AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ನಿಜವಾದ ‘ಸ್ಪಷ್ಟತೆ’… ಗೆಲುವಿನ ಬಳಿಕ ರಜತ್ ಪಾಟಿದಾರ್ ಹೇಳಿದ್ದೇನು?

IPL 2026. RCB vs MI: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 240 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 222 ರನ್​ಗಳಿಸಿ, 18 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಇದು ನಿಜವಾದ 'ಸ್ಪಷ್ಟತೆ'... ಗೆಲುವಿನ ಬಳಿಕ ರಜತ್ ಪಾಟಿದಾರ್ ಹೇಳಿದ್ದೇನು?
Rajat Patidar
ಝಾಹಿರ್ ಯೂಸುಫ್
|

Updated on: Apr 13, 2026 | 11:05 AM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಬಾರಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ 50 ರನ್ ಬಾರಿಸಿದರೆ, ಫಿಲ್ ಸಾಲ್ಟ್ 78 ರನ್ ಸಿಡಿಸಿದರು. ಇನ್ನು ರಜತ್ ಪಾಟಿದಾರ್ 53 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಆರ್​ಸಿಬಿ 20 ಓವರ್​ಗಳಲ್ಲಿ 240 ರನ್​ ಕಲೆಹಾಕಿತು.

241 ರನ್​ಗಳ ಕಠಿಣ ಗುರಿ ಪಡೆದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 222 ರನ್ ​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆರ್​ಸಿಬಿ ತಂಡ 18 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ತಂಡದ ಪ್ರದರ್ಶನ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ನಮ್ಮ ಈ ಗೆಲುವಿಗೆ ಮುಖ್ಯ ಕಾರಣ ‘ಸ್ಪಷ್ಟತೆ’. ನಮ್ಮ ಆಟಗಾರರಲ್ಲಿ ಅವರ ಜವಾಬ್ದಾರಿಯ ಬಗ್ಗೆ ಸ್ಪಷ್ಟವಾದ ಅರಿವಿತ್ತು. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಆರಂಭದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ್ದು ನಮ್ಮನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿತು. ಆ ಬಳಿಕ ನಾನು ಹಾಗೂ ಟಿಮ್ ಡೇವಿಡ್ ಸ್ಫೋಟಕ ಇನಿಂಗ್ಸ್ ಆಡಿದ ಕಾರಣ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು. ಅಂದರೆ ದೊಡ್ಡ ಮೊತ್ತ ಪೇರಿಸುವ ಬಗ್ಗೆ ನಮ್ಮಲ್ಲಿ ಸ್ಪಷ್ಟತೆ ಇತ್ತು. ಈ ಸ್ಪಷ್ಟ ಗುರಿಯಿಂದಾಗಿ ನಾನು ಗೆದ್ದಿದ್ದೇವೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಇದೇ ವೇಳೆ ತನ್ನನ್ನು ಸ್ಪಿನ್ ಬ್ಯಾಟರ್ ಎಂದು ಕರೆಯುವ ಬಗ್ಗೆ ಸ್ಪಷ್ಟನೆ ನೀಡಿದ ರಜತ್ ಪಾಟಿದಾರ್,  ಜನರು ನಾನು ಸ್ಪಿನ್ ಆಡುವುದನ್ನು ಇಷ್ಟಪಡುತ್ತೇನೆ ಎಂದು ಹೇಳುತ್ತಾರೆ. ಆದರೆ ಸತ್ಯ ಏನೆಂದರೆ ನನಗೆ ವೇಗದ ಬೌಲಿಂಗ್ ಎದುರಿಸುವುದೆಂದರೆ ತುಂಬಾ ಪ್ರೀತಿ. ಅದರಲ್ಲೂ ವಾಂಖೆಡೆಯಂತಹ ವೇಗದ ಪಿಚ್‌ಗಳಲ್ಲಿ ವೇಗಿಗಳನ್ನು ಎದುರಿಸುವುದು ಅದ್ಭುತ ಅನುಭವ ಎಂದು ತಿಳಿಸಿದ್ದಾರೆ.

ಮುಂಬೈ ಅಂಗಳದ ಬಗ್ಗೆ ಮಾತನಾಡಿದ ಪಾಟಿದಾರ್, ಇಲ್ಲಿನ ವಾತಾವರಣ ಮತ್ತು ತುಂಬಿ ತುಳುಕುವ ಸ್ಟೇಡಿಯಂನಲ್ಲಿ ಅಭಿಮಾನಿಗಳ ಮುಂದೆ ಆಡುವುದು ಒಂದು ವಿಭಿನ್ನ ಭಾವನೆ ನೀಡುತ್ತದೆ. ಇಲ್ಲಿನ ಬೆಂಬಲ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.

ಒಟ್ಟಾರೆಯಾಗಿ, ಸಾಂಘಿಕ ಹೋರಾಟದ ಫಲವಾಗಿ ಆರ್‌ಸಿಬಿ ತಂಡವು ಮತ್ತೊಂದು ಸ್ಮರಣೀಯ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವಿನ ಲಯವನ್ನು ಮುಂದಿನ ಪಂದ್ಯಗಳಲ್ಲೂ ಮುಂದುವರೆಸುವ ವಿಶ್ವಾಸವಿದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಇದನ್ನೂ ಓದಿ: ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ

ಅಂದಹಾಗೆ ಈವರೆಗೆ ಆಡಿದ 4 ಮ್ಯಾಚ್​ಗಳಲ್ಲಿ 3 ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಏಪ್ರಿಲ್ 15 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

Follow Us