Job Creation: ಪಿಎಲ್ಐ ಸ್ಕೀಮ್ನಿಂದ 3 ಲಕ್ಷ ಉದ್ಯೋಗ; ನೀತಿ ಆಯೋಗ ಸಿಇಒ
ದೇಶೀಯ ಉತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸುವ ಉದ್ದೇಶವನ್ನು ಪಿಎಲ್ಐ ಯೋಜನೆ ಹೊಂದಿದೆ. 2 ಲಕ್ಷ ಕೋಟಿ ವೆಚ್ಚದೊಂದಿಗೆ ಆಟೊಮೊಬೈಲ್, ಆಟೊ ಕಾಂಪೊನೆಂಟ್ಸ್, ಫಾರ್ಮಾ, ಜವಳಿ, ಆಹಾರ ಉತ್ಪನ್ನಗಳು ಸೇರಿದಂತೆ 14 ಕ್ಷೇತ್ರಗಳನ್ನು ಒಳಗೊಂಡಂತೆ ಯೋಜನೆ ರೂಪಿಸಲಾಗಿದೆ.
ನವದೆಹಲಿ: ಉತ್ಪಾದನೆ ಸಂಯೋಜಿತ ಭತ್ಯೆ (PLI) ಯೋಜನೆ 45,000 ಕೋಟಿ ರೂ. ಹೂಡಿಕೆಯನ್ನು ಸೆಳೆದಿದ್ದು, ಪರಿಣಾಮವಾಗಿ 3 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ನೀತಿ ಆಯೋಗದ (NITI Aayog) ಸಿಇಒ ಪರಮೇಶ್ವರನ್ ಐಯ್ಯರ್ ಹೇಳಿದ್ದಾರೆ. ಉತ್ಪಾದನೆ ಸಂಯೋಜಿತ ಭತ್ಯೆ ಯೋಜನೆ ಈಗಾಗಲೇ ಫಲಿತಾಂಶ ನೀಡಲು ಆರಂಭಿಸಿದೆ. 800 ಕೋಟಿ ರೂ. ಭತ್ಯೆ ರೂಪದಲ್ಲಿ ನೀಡಲಾಗಿದೆ. ಮಾರ್ಚ್ ವೇಳೆಗೆ 3,000 ಕೋಟಿ ರೂ.ನಿಂದ 4,000 ಕೋಟಿ ರೂ. ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಐಯ್ಯರ್ ‘ಪಿಟಿಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಯೋಜನೆಯು ಫಲಿತಾಂಶ ನೀಡುತ್ತಿದೆ. ಈಗಾಗಲೇ 45,000 ಕೋಟಿ ರೂ. ಹೂಡಿಕೆ ಸೆಳೆದಿದೆ. 3 ಲಕ್ಷ ಉದ್ಯೋಗ ಸೃಷ್ಟಿಯಾಗಿದ್ದು ಮಾತ್ರವಲ್ಲದೆ 2 ಲಕ್ಷ ಕೋಟಿ ರೂ. ಮೌಲ್ಯದ ಉತ್ಪಾದನೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದೇಶೀಯ ಉತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸುವ ಉದ್ದೇಶವನ್ನು ಪಿಎಲ್ಐ ಯೋಜನೆ ಹೊಂದಿದೆ. 2 ಲಕ್ಷ ಕೋಟಿ ವೆಚ್ಚದೊಂದಿಗೆ ಆಟೊಮೊಬೈಲ್, ಆಟೊ ಕಾಂಪೊನೆಂಟ್ಸ್, ಫಾರ್ಮಾ, ಜವಳಿ, ಆಹಾರ ಉತ್ಪನ್ನಗಳು ಸೇರಿದಂತೆ 14 ಕ್ಷೇತ್ರಗಳನ್ನು ಒಳಗೊಂಡಂತೆ ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ: Good News: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; ಭಾರತದಲ್ಲಿ 30,000 ಉದ್ಯೋಗ ಸೃಷ್ಟಿಸಲಿದೆ ಪಿಡಬ್ಲ್ಯುಸಿ
2020ರಲ್ಲಿ ಪಿಎಲ್ಐ ಯೋಜನೆ ಆರಂಭಿಸಲಾಗಿದೆ. ದೇಶದಲ್ಲಿ ಉತ್ಪಾದನೆಯಾದ ಸರಕುಗಳ ವಾರ್ಷಿಕ ಮಾರಾಟದ ಮೇಲೆ ನಗದು ರೂಪದ ಭತ್ಯೆಯನ್ನು ನೀಡಲಾಗುತ್ತದೆ. ನ್ಯಾಷನಲ್ ಮಾನಿಟೈಸೇಷನ್ ಪೈಪ್ಲೈನ್ (NMP) ಯೋಜನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯೋಜನೆಯು ಉತ್ತಮವಾಗಿ ಸಾಗುತ್ತಿದ್ದು, ರಾಜ್ಯಗಳ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದಾರೆ.
ನ್ಯಾಷನಲ್ ಮಾನಿಟೈಸೇಷನ್ ಪೈಪ್ಲೈನ್ ಅಡಿ ಖಾಸಗಿ ಬಂಡವಾಳ ಹರಿದುಬರುತ್ತಿದೆ. ಯೋಜನೆಯನ್ನು ರಾಜ್ಯಗಳ ಮಟ್ಟದಲ್ಲಿ ಜಾರಿಗೆ ತರಬೇಕಿದೆ. ಈ ಹಣಕಾಸು ವರ್ಷದಲ್ಲಿಯೂ ಯೋಜನೆ ಉತ್ತಮವಾಗಿ ಸಾಕಾರಗೊಳ್ಳುತ್ತಿದೆ. 2022ರ ನವೆಂಬರ್ 21ರ ವರೆಗೂ 33,422 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಸರ್ಕಾರ ನಗದೀಕರಣಗೊಳಿಸಿದೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ