ಈ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು, ದಸರಾ, ಪತ್ತುತಲಾ ಇನ್ನೂ ಹಲವು
OTT release this week: ಐಪಿಎಲ್ ಸೀಸನ್ನಿಂದಾಗಿ ಚಿತ್ರಮಂದಿರಗಳಲ್ಲಿ ಸಿನಿಮಾಗಳು ಕಡಿಮೆಯಾಗಿವೆ. ಆದರೆ ಒಟಿಟಿಯಲ್ಲಿ ಹಲವು ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆ ಆಗುತ್ತಿವೆ. ಈ ವಾರ ಬಿಡುಗಡೆ ಆದ ಸಿನಿಮಾ ಹಾಗೂ ವೆಬ್ ಸರಣಿಗಳ ಪಟ್ಟಿ ಇಲ್ಲಿದೆ.
ಐಪಿಎಲ್ (IPL) ಮತ್ತು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಳು ಚಾಲ್ತಿಯಲ್ಲಿರುವ ಕಾರಣ ಚಿತ್ರಮಂದಿರದಲ್ಲಿ ಸಿನಿಮಾ (Movie) ಬಿಡುಗಡೆ ಕಡಿಮೆಯಾಗಿವೆ. ಆದರೆ ಈ ಸದಾವಕಾಶವನ್ನು ಬಳಸಿಕೊಳ್ಳುತ್ತಿರುವ ಒಟಿಟಿಗಳು (OTT) ಹೊಸ ಹೊಸ ಸಿನಿಮಾಗಳನ್ನು ತೆರೆಗೆ ತರುತ್ತಿವೆ. ಈ ವಾರವಂತೂ ವಿವಿಧ ಭಾಷೆಯ ಸುಮಾರು 20 ಕ್ಕೂ ಹೆಚ್ಚು ಹೊಸ ಸಿನಿಮಾಗಳು ವೆಬ್ ಸರಣಿಗಳು ವಿವಿಧ ಒಟಿಟಿಗಳಲ್ಲಿ ತೆರೆಗೆ ಬರುತ್ತಿವೆ. ಅವುಗಳಲ್ಲಿ ಕೆಲವು ಮುಖ್ಯವಾದ ಸಿನಿಮಾಗಳ ಪಟ್ಟಿ ಇಲ್ಲಿದೆ.
ದಸರಾ
ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ನಾನಿ ನಟನೆಯ ದಸರಾ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ನೆಟ್ಫ್ಲಿಕ್ಸ್ನಲ್ಲಿ ಈ ಸಿನಿಮಾ ಏಪ್ರಿಲ್ 27ರಿಂದ ಸ್ಟ್ರೀಮ್ ಆಗಲಿದೆ. ಸಿನಿಮಾದಲ್ಲಿ ಕೀರ್ತಿ ಸುರೇಶ್ ಹಾಗೂ ಕನ್ನಡದ ನಟ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಸಹ ನಟಿಸಿದ್ದಾರೆ.
ಪತ್ತು ತಲ
ದಸರಾ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆದ ದಿನವೇ ಬಿಡುಗಡೆ ಆಗಿದ್ದ ತಮಿಳನ ಪತ್ತು ತಲ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಸಿಂಭು ನಟನೆಯ ಈ ಸಿನಿಮಾವು ಅಮೆಜಾನ್ ಪ್ರೈಂನಲ್ಲಿ ತೆರೆಗೆ ಬಂದಿದೆ. ಪತ್ತು ತಲಾ ಸಿನಿಮಾವು ಕನ್ನಡದ ಸೂಪರ್ ಹಿಟ್ ಸಿನಿಮಾ ಮಫ್ತಿಯ ರೀಮೇಕ್ ಆಗಿದೆ.
ಸಿಟಾಡೆಲ್
ಪ್ರಿಯಾಂಕಾ ಚೋಪ್ರಾ ನಟಿಸಿರುವ ಭಾರಿ ಬಜೆಟ್ನ ಇಂಗ್ಲೀಷ್ ವೆಬ್ ಸರಣಿ ಸಿಟಾಡೆಲ್ ಇದೇ ಏಪ್ರಿಲ್ 28 ರಂದು ಅಮೆಜಾನ್ ಪ್ರೈಂನಲ್ಲಿ ಪ್ರೀಮಿಯರ್ ಆಗಲಿದೆ. ವೆಬ್ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ಗೂಢಚಾರಿಣಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಖತ್ ಆಕ್ಷನ್ ಮತ್ತು ಥ್ರಿಲ್ಲರ್ ಅಂಶಗಳನ್ನು ಈ ವೆಬ್ ಸರಣಿ ಒಳಗೊಂಡಿದೆ.
ಯೂ ಟರ್ನ್
ಪವನ್ ಕುಮಾರ್ ನಿರ್ದೇಶನ ಮಾಡಿದ್ದ ಕನ್ನಡದ ಸೂಪರ್ ಹಿಟ್ ಸಿನಿಮಾ ಯೂಟರ್ನ್ ಅದೇ ಹೆಸರಲ್ಲಿ ಹಿಂದಿಗೆ ರೀಮೇಕ್ ಆಗಿದ್ದ ಆ ಸಿನಿಮಾ ಇದೀಗ ಜೀ 5ನಲ್ಲಿ ಏಪ್ರಿಲ್ 28ರಿಂದ ಸ್ಟ್ರೀಮ್ ಆಗಲಿದೆ. ಅದೇ ದಿನ ತೆಲುಗಿನ ವ್ಯವಸ್ಥ ಹೆಸರಿನ ವೆಬ್ ಸರಣಿ ಸಹ ಜೀ5 ನಲ್ಲಿ ಬಿಡುಗಡೆ ಆಗಲಿದೆ.
ವೇದ್
ತೆಲುಗಿನ ಮಜಿಲಿ ಸಿನಿಮಾದ ಮರಾಠಿ ರೀಮೇಕ್ ಸಿನಿಮಾ ವೇದ್ ಈ ವಾರ ಒಟಿಟಿಗೆ ಬಂದಿದೆ. ದಂಪತಿಗಳಾದ ರಿತೇಶ್ ದೇಶ್ಮುಖ್ ಹಾಗೂ ಜೆನಿಲಿಯಾ ಡಿಸೋಜಾ ಒಟ್ಟಿಗೆ ನಟಿಸಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ಡಿಸ್ನಿ ಹಾಟ್ಸ್ಟಾರ್ನಲ್ಲಿ ಇದೇ ವಾರದಿಂದ ಸ್ಟ್ರೀಮಿಂಗ್ ಆರಂಭಿಸಲಿದೆ.
ಇನ್ನಿತರೆ ಸಿನಿಮಾ ಹಾಗೂ ವೆಬ್ ಸರಣಿಗಳು
ಮಲಯಾಳಂನ ತುರುಮುಖಂ ಸೋನಿ ಲಿವ್ನಲ್ಲಿ ಏಪ್ರಿಲ್ 28ಕ್ಕೆ ಬಿಡುಗಡೆ ಆಗುತ್ತಿದೆ. ಪೀಟರ್ ಪ್ಯಾನ್ ಆಂಡ್ ವಿಂಡಿ ಸಿನಿಮಾವು ಡಿಸ್ನಿ ಹಾಟ್ಸ್ಟಾರ್ನಲ್ಲಿ ಏಪ್ರಿಲ್ 28ಕ್ಕೆ ತೆರೆಗೆ ಬರುತ್ತಿದೆ. ನೆಟ್ಫ್ಲಿಕ್ಸ್ನಲ್ಲಿ ಹಲವು ಇಂಗ್ಲೀಷ್ ಸಿನಿಮಾ ಹಾಗೂ ವೆಬ್ ಸರಣಿಗಳು ಈ ವಾರ ತೆರೆಗೆ ಬರುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ