Movie Review: ‘ಕೆಂಡ’ದಂತಹ ವಿಚಾರ, ಬೇರೆಯದೇ ಪ್ರಕಾರ: ಸಾವಧಾನದಿಂದ ಸಿನಿಮಾ ಮಾಡಿದ ಸಹದೇವ್
ಸುದ್ದಿಯಲ್ಲಿ ಕಂಡಿದ್ದನ್ನೆಲ್ಲ ಇನ್ನೊಂದು ಆಯಾಮದಲ್ಲಿ ನೋಡುವಂತೆ ಜನರನ್ನು ಪ್ರೇರೇಪಿಸುವ ಪ್ರಯತ್ನ ‘ಕೆಂಡ’ ಸಿನಿಮಾದಿಂದ ಆಗಿದೆ. ಗಂಭೀರವಾದ ವಿಷಯವನ್ನು ಇಟ್ಟುಕೊಂಡು ನಿರ್ದೇಶಕ ಸಹದೇವ್ ಕೆಲವಡಿ ಅವರು ಈ ಸಿನಿಮಾವನ್ನು ಮಾಡಿದ್ದಾರೆ. ಮನರಂಜನೆಗಿಂತಲೂ ಆಲೋಚನೆಗೆ ಹೆಚ್ಚು ಒತ್ತು ನೀಡುವ ರೀತಿಯಲ್ಲಿ ಅವರು ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಸಿನಿಮಾ: ಕೆಂಡ. ನಿರ್ಮಾಣ: ರೂಪಾ ರಾವ್, ಸಹದೇವ್ ಕೆಲವಡಿ. ನಿರ್ದೇಶನ: ಸಹದೇವ್ ಕೆಲವಡಿ. ಪಾತ್ರವರ್ಗ: ಬಿ.ವಿ. ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲಾ, ಗೋಪಾಲಕೃಷ್ಣ ದೇಶಪಾಂಡೆ, ಬಿಂದೂ ರಕ್ಷಿದಿ ಮುಂತಾದವರು. ಸ್ಟಾರ್: 3/5
ಕನ್ನಡ ಚಿತ್ರರಂಗದಲ್ಲಿ ಆಗೊಮ್ಮೆ ಈಗೊಮ್ಮೆ ಡಿಫರೆಂಟ್ ಪ್ರಯತ್ನಗಳು ಆಗುತ್ತವೆ. ಹೊಸ ಪ್ರತಿಭೆಗಳು ಸಂಪೂರ್ಣ ಬೇರೆಯದೇ ರೀತಿಯಲ್ಲಿ ಸಿನಿಮಾ ಮಾಡಿ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಅಂಥ ಸಿನಿಮಾಗಳ ಸಾಲಿಗೆ ಸೇರುತ್ತದೆ ‘ಕೆಂಡ’ ಚಿತ್ರ. ಈ ವಾರ (ಜುಲೈ 26) ತೆರೆಕಂಡ ಈ ಸಿನಿಮಾದಲ್ಲಿ ಒಂದು ಡಿಫರೆಂಟ್ ಆದಂತಹ ಕಥೆ ಇದೆ. ಸಮಾಜದಲ್ಲಿ ಪ್ರತಿ ದಿನವೂ ನಡೆಯುವಂತಹ ಸೂಕ್ಷ್ಮ ವಿಚಾರಗಳನ್ನೇ ಇಟ್ಟುಕೊಂಡು ನಿರ್ದೇಶಕ ಸಹದೇವ್ ಕೆಲವಡಿ ಅವರು ಈ ಸಿನಿಮಾ ಮಾಡಿದ್ದಾರೆ. ಈ ಮೂಲಕ ಅವರು ಕೆಲವು ಕರಾಳ ಸಂಗತಿಗಳನ್ನು ಪ್ರೇಕ್ಷಕರ ಎದುರು ತಂದಿದ್ದಾರೆ.
ಸಿನಿಮಾ ಎಂದರೆ ಹೀಗೆಯೇ ಇರಬೇಕು ಎಂಬ ಅಲಿಖಿತ ಸಿದ್ಧ ಸೂತ್ರ ಚಿತ್ರರಂಗದಲ್ಲಿ ಇದೆ. ಅದು ಸಿನಿಮಾ ಮಂದಿಯ ಮನಸ್ಸಿನಲ್ಲೂ, ಪ್ರೇಕ್ಷಕರ ಮನಸ್ಸಿನಲ್ಲೂ ಅಚ್ಚೊತ್ತಿದೆ. ಅದಕ್ಕೆ ವಿರುದ್ಧವಾಗಿ ಆಲೋಚಿಸುವುದು ಒಂದು ಸವಾಲಿನ ಕೆಲಸ. ಆ ಸವಾಲನ್ನು ಸ್ವೀಕರಿಸಿದ್ದಾರೆ ‘ಕೆಂಡ’ ಸಿನಿಮಾದ ನಿರ್ದೇಶಕ ಸಹದೇವ್ ಕೆಲವಡಿ. ಯಾವುದೇ ಸಿದ್ಧಸೂತ್ರಗಳಿಗೆ ಗಂಟುಬೀಳದೇ ತಮಗೆ ಬೇಕಾದ ರೀತಿಯಲ್ಲಿ ಅವರು ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಆ ಕಾರಣಕ್ಕಾಗಿ ‘ಕೆಂಡ’ ಡಿಫರೆಂಟ್ ಎನಿಸುತ್ತದೆ.
ಇದು ಸಿದ್ಧಸೂತ್ರಗಳ ಸಿನಿಮಾ ಅಲ್ಲದ ಕಾರಣದಿಂದ ಇದರಲ್ಲಿ ಮಸಾಲೆ ತುಂಬಿದ ಹಾಡುಗಳಿಗೆ ಜಾಗವಿಲ್ಲ. ಅನಗತ್ಯ ಎನಿಸುವ ಕಾಮಿಡಿ ಇಲ್ಲ. ಸಂಭಾಷಣೆಗಳು ಕೂಡ ಇಷ್ಟಕ್ಕೆ ಬೇಕೋ ಅಷ್ಟೇ ಇವೆ. ಮೊದಲ ದೃಶ್ಯದಿಂದ ಕೊನೇ ದೃಶ್ಯದ ತನಕ ಗಂಭೀರ ವಿಚಾರಗಳನ್ನೇ ಹೇಳಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಅವರಂತಹ ಪಾತ್ರಗಳನ್ನು ಬಿಟ್ಟರೆ ಇನ್ನುಳಿದ ಎಲ್ಲರೂ ಈ ಸಿನಿಮಾದಲ್ಲಿ ಹೊಸಬರು. ಹಾಗಾಗಿ ಯಾವ ಪಾತ್ರ ಯಾವ ರೀತಿ ಸಾಗಬಹುದು ಎಂಬುದರ ಕಿಂಚಿತ್ತೂ ಪೂರ್ವಾಗ್ರಹ ಇಲ್ಲದ ರೀತಿಯಲ್ಲಿ ಕಥೆಯನ್ನು ನಿರೂಪಿಸಲು ನಿರ್ದೇಶಕರಿಗೆ ಅನುಕೂಲ ಆಗಿದೆ.
ಸಮಾಜದಲ್ಲಿ ಪ್ರತಿ ದಿನ ನೂರಾರು ಬಗೆಯ ಪ್ರತಿಭಟನೆಗಳು ನಡೆಯುತ್ತವೆ. ಗಲಭೆಗಳು ಕೂಡ ಪ್ರತಿ ದಿನ ಸುದ್ದಿ ಆಗುತ್ತವೆ. ಟಿವಿ, ಪತ್ರಿಕೆಯಲ್ಲಿ ಬಿತ್ತರ ಆಗುವ ಸುದ್ದಿ ಹಾಗೂ ಅದರ ಹಿಂದಿರಬಹುದಾದ ಅಸಲಿ ವಿಚಾರಕ್ಕೂ ದೊಡ್ಡ ಅಂತರ ಇರುತ್ತದೆ ಎಂಬುದನ್ನು ‘ಕೆಂಡ’ ಸಿನಿಮಾದಲ್ಲಿ ನಿರ್ದೇಶಕರು ಹೇಳಿದ್ದಾರೆ. ಆ ಗಲಭೆಗಳ ಹಿಂದಿರುವ ಕಿಡಿಗೇಡಿಗಳು ಕೆಂಡದ ರೀತಿಯಲ್ಲಿ ಅಥವಾ ಬೂದಿ ಮುಚ್ಚಿದ ಕೆಂಡದ ರೀತಿಯಲ್ಲಿ ಇರುತ್ತಾರೆ. ಯಾವಾಗ ಬೇಕಿದ್ದರೂ ಬೆಂಕಿ ಹೊತ್ತಿಸಲು ಅವರು ಸಿದ್ಧವಾಗಿರುತ್ತಾರೆ. ಆ ಬೆಂಕಿಯಲ್ಲಿ ಸಿಕ್ಕಿ ನಲುಗುವ ಅಮಾಯಕರ ಬದುಕನ್ನು ಕೇಳಲು ಯಾರೂ ಇರುವುದಿಲ್ಲ. ಅಷ್ಟೇ ಅಲ್ಲದೇ, ಆ ಬೆಂಕಿ ಹೊತ್ತಿಸಲು ಬಳಕೆ ಆಗುವುದು ಕೂಡ ಅಮಾಯಕರೇ ಎಂಬುದು ವಿಪರ್ಯಾಸ. ಇಂಥ ಸಂಗತಿಗಳೇ ‘ಕೆಂಡ’ ಸಿನಿಮಾದಲ್ಲಿ ಕಥೆಯಾಗಿವೆ.
ಇದನ್ನೂ ಓದಿ: Movie Review: ‘ಬ್ಯಾಕ್ ಬೆಂಚರ್ಸ್’ ಚಿತ್ರದಲ್ಲಿ ಕಾಲೇಜ್ ಮಂದಿ ಕಥೆ; ತರ್ಲೆ, ತಮಾಷೆಗೆ ಆದ್ಯತೆ
ಮೇಕಿಂಗ್ ಗುಣಮಟ್ಟದಲ್ಲಿ ‘ಕೆಂಡ’ ಸಿನಿಮಾ ಸ್ವಲ್ಪ ನಿರಾಸೆ ಮೂಡಿಸುತ್ತದೆ. ಸಾಧ್ಯವಾದಷ್ಟು ವಿಷಯಗಳನ್ನು ಸೂಕ್ಷ್ಮವಾಗಿ ಹೇಳಲು ಪ್ರಯತ್ನಿಸಿರುವ ಕಾರಣದಿಂದ ಎಲ್ಲ ವರ್ಗದ ಪ್ರೇಕ್ಷಕರಿಗೂ ಈ ಚಿತ್ರ ಹಿಡಿಸದೇ ಇರಬಹುದು. ತಾಳ್ಮೆಯಿಂದ ಎಲ್ಲವನ್ನೂ ಗ್ರಹಿಸುವಂತಹ ಪ್ರೇಕ್ಷಕರಿಗೆ ‘ಕೆಂಡ’ ಚಿತ್ರ ಆಪ್ತವೆನಿಸುತ್ತದೆ. ಇನ್ನುಳಿದವರಿಗೆ ತಾಳ್ಮೆಯ ಪರೀಕ್ಷೆ ಎನಿಸಲೂಬಹುದು. ಸಂಗೀತದ ಮೂಲಕ ರಿತ್ವಿಕ್ ಕಾಯ್ಕಿಣಿ ಅವರು ಕೂಡ ಪ್ರಯೋಗ ಮಾಡಿದ್ದಾರೆ. ಅಂಡರ್ವರ್ಲ್ಡ್ ರೀತಿಯ ಕಥೆಗೆ ಅವರು ಹಿನ್ನೆಲೆ ಸಂಗೀತದ ಮೂಲಕ ಬೇರೆ ಫೀಲ್ ನೀಡಲು ಪ್ರಯತ್ನಿಸಿದ್ದಾರೆ. ಅತಿರೇಕವಿಲ್ಲದ ನಟನೆ ಮೂಲಕ ಎಲ್ಲ ಕಲಾವಿದರು ಗಮನ ಸೆಳೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.