ಪ್ರೀತಿಯನ್ನು ನಂಬದೆ, ಹಣವೇ ಮುಖ್ಯ ಎಂದುಕೊಂಡಿದ್ದ ದೇವರಕೊಂಡ; ಭ್ರಮನಿರಸನ ಆದಾಗ ಏನಾಯ್ತು?
ಲೈಗರ್ ಚಿತ್ರದ ಪ್ರಮೋಷನ್ ವೇಳೆ ವಿಜಯ್ ದೇವರಕೊಂಡ ಅವರ ವೈಯಕ್ತಿಕ ವಿಚಾರ ಕೂಡ ಚರ್ಚೆಗೆ ಬಂದಿದೆ. ಈ ವೇಳೆ ಅವರು ಕೆಲ ನೇರ ಮಾತುಗಳನ್ನು ಹೇಳಿದ್ದಾರೆ.
ವಿಜಯ್ ದೇವರಕೊಂಡ (Vijay Devarakonda) ಅವರ ನಟನೆಯ ‘ಲೈಗರ್’ ಸಿನಿಮಾ (Liger Movie) ರಿಲೀಸ್ಗೆ ಕ್ಷಣಗಣನೆ ಆರಂಭ ಆಗಿದೆ. ಆಗಸ್ಟ್ 25ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ. ವಿಜಯ್ ದೇವರಕೊಂಡ ಅವರು ಈ ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದು, ಮಾಸ್ ಅವತಾರ ತಾಳಿದ್ದಾರೆ. ಈ ಚಿತ್ರದ ಪ್ರಮೋಷನ್ ವೇಳೆ ವಿಜಯ್ ದೇವರಕೊಂಡ ಅವರ ವೈಯಕ್ತಿಕ ವಿಚಾರ ಕೂಡ ಚರ್ಚೆಗೆ ಬಂದಿದೆ. ಈ ವೇಳೆ ಅವರು ಕೆಲ ನೇರ ಮಾತುಗಳನ್ನು ಹೇಳಿದ್ದಾರೆ. ಜೀವನದಲ್ಲಿ ಯಾರಿಗೂ ‘ಲವ್ ಯೂ ಟೂ’ ಎಂದಿಲ್ಲ ಎಂಬುದನ್ನು ವಿಜಯ್ ರಿವೀಲ್ ಮಾಡಿದ್ದಾರೆ.
‘ನಾನು ಬೆಳೆಯುವಾಗ ಪ್ರೀತಿಗಿಂತ ಹಣ ಮುಖ್ಯ ಎಂಬುದನ್ನು ನನ್ನ ತಂದೆ ಹೇಳಿಕೊಟ್ಟರು. ಇಡೀ ಪ್ರಪಂಚ ಹಣದ ಮೇಲೆ ನಿಂತಿದೆ ಎಂಬುದನ್ನು ಒತ್ತಿ ಹೇಳಿದರು. ಹಣವಿದ್ದರೆ ಎಲ್ಲವೂ ಇದ್ದಂತೆ. ಹಣ ಇದ್ದರೆ ಜನರು ನಿಮ್ಮನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಮತ್ತು ನಿಮಗಾಗಿ ಎಲ್ಲವನ್ನೂ ಮಾಡುತ್ತಾರೆ ಎಂಬುದನ್ನು ತಂದೆ ಹೇಳಿದ್ದರು. ಈ ಮಾತು ನನ್ನಲ್ಲಿ ಆಳವಾಗಿ ಬೇರೂರಿತ್ತು’ ಎಂದು ತಂದೆ ಆಡಿದ ಮಾತನ್ನು ವಿಜಯ್ ದೇವರಕೊಂಡ ನೆನಪಿಸಿಕೊಂಡಿದ್ದಾರೆ.
‘ನನ್ನ ಬಳಿ ಯಾರೇ ಬಂದರು ಅವರು ಒಂದು ಉದ್ದೇಶ ಇಟ್ಟುಕೊಂಡು ಬಂದಿದ್ದಾರೆ ಎಂದು ನಾನು ನಂಬಲು ಪ್ರಾರಂಭಿಸಿದೆ. ನನ್ನನ್ನು ಪ್ರೀತಿಸುತ್ತಾರೆ ಎಂದು ಯಾರಾದರೂ ಹೇಳಿದಾಗ ನಾನು ನಿನ್ನನ್ನೂ ಪ್ರೀತಿಸುತ್ತೇನೆ ಎಂದು ಎಂದಿಗೂ ಹೇಳಲಿಲ್ಲ’ ಎಂದಿದ್ದಾರೆ ವಿಜಯ್ ದೇವರಕೊಂಡ.
‘ನಾನು ಲಾಂಗ್ ರಿಲೇಶನ್ಶಿಪ್ನಲ್ಲಿದ್ದೆ. ನಾನು ಪ್ರೀತಿಯ ಬಗ್ಗೆ ಸಾಕಷ್ಟು ಕಲಿತೆ. ಇದು ಬಿಸ್ನೆಸ್ ಅಲ್ಲ ಮತ್ತು ಜನರು ನನ್ನನ್ನು ನಿಸ್ವಾರ್ಥಿಯಾಗಿ ಪ್ರೀತಿಸಬಹುದು ಎಂಬುದನ್ನು ನಾನು ಅರಿತೆ. ನನ್ನ ತಂದೆ ಹೇಳಿದ್ದು ತಪ್ಪು ಎಂಬುದು ಅರಿವಾಗಲು ನನಗೆ ಬಹಳ ಸಮಯ ಹಿಡಿಯಿತು. ತಂದೆ ಹೇಳಿದ್ದನ್ನು ಮರೆಯಲು ಸಾಕಷ್ಟು ಸಮಯ ಬೇಕಾಯಿತು. ಆದರೆ, ನಾನು ಇದನ್ನು ಮತ್ತೊಮ್ಮೆ ಹೇಳುತ್ತೇನೆ, ನನ್ನ ತಂದೆ ಕಲಿಸಿದ ಪಾಠ ನನ್ನನ್ನು ಇಲ್ಲಿಯವರೆಗೆ ತಲುಪಿಸಿತು. ನಾನು ಬಯಸಿದ ಎಲ್ಲವನ್ನೂ ನಾನು ಸಾಧಿಸಿದೆ’ ಎಂದಿದ್ದಾರೆ ಅವರು. ಇದನ್ನೂ ಓದಿ: ಬಿಡುಗಡೆ ಆಯ್ತ ಭಾರತದ ಟಾಪ್ ಹೀರೋಗಳ ಪಟ್ಟಿ; ದಳಪತಿ ವಿಜಯ್ ಫಸ್ಟ್, ಯಶ್ಗೆ ಎಷ್ಟನೇ ಸ್ಥಾನ?
ವಿಜಯ್ ದೇವರಕೊಂಡ ಅವರು ತಮ್ಮ ಸಾಧನೆಯ ಹಾದಿಯಲ್ಲಿ ಅನೇಕರನ್ನು ಕಳೆದುಕೊಂಡಿದ್ದಾರೆ. ‘ನಾನು ಗೆಳೆಯರನ್ನು ಕಳೆದುಕೊಂಡೆ. ನಾನು ರಿಲೇಶನ್ಶಿಪ್ಗಳನ್ನು ಕಳೆದುಕೊಂಡೆ. ಇನ್ನೂ ಹಲವು ವಿಚಾರಗಳನ್ನು ಕಳೆದುಕೊಂಡೆ. ಆದರೆ, ನಾನು ಫೋಕಸ್ ಆಗಿದ್ದೆ’ ಎಂದು ತಾವು ನಡೆದು ಬಂದ ಹಾದಿಯನ್ನು ಅವರು ನೆನಪಿಸಿಕೊಂಡಿದ್ದಾರೆ.