TV9 Facebook Live: ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರು ಇನ್​ಕಮ್​ ಟ್ಯಾಕ್ಸ್​ ಸಮಸ್ಯೆ ಹೀಗೆ ಬಗೆಹರಿಸಿಕೊಳ್ಳಿ

TV9 Facebook Live: ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರು ಇನ್​ಕಮ್​ ಟ್ಯಾಕ್ಸ್​ ಸಮಸ್ಯೆ ಹೀಗೆ ಬಗೆಹರಿಸಿಕೊಳ್ಳಿ
ಪ್ರಾತಿನಿಧಿಕ ಚಿತ್ರ

ಗುರು ರಾಘವೇಂದ್ರ ಬ್ಯಾಂಕ್​ನ ಹೂಡಿಕೆದಾರರ ಸಮಸ್ಯೆಗೆ ಟಿವಿ9 ಕನ್ನಡ ಫೇಸ್​ಬುಕ್​ ಲೈವ್ ಕಾರ್ಯಕ್ರಮದಲ್ಲಿ ಬಂದ ಅತ್ಯುಪಯುಕ್ತ ಸಲಹೆ ನಿಮ್ಮೆದು ಇಡಲಾಗಿದೆ.

TV9kannada Web Team

| Edited By: Srinivas Mata

Sep 21, 2021 | 5:23 PM


ಬೆಂಗಳೂರಿನ ಎನ್​.ಆರ್​. ಕಾಲೋನಿಯಲ್ಲಿನ ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರಿಗೆ ಇದೀಗ ವಿಚಿತ್ರ ಸಂಕಟ. ಒಂದು ಕಡೆ ತಾವು ಮಾಡಿದ್ದ ಠೇವಣಿ ಪೂರ್ತಿ ಹಣ ಸಿಗುತ್ತದೋ ಇಲ್ಲವೋ ಎಂಬ ಚಿಂತೆ ಒಂದು ಕಡೆ, ಇನ್ನು ಅಲ್ಲಿ ಠೇವಣಿ ಮಾಡಿದ್ದ ಹಣಕ್ಕೆ ಬ್ಯಾಂಕ್​ನಿಂದ ಬಡ್ಡಿಯನ್ನು ಖಾತೆ ಪುಸ್ತಕದಲ್ಲಿ ತೋರಿಸಲಾಗಿದೆ. ಆದರೆ ಆ ಬಡ್ಡಿ ಕೈ ತಲುಪಿಲ್ಲ. ಆದರೂ ಟಿಡಿಎಸ್​ ಕಡಿತ ಎಂದು ತೋರಿಸಲಾಗಿದೆ. ತೆರಿಗೆ ವಿನಾಯಿತಿ ವ್ಯಾಪ್ತಿಗಿಂತ ಆಚೆಗೆ ಬಡ್ಡಿ ಆದಾಯ ಇದ್ದಲ್ಲಿ ಅಂಥವರಿಗೆ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಈಗ ಠೇವಣಿದಾರರು ತಮ್ಮ ಆಕ್ರೋಶ ಹಾಗೂ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೆ.21ರ ಮಂಗಳವಾರ ಟಿವಿ9 ಕನ್ನಡ ಡಿಜಿಟಲ್ ಫೇಸ್​ಬುಕ್ ಲೈವ್ ಆಯೋಜಿಸಲಾಗಿತ್ತು. ಅದರಲ್ಲಿ ಬ್ಯಾಂಕ್​ನ ಠೇವಣಿದಾರರಾದ ಮುರಳಿ, ಉದಯ್​ ಕುಮಾರ್​ ರಾವ್, ಸತೀಶ್​ ಕಾರಂತ್ ಹಾಗೂ ಬ್ಯಾಂಕ್​ನ ಆಡಳಿತ ಮಂಡಳಿ ವಸೂಲಾತಿ ಅಧಿಕಾರಿ ಆಗಿದ್ದ ಮೋಹನ್ ಭಾಗವಹಿಸಿದ್ದರು. ಚರ್ಚೆಯಾದ ಪ್ರಮುಖ ಸಂಗತಿಗಳು ಹೀಗಿವೆ.

ಮುರಳಿ ಅವರು ತಿಳಿಸಿದಂತೆ, ಬ್ಯಾಂಕ್​ನ ಬಹುತೇಕ ಠೇವಣಿದಾರರಿಗೆ ತೆರಿಗೆ ಕಟ್ಟುವಂತೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಲೆಕ್ಕ ಪರಿಶೋಧಕರ ಜತೆಗೆ ಮಾತುಕತೆ ನಡೆಸಿದ್ದು, ಆ ಬಡ್ಡಿಯ ಮೇಲೆ ತೆರಿಗೆ ಕಟ್ಟಿ ಅಂತ ಹೇಳುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಮತ್ತೊಬ್ಬ ಹೂಡಿಕೆದಾರರಾದ ಉದಯ್​ಕುಮಾರ್ ರಾವ್ ಅವರು ಮಾತನಾಡಿ, ತಮಗೆ ಹಾಗೂ ತಮ್ಮ ತಾಯಿಗೆ ಇಬ್ಬರದೂ ಸೇರಿ 60 ಲಕ್ಷ ರೂಪಾಯಿ ತನಕ ಹಣ ಬರಬೇಕು ಎಂದು ಹೇಳಿದರು. ಈಗ ಬಡ್ಡಿಯೂ ನೀಡದೆ ಅದಕ್ಕೆ ತೆರಿಗೆ ಹಾಕಬೇಕು ಎಂದು ನೋಟಿಸ್ ನೀಡಲಾಗಿದೆ. ಬ್ಯಾಂಕ್​ 1400 ಕೋಟಿ ನಷ್ಟ ಅನುಭವಿಸಿದ ಅನ್ನುತ್ತಿದ್ದಾರೆ. ಆದರೆ ಬ್ಯಾಂಕ್​ ಬಳಿ ಅದಕ್ಕಿಂತ ಹೆಚ್ಚು ಮೊತ್ತ ಇತ್ತು. ಉಳಿದ ಮೊತ್ತ ಇರುವುದರಲ್ಲಿ ಅಸಲನ್ನಾದರೂ ನೀಡಲಿ ಎಂದರು.

ಎರಡು ಸಂಸ್ಥೆಗಳ ನಿಗಾ ಇತ್ತು
ಮತ್ತೊಬ್ಬ ಹೂಡಿಕೆದಾರರಾದ ಸತೀಶ್ ಕಾರಂತ್ ಮಾತನಾಡಿ, ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಆರ್​ಬಿಐ ಹಾಗೂ ರಿಜಿಸ್ಟ್ರಾರ್ ಕೋ ಆಪರೇಟಿವ್ ಬ್ಯಾಂಕ್ ಹೀಗೆ ಎರಡು ಸಂಸ್ಥೆಗಳ ನಿಗಾ ಇತ್ತು. ಎನ್​ಪಿಎ ಬಹಳ ಕಡಿಮೆ (ಶೇ 0.5) ತೋರಿಸಿದ್ದರು. ಆದರೆ ಇವರ ಉದ್ದೇಶವೇ ಮೋಸ ಮಾಡುವುದೇ ಆಗಿತ್ತು. ಇಲ್ಲಿ ಶೇ 8.5ರಿಂದ 9.75ರಷ್ಟು ಬಡ್ಡಿ ನೀಡಲಾಗಿತ್ತು. ಅದೇನೂ ದೊಡ್ಡ ಮೊತ್ತ ಏನಲ್ಲ. ಆದರೆ ಬ್ಯಾಂಕ್​ನ ಅಧಿಕಾರಿಗಳು, ಈ ಹಿಂದೆ ಆಡಿಟ್​ ಮಾಡಿದವರು ತಪ್ಪು ಲೆಕ್ಕಾಚಾರ ನೀಡುವುದರಲ್ಲಿ ಭಾಗಿ ಆಗಿದ್ದಾರೆ. ಆರ್​ಬಿಐ ಕೂಡ ಎರಡು ವರ್ಷಕ್ಕೊಮ್ಮೆ ಪರಿಶೀಲನೆ ನಡೆಸುತ್ತದೆ. ಅವರು ಮೇಲ್ನೋಟಕ್ಕೆ ಚಾರ್ಟರ್ಡ್ ಅಕೌಂಟೆಂಟ್​ಗಳ ವರದಿ ಮೇಲೆ ಅದನ್ನು ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಿದರು.

ಸಾವು ಮತ್ತು ತೆರಿಗೆ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಬ್ಯಾಂಕ್​ನ ಟಿಡಿಎಸ್ 10 ಪರ್ಸೆಂಟ್ ಹಿಡಿಯುತ್ತಾರೆ. ಕೊರೊನಾ ಬಿಕ್ಕಟ್ಟು ಇದ್ದಿದ್ದರಿಂದ ಶೇ 7.5 ಹಿಡಿದಿದ್ದಾರೆ. ಈಗ ಆರ್​ಬಿಐ 35A ನಿರ್ಬಂಧ ಹೇರಿರುವುದರಿಂದ 1 ಲಕ್ಷ ರೂಪಾಯಿಗಿಂತ ಹೆಚ್ಚು ಡ್ರಾ ಮಾಡುವುದಕ್ಕೆ ಸಾಧ್ಯವಿಲ್ಲ. 1410 ಕೋಟಿ ರೂ. ಸಾಲ ಅಷ್ಟೂ ಎನ್​ಪಿಎ ಎನ್ನುತ್ತಿದ್ದಾರೆ. ಹಾಗೆ ಆಗುವುದಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ಸರಿಯಾದ ಲೆಕ್ಕಾಚಾರ ಆಗಬೇಕು ಎಂದಿದ್ದಾರೆ.

ಆದಾಯ ತೆರಿಗೆ ವಿನಾಯಿತಿಗೆ ಯತ್ನಿಸಬಹುದು
ವಸೂಲಾತಿ ಮೇಲ್ವಿಚಾರಕರು ಮೋಹನ್ ಮಾತನಾಡಿ, ಆರ್​ಬಿಐ ನೇಮಿಸಿರುವ ಅಶೋಕನ್​ ಮೂಲಕ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆಸಿ, ಹೂಡಿಕೆದಾರರಿಗೆ ಆದಾಯ ತೆರಿಗೆ ರಿಯಾಯಿತಿ ದೊರೆಯುವಂತೆ ಮಾಡಬಹುದು. ಈ ಹಿಂದೆ 100 ಕೋಟಿ ರೂಪಾಯಿಗೂ ಹೆಚ್ಚಿಗೆ ಕಟ್ಟಿದ್ದೆವು. ಅದನ್ನು ವಾಪಸ್​ ಕೊಡಿಸಬೇಕು ಎಂದು ಕೇಳಿದ್ದೆವು. ಅದಕ್ಕೆ ಒಪ್ಪಿದ್ದರು. ಆದ್ದರಿಂದ ಅಶೋಕನ್ ಮೂಲಕ ಪತ್ರವನ್ನು ಆರ್​ಬಿಐಗೆ ಬರೆಸಿ, ಆ ಮೂಲಕ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆಸಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.

ಸತೀಶ್ ಕಾರಂತ್ ಮಾತು ಮುಂದುವರಿಸಿ, ಈ ಆದಾಯವನ್ನು ಹೊರತುಪಡಿಸಿ ಐ.ಟಿ. ರಿಟರ್ನ್ಸ್ ಫೈಲ್ ಮಾಡುವುದಕ್ಕೆ ಅವಕಾಶ ಇದೆ. ಬ್ಯಾಂಕ್​ನಲ್ಲಿ ತೋರಿಸಿರುವ ಆದಾಯ ಮತ್ತು ಟಿಡಿಎಸ್​ ಎರಡನ್ನೂ ಲೆಕ್ಕ ತೋರಿಸುವ ಅಗತ್ಯ ಇಲ್ಲ. ಬ್ಯಾಂಕ್​ ಮೇಲೆ ನಿರ್ಬಂಧ ತೆಗೆದ ನಂತರ ಆ ಆದಾಯ ಬಂದ ಮೇಲೆ ತೆರಿಗೆ ಕಟ್ಟಬಹುದು. ಈ ಬಗ್ಗೆ ಹಿರಿಯ ಆಡಿಟರ್​ ತಿಳಿಸಿದ್ದಾರೆ ಎಂದು ಅವರು ಹೇಳಿದರು. ಆದರೆ ಉದಯ್​ ಕುಮಾರ್​ ರಾವ್ ತಮ್ಮ ತಾಯಿ ಅದಾಗಲೇ ತೆರಿಗೆ ಕಟ್ಟಿಯಾಗಿದೆ ಎಂದು ಹೇಳಿದರು.

ಬ್ಯಾಂಕ್​ನಿಂದ ಸಾಲ ವಸೂಲಾದರೆ ಹಣ ವಾಪಸ್
ಸತೀಶ್​ ಕಾರಂತ್ ಅವರು ಹೇಳಿದಂತೆ ಮಾಡುವ ಅವಕಾಶ ಇದೆ. ಅದಕ್ಕೆ ಆರ್​ಬಿಐ ಮೂಲಕ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಹೋಗಬೇಕು. ಅದು ಅಶೋಕನ್ ಮೂಲಕವೇ ಮಾಹಿತಿ ಹೋಗಬೇಕು ಎಂದು ಮೋಹನ್ ಹೇಳಿದರು. ಡಿಐಸಿಜಿಸಿಯಿಂದ ಸದ್ಯದಲ್ಲೇ ಇನ್ಷೂರೆನ್ಸ್ ಬಿಡುಗಡೆ ಮಾಡುವ ಬಗ್ಗೆ ತಿಳಿಸಿದರು. 5 ಲಕ್ಷ ರೂಪಾಯಿ ತನಕದ ಮೊತ್ತ ಹಿಂತಿರುಗುವ ಕುರಿತು ಮಾಹಿತಿ ನೀಡಿದರು. 5 ಲಕ್ಷ ಮೇಲ್ಪಟ್ಟ ಮೊತ್ತದ ಠೇವಣಿ ಮಾಡಿದವರಿಗೆ ಬ್ಯಾಂಕ್​ನಿಂದ ಸಾಲ ವಸೂಲಿ ಮಾಡಿದ ಮೇಲೆ ಹಣ ವಾಪಸ್​ ಬರುತ್ತದೆ ಎಂದು ಹೇಳಿದರು.

ಮುರಳಿ ಅವರು ಮಾತನಾಡಿ, ಸತೀಶ್​ ಕಾರಂತ್ ಮತ್ತು ಮೋಹನ್ ಅವರ ಸಲಹೆಯಿಂದ ಸಾವಿರಾರು ಮಂದಿಗೆ ಅನುಕೂಲ ಆಗುತ್ತದೆ ಎಂದರು. “ಈ ಬ್ಯಾಂಕ್​ ಬೇರೆ ಯಾವುದಾದರೂ ಬ್ಯಾಂಕ್​ ಜತೆ ವಿಲೀನವಾದಲ್ಲಿ ಸಮಸ್ಯೆಗೆ ಪರಿಹಾರ ಸಿಗುತ್ತದೆ,” ಎಂದು ಮೋಜಮ್ ತಿಳಿಸಿದರು. ಈ ಸಮಸ್ಯೆ ಪರಿಹರಿಸುವುದು ಆರ್​ಬಿಐ, ಕೇಂದ್ರ ಹಣಕಾಸು ಸಚಿವರ ಕೈಲಿದೆ. ಈ ಬ್ಯಾಂಕ್​ ವಿಲೀನ ಆಗುವುದು ಕಷ್ಟ. ಯಾರಾದರೂ ಇದರ ಖರೀದಿಗೆ ಬರಬೇಕು. ಬ್ಯಾಂಕಿಂಗ್​ ಲೈಸೆನ್ಸ್​ ಇರುವುದರಿಂದ ಮುಂದೆ ಬರಬೇಕಿದೆ. ಇದರಲ್ಲಿ ಆರ್​ಬಿಐ ಜವಾಬ್ದಾರಿಯೂ ಇದೆ. ಅದನ್ನು ನಿರ್ವಹಿಸಬೇಕು. ಅದಕ್ಕಾಗಿ ಕಾದು ನೋಡಬೇಕಾಗಿದೆ ಎಂದು ಸತೀಶ್​ ಕಾರಂತ್ ಅಭಿಪ್ರಾಯ ಪಟ್ಟರು.

ಇದನ್ನೂ ಓದಿ: ಗುರು ರಾಘವೇಂದ್ರ ಬ್ಯಾಂಕ್​ನಲ್ಲಿ 5 ಲಕ್ಷಕ್ಕೂ ಹೆಚ್ಚಿನ ಠೇವಣಿ ಇರುವ ಆ 10 ಸಾವಿರ ಮಂದಿಯ ಗತಿ ಏನು?

ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಶುಭಸುದ್ದಿ; ನವೆಂಬರ್​ ಒಳಗೆ ಠೇವಣಿ ಮೇಲಿನ ವಿಮಾ ಹಣ ಗ್ರಾಹಕರಿಗೆ ಲಭ್ಯ

(How To Deal With Income Tax And TDS Of Guru Raghavendra Co Operative Bank Investors Here Is An Explainer )

 

Follow us on

Related Stories

Most Read Stories

Click on your DTH Provider to Add TV9 Kannada