‘ಮಾತೃಭೂಮಿ ಚೀನಾ ವಿರೋಧಿ ಸಿನಿಮಾ ಅಲ್ಲ, ಸರ್ಕಾರದ ಒತ್ತಡ ಬಂದಿಲ್ಲ’; ಸಲ್ಮಾನ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ 'ಮಾತೃಭೂಮಿ' ಸಿನಿಮಾ ಚೀನಾ ವಿರೋಧಿ ಚಿತ್ರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಒತ್ತಡದಿಂದ ಕಥೆ ಬದಲಾಯಿಸಲಾಗಿದೆ ಎಂಬ ವದಂತಿಗಳನ್ನು ತಳ್ಳಿಹಾಕಿರುವ ಸಲ್ಲು, ಸೈನಿಕರ ತ್ಯಾಗ ಮತ್ತು ಕುಟುಂಬಗಳ ಭಾವನೆಗಳನ್ನು ಸಿನಿಮಾದಲ್ಲಿ ಎತ್ತಿಹಿಡಿಯಲಾಗಿದೆ ಎಂದು ಹೇಳಿದ್ದಾರೆ. ಸೆನ್ಸಾರ್ ಮಂಡಳಿಯು ಯಾವುದೇ ಕಟ್ ಇಲ್ಲದೆ ಚಿತ್ರಕ್ಕೆ ಅನುಮತಿ ನೀಡಿದೆ.

ಮುಖ್ಯಾಂಶಗಳು
- ಮಾತೃಭೂಮಿ ಚೀನಾ ವಿರೋಧಿ ಸಿನಿಮಾವಲ್ಲ
- ಸರ್ಕಾರದ ಒತ್ತಡದ ವದಂತಿಗೆ ಸಲ್ಮಾನ್ ಖಾನ್ ಬ್ರೇಕ್
- ಯಾವುದೇ ಕಟ್ ಇಲ್ಲದೆ ಸೆನ್ಸಾರ್ ಅಪ್ರೂವಲ್
ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಅಭಿನಯದ ‘ಮಾತೃಭೂಮಿ’ ಸಿನಿಮಾ ಚೀನಾ ವಿರೋಧಿ ಎಂಬ ಮಾತುಗಳು ಕೇಳಿ ಬಂದಿದ್ದವು. ಕಥೆ ಬದಲಿಸುವಂತೆ ಸರ್ಕಾರ ಒತ್ತಡ ಹೇರಿತ್ತು ಎಂದು ಕೂಡ ಹೇಳಲಾಗಿತ್ತು. ಈ ಎಲ್ಲಾ ವದಂತಿಗಳನ್ನು ಸಲ್ಲು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ‘ಮಾತೃಭೂಮಿ’ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಸಿನಿಮಾದ ವಿಳಂಬ ಮತ್ತು ಸೆನ್ಸಾರ್ ಮಂಡಳಿಯ ಮಾನ್ಯತೆ ಕುರಿತು ಸವಿಸ್ತಾರವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸಿನಿಮಾದ ಕುರಿತು ಮಾತನಾಡಿದ ಸಲ್ಮಾನ್ ಖಾನ್, ‘ಮಾತೃಭೂಮಿ ಚಿತ್ರವು ಚೀನಾ ದೇಶದ ವಿರುದ್ಧ ಮಾಡಿದ ಸಿನಿಮಾವಲ್ಲ. ಯುದ್ಧದಲ್ಲಿ ಸೈನಿಕನಿಗೆ ಗುಂಡು ಬಿದ್ದಾಗ ಅದು ಆತನ ತಾಯಿಗೆ ನೋವು ಮಾಡುತ್ತದೆ. ಹೀಗಾಗಿ ನಾವು ಯಾವುದೇ ದೇಶವನ್ನು ನಿಂದಿಸುವ ಉದ್ದೇಶ ಹೊಂದಿಲ್ಲ. ನಮ್ಮ ಸಿನಿಮಾದಿಂದ ಎರಡೂ ದೇಶಗಳ ಸಂಬಂಧ ಹಾಳಾಗುತ್ತದೆ ಎಂಬ ಮಾತುಗಳು ತೀರಾ ಅಸಂಬದ್ಧವಾಗಿವೆ. ಜ್ಯಾಕಿ ಚಾನ್ ಸಿನಿಮಾ ಮಾಡಿದರೆ ನಮ್ಮ ಸೇನೆ ದಾಳಿ ಮಾಡುವುದಿಲ್ಲ. ಅದೇ ರೀತಿ ನನ್ನ ಸಿನಿಮಾ ನೋಡಿ ಚೀನಾ ಸೇನೆ ಕೂಡ ದಾಳಿ ನಡೆಸುವುದಿಲ್ಲ’ ಎಂದು ಸಲ್ಲು ನೇರವಾಗಿ ಹೇಳಿದ್ದಾರೆ.
ಚಿತ್ರದ ಸ್ಕ್ರಿಪ್ಟ್ ಬದಲಾವಣೆ ಹಾಗೂ ಸರ್ಕಾರದ ಒತ್ತಡದ ವದಂತಿಗಳಿಗೂ ಸಲ್ಲು ತೆರೆ ಎಳೆದಿದ್ದಾರೆ. ‘ಸರ್ಕಾರದ ಒತ್ತಡದಿಂದ ನಾವು ಕಥೆ ಬದಲಾಯಿಸಿದ್ದೇವೆ ಎಂಬುದು ಬರೀ ಕಟ್ಟುಕಥೆ. ಯುದ್ಧದ ಸಮಯದಲ್ಲಿ ಎರಡೂ ಬದಿಯ ಯೋಧರು ಮತ್ತು ಅವರ ಕುಟುಂಬಗಳು ಅನುಭವಿಸುವ ನೋವನ್ನು ನಾವು ತೋರಿಸಿದ್ದೇವೆ. ಇದರಲ್ಲಿ ಯಾವುದೇ ದೇಶ ಅಥವಾ ವ್ಯಕ್ತಿಯನ್ನು ವಿಲನ್ ಆಗಿ ಬಿಂಬಿಸಿಲ್ಲ. ಕೇವಲ ಆ ಸಂದರ್ಭಗಳು ಮಾತ್ರ ನಕಾರಾತ್ಮಕವಾಗಿದ್ದವು’ ಎಂದು ಸಲ್ಮಾನ್ ಖಾನ್ ವಿವರಿಸಿದ್ದಾರೆ.
ಚಿತ್ರದ ಬಿಡುಗಡೆ ವಿಳಂಬ ಹಾಗೂ ಸೆನ್ಸಾರ್ ಮಂಡಳಿಯ ಅನುಮತಿಯ ಕುರಿತು ಅವರು ವಿವರಣೆ ನೀಡಿದ್ದಾರೆ. ‘ಉತ್ತಮ ಗುಣಮಟ್ಟದ ವಿಎಫ್‌ಎಕ್ಸ್ ಕೆಲಸಗಳು ಮತ್ತು ನಟಿ ಚಿತ್ರಾಂಗದಾ ಸಿಂಗ್ ಅವರ ಗಾಯದ ಕಾರಣದಿಂದ ಸಿನಿಮಾ ಬಿಡುಗಡೆ ತಡವಾಗಿದೆ. ಆದರೆ ಕೇಂದ್ರ ಸೆನ್ಸಾರ್ ಮಂಡಳಿಯು ಯಾವುದೇ ಕಟ್ ನೀಡದೆ ಸಂಪೂರ್ಣ ಯು/ಎ ಪ್ರಮಾಣಪತ್ರ ನೀಡಿದೆ. ನಮಗೆ ಸಹಾಯ ಮಾಡಿದ ಎಲ್ಲ ಸಚಿವಾಲಯಗಳಿಗೆ ಮತ್ತು ಸೆನ್ಸಾರ್ ಮಂಡಳಿಗೆ ನನ್ನ ಧನ್ಯವಾದಗಳು’ ಎಂದು ಸಲ್ಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ‘ಬಜೆಟ್, ವಿಎಫ್‌ಎಕ್ಸ್ ಬಗ್ಗೆ ಚರ್ಚೆ ಸರಿಯಲ್ಲ’; ‘ರಾಮಾಯಣ’ ಬೆಂಬಲಿಸಿದ ಸಲ್ಮಾನ್ ಖಾನ್
ಅಪೂರ್ವ ಲಖಿಯಾ ನಿರ್ದೇಶನದಲ್ಲಿ ಹಾಗೂ ಸಲ್ಮಾನ್ ಖಾನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಸಿದ್ಧಗೊಂಡಿದೆ. ಮೊದಲು ‘ಬ್ಯಾಟಲ್ ಆಫ್ ಗಲ್ವಾನ್ ವ್ಯಾಲಿ’ ಎಂದಿದ್ದ ಶೀರ್ಷಿಕೆಯನ್ನು ನಂತರ ಹಾಡಿನ ಸಾಲಿನಿಂದ ಸ್ಪೂರ್ತಿ ಪಡೆದು ‘ಮಾತೃಭೂಮಿ’ ಎಂದು ಬದಲಾಯಿಸಲಾಗಿದೆ. ಬಜೆಟ್ ಏರಿಕೆಯ ಬಗ್ಗೆ ತಲೆಕೆಡಿಸಿಕೊಳ್ಳದ ಸಲ್ಲು, ಪ್ರೇಕ್ಷಕರಿಗೆ ಅದ್ಭುತ ಸಿನಿಮಾ ಅನುಭವ ನೀಡುವುದೇ ಮುಖ್ಯ ಎಂದಿದ್ದಾರೆ. ಈ ಬಹುನಿರೀಕ್ಷಿತ ಯುದ್ಧ ಆಧಾರಿತ ಚಿತ್ರವು ಡಿಸೆಂಬರ್ 4 ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




