‘ಮರೆತು ಮುಂದೆ ಸಾಗಬೇಕು’; ಮತ್ತೆ ಪ್ರೀತಿಲಿ ಬೀಳಲು ರೆಡಿ ಆದ ಹಾರ್ದಿಕ್ ಮಾಜಿ ಪತ್ನಿ
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟ್ಯಾಂಕೋವಿಕ್ 2024ರಲ್ಲಿ ವಿಚ್ಛೇದನ ಪಡೆದರು. ಈಗ ನತಾಶಾ ಮತ್ತೆ ಪ್ರೇಮದಲ್ಲಿ ಬೀಳಲು ಸಿದ್ಧ ಎಂದು ಹೇಳಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಅವರು ತಮ್ಮ ಅನುಭವಗಳಿಂದ ಬೆಳೆದಿರುವುದಾಗಿ ಮತ್ತು ಜೀವನದ ಎಲ್ಲಾ ಅಂಶಗಳನ್ನು ಸ್ವೀಕರಿಸಲು ಸಿದ್ಧರಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ನಟಿ-ಮಾಡೆಲ್ ನತಾಶಾ 2024ರಲ್ಲಿ ಬೇರೆ ಆದರು. ಈ ಮೂಲಕ 4 ವರ್ಷಗಳ ದಾಂಪತ್ಯವನ್ನು ತೊರೆದರು. ಈ ದಂಪತಿಗೆ ಅಗಸ್ತ್ಯ ಹೆಸರಿನ ನಾಲ್ಕು ವರ್ಷದ ಮಗ ಇದ್ದಾನೆ. ಆಗಾಗ ಹಾರ್ದಿಕ್ ಹಾಗೂ ಅಗಸ್ತ್ಯ ಒಟ್ಟಾಗಿ ಕಾಣಿಸಿಕೊಳ್ಳುವ ವಿಡಿಯೋ ವೈರಲ್ ಆಗುತ್ತದೆ. ಹಾರ್ದಿಕ್ ಅವರು ಬ್ರಿಟಿಷ್ ಸಿಂಗರ್ ಜಾಸ್ಮಿನ್ ವಾಲಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿರುವಾಗಲೇ ಅವರ ಮಾಜಿ ಪತ್ನಿ ನತಾಶಾ ಮತ್ತೆ ಪ್ರೀತಿಯಲ್ಲಿ ಬೀಳಲು ರೆಡಿ ಆಗಿದ್ದಾರೆ.
ಬಾಂಬೆ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರೋ ನತಾಶಾ, ಅನುಭವದ ಮೂಲಕ ಬೆಳೆಯುತ್ತಿರುವುದಾಗಿ ಅವರು ಹೇಳಿದ್ದಾರೆ. ಜೀವನದಲ್ಲಿ ಏನೆಲ್ಲ ಬರುತ್ತದೆಯೋ ಅದನ್ನು ಸ್ವೀಕರಿಸುವುದಾಗಿ ಅವರು ಹೇಳಿದ್ದಾರೆ. ‘ಪ್ರೀತಿಯಲ್ಲಿ ಬೀಳಲು ನನಗೆ ಅಭ್ಯಂತರವಿಲ್ಲ. ಜೀವನದಲ್ಲಿ ಎದುರಾಗುವ ಎಲ್ಲ ವಿಚಾರಗಳನ್ನು ನಾನು ಸ್ವೀಕರಿಸಲು ಸಿದ್ಧ. ಸರಿಯಾದ ಸಮಯ ಬಂದಾಗ ಸರಿಯಾದ ವ್ಯಕ್ತಿ ಸಿಗುತ್ತಾನೆ. ನಂಬಿಕೆ ಮತ್ತು ತಿಳುವಳಿಕೆಯಿಂದ ಆದ ಅರ್ಥಪೂರ್ಣ ಸಂಬಂಧಗಳನ್ನು ನಾನು ಗೌರವಿಸುತ್ತೇನೆ. ಪ್ರೀತಿಯು ನನ್ನ ಪ್ರಯಾಣಕ್ಕೆ ಪೂರಕವಾಗಿರಬೇಕು ಎಂಬುದು ನನ್ನ ಭಾವನೆ’ ಎಂದು ನತಾಶಾ ಹೇಳಿದ್ದಾರೆ.
‘ಜೀವನ ಯಾವಾಗಲೂ ನಿರೀಕ್ಷಿಸಿದಂತೆ ನಡೆಯುವುದಿಲ್ಲ. ಅಂತಹ ಸವಾಲುಗಳು ಎದುರಾದಾಗ ಒಬ್ಬರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಆಧಾರದ ಮೇಲೆ ಬೆಳವಣಿಗೆ ಅನ್ನೋದು ನಿರ್ಧಾರ ಆಗುತ್ತದೆ. ಹಿನ್ನಡೆಗಳನ್ನು ವೈಫಲ್ಯಗಳಾಗಿ ನೋಡಬಾರದು. ಅವುಗಳಿಂದ ಅನುಭವ ಸಿಗುತ್ತದೆ. ಜೀವನದಲ್ಲಿ ಕ್ಷಮಿಸಿ ಮುಂದೆ ಸಾಗಬೇಕು’ ಎಂದು ನತಾಶಾ ಹೇಳಿದ್ದಾರೆ.
ಇದನ್ನೂ ಓದಿ: ವಿವಾದಿತ ಯೂಟ್ಯೂಬರ್ ಜೊತೆ ಸುತ್ತಾಟ ಆರಂಭಿಸಿದ ಹಾರ್ದಿಕ್ ಮಾಜಿ ಪತ್ನಿ ನತಾಶಾ
ನತಾಶಾ ಹಾಗೂ ಹಾರ್ದಿಕ್ 2020ರ ಸಮಯದಲ್ಲಿ ವಿವಾಹ ಆದರು. ಕಳೆದ ವರ್ಷ ಜುಲೈನಲ್ಲಿ ಇವರು ಬೇರೆ ಆದರು. ಇಬ್ಬರೂ ಪರಸ್ಪರ ಒಪ್ಪಿದ ಬಳಿಕ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಹಾರ್ದಿಕ್ ಅವರು ಐಪಿಎಲ್ನಲ್ಲಿ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲ ಪಂದ್ಯಕ್ಕೆ ಅವರು ಲಭ್ಯಲಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.