ರಷ್ಯಾದಲ್ಲಿ ಬಡ್ಡಿದರ ಶೇ. 12ಕ್ಕೆ ಹೆಚ್ಚಳ; ಇಲ್ಲಿದೆ ಅತಿಹೆಚ್ಚು ಬಡ್ಡಿದರ ಹೊಂದಿರುವ ದೇಶಗಳ ಪಟ್ಟಿ

Russian Central Bank: ಉಕ್ರೇನ್ ಯುದ್ಧ, ಪಾಶ್ಚಿಮಾತ್ಯ ದೇಶಗಳ ಆರ್ಥಿಕ ದಿಗ್ಬಂಧನ ಕ್ರಮಗಳಿಂದ ರಷ್ಯಾ ಆರ್ಥಿಕತೆ ನಲುಗುತ್ತಿದ್ದು ಡಾಲರ್ ಎದುರು ರುಬಲ್ ಕುಸಿತವಾಗಿದೆ. ಇದನ್ನು ನಿಯಂತ್ರಿಸಲು ರಷ್ಯಾದ ಸೆಂಟ್ರಲ್ ಬ್ಯಾಂಕ್ ತನ್ನ ಬಡ್ಡಿದರವನ್ನು ಒಮ್ಮೆಗೇ 350 ಬೇಸಿಸ್ ಪಾಯಿಂಟ್​ಗಳಷ್ಟು ಹೆಚ್ಚಿಸಿದೆ.

ರಷ್ಯಾದಲ್ಲಿ ಬಡ್ಡಿದರ ಶೇ. 12ಕ್ಕೆ ಹೆಚ್ಚಳ; ಇಲ್ಲಿದೆ ಅತಿಹೆಚ್ಚು ಬಡ್ಡಿದರ ಹೊಂದಿರುವ ದೇಶಗಳ ಪಟ್ಟಿ
ವ್ಲಾದಿಮಿರ್ ಪುಟಿನ್

Updated on: Aug 16, 2023 | 1:07 PM

ನವದೆಹಲಿ, ಆಗಸ್ಟ್ 16: ಡಾಲರ್ ಎದುರು ತನ್ನ ರುಬಲ್ ಕರೆನ್ಸಿ ದುರ್ಬಲಗೊಳ್ಳುವುದನ್ನು ನಿಯಂತ್ರಿಸಲು ರಷ್ಯಾದ ಸೆಂಟ್ರಲ್ ಬ್ಯಾಂಕ್ (Russia Central Bank) ಬಡ್ಡಿದರವನ್ನು ಗಣನೀಯವಾಗಿ ಹೆಚ್ಚಿಸಿದೆ. ಆಗಸ್ಟ್ 15ರಂದು ತುರ್ತು ಕ್ರಮವಾಗಿ ಬಡ್ಡಿದರವನ್ನು 350 ಮೂಲಾಂಕಗಳನಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ರಷ್ಯಾದಲ್ಲಿ ಬಡ್ಡಿದರ ಶೇ. 12 ಮುಟ್ಟಿದೆ. ಆಗಸ್ಟ್ 14ರಂದು ಡಾಲರ್ ಎದುರು ರುಬಲ್ ಕರೆನ್ಸಿ 100ರ ಗಡಿದಾಟಿ ಹೋಗಿತ್ತು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆರ್ಥಿಕ ಸಲಹೆಗಾರ ಮ್ಯಾಕ್ಸಿಮ್ ಒರೇಶ್​ಕಿನ್ ಅವರು ಸೆಂಟ್ರಲ್ ಬ್ಯಾಂಕ್ ನೀತಿ ಬಗ್ಗೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೆ ಸೆಂಟ್ರಲ್ ಬ್ಯಾಂಕ್​ನಿಂದ ತುರ್ತು ಸಭೆ ನಡೆದು, ಬಡ್ಡಿದರ ಏರಿಸುವ ನಿರ್ಧಾರಕ್ಕೆ ಬರಲಾಯಿತು ಎನ್ನಲಾಗಿದೆ.

ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿದಾಗಿನಿಂದ ಅದರ ಕರೆನ್ಸಿ ಮೌಲ್ಯ ಶೇ. 20ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ. ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ಆರ್ಥಿಕ ದಿಬ್ಬಂಧನ ಹಾಕಿರುವುದು ರಷ್ಯಾಗೆ ಈ ಪರಿಹೊಡೆತ ಬೀಳಲು ಕಾರಣವಾಗಿದೆ. ಅದರ ಪ್ರಮುಖ ರಫ್ತಾಗಿರುವ ತೈಲವನ್ನು ರಷ್ಯಾ ಕಡಿಮೆ ಬೆಲೆಗೆ ಮಾರಬೇಕಾದ ಪರಿಸ್ಥಿತಿ ಇದೆ. ಚೀನಾ, ಭಾರತ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳು ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಪಡೆಯುತ್ತಿವೆ. ರಷ್ಯಾಗೂ ಇದು ಅನಿವಾರ್ಯವಾಗಿದೆ.

ರಷ್ಯಾದಲ್ಲಿ ಹಣದುಬ್ಬರವೂ ಶೇ. 2.5ರ ಗಡಿ ಮುಟ್ಟಿದೆ. ಕರೆನ್ಸಿ ಮೌಲ್ಯ ಕುಸಿತ ಮತ್ತು ಹಣದುಬ್ಬರ ಏರಿಕೆ ನಿಯಂತ್ರಿಸಲು ಸೆಂಟ್ರಲ್ ಬ್ಯಾಂಕ್ ಬಡ್ಡಿದರವನ್ನು 350 ಬೇಸಿಸ್ ಪಾಯಿಂಟ್​ಗಳಷ್ಟು ಏರಿಸಿದೆ.

ಇದನ್ನೂ ಓದಿ: DBT Savings: ನೇರವಾಗಿ ಅಕೌಂಟ್​ಗೆ ಹಣ ವರ್ಗಾವಣೆ ಮಾಡುವುದರಿಂದ ಕೇಂದ್ರ ಸರ್ಕಾರಕ್ಕೆ ಉಳಿತಾಯವಾದ ಹಣವೆಷ್ಟು ಗೊತ್ತಾ?

ಅತಿಹೆಚ್ಚು ಬಡ್ಡಿದರ ಇರುವ ದೇಶಗಳು

  1. ಜಿಂಬಾಬ್ವೆ: ಶೇ 150
  2. ಅರ್ಜೆಂಟೀನಾ: ಶೇ. 118
  3. ವೆನಿಜುವೆಲಾ: ಶೇ. 55.78
  4. ಘಾನಾ: ಶೇ. 30
  5. ಸುಡಾನ್: ಶೇ. 27.3
  6. ಕಾಂಗೋ: ಶೇ. 25
  7. ಮಲಾವಿ: ಶೇ. 24
  8. ಉಕ್ರೇನ್: ಶೇ. 22
  9. ಪಾಕಿಸ್ತಾನ್: ಶೇ. 22
  10. ಲೈಬೀರಿಯಾ: ಶೇ. 20

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:03 pm, Wed, 16 August 23