ಇನ್ಫಿ ನಾರಾಯಣ ಮೂರ್ತಿಗಳೇ! ಕನಿಷ್ಠ 1 ಗಂಟೆಯಾದರೂ ಹೆಚ್ಚು ಕೆಲಸ ಮಾಡಲು ನಿಮ್ಮ ತಂಡಕ್ಕೆ ಹೇಳಿ – ಬೆಂಗಳೂರು ಸಿಎ ಟಾಂಗ್
ಯುವಜನತೆ ವಾರಕ್ಕೆ 70 ಗಂಟೆ ಕೆಲಸ ಮಾಡಲು ಸಿದ್ಧರಾಗಬೇಕು ಎಂಬ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಸಲಹೆಗೆ ಬೆಂಗಳೂರಿನ ಸಿಎಯೊಬ್ಬರು ಟಾಂಗ್ ಕೊಟ್ಟಿದ್ದಾರೆ. ಇನ್ಫೋಸಿಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಗಳಾಗುತ್ತಿವೆ. ಮೊದಲು ನಿಮ್ಮ ಸಿಬ್ಬಂದಿಗೆ ವಾರಕ್ಕೆ ಒಂದು ಗಂಟೆಯಾದರೂ ಹೆಚ್ಚು ಕೆಲಸ ಮಾಡಲು ಹೇಳಿ ಎಂದಿದ್ದಾರೆ.
ಬೆಂಗಳೂರು, ಜುಲೈ.15: ಭಾರತದ ಯುವಜನತೆ ವಾರಕ್ಕೆ 70 ಗಂಟೆ ಕೆಲಸ ಮಾಡಲು ಸಿದ್ಧರಾಗಬೇಕು ಎಂದು ಇನ್ಫೋಸಿಸ್ (Infosys) ಸಹ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ (NR Narayana Murthy) ಅವರು ನೀಡಿದ್ದ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಇದೀಗ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಬಸು ಎನ್ನುವವರು ನಾರಾಯಣ ಮೂರ್ತಿ ಅವರ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ. ನಾವು ವಾರಕ್ಕೆ 70 ಗಂಟೆಗೂ ಅಧಿಕ ಕಾಲ ಕೆಲಸ ಮಾಡುತ್ತಿದ್ದೇವೆ. ಮೊದಲು ನಿಮ್ಮ ಸಿಬ್ಬಂದಿಗೆ ವಾರಕ್ಕೆ ಒಂದು ಗಂಟೆಯಾದರೂ ಹೆಚ್ಚು ಕೆಲಸ ಮಾಡಲು ಹೇಳಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸುವ ಗಡುವು ಸಮೀಪಿಸುತ್ತಿದ್ದಂತೆ, ಬೆಂಗಳೂರು ಮೂಲದ ಚಾರ್ಟರ್ಡ್ ಅಕೌಂಟೆಂಟ್‌ಗಳು (CAs) ಇನ್ಫೋಸಿಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಹಲವಾರು ತಾಂತ್ರಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಂದಾಗಿ ತೆರಿಗೆದಾರರಿಗೆ ವಿಳಂಬವಾಗುತ್ತಿದ್ದು ಹತಾಶೆಯಾಗುತ್ತಿದೆ. ಇದರಿಂದ ಬೇಸರಗೊಂಡ ಬೆಂಗಳೂರು ಮೂಲದ ಚಾರ್ಟರ್ಡ್ ಅಕೌಂಟೆಂಟ್ ಬಸು ಎನ್ನುವವರು ತಮ್ಮ ಎಕ್ಸ್ (ಟ್ವಿಟರ್) ಖಾತೆ ಮೂಲಕ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
Narayana Murthy Saar, on your advice we, tax professionals started to work more than 70 Hours per week.
Ask your Infosys team to work at least one hour per week to smoothly run the Income tax portal.
Thanks in Advance #incometaxefiling #incometaxreturn #ITR
— Basu-CA & RV (@Basappamv) July 13, 2024
Basu (@Basappamv) ಖಾತೆ ಮೂಲಕ ಟ್ವೀಟ್ ಮಾಡಿರುವ ಬಸು ಅವರು, ಯುವ ವೃತ್ತಿಪರರಿಗೆ ದೇಶವನ್ನು ಕಟ್ಟಲು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವಂತೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಸಲಹೆಯನ್ನು ಹಾಸ್ಯಮಯವಾಗಿ ಉಲ್ಲೇಖಿಸಿದ್ದಾರೆ. “ನಾರಾಯಣ ಮೂರ್ತಿ ಸಾರ್, ನಿಮ್ಮ ಸಲಹೆಯ ಮೇರೆಗೆ, ನಾವು ತೆರಿಗೆ ವೃತ್ತಿಪರರು ವಾರಕ್ಕೆ 70 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಲು ಪ್ರಾರಂಭಿಸಿದ್ದೇವೆ. ಆದಾಯ ತೆರಿಗೆ ಪೋರ್ಟಲ್ ಅನ್ನು ಸುಗಮವಾಗಿ ನಡೆಸಲು ನಿಮ್ಮ ಇನ್ಫೋಸಿಸ್ ತಂಡಕ್ಕೆ ವಾರಕ್ಕೆ ಕನಿಷ್ಠ ಒಂದು ಗಂಟೆ ಹೆಚ್ಚು ಕೆಲಸ ಮಾಡಲು ಹೇಳಿ ಎಂದಿದ್ದಾರೆ.”
ಇನ್ನು ಮತ್ತೊಂದೆಡೆ ಇತರೆ CAಗಳು ಬಸು ಅವರ ಬರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವಾರ್ಷಿಕ ತೆರಿಗೆ ಮಾಹಿತಿ (Annual Information Statement) ಮತ್ತು ತೆರಿಗೆ ಮಾಹಿತಿ (Tax Information Statement) ಡೌನ್‌ಲೋಡ್ ಮಾಡುವಲ್ಲಿನ ಸಮಸ್ಯೆಗಳನ್ನು ಉಲ್ಲೇಖಿಸಿ, ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಸಮಸ್ಯೆ ಆಗುತ್ತಿದೆ ಎಂದಿದ್ದಾರೆ. ಇನ್ನು TaxAaram ಇಂಡಿಯಾದ ಸಂಸ್ಥಾಪಕ ನಿರ್ದೇಶಕ ಮತ್ತು ಪಾಲುದಾರರಾಗಿರುವ ಮಾಯಾಂಕ್ ಮೋಹನ್ಕಾ, “ಈ ವರ್ಷ ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ವಿಳಂಬವಾಗಿದೆ” ಎಂದಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:06 am, Mon, 15 July 24