ಕೊವಿಡ್-19 ತಲ್ಲಣ: ಭಾರತದಲ್ಲಿರುವ ತನ್ನ ದೇಶದ ನಾಗರಿಕರಿಗೆ ಕೂಡಲೇ ವಾಪಸ್ಸಾಗುವಂತೆ ಹೇಳಿದ ಅಮೆರಿಕ

ಭಾರತದಲ್ಲಿ ಕೊವಿಡ್​ ಸ್ಥಿತಿ ಅಪಾಯಕಾರಿ ಹಂತ ತಲುಪಿದ್ದು ಈ ಅಭೂತಪೂರ್ವ ಸನ್ನಿವೇಶದೊಂದಿಗೆ ಏಗಲು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೆಣಗುತ್ತಿವೆ. ಗುರುವಾರದಂದು 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 3,79,257 ಹೊಸ ಪ್ರಕರಣಗಳು ಪತ್ತೆಯಾಗಿದ್ದು 3.645 ಜನ ಸೋಂಕಿಗೆ ಬಲಿಯಾಗಿದ್ದಾರೆ.

  • TV9 Web Team
  • Published On - 18:07 PM, 29 Apr 2021
ಕೊವಿಡ್-19 ತಲ್ಲಣ: ಭಾರತದಲ್ಲಿರುವ ತನ್ನ ದೇಶದ ನಾಗರಿಕರಿಗೆ ಕೂಡಲೇ ವಾಪಸ್ಸಾಗುವಂತೆ ಹೇಳಿದ ಅಮೆರಿಕ
ಕೊವಿಡ್​ಗೆ ಬಲಿಯಾದವರ ಸಾಮೂಹಿಕ ಶವ ಸಂಸ್ಕಾರ

ವಾಷ್ಟಿಂಗ್ಟನ್:  ಭಾರತದಲ್ಲಿ ಕೊವಿಡ್​-19 ಸೋಂಕು ಪ್ರಕರಣಗಳ ಸಂಖ್ಯೆ ಅಪರಿಮಿತವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ವಾಸಿಸುತ್ತಿರುವ ತನ್ನ ದೇಶದ ಪ್ರಜೆಗಳಿಗೆ ಅಮೆರಿಕಾ ಕೂಡಲೇ ವಾಪಸ್ಸಾಗುವಂತೆ ಹೇಳಿದೆ. ಅಮೇರಿಕಾದ ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ಇಲಾಖೆಯು ತಾನು ಇದುವರೆಗೆ ಜಾರಿ ಮಾಡಿರದ 4ನೇ ಹಂತದ ಸಲಹೆಯನ್ನು ಬಿಡುಗಡೆ ಮಾಡಿ ಅಮೆರಿಕನ್ನರಿಗೆ ಭಾರತಕ್ಕೆ ಪ್ರಯಾಣಿಸದಂತೆ ಮತ್ತು ಆದಷ್ಟು ಬೇಗ ಭಾರತವನ್ನು ಬಿಡುವಂತೆ ಹೇಳಿದೆ. ಭಾರತದಿಂದ ಅಮೆರಿಕಾಗೆ 14 ನೇರ ವಿಮಾನಗಳಿವೆ ಮತ್ತು ಯೂರೋಪಿಗೆ ಕನೆಕ್ಟ್​ ಆಗುವ ಸಾಕಷ್ಟು ಫ್ಲೈಟ್​ಗಳಿವೆ ಅಂತಲೂ ಅದು ಹೇಳಿದೆ.

ಭಾರತದಲ್ಲಿ ಕೊವಿಡ್​ ಸ್ಥಿತಿ ಅಪಾಯಕಾರಿ ಹಂತ ತಲುಪಿದ್ದು ಈ ಅಭೂತಪೂರ್ವ ಸನ್ನಿವೇಶದೊಂದಿಗೆ ಏಗಲು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೆಣಗುತ್ತಿವೆ. ಗುರುವಾರದಂದು 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 3,79,257 ಹೊಸ ಪ್ರಕರಣಗಳು ಪತ್ತೆಯಾಗಿದ್ದು 3.645 ಜನ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ಸತ್ತವರ ಸಂಖ್ಯೆ 2 ಲಕ್ಷದ ಗಡಿ ದಾಟಿದೆ.

ಸ್ಥಳ ಹಾಗೂ ಬೆಡ್​ಗಳ ಅಭಾವದಿಂದಾಗಿ ಅಮೆರಿಕನ್ನರಿಗೆ ಭಾರತದ ಆಸ್ಪತ್ರೆಗಳಲ್ಲಿ ದಾಖಲಾತಿ ಸಿಗುತ್ತಿಲ್ಲ ಎಂದು ಅಮೆರಿಕದ ರಾಯಭಾರಿ ಕಚೇರಿಯ ವೆಬ್​ಸೈಟ್​ನಲ್ಲಿ ಹೇಳಲಾಗಿದೆ. ಪರಿಸ್ಥಿತಿ ಹಾಗಿರುವುದರಿಂದ ಅಮೆರಿಕದ ಪ್ರಜೆಗಳು ಲಭ್ಯವಿರುವ ಯಾವುದೆ ವಾಣಿಜ್ಯ ವಿಮಾನದ ಮೂಲಕ ದೇಶಕ್ಕೆ ಹಿಂತಿರುಗುವ ಪ್ರಯತ್ನ ಮಾಡಬೇಕು ಅಂತ ಅದರಲ್ಲಿ ನಮೂದಿಸಲಾಗಿದೆ. ಚೆನ್ನೈ ನಲ್ಲಿರುವ ಅಮೆರಿಕಾದ ರಾಯಭಾರ ಕಚೇರಿಯಲ್ಲಿ ಅಮೆರಿಕನ್ ಪ್ರಜೆಗಳ ಎಲ್ಲ ರೂಟೀನ್ ಸೇವೆ ಮತ್ತು ವಿಸಾ ಸೇವೆಗಳನ್ನು ರದ್ದು ಮಾಡಲಾಗಿದೆ.

ಭಾರತವನ್ನು ಬಿಡಲಿಚ್ಛಿಸುತ್ತಿರುವ ಅಮೆರಿಕನ್ನರಿಗೆ ಯಾವುದಾದರೂ ನೆರವು ಸಿಗಲಿದೆಯೇ ಮತ್ತು ಅಮೆರಿಕಾ ತಲುಪಿದ ನಂತರ ಅವರು ಕ್ವಾರಂಟೈನ್ ಶಿಷ್ಟಾಚಾರಗಳಿಗೆ ಒಳಗಾಗಬೇಕೇ ಎಂದ ಕೇಳಲಾದ ಪ್ರಶ್ನೆಗೆ ದೆಹಲಿಯಲ್ಲಿರುವ ಯುಎಸ್ ರಾಯಬಾರಿ  ಕಚೇರಿಯ  ಪ್ರತಿನಿಧಿ ಪ್ರತಿಕ್ರಿಯೆ ನೀಡಲಿಲ್ಲ.

ಭಾರತದಲ್ಲಿ ಸೋಂಕಿತರ ಸಂಖ್ಯೆ ನಾಗಾಲೋಟದಲ್ಲಿ ಹೆಚ್ಚುತ್ತಿದ್ದು ಇದುವರೆಗೆ 1.84 ಕೋಟಿ ಜನ ಸೋಂಕಿನಿಂದ ಬಾಧಿತರಾಗಿದ್ದಾರೆ. ಮೊದಲ ಅಲೆಯಲ್ಲಿ ಈ ಪ್ರಮಾಣದ ಸೋಂಕಿನ ತೀವ್ರತೆ ಕಂಡುಬಂದಿರಲಿಲ್ಲ. ಸಾಮೂಹಿಕ ಶವಸಂಸ್ಕಾರ, ಅದಾಗಲೇ ಕಿಕ್ಕಿರಿದಿರುವ ಆಸ್ಪತ್ರೆಗಳ ಎದುರು ಅಂಬ್ಯುಲೆನ್ಸ್​ಗಳು, ಸಾಮಾಜಿಕ ಜಾಲತಾಣಗಳಲ್ಲಿ ಅಕ್ಸಿಜನ್ ಸಿಲಿಂಡರ್​​ಗಳಿಗಾಗಿ ಹಾಹಾಕಾರ-ಭಾರತದಲ್ಲಿ ಕೊವಿಡ್​ ಸ್ಥಿತಿಗೆ ಸಾಕ್ಷಿಗಳಾಗಿದ್ದು ಭಾರತ ಮತ್ತು ಅಲ್ಲಿನ ರಾಜ್ಯ ಸರ್ಕಾರಗಳು ಸ್ಥಿತಿ ಎದುರಿಸಲು ಯಾವುದೇ ಪೂರ್ವ ಸಿದ್ಧತೆ ಮಾಡಿಕೊಂಡಿರಲಿಲ್ಲವೆನ್ನುವುದನ್ನು ಸಾರಿ ಹೇಳುತ್ತಿವೆ.

ಭಾರತದಲ್ಲಿನ ದುರಂತ ಸ್ಥಿತಿ ವಿಶ್ವದ ಹಲವಾರು ದೊಡ್ಡ ಸಂಸ್ಥೆಗಳಿಗೆ ನೆರವಿಗೆ ಧಾವಿಸುವಂತೆ ಪ್ರೇರೇಪಿಸಿವೆ. ಅಮೆಜಾನ್ ಸಂಸ್ಥೆಯು ತನ್ನ ಜಾಗತಿಕ ಸರಬರಾಜು ಚೈನ್ ಸೇವೆಯ ಮೂಲಕ ಅಮೇರಿಕಾದಿಂದ ಭಾರತಕ್ಕೆ 100 ಐಸಿಯು ವೆಂಟಿಲೇಟರ್​ಗಳನ್ನು ಕಳಿಸುವ ವ್ಯವಸ್ಥೆ ಮಾಡುತ್ತಿದ್ದು ಅವು ಎರಡು ವಾರಗಳ ಅವಧಿಯಲ್ಲಿ ಭಾರತವನ್ನು ತಲುಪಲಿವೆ. ಮೈಕ್ರೊಸಾಫ್ಟ್​ ಸಂಸ್ಥೆಯ ಸಿಈಒ ಸತ್ಯ ನಾಡೆಲ್ಲ  ಅವರು, ಭಾರದಲ್ಲಿನ ಸ್ಥಿತಿ ಕಂಡು ಹೃದಯ ಒಡೆದಂತಾಗುತ್ತಿದೆ ಎಂದು ಹೇಳಿದ್ದು ಆಕ್ಸಿಜನ್ ಕಾನ್ಸೆಂಟ್ರೇಟರ್​ಗಳನ್ನು ಖರೀದಿಸಲು ಸಹಾಯ ಮಾಡುತ್ತಿದ್ದಾರೆ.

ಬ್ಲ್ಯಾಕ್​ಸ್ಟೋನ್ ಗ್ರೂಪ್​ನ ಚೇರ್ಮನ್ ಆಗಿರುವ ಸ್ಟೀಫನ್ ಶ್ವಾರ್ಜ್​ಮನ್ ಅವರು ಭಾರತದ ಕೊವಿಡ್​ ಪರಿಹಾರ ನಿಧಿಗೆ 5 ಮಿಲಿಯನ್ ಡಾಲರ್ ಧನಸಹಾಯ ಮಾಡಿದ್ದು ಸಮಾಜದ ಕೆಳವರ್ಗಗಳ ಜನರಿಗೆ ಲಸಿಕೆ ನೀಡಲು ಹಣವನ್ನು ಉಪಯೋಗಿಸಬೇಕೆಂದು ಹೇಳಿದ್ದಾರೆ. ಭಾರತದ ಸ್ಥಳೀಯ ಉದ್ಯಮಗಳು ಸಹ ಸಹಾಯ ಹಸ್ತವನ್ನು ಚಾಚಿವೆ. ಏಷ್ಯಾದ ಅತಿ ದೊಡ್ಡ ಶ್ರೀಮಂತರಾಗಿರುವ ಮುಕೇಶ್ ಅಂಬಾನಿಯವರು 100 ಐಸಿಯು ಬೆಡ್​ಗಳ ಆಸ್ಪತ್ರೆಯನ್ನು ಸ್ಥಾಪಿಸಿ ತಮ್ಮ ರಿಲಯನ್ಸ್ ಸಂಸ್ಥೆಯೇ ಅದರ ನಿರ್ವಹಣೆ ಮಾಡುವುದಾಗಿ ಹೇಳಿದ್ದಾರೆ. ಇದು ಮೇ ತಿಂಗಳ ಮಧ್ಯಭಾಗದಲ್ಲಿ ಕಾರ್ಯಾರಂಭಗೊಳ್ಳಲಿದೆ ಅಂತ ವರದಿಯಾಗಿದೆ.

ಭಾರತದಲ್ಲಿ ಅಸಂಖ್ಯಾತ ವೈದ್ಯರು, ನರ್ಸ್​ಗಳು, ಮತ್ತು ವೈದ್ಯಕೀಯ ರಂಗಕ್ಕೆ ಸೇರದ ವೃತ್ತಿಪರರೂ ದಿನವಿಡೀ ಸೋಂಕಿತರ ಸೇವೆಯಲ್ಲಿ ತೊಡಗಿ ತಮಗೆ ಸಾಧ್ಯವಾದಷ್ಟು ಜನರ ಜೀವಗಳನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದರೆ, ಕೆಲವು   ರಾಷ್ಟ್ರಗಳು ಭಾರತದಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಏಷ್ಯಾದಲ್ಲೇ ಹಾಂಗ್​ ಕಾಂಗ್, ಏಪ್ರಿಲ್ 20 ರಿಂದ 14 ದಿನಗಳವರೆಗೆ ಭಾರತದ ವಿಮಾನಗಳು ತನ್ನ ನೆಲವನ್ನು ಸ್ಪರ್ಶಿಸದಂತೆ ನಿಷೇಧ ಹೇರಿದೆ. ಧೀರ್ಘ ಮತ್ತು ಅಲ್ಪಾವಧಿಯ ಪ್ರವಾಸಿಗರು ಭಾರತದಿಂದ ಸಿಂಗಪೂರ್ ಪ್ರವೇಶಿದಂತೆ ಆ ದೇಶದ ಸರ್ಕಾರ ತಡೆಹಿಡಿದಿದೆ.

ಬ್ರಿಟನ್ ಸಹ ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದೆ. ಹಾಗೆಯೇ, ಯುಎಇ, ಕುವೈತ್, ಭಾರತದ ನಾಗರಿಕ ವಿಮಾನಗಳನ್ನು ನಿಷೇಧಿಸಿವೆ. ಕಳೆದ ವಾರ ಕೆನಡಾ, ಭಾರತ ಮತ್ತು ಪಾಕಿಸ್ತಾನದಿಂದ ಬರುವ ವಿಮಾನಗಳನ್ನು ತಡೆದಿದೆ. ಈ ವಾರ ಆಸ್ಟ್ರೇಲಿಯಾ ಸಹ ಬಾರತದ ವಿಮಾನಗಳು ತನ್ನ ಗಡಿ ಪ್ರವೇಶಿಸಬಾರದೆಂದು ಹೇಳಿದೆ.

ಇದನ್ನೂ ಓದಿ: Coronavirus India Update: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,293 ಕೊವಿಡ್ ರೋಗಿಗಳು ಸಾವು, ದೆಹಲಿಯಲ್ಲಿ ಆಕ್ಸಿಜನ್​ಗಾಗಿ ಪರದಾಟ