ್ವರಪ್ಪ ವಿರುದ್ಧದ ಹೋರಾಟವೇ ಪ್ರಧಾನವಾಗಿದೆ ಕರ್ನಾಟಕ ಕಾಂಗ್ರೆಸ್ಸಿಗೆ. ಸದನದಲ್ಲಿ ಧರಣಿ‌ ಮುಂದುವರಿಸಲು ವಿಪಕ್ಷ ಕಾಂಗ್ರೆಸ್ ನಿರ್ಧಾರ ಮಾಡಿದೆ.

ಇಷ್ಟಕ್ಕೂ ಏನಾಗಿತ್ತೆಂದರೆ ಸಚಿವ ಈಶ್ವರಪ್ಪ ಇತ್ತೀಚೆಗೆ ಸುದ್ದಿಗಾರರ ಜೊತೆ ಮಾತನಾಡುತ್ತಾ ‘ಮುಂದೊಂದು ದಿನ ಭಗವಾಧ್ವಜವು ರಾಷ್ಟ್ರಧ್ವಜವಾಗುವ ಸಾಧ್ಯತೆಯಿದೆ’ ಎಂದು ಹೇಳಿದ್ದರು. ಈಶ್ವರಪ್ಪ ಈ ಹೇಳಿಕೆ ನೀಡಿ ಸಾಕಷ್ಟು ದಿನಗಳೇ ಘಟಿಸಿದ್ದರೂ ಕಾಂಗ್ರೆಸ್​ ನಾಯಕರು ಬಹುತೇಕ ಮೌನವಾಗಿ ಉಳಿದಿದ್ದರು. ಆದರೆ ಉಡುಪಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ತೊಡಗಿದಾಗಲಷ್ಟೇ ಸಿದ್ದರಾಮಯ್ಯ ಮೌನ ಮುರಿದರು. ಇದು ಡಿಕೆ ಶಿವಕುಮಾರ್​ ಅವರಿಗೆ ಇಷ್ಟವಾಗಲಿಲ್ಲ ಅನಿಸುತ್ತದೆ. ತಕ್ಷಣ ಅದನ್ನು ಹೈಕಮಾಂಡ್​ ಗಮನಕ್ಕೆ ತಂದು ಸಿದ್ದರಾಮಯ್ಯ ಅವರನ್ನು ಸೈಲೆಂಟ್​ ಆಗಿರುವಂತೆ ಮಾಡಿದರು. ಆದರೆ ಉಡುಪಿ ಹಿಜಾಬ್​ ವಿಚಾರ ಇತರೆ ಶಾಲಾ ಕಾಲೇಜುಗಳ ಅಂಗಳದಲ್ಲೂ ಸುಳಿಗಾಳಿ ಎಬ್ಬಿಸಿದಾಗ ಕಾಂಗ್ರೆಸ್ ಸುಮ್ಮನೆ ಕೂಡುವುದು ಬೇಡ ಎಂದು ಆಡಳಿತಾರೂಢ ಬಿಜೆಪಿ ಮೇಲೆ ಮುಗಿಬಿದ್ದಿತು. ​

ಈ ಮಧ್ಯೆ, ಹಿಜಾಬ್ ಧರಿಸಿದ ಮಂಡ್ಯ ವಿದ್ಯಾರ್ಥಿನಿ ಅಲ್ಲಾ ಹು ಅಕ್ಬರ್​ ಎಂದು ಕೂಗುತ್ತಿದ್ದಂತೆ ಹಿಜಾಬ್​ ವಿಷಯ ಮತ್ತಷ್ಟು ತೀವ್ರತೆ ಪಡೆಯಿತು. ಅನೇಕ ಜನಪ್ರತಿನಿಧಿಗಳು, ಮುಖಂಡರು ಹುಡುಕಿಕೊಂಡು ಬಂದು ಮಂಡ್ಯ ವಿದ್ಯಾರ್ಥಿನಿಗೆ ಅನೇಕ ಕಾಣಿಕೆಗಳನ್ನು ನೀಡತೊಡಗಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷದ ವೇದಿಕೆಯನ್ನು ಬಳಸದಂತೆ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದರು. ಇದರಿಂದ ಆಡಳಿತಾರೂಢ ಬಿಜೆಪಿ ಮೇಲುಗೈ ಸಾಧಿಸಿ, ಹಿಂದೂ ವೋಟ್​ ಬ್ಯಾಂಕ್​ ಗಟ್ಟಿಗೊಳಿಸುತ್ತದೆ ಎಂಬುದು ಶಿವಕುಮಾರ್​ ಅವರ ಭೀತಿಯಾಗಿತ್ತು. ಸರಿಯಾಗಿ ಇದೇ ವೇಳೆ ಕಾರ್ನಾಟಕ ಕಾಂಗ್ರೆಸ್​​ಗೆ ಮತ್ತೊಂದು ಆತಂಕವೂ ಎದುರಾಯಿತು. ಹಿಜಾಬ್​ ವಿಷಯದಲ್ಲಿ ತಾನು ಮೃಧುಧೋರಣೆ ವಹಿಸಿದರೆ ಮುಸ್ಲಿಂ ಮತಗಳು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್​ ಇಂಡಿಯಾ (Social Democratic Party of India -SDPI) ಕಡೆಗೆ ಸೆಳೆಯಲ್ಪಡುತ್ತವೆ ಎಂಬ ಆತಂಕ ಮನೆ ಮಾಡಿತು. ಎಸ್​ಡಿಪಿಐ ಪಾಪುಲರ್​ ಫ್ರಂಟ್​ ಆಫ್​ ಇಂಡಿಯಾ (Popular Front of India -PFI) ರಾಜಕೀಯ ಪಕ್ಷದ ಅಂಗವಾಗಿದೆ. ಇದು ಕರಾವಳಿ ಭಾಗದಲ್ಲಿ ಜನಪ್ರಿಯತೆ ಸಾಧಿಸುತ್ತಿದೆ.

ಇದರಿಂದ ಕರ್ನಾಟಕ ಕಾಂಗ್ರೆಸ್​ಗೆ ನಿಜಕ್ಕೂ ಕಠಿಣ ಸವಾಲು ಎದುರಾಗಿದೆ. ಕಾಂಗ್ರೆಸ್ ಪಕ್ಷ ಹಿಜಾಬ್​ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ಅದು ಬಿಜೆಪಿಗೆ ವರದಾನವಾಗಲಿದೆ. ಪಕ್ಷವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಾವು ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಅದೇ ವೇಳೆ ನಾವು ಹಿಂದೂಗಳ ಭಾವನೆಯನ್ನು ಘಾಸಿಗೊಳಿಸುತ್ತಿದ್ದೇವೆ ಎಂಬ ಸಂದೇಶವೂ ರವಾನೆಯಾಗದಂತೆ ಎಚ್ಚರ ವಹಿಸುವುದು ಅತಿಮುಖ್ಯವಾಗುತ್ತದೆ ಎಂದು ಬೆಂಗಳೂರಿನ ಶಾಸಕರೊಬ್ಬರು News 9 ಜೊತೆ ಮಾತನಾಡುತ್ತಾ ಹೇಳಿದರು.

ಇನ್ನು ಹಿಜಾಬ್​ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ದ್ವಂದ್ವ ಮತ್ತು ಗೊಂದಲದ ನಿಲುವಿನ ಬಗ್ಗೆ ಮಾತನಾಡಿದ ಕರ್ನಾಟಕ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರದ ಪ್ರೊಫೆಸರ್​ ಮತ್ತು ರಾಜಕೀಯ ವಿಶ್ಲೇಷಣಕಾರ ಡಾ. ಹರೀಶ್ ರಾಮಸ್ವಾಮಿ ಅವರು ರಾಜ್ಯ ಕಾಂಗ್ರೆಸ್​ ತನ್ನ ದಿಲ್ಲಿ ಹೈಕಮಾಂಡ್​ ನಿಲುವಿನ ಜೊತೆ ಹೋಗಲು ನಿರ್ಧರಿಸಿದೆ. ಆದರೆ ಅತ್ತ ಬಿಜೆಪಿ ಸದಾ ಕಾಂಗ್ರೆಸ್​ ಹಿಂದೂ ವಿರೋಧಿ ಮತ್ತು ಮುಸ್ಲಿಮರ ಓಲೈಕೆಯಲ್ಲಿ ತೊಡಗುತ್ತದೆ ಎಂದು ಬಿಂಬಿಸುತ್ತಾ ಬಂದಿದೆ. ಪುರಾತನ ಕಾಂಗ್ರೆಸ್​ ಪಕ್ಷದ ವಿರುದ್ಧ ಬಿಜೆಪಿಗೆ ಸದಾ ಇದೇ ಬ್ರಹ್ಮಾಸ್ತ್ರವಾಗಿ ಪರಿಣಮಿಸುತ್ತದೆ. ಆದರೆ ವಾಸ್ತವದಲ್ಲಿ ಮುಸ್ಲಲ್ಮಾನರನ್ನು ಓಲೈಸುವ ಕಾಂಗ್ರೆಸ್ ಆ ಸಮುದಾಯಕ್ಕೆ ಹೆಚ್ಚಿನದೇನನ್ನೂ ಮಾಡಿಲ್ಲ. ಹಾಗೆ ನೋಡುವುದಾದರೆ ಸಿದ್ದರಾಮಯ್ಯ ತೆಗೆದುಕೊಂಡ ನಿಲುವು ಸಮಂಜಸವಾಗಿತ್ತು. ಯಾರೇ ಆಗಲಿ ಪಕ್ಷದ ನಾಯಕರು ಅಂತಹ ನಿರ್ಧಾರ ತೆಗೆದುಕೊಳ್ಳಲಿ ಎಂದು ಬಯಸುತ್ತಾರೆ. ಆದರೆ ಹೈಕಮಾಂಡ್​ ಲೆಕ್ಕಾಚಾರವೇ ಬೇರೆ. ಸಿದ್ದರಾಮಯ್ಯ ಹೇಳಿದಂತೆ ಮುಸ್ಲಲ್ಮಾನರ ಪರ ನಿಂತರೆ, ಅದನ್ನು ಸಮಂಜಸವಾಗಿ ಸಮರ್ಥಿಸಿಕೊಳ್ಳುವುದಕ್ಕೆ ಪಕ್ಷಕ್ಕೆ ಕಷ್ಟಸಾಧ್ಯವಾಗುತ್ತದೆ. ಇದೇ ಹೈಕಮಾಂಡ್​ಗೆ ತಲೆಬಿಸಿಯಾಗಿದ್ದು. ಕಾಂಗ್ರೆಸ್​​ನ ಕೇಂದ್ರ ನಾಯಕರು ದೇವಾಲಯಗಳ ಬಗ್ಗೆ ಮಾತನಾಡುತ್ತಾ ತಾನು ಹಿಂದೂ ಪರ ಎಂದು ಬಿಂಬಿಸುತ್ತಿರುವ ಸಂದರ್ಭದಲ್ಲಿಯೇ ಇಲ್ಲಿ ಕರ್ನಾಟಕದಲ್ಲಿ ಹಿಜಾಬ್​ ಪರ ನಿಲ್ಲುವುದು ದ್ವಂದ್ವವಾದೀತು ಎಂಬುದು ಹೈಕಮಾಂಡ್​ ಆಲೋಚನೆಯಾಗಿತ್ತು. ಕಾಂಗ್ರೆಸ್​​ಗೆ ಇದೇ ಮುಳುಬಾಗಿದ್ದು ಎಂದು ವಿಶ್ಲೇಷಿಸಿದ್ದಾರೆ

ಇನ್ನು ಮೈಸೂರುವಿಶ್ವವಿದ್ಯಾಲಯದ ಪ್ರೊಫೆಸರ್, ರಾಜಕೀಯ ಸಂವೇದಿ ಮುಜಫರ್ ಅಸಾದಿ ಹೇಳುವಂತೆ ಕಾಂಗ್ರೆಸ್​ ಎಚ್ಚರಿಕೆಯ ನಡೆಯಿಡುತ್ತಿದೆ. ಏಕೆಂದರೆ ತಾನು ತೆಗೆದುಕೊಳ್ಳುವ ನಿರ್ಧಾರದಿಂದ ತನ್ನ ವೋಟ್​ ಬ್ಯಾಂಕ್​ಗೆ ‘ಶಾಶ್ವತ ಅನಾಹುತ’ವಾಗಿಬಿಟ್ಟರೆ ಎಂಬ ಭೀತಿ ಅದನ್ನು ಹೆಚ್ಚು ಕಾಡುತ್ತಿದೆ. ಕಾಂಗ್ರೆಸ್​ ಏನೇ ನಿರ್ಧಾರ ತೆಗೆದುಕೊಂಡರೂ ಸಾಮಾಜಿಕವಾಗಿ ಅದು ಕಾಂಗ್ರೆಸ್​​ಗೆ ಮುಳುಗುನೀರು ತರಲಿದೆ. ಬಾಬರಿ ಮಸೀದಿ ವಿಷಯವನ್ನೇ ತೆಗೆದುಕೊಳ್ಳಿ. ಅದು ಕಾಂಗ್ರೆಸ್​ ಪುನಃಶ್ಚೇತನಕ್ಕೆ ಅವಕಾಶವನ್ನೇ ನೀಡಲಿಲ್ಲ. ಹಾಗೆಯೇ ಇದು ಎಂದು ವಿಶ್ಲೇಷಿಸಿದ್ದಾರೆ.

ಕರ್ನಾಟಕದಲ್ಲಿ ಶೇ. 14 ರಷ್ಟು ಮುಸ್ಲಿಂ ಮತಗಳಿವೆ. ಅಂದರೆ ಒಂದು ಕೋಟಿ ಮಂದಿ ಮುಸಲ್ಮಾನರಿದ್ದಾರೆ. ಅಂದರೆ ಇದು 30 ವಿಧಾನಸಭಾ ಕ್ಷೇತ್ರಗಳಿಗೆ ಸಮವಾಗಲಿದೆ. ಒಮ್ಮೆ ಕಾಂಗ್ರೆಸ್ ಹೀಗೆ ಎದ್ದೇಳುವುದಕ್ಕೆ ಕಷ್ಟವಾಗಿಬಿಡುತ್ತದೆ. ಸರಿಯಾಗಿ ಆಗಲೇ ಓವೈಸಿ, ಅಥವಾ ಎಸ್​ಡಿಪಿಐ ಆ ಜಾಗವನ್ನು ಆಕ್ರಮಿಸಿಕೊಳ್ಳುವುದು. ಇದೇ ಸದ್ಯ ಕಾಂಗ್ರೆಸ್​ಗೆ ಎದುರಾಗಿರುವ ಭೀತಿ. ಹಾಗಾಗಿಯೇ ಅದು ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ. ​

ಇನ್ನು ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಬಲಿಷ್ಠ ಮುಸ್ಲಿಂ ನಾಯಕರು ಇದ್ದಾರಾ ಅಂದರೆ ಅದೂ ಇಲ್ಲ. ಅಲ್ಪಸಂಖ್ಯಾತ ಸಮುದಾಯವು ತನ್ನ ಪರ ಮಾತಾಡಲು ಕಾಂಗ್ರೆಸ್ ನಾಯಕರನ್ನೇ ನೆಚ್ಚಿಕೊಳ್ಳುವಾಂತಾಗಿದೆ ಕರ್ನಾಟಕದಲ್ಲಿ. ​​ಇದು ಪಕ್ಷದ ಗುರುತ್ವವನ್ನು ಪ್ರಶ್ನಿಸುವಂತಿದೆ. ಅದು ಅ ಕಡೆ ಈ ಕಡೆ ವಾಲಿದರೆ ಅದು ಪಕ್ಷವನ್ನು ಅಸಮತೋಲನಗೊಳಿಸಿಬಿಡುತ್ತದೆ ಎಂಬುದೇ ಅದರ ಆತಂಕವಾಗಿದೆ ಎನ್ನುತ್ತಾರೆ ಪ್ರೊಫೆಸರ್ ಮುಜಫರ್ ಅಸಾದಿ. (ಮಹೇಶ್​ ಚಿಟ್ನೀಸ್ – Mahesh Chitnis)

Follow us on

Related Stories

Most Read Stories

Click on your DTH Provider to Add TV9 Kannada