Critics Choice Awards 2023: ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ನ 5 ವಿಭಾಗಗಳಲ್ಲಿ ನಾಮಿನೇಟ್ ಆದ ‘ಆರ್ಆರ್ಆರ್’ ಸಿನಿಮಾ
RRR | SS Rajamouli: 2023ರ ಜನವರಿಯಲ್ಲಿ ‘ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್’ ಸಮಾರಂಭ ನಡೆಯಲಿದೆ. 5 ವಿಭಾಗಗಳಲ್ಲಿ ‘ಆರ್ಆರ್ಆರ್’ ಚಿತ್ರ ನಾಮಿನೇಟ್ ಆಗಿದೆ.

ನಿರ್ದೇಶಕ ರಾಜಮೌಳಿ (SS Rajamouli) ಅವರ ‘ಆರ್ಆರ್ಆರ್’ ಸಿನಿಮಾ ಹಲವು ಪ್ರತಿಷ್ಠಿತ ಪ್ರಶಸ್ತಿಗಳ ಮೇಲೆ ಕಣ್ಣಿಟ್ಟಿದೆ. ಇತ್ತೀಚೆಗಷ್ಟೇ ‘ಗೋಲ್ಡನ್ ಗ್ಲೋಬ್ ಅವಾರ್ಡ್’ನ ಎರಡು ವಿಭಾಗಗಳಿಗೆ ಈ ಸಿನಿಮಾ ನಾಮಿನೇಟ್ ಆದ ಸುದ್ದಿ ಕೇಳಿ ಫ್ಯಾನ್ಸ್ ಖುಷಿ ಆಗಿದ್ದರು. ಈಗ ಇನ್ನೊಂದು ಪ್ರತಿಷ್ಠಿತ ಪ್ರಶಸ್ತಿಯಾಗ ‘ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ 2023’ (Critics Choice Awards 2023) ಮೇಲೆ ಈ ಸಿನಿಮಾ ದೃಷ್ಟಿ ಹರಿಸಿದೆ. ಒಟ್ಟು 5 ವಿಭಾಗಗಳಲ್ಲಿ ನಾಮಿನೇಟ್ ಆಗುವ ಮೂಲಕ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ರಾಮ್ ಚರಣ್, ಜೂನಿಯರ್ ಎನ್ಟಿಆರ್, ಆಲಿಯಾ ಭಟ್, ಅಜಯ್ ದೇವಗನ್ ಮುಂತಾದವರು ನಟಿಸಿರುವ ‘ಆರ್ಆರ್ಆರ್’ (RRR Movie) ಸಿನಿಮಾಗೆ ಅಂತಿಮವಾಗಿ ಯಾವೆಲ್ಲ ಪ್ರಶಸ್ತಿಗಳು ಒಲಿಯಲಿವೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
‘ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ 2023’ರ ನಾಮಿನೇಷನ್ ಪಟ್ಟಿಯನ್ನು ಬುಧವಾರ (ಡಿ.14) ಘೋಷಣೆ ಮಾಡಲಾಯಿತು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ವಿದೇಶಿ ಭಾಷಾ ಚಿತ್ರ, ಅತ್ಯುತ್ತಮ ವಿಶ್ಯವಲ್ ಎಫೆಕ್ಟ್ ಹಾಗೂ ಅತ್ಯುತ್ತಮ ಹಾಡು ವಿಭಾಗಗಳಲ್ಲಿ ‘ಆರ್ಆರ್ಆರ್’ ಸಿನಿಮಾ ನಾಮಿನೇಟ್ ಆಗಿದೆ.
ಇದನ್ನೂ ಓದಿ: ‘ಆರ್ಆರ್ಆರ್’ ನಿರ್ದೇಶಕ ರಾಜಮೌಳಿ ಮನೆಗೆ ಬಂತು ಹೊಸ ಕಾರು; ಇದರ ಬೆಲೆ ಎಷ್ಟು?
2022ರಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ‘ಆರ್ಆರ್ಆರ್’ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಸಾವಿರ ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ಸೈ ಎನಿಸಿಕೊಂಡಿದೆ. ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆಯುವತ್ತ ಈ ಸಿನಿಮಾ ಗುರಿ ಇಟ್ಟುಕೊಂಡಿದೆ. ಸ್ವತಂತ್ರವಾಗಿ ಆಸ್ಕರ್ ಪ್ರಶಸ್ತಿಗೂ ನಾಮನಿರ್ದೇಶನಗೊಳ್ಳಲು ಪ್ರಯತ್ನಿಸುತ್ತಿದೆ.
ಇದನ್ನೂ ಓದಿ: Oscars 2023 Nominations: ಆಸ್ಕರ್ಗೆ ‘ಆರ್ಆರ್ಆರ್’ ನಾಮಿನೇಟ್? ಸೃಷ್ಟಿಯಾಗಲಿದೆ ಹೊಸ ದಾಖಲೆ
2023ರ ಜನವರಿಯಲ್ಲಿ ‘ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್’ ಸಮಾರಂಭ ನಡೆಯಲಿದೆ. 5 ವಿಭಾಗಗಳ ಪೈಕಿ ಯಾವೆಲ್ಲ ವಿಭಾಗಗಳಲ್ಲಿ ‘ಆರ್ಆರ್ಆರ್’ ಚಿತ್ರಕ್ಕೆ ಪ್ರಶಸ್ತಿ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಹಲವು ಪ್ರಶಸ್ತಿಗೆ ಈ ಚಿತ್ರ ನಾಮಿನೇಟ್ ಆಗುತ್ತಿರುವುದರಿಂದ ವಿಶ್ವಾದ್ಯಂತ ಇರುವ ಸಿನಿಪ್ರಿಯರು ಈ ಚಿತ್ರದ ಬಗ್ಗೆ ಗಮನ ಹರಿಸುತ್ತಿದ್ದಾರೆ.
‘ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2023’:
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪಡೆಯಲು ‘ಆರ್ಆರ್ಆರ್’ ಚಿತ್ರ ಪ್ರಯತ್ನಿಸುತ್ತಿದೆ. 2 ವಿಭಾಗಗಳಲ್ಲಿ ಈ ಸಿನಿಮಾ ನಾಮಿನೇಟ್ ಆಗಿದೆ. ‘ಇಂಗ್ಲಿಷ್ ಹೊರತಾದ ಅತ್ಯುತ್ತಮ ಸಿನಿಮಾ’ ಹಾಗೂ ‘ಅತ್ಯುತ್ತಮ ಹಾಡು’ (ನಾಟು ನಾಟು) ವಿಭಾಗದಲ್ಲಿ ಪೈಪೋಟಿ ನೀಡುತ್ತಿದೆ. ಈ ಸುದ್ದಿ ಕೇಳಿ ರಾಜಮೌಳಿ ಫ್ಯಾನ್ಸ್ ಖುಷಿ ಆಗಿದ್ದಾರೆ. ‘ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್’ ಮೂಲಕ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ನೀಡಲಾಗುತ್ತದೆ. ಅಮೆರಿಕದ ಸಿನಿಮಾ ಹಾಗೂ ಕಿರುತೆರೆ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.