ಡಾ.ಶಿವರಾಮ ಕಾರಂತ ಬಡಾವಣೆ ಭೂಸ್ವಾಧೀನ; ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ, ಸ್ಥಳೀಯರ ಆಕ್ರೋಶ
ಬೆಳ್ಳಂಬೆಳಗ್ಗೆ ಭೂಸ್ವಾಧೀನಕ್ಕೆ ಜೆಸಿಬಿಗಳ ಘರ್ಜನೆ ಶುರುವಾಗಿದೆ. ಸ್ಥಳೀಯರ ವಿರೋಧದ ನಡುವೆಯೂ ಬೆಂಗಳೂರು ಉತ್ತರ ತಾಲೂಕಿನ ಕೆಂಪಾಪುರ, ಲಕ್ಷ್ಮೀಪುರ, ಸೋಮಶೆಟ್ಟಿಹಳ್ಳಿ, ಗಾಣಿಗರಹಳ್ಳಿಯಲ್ಲಿ ತೆರವು ಕಾರ್ಯ ನಡೆಯುತ್ತಿದೆ.
ನೆಲಮಂಗಲ: ಡಾ.ಶಿವರಾಮ ಕಾರಂತ ಬಡಾವಣೆ ಹೆಸರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬೆಳ್ಳಂಬೆಳಗ್ಗೆ ಭೂಸ್ವಾಧೀನಕ್ಕೆ ಜೆಸಿಬಿಗಳ ಘರ್ಜನೆ ಶುರುವಾಗಿದೆ. ಸ್ಥಳೀಯರ ವಿರೋಧದ ನಡುವೆಯೂ ಬೆಂಗಳೂರು ಉತ್ತರ ತಾಲೂಕಿನ ಕೆಂಪಾಪುರ, ಲಕ್ಷ್ಮೀಪುರ, ಸೋಮಶೆಟ್ಟಿಹಳ್ಳಿ, ಗಾಣಿಗರಹಳ್ಳಿಯಲ್ಲಿ ತೆರವು ಕಾರ್ಯ ನಡೆಯುತ್ತಿದೆ. ಸೋಮಲದೇವನಹಳ್ಳಿ ಠಾಣೆ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಈ ಹಿಂದೆಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು. ಬೆಂಗಳೂರು ಉತ್ತರ ತಾಲ್ಲೂಕಿನ 17 ಗ್ರಾಮಗಳಲ್ಲಿ ಈ ಬಡಾವಣೆ ನಿರ್ಮಾಣವಾಗಲಿದ್ದು ಇದಕ್ಕಾಗಿ ಸೋಮಶೆಟ್ಟಿಹಳ್ಳಿ, ಲಕ್ಷೀಪುರ, ಗಾಣಿಗರಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಾಸಿಸುವ ಕುಟುಂಬಗಳು ಜಾಗ ಕಳೆದುಕೊಳ್ಳಲಿವೆ. ಅವರ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ಇನ್ನೂ 500ಕ್ಕೂ ಹೆಚ್ಚು ಈ ಸಂಬಂಧ ಹೈ ಕೋರ್ಟ್ ನಲ್ಲಿ ದಾವೆಗಳಿವೆ ಸ್ಥಳೀಯ ಜನರನ್ನ ಒಕ್ಕಲೆಬ್ಬಿಸಿ ಶ್ರೀಮಂತರಿಗೆ ಸೈಟ್ ನೀಡಲು ಹೊರಟಿದ್ದಾರೆ. ಒಂದು ವೇಳೆ BDA ಸ್ವಾಧೀನಕ್ಕೆ ತಗೊಂಡ್ರೆ 12ಕಿಲೋ ಮೀಟರ್ ಗಳಷ್ಟು ವ್ಯಾಪ್ತಿ ಹೆಚ್ಚಾಗುತ್ತೆ. ಅದಕ್ಕೆಲ್ಲ ಮೂಲಭೂತ ಸೌಕರ್ಯಗಳನ್ನು ಪೂರೈಸಲು ನಿಮ್ಮಿಂದಾಗುತ್ತಾ? ಈ ಬಡಾವಣೆಗೆ ಬಿಡಿಎ 2008ರ ಡಿಸೆಂಬರ್‌ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 10 ವರ್ಷದ ಬಳಿಕ 3,546 ಎಕರೆ 12 ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ರೈತರಿಂದ ಬಂದ ಆಕ್ಷೇಪಣೆಗಳನ್ನು ಪರಿಗಣಿಸಿ ಸರ್ಕಾರ 257 ಎಕರೆ 20 ಗುಂಟೆ ಜಾಗಕ್ಕೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆರಂಭದಲ್ಲೇ ಬಿಡಿಎಗೆ ಸೂಚಿಸಿತ್ತು.
ಮತ್ತೆ ನಾಲ್ಕೈದು ಹಳ್ಳಿಗಳ ರೈತರು 446 ಎಕರೆ 7ಗುಂಟೆ ಜಾಗ ಕೈಬಿಡುವಂತೆ ಭೂಮಾಲೀಕರು 2012ರಲ್ಲಿ ಒತ್ತಾಯಿಸಿದ್ರು. ಇನ್ನೂ ಇದೇ ವಿಷಯವಾಗಿ ಭೂಮಾಲೀಕರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ನ ಏಕವ್ಯಕ್ತಿ ಪೀಠವು 2014 ನವೆಂಬರ್ 26ರಂದು ಅರ್ಜಿದಾರರ ಪರವಾಗಿ ತೀರ್ಪು ನೀಡಿತ್ತು. ಇದನ್ನು ಬಿಡಿಎ ವಿಭಾಗೀಯ ಪೀಠದಲ್ಲಿ ಪ್ರಶ್ನೆ ಮಾಡಿತ್ತು. ವಿಭಾಗೀಯ ಪೀಠವೂ ಕೂಡ ರೈತರ ಪರವಾಗಿ ತೀರ್ಪು ನೀಡಿತ್ತು. ತೀರ್ಪಿನ ವಿಷಯವಾಗಿ ಬಿಡಿಎ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆಗಿನ ಅರುಣ್ ಮಿಶ್ರಾ ಹಾಗೂ ಅಬ್ದುಲ್ ನಜೀರ್ ಅವರಿದ್ದ ಸುಪ್ರೀಂ ಕೋರ್ಟ್‌ನ ಪೀಠವು ಈ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹಾಗೂ ಬಿಡಿಎಗೆ 2018ರ ಆಗಸ್ಟ್ 3ರಂದು ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ಹೊಸದಾಗಿ ಬಿಡಿಎ ಅಧ್ಯಕ್ಷರಾಗಿ ಎಸ್.ಆರ್.ವಿಶ್ವನಾಥ್ ಅಂದು ರೈತರ ಪರವಾಗಿ ನಿಂತಿದ್ರು. ಈಗ ಬಿಡಿಎ ಅಧ್ಯಕ್ಷರಾದ ಕೂಡಲೇ ರೈತರು ಹಾಗೂ ಬಡವರಿಗೆ ಅನ್ಯಾಯ ಮಾಡಲು ಮುಂದಾಗಿದ್ದಾರೆ.
ಈ ಬಡಾವಣೆಯ ಪರಿಸ್ಥಿತಿಯ ಬಗ್ಗೆ ಬಿಡಿಎ 2015ರಲ್ಲಿ ಸಮೀಕ್ಷೆ ನಡೆಸಿ ತೆಪ್ಪಗಾಗಿತ್ತು. ಈಗ ವಿಶ್ವನಾಥ್ ಬಿಡಿಎ ಅಧ್ಯಕ್ಷರಾದ ಕೂಡಲೇ ಕಾರ್ಯ ಪ್ರವೃತ್ತರಾಗಿದ್ದಾರೆ. ಸದ್ಯ ಈಗ ಸುಮಾರು 2500 ಎಕರೆಗೂ ಹೆಚ್ಚು ಜಾಗಗಲ್ಲಿ ಕೃಷಿ ಚಟುವಟಿಕೆ ಜೋತೆಗೆ ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿವೆ.
ಸ್ಥಳಕ್ಕೆ ಬಂದ ದಾಸರಹಳ್ಳಿ ಶಾಸಕ, ಅಧಿಕಾರಿಗಳ ವಿರುದ್ಧ ಗರಂ ಸದ್ಯ ಸ್ಥಳಕ್ಕೆ ದಾಸರಹಳ್ಳಿ ಶಾಸಕ ಆರ್ ಮಂಜುನಾಥ್ ಭೇಟಿ ನೀಡಿದ್ದು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಹೀಗಾಗಿ ತೆರವು ಕಾರ್ಯ ಸ್ಥಗಿತಗೊಂಡಿದೆ. ಈ ವೇಳೆ ಸ್ಥಳೀಯರು ಶಾಸಕರ ಬಳಿ ಅಳಲು ತೋಡಿಕೊಂಡಿದ್ದಾರೆ. ಪರಿಹಾರ ಕೊಟ್ಟು ಸೂಕ್ತ ತಿಳುವಳಿಕೆ ನೀಡಿ ನೋಟಿಸ್ ಕೊಟ್ಟು ಕಾನೂನು ಚೌಕಟ್ಟಿನಲ್ಲಿ ಒಡೆಯಿರಿ ಎಂದು ಶಾಸಕ ಮಂಜುನಾಥ್ ತಾತ್ಕಾಲಿಕ ತಡೆ ಹಿಡಿದ್ರು. ಆದ್ರೆ ವಾಕ್ಸಮರ ಹಿನ್ನೆಲೆ ಶಾಸಕರನ್ನ ಬಲವಂತವಾಗಿ ವಶಕ್ಕೆ ಪಡೆದು ಬಸ್ನಲ್ಲಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಕ್ಷೇತ್ರದ ಸಾರ್ವಜನಿಕರ ಪರವಾಗಿ ನ್ಯಾಯ ಕೇಳಲು ಸ್ಥಳಕ್ಕೆ ಬಂದಿದ್ದ ಶಾಸಕನ್ನ ಪೊಲೀಸರು ವಶಕ್ಕೆ ಪಡೆದಿದ್ದು ಪುನಃ ತೆರವು ಕಾರ್ಯ ಆರಂಭಿಸಲಾಗಿದೆ. ಸ್ಥಳದಲ್ಲಿ 300ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ಕಟ್ಟಡ ತೆರವು ತಡೆದ ಶಾಸಕರನ್ನು ವಶಕ್ಕೆ ಪಡೆದಿದ್ದಕ್ಕೆ ಜಾಲಹಳ್ಳಿ ಪೊಲೀಸ್ ಠಾಣೆ ಬಳಿ ಶಾಸಕರ ಬೆಂಬಲಿಗರು ಧರಣಿ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಪ್ಪಬಾರದೆಂದು ನಿತ್ಯ 8 ಕಿಮೀ ನಡೆಯುವ ಶಿಕ್ಷಕರು
ಡಾ.ಶಿವರಾಮ ಕಾರಂತ ಬಡಾವಣೆಗೆ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರಿಂದ ಪ್ರತಿಭಟನೆ
Published On - 8:22 am, Mon, 25 October 21