CWG 2022: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯರ ಈ ಐತಿಹಾಸಿಕ ಸಾಧನೆಗಳ ಬಗ್ಗೆ ನಿಮಗೆಷ್ಟು ಗೊತ್ತು?
Commonwealth Games 2022: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಗಳು ಸೇರಿದಂತೆ ಒಟ್ಟು 322 ಸದಸ್ಯರ ಭಾರತೀಯ ತಂಡವು ಭಾಗವಹಿಸಲಿದೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28 ರಿಂದ ಆಗಸ್ಟ್ 8ರವರೆಗೆ ನಡೆಯಲಿರುವ 22ನೇ ಆವೃತ್ತಿಯ ಕಾಮ್‌ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games 2022) ಭಾರತದ 215 ಕ್ರೀಡಾಪಟುಗಳು ಸೇರಿದಂತೆ 5 ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. 1930 ರಲ್ಲಿ ಹ್ಯಾಮಿಲ್ಟನ್‌ನಲ್ಲಿ ಶುರುವಾದ ಈ ಕ್ರೀಡಾಕೂಟವನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಇನ್ನು ಈ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಭಾರತೀಯ ಕ್ರೀಡಾಪಟುಗಳು ಕಾಣಿಸಿಕೊಂಡಿದ್ದು 1934 ರಲ್ಲಿ. ಅಲ್ಲಿಂದೀಚೆ ಪ್ರತಿ ವರ್ಷ ಭಾರತೀಯ ಸ್ಪರ್ಧಿಗಳು ಭಾಗವಹಿಸುತ್ತಾ ಬಂದಿದ್ದಾರೆ. ಇದೀಗ ಇಂಗ್ಲೆಂಡ್ನಲ್ಲಿ ನಡೆಯಲಿರುವ 22ನೇ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇನ್ನೂರಕ್ಕೂ ಅಧಿಕ ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಹಾಗೆಯೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇದುವರೆಗಿನ ಭಾರತೀಯರ ಸಾಧನೆಗಳೇನು, ನಡೆದು ಬಂದ ಹಾದಿಯೇನು ಎಂಬುದರ ಹಿನ್ನೋಟ ಇಲ್ಲಿದೆ..
- ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದು ಕುಸ್ತಿಪಟು ರಶೀದ್ ಅನ್ವರ್. 1934 ರಲ್ಲಿ ಲಂಡನ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ರಶೀದ್ ಹೊಸ ಇತಿಹಾಸ ಬರೆದಿದ್ದರು.
- 1934 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕೇವಲ ಆರು ಭಾರತೀಯ ಕ್ರೀಡಾಪಟುಗಳು ಮಾತ್ರ ಭಾಗವಹಿಸಿದ್ದರು.
- 1934 ರ ಕ್ರೀಡಾಕೂಟದಲ್ಲಿ ಆರು ಸದಸ್ಯರ ಭಾರತ ತಂಡವು ಅಥ್ಲೆಟಿಕ್ಸ್ ಮತ್ತು ಕುಸ್ತಿ ವಿಭಾಗಗಳಲ್ಲಿ ಮಾತ್ರ ಸ್ಪರ್ಧಿಸಿತ್ತು. ಅಲ್ಲದೆ ಚೊಚ್ಚಲ ಸೀಸನ್ನಲ್ಲೇ ಕುಸ್ತಿಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ರಶೀದ್ ಅನ್ವರ್ ಇತಿಹಾಸ ನಿರ್ಮಿಸಿದ್ದರು.
- ಇನ್ನು ಭಾರತಕ್ಕೆ ಚಿನ್ನದ ಪದಕ ಸಿಕ್ಕಿದ್ದು 1958 ರಲ್ಲಿ. ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಅವರು ಕಾರ್ಡಿಫ್ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.
- 1978 ರಲ್ಲಿ ಕೆನಡಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಅಮಿ ಘಿಯಾ ಮತ್ತು ಕನ್ವಾಲ್ ಥಕರ್ ಸಿಂಗ್ ಜೋಡಿಯು ಬ್ಯಾಡ್ಮಿಂಟನ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿಯರು ಎನಿಸಿಕೊಂಡರು.
- ಡಿಸ್ಕಸ್ ಎಸೆತಗಾರ ಕೃಷ್ಣ ಪೂನಿಯಾ ಅವರು ಮಿಲ್ಕಾ ಸಿಂಗ್ ಅವರ ಐತಿಹಾಸಿಕ ಸಾಧನೆಯನ್ನು 52 ವರ್ಷಗಳ ನಂತರ ಸರಿಗಟ್ಟಿದ್ದರು. 2010 ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪೂನಿಯಾ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು.
- ಶೂಟರ್ ರೂಪಾ ಉನ್ನಿಕೃಷ್ಣನ್ ಅವರು ಕೌಲಾಲಂಪುರದಲ್ಲಿ 1998 ರ ಆವೃತ್ತಿಯ ಕ್ರೀಡಾಕೂಟದಲ್ಲಿ ಮಹಿಳೆಯರ 50 ಮೀಟರ್ ರೈಫಲ್ ಪ್ರೋನ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಲ್ಲದೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು.
- ಇಲ್ಲಿಯವರೆಗೆ, ಭಾರತವು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು 503 ಪದಕಗಳನ್ನು ಗೆದ್ದಿದೆ.
- ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಸ್ಪರ್ಧಿಗಳು ಕೇವಲ ಎರಡು ಬಾರಿ ಮಾತ್ರ ಪದಕವಿಲ್ಲದೆ ಮರಳಿದ್ದರು. 1938 (ಸಿಡ್ನಿ) ಮತ್ತು 1954 (ವ್ಯಾಂಕೋವರ್) ರಲ್ಲಿ ಕ್ರೀಡಾಕೂಟದಲ್ಲಿ ಭಾರತೀಯ ಸ್ಪರ್ಧಿಗಳು ಯಾವುದೇ ಪದಕ ಗೆದ್ದಿರಲಿಲ್ಲ.
- 2010 ರಲ್ಲಿ ಎಡ್ಮಂಟನ್ ಅನ್ನು 46-22 ಅಂತರಗಳಿಂದ ಹಿಂದಿಕ್ಕಿ ದೆಹಲಿಯು ಕಾಮನ್‌ವೆಲ್ತ್ ಗೇಮ್ಸ್‌ನ ಆತಿಥ್ಯ ಹಕ್ಕುಗಳನ್ನು ಪಡೆದುಕೊಂಡಿತ್ತು.
- ಬಿಆರ್ ಚೋಪ್ರಾ ಅವರ ಮಹಾಭಾರತ ಧಾರಾವಾಹಿಯ ಭೀಮನ ಪಾತ್ರಧಾರಿ ಪ್ರವೀಣ್ ಕುಮಾರ್ ಸೋಬ್ತಿ ಅವರು 1966 ರ ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.
- ಮ್ಯಾಂಚೆಸ್ಟರ್‌ನಲ್ಲಿ ನಡೆದ 2002ರ ಆವೃತ್ತಿಯ ಕ್ರೀಡಾಕೂಟದ ನಂತರ ಭಾರತವು ಪದಕಗಳ ಪಟ್ಟಿಯಲ್ಲಿ ಟಾಪ್-5 ನಲ್ಲಿ ಕಾಣಿಸಿಕೊಳ್ಳುತ್ತಾ ಬಂದಿದೆ.
- 2006 ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಡಿಸ್ಕಸ್ ಎಸೆತಗಾರ ರಂಜಿತ್ ಕುಮಾರ್ ಕಂಚಿನ ಪದಕ ಗೆಲ್ಲುವ ಮೂಲಕ, ಈ ಸಾಧನೆ ಮಾಡಿದ ಮೊದಲ ಭಾರತೀಯ ಪ್ಯಾರಾ-ಅಥ್ಲೀಟ್ ಎನಿಸಿಕೊಂಡರು.
- ಕಾಮನ್‌ವೆಲ್ತ್ ಕ್ರೀಡಾಕೂಟದ ಅತ್ಯಂತ ಯಶಸ್ವಿ ಭಾರತೀಯ ಅಥ್ಲೀಟ್ ಶೂಟರ್ ಜಸ್ಪಾಲ್ ರಾಣಾ. ಜಸ್ಪಾಲ್ ಅವರು ಇದುವರೆಗೆ ಭಾರತಕ್ಕಾಗಿ ಒಟ್ಟು 15 ಪದಕಗಳನ್ನು ಗೆದ್ದಿದ್ದಾರೆ.
- ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಗಳು ಸೇರಿದಂತೆ ಒಟ್ಟು 322 ಸದಸ್ಯರ ಭಾರತೀಯ ತಂಡವು ಭಾಗವಹಿಸಲಿದೆ. ಇದರಲ್ಲಿ 215 ಕ್ರೀಡಾಪಟುಗಳಿದ್ದು, ಇವರು 19 ಕ್ರೀಡೆಗಳ ಮೂಲಕ 141 ವಿವಿಧ ಸ್ಪರ್ಧೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ
Published On - 4:45 pm, Sat, 23 July 22