Work From Home: ವರ್ಕ್ ಫ್ರಂ ಹೋಮ್ಗೆ ಏಷ್ಯಾ ಉದ್ದಿಮೆಗಳ ಸಹಮತ; ಬಾಸ್ಗಳು ಹೀಗೆನ್ನುತ್ತಾರೆ ನೋಡಿ
ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡುವ ನಿಯಮ ಜಾರಿಗೆ ತರುವ ಬಗ್ಗೆ ಕೆಲವೊಂದು ಸಂಘಟನೆಗಳು ದನಿಯೆತ್ತಲಾರಂಭಿಸಿವೆ. ಆದರೆ, ಶಿಫ್ಟ್ ಸಂಸ್ಕೃತಿ ಹೊಂದಿರುವ ಏಷ್ಯಾದ ಉದ್ದಿಮೆಗಳು ಇದಕ್ಕೆ ಸಹಮತ ವ್ಯಕ್ತಪಡಿಸಿಲ್ಲ.
ನವದೆಹಲಿ: ಕಚೇರಿಯಿಂದಲೇ ಕೆಲಸ ನಿರ್ವಹಿಸಬೇಕು (Work From Office) ಎಂಬ ಉದ್ದಿಮೆಗಳ ಸಂಖ್ಯೆ ಕೋವಿಡ್ ಸಾಂಕ್ರಾಮಿಕದ ಬಳಿಕ ಏಷ್ಯಾದಲ್ಲಿ ಕಡಿಮೆಯಾಗಿದೆ. ಹೈಬ್ರಿಡ್ ಮಾದರಿಯ ಕೆಲಸಕ್ಕೆ (Hybrid Work) ಈಗ ಹೆಚ್ಚು ಒತ್ತು ದೊರೆಯುತ್ತಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ. ಸಾಂಕ್ರಾಮಿಕಕ್ಕಿಂತಲೂ ಮೊದಲು ಏಷ್ಯಾದ ಅರ್ಧದಷ್ಟು ಕಂಪನಿಗಳು ಉದ್ಯೋಗಿಗಳು ಪೂರ್ಣಾವಧಿ ಕಚೇರಿಯಿಂದಲೇ ಕಾರ್ಯನಿರ್ವಹಿಸಬೇಕು ಎಂದು ಬಯಸುತ್ತಿದ್ದವು. ಆದರೆ, ಹೀಗೆ ಹೇಳುವ ಕಂಪನಿಗಳ ಪ್ರಮಾಣ ಸಾಂಕ್ರಾಮಿಕದ ನಂತರ ಶೇಕಡಾ 13ಕ್ಕೆ ಇಳಿಕೆಯಾಗಿದೆ ಎಂದು ಅಮೆರಿಕ ಮೂಲದ ‘ಸೆಂಟರ್ ಫಾರ್ ಕ್ರಿಯೇಟಿವ್ ಲೀಡರ್ಶಿಪ್’ ಸ್ವಯಂಸೇವಾ ಸಂಸ್ಥೆಯ ಸಮೀಕ್ಷಾ ವರದಿ ತಿಳಿಸಿದೆ.
ಭಾರತದ ಒಲವು ಕಡಿಮೆ
ಸಿಂಗಾಪುರ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ಗಳು ವರ್ಕ್ ಫ್ರಂ ಹೋಮ್ನಂಥ (ಮನೆಯಿಂದಲೇ ಕೆಲಸ) ಪಾರದರ್ಶಕ ಉದ್ಯೋಗದ ವಿಧಾನವನ್ನು ಹೆಚ್ಚಾಗಿ ಸ್ವೀಕರಿಸುವ ಸಾಧ್ಯತೆ ಇದ್ದು, ಭಾರತ ಚೀನಾ, ಜಪಾನ್ ಅಷ್ಟಾಗಿ ಒಪ್ಪದೇ ಇರಬಹುದು ಎಂದು ವರದಿ ಹೇಳಿದೆ. 13 ಏಷ್ಯಾ ಪೆಸಿಫಿಕ್ ದೇಶಗಳ 2,170 ಉದ್ಯಮಿ ನಾಯಕರು ಸಮೀಕ್ಷೆಗೆ ಪ್ರತಿಕ್ರಿಯಿಸಿದ್ದಾರೆ. ಈ ಪೈಕಿ ಹೆಚ್ಚಿನ ಸಂಸ್ಥೆಗಳ ಉದ್ಯಮಿಗಳು ಕನಿಷ್ಠ ಕೆಲವು ಸಮಯದಲ್ಲಾದರೂ ಉದ್ಯೋಗಿಗಳು ಕಚೇರಿಯಲ್ಲಿದ್ದು ಕಾರ್ಯನಿರ್ವಹಿಸಬೇಕು ಎಂದು ಬಯಸಿದ್ದಾರೆ. ಕೇವಲ ಶೇಕಡಾ 7ರಷ್ಟು ಮಂದಿ ಉದ್ಯಮಿಗಳು ಸಂಸ್ಥೆಯ ಉದ್ಯೋಗಿಗಳು ಎಲ್ಲಿಂದ ಬೇಕಾದರೂ ಕಾರ್ಯನಿರ್ವಹಿಸಲಿ ಎಂದಿದ್ದಾರೆ. ಕೋವಿಡ್ ಪೂರ್ವದಲ್ಲಿ ಹೀಗೆ ಹೇಳಿದ ಉದ್ಯಮಿಗಳ ಪ್ರಮಾಣ ಶೇಕಡಾ 5ರಷ್ಟಿತ್ತು.
ಫ್ಲೆಕ್ಸಿಬಲ್ ವರ್ಕಿಂಗ್ ಬಗ್ಗೆ ಯುವಕರ ಒಲವು
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಕಡ್ಡಾಯ ವರ್ಕ್ ಫ್ರಂ ಹೋಮ್ ಅನ್ನು ವಾಪಸ್ ಪಡೆಯುವುದು ಜಾಗತಿಕ ಮಟ್ಟದಲ್ಲಿ ಈಗ ಕಂಪನಿಗಳಿಗೆ ಸವಾಲಾಗಿ ಪರಿಣಮಿಸಿದೆ. ಯುವ ಉದ್ಯೋಗಿಗಳು ಫ್ಲೆಕ್ಸಿಬಲ್ ಅಥವಾ ಪಾರದರ್ಶಕ ಕೆಲಸದ ಬಗ್ಗೆ ಒಲವು ಹೊಂದಿದ್ದಾರೆ. ಸಾಂಕ್ರಾಮಿಕಕ್ಕಿಂತ ಮೊದಲು ಶೇಕಡಾ 79ರಷ್ಟು ಮಂದಿ ಉದ್ಯೋಗಿಗಳು ಮೂರು ತ್ರೈಮಾಸಿಕಕ್ಕಿಂತಲೂ ಹೆಚ್ಚು ಅವಧಿ ಕಚೇರಿಯಿಂದಲೇ ಕೆಲಸ ಮಾಡುವ ಒಲವು ಹೊಂದಿದ್ದರೆ ಈಗ ಅಂಥವರ ಪ್ರಮಾಣ ಶೇಕಡಾ 34ಕ್ಕೆ ಇಳಿಕೆಯಾಗಿದೆ ಎಂದು ವರದಿ ಹೇಳಿದೆ.
ಉದ್ಯೋಗಿಗಳ ಕಲ್ಯಾಣಕ್ಕಾಗಿ ಹೈಬ್ರಿಡ್ ಮಾದರಿ
ಉದ್ಯೋಗಿಗಳ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಹೈಬ್ರಿಡ್ ಮಾದರಿಯ ಕೆಲಸದ ವಿಧಾನಕ್ಕೆ ಒತ್ತು ನೀಡುತ್ತಿರುವುದಾಗಿ ಸಮೀಕ್ಷೆಗೆ ಪ್ರತಿಕ್ರಿಯಿಸಿದ ಶೇಕಡಾ 42ರಷ್ಟು ಮಂದಿ ಉತ್ತರಿಸಿದ್ದಾರೆ. ಲಿಂಕ್ಡ್ಇನ್ ಮಾಹಿತಿ ಪ್ರಕಾರ, ಎಲ್ಲಿಂದ ಬೇಕಾದರೂ ಕೆಲಸ ಮಾಡುವವರ ಸಂಖ್ಯೆ 2020ರ ಜನವರಿಯಲ್ಲಿ ಭಾರತದಲ್ಲಿ ಶೂನ್ಯದಿಂದ ಶೇಕಡಾ 20ಕ್ಕೆ ಹೆಚ್ಚಳವಾಗಿತ್ತು. ಅದೇ ವರ್ಷ ಸೆಪ್ಟೆಂಬರ್ ವೇಳೆಗೆ ಆಸ್ಟ್ರೇಲಿಯಾದಲ್ಲಿ ಶೇಕಡಾ 10ರಷ್ಟು ಆಗಿತ್ತು.
ವಾರಕ್ಕೆ ನಾಲ್ಕೇ ದಿನ ಕೆಲಸ?
ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡುವ ನಿಯಮ ಜಾರಿಗೆ ತರುವ ಬಗ್ಗೆ ಕೆಲವೊಂದು ಸಂಘಟನೆಗಳು ದನಿಯೆತ್ತಲಾರಂಭಿಸಿವೆ. ಆದರೆ, ಶಿಫ್ಟ್ ಸಂಸ್ಕೃತಿ ಹೊಂದಿರುವ ಏಷ್ಯಾದ ಉದ್ದಿಮೆಗಳು ಇದಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಕೇವಲ ಶೇಕಡಾ 2ರಷ್ಟು ನಾಯಕರು ಮುಂದಿನ ಐದು ವರ್ಷಗಳಲ್ಲಿ ಈ ನಿಯಮ ಜಾರಿಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:51 pm, Sat, 19 November 22