AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ವೈರಲ್ ಸೋಂಕು ಕೇಸ್​​ಗಳ ಸಂಖ್ಯೆ ಏರಿಕೆ: ಆರೋಗ್ಯ ಸಮಸ್ಯೆ ಹೆಚ್ಚಳಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ವೈದ್ಯರು

Bengaluru News: ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯ ಹಾಗೂ ಶಾಲೆಗಳು ಆರಂಭವಾದ ಬೆನ್ನಲ್ಲೇ ಇನ್‌ಫ್ಲುಯೆನ್ಜಾ ಮತ್ತು ಕೋವಿಡ್ ರೂಪಾಂತರಿ ಸೋಂಕುಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಮುಂಜಾಗ್ರತೆ ವಹಿಸುವಂತೆ ವೈದ್ಯರು ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ಎಚ್ಚರಿಕೆ ನೀಡಿದ್ದಾರೆ. ಕಳೆದ ಕೆಲವು ವಾರಗಳಿಂದ ಇನ್‌ಫ್ಲುಯೆನ್ಜಾ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಿದ್ದರೂ, ಸಾಮಾನ್ಯ ಚಿಕಿತ್ಸೆಯಿಂದಲೇ ರೋಗಿಗಳು ಗುಣಮುಖರಾಗುತ್ತಿದ್ದಾರೆ ಎಂಬುದು ಕೂಡ ತಿಳಿದುಬಂದಿದೆ.

ಬೆಂಗಳೂರಿನಲ್ಲಿ ವೈರಲ್ ಸೋಂಕು ಕೇಸ್​​ಗಳ ಸಂಖ್ಯೆ ಏರಿಕೆ: ಆರೋಗ್ಯ ಸಮಸ್ಯೆ ಹೆಚ್ಚಳಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ವೈದ್ಯರು
ಸಾಂದರ್ಭಿಕ ಚಿತ್ರImage Credit source: Getty Images
ಪ್ರಸನ್ನ ಹೆಗಡೆ
|

Updated on:Jul 02, 2026 | 8:43 AM

Share

ಮುಖ್ಯಾಂಶಗಳು

  • ಬೆಂಗಳೂರಲ್ಲಿ ಉಸಿರಾಟ ಸಂಬಂಧಿತ ವೈರಲ್ ಸೋಂಕು ಹೆಚ್ಚಳ
  • ಜ್ವರ, ಗಂಟಲು ನೋವು ಮತ್ತು ಕೆಮ್ಮು ಸಾಮಾನ್ಯ ರೋಗಲಕ್ಷಣಗಳು
  • ಸಾಮಾನ್ಯ ಚಿಕಿತ್ಸೆಯಿಂದಲೇ ಗುಣಮುಖರಾಗುತ್ತಿರುವ ರೋಗಿಗಳು

ಬೆಂಗಳೂರು, ಜುಲೈ 02: ಉಸಿರಾಟ ಸಂಬಂಧಿತ ವೈರಲ್ ಸೋಂಕುಗಳಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ರೋಗಿಗಳ ಸಮಖ್ಯೆ ಬೆಂಗಳೂರು ನಗರದಲ್ಲಿ ಹೆಚ್ಚಿದೆ. ವೈದ್ಯರ ಪ್ರಕಾರ, ಕೋವಿಡ್-19 ಪ್ರಕರಣಗಳಲ್ಲಿ ಸ್ವಲ್ಪ ಏರಿಕೆಯಾಗಿದ್ದರೂ, ಸೀಸನಲ್ ಇನ್‌ಫ್ಲುಯೆನ್ಜಾ ಸೋಂಕಿನ ಕೇಸ್​​ಗಳು ಹೆಚ್ಚು ವರದಿಯಾಗುತ್ತಿವೆ. ಮಳೆ, ಹವಾಮಾನದ ಏರಿಳಿತ ಹಾಗೂ ಶಾಲೆಗಳು ಪುನರಾರಂಭವಾಗಿರುವುದು ಸೋಂಕು ಹರಡುವಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ತಿಳಿಸಿದ್ದಾರೆ.

ಸ್ವೈನ್ ಫ್ಲೂ ಮತ್ತು H3N2 ತಳಿಗಳ ಸೋಂಕು ಹೆಚ್ಚಳ

ವೈದ್ಯರ ಮಾಹಿತಿ ಪ್ರಕಾರ, ಇನ್‌ಫ್ಲುಯೆನ್ಜಾ ಎ ವೈರಸ್, ಅದರಲ್ಲೂ ಸ್ವೈನ್ ಫ್ಲೂ ಮತ್ತು H3N2 ತಳಿಗಳ ಸೋಂಕುಗಳು ಸದ್ಯ ಕೋವಿಡ್-19ಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿವೆ. ಮತ್ತೊಂದೆಡೆ, JN.1 ಕೋವಿಡ್ ರೂಪಾಂತರಿ ಇನ್ನೂ ಹರಡುತ್ತಿದ್ದರೂ, ಅದು ಒಮಿಕ್ರಾನ್ ಮಾದರಿಯಂತೆಯೇ ಸೌಮ್ಯ ಲಕ್ಷಣಗಳನ್ನು ಹೊಂದಿದೆ. ಕಳೆದ ಕೆಲವು ವಾರಗಳಿಂದ ಇನ್‌ಫ್ಲುಯೆನ್ಜಾ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಿವೆ. ಪ್ರತಿದಿನ ಸುಮಾರು 10 ರಿಂದ 15 ಇನ್‌ಫ್ಲುಯೆನ್ಜಾ ಪ್ರಕರಣಗಳು ವರದಿಯಾಗುತ್ತಿವೆ ಎಂದು ಕಿಮ್ಸ್ ಆಸ್ಪತ್ರೆಯ ಆಂತರಿಕ ವೈದ್ಯಕೀಯ ತಜ್ಞೆ ಡಾ.ಅಂಕಿತಾ ತೇಜಾ ನಾರಾಯಣ್ ತಿಳಿಸಿದ್ದಾರೆ.

ಇದನ್ನೂ ಓದಿ: ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕೂರೋ ಬೆಂಗಳೂರಿನ ಪುರುಷರ ಲೈಫ್ ಡೇಂಜರ್; ಮಹಿಳೆಯರಿಗಿಂತ ಗಂಡಸರಿಗೆ ಬಿಪಿ, ಶುಗರ್ ಬರೋ ಚಾನ್ಸ್ ಜಾಸ್ತಿ

ಹೆಚ್ಚಿನ ರೋಗಿಗಳು ಜ್ವರ, ಮೂಗಿನಿಂದ ನೀರು ಸುರಿಯುವುದು, ಗಂಟಲು ನೋವು ಮತ್ತು ಕೆಮ್ಮು ಮುಂತಾದ ಲಕ್ಷಣಗಳೊಂದಿಗೆ ಬರುತ್ತಿದ್ದು, ಸಾಮಾನ್ಯ ಚಿಕಿತ್ಸೆಯಿಂದಲೇ ಗುಣಮುಖರಾಗುತ್ತಿದ್ದಾರೆ. ಆದರೆ, ಹಿರಿಯ ನಾಗರಿಕರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕೆಲವರು ತೀವ್ರ ಉಸಿರಾಟದ ಸಮಸ್ಯೆಯಿಂದ ಐಸಿಯು ಚಿಕಿತ್ಸೆಗೆ ದಾಖಲಾಗಬೇಕಾದ ಪರಿಸ್ಥಿತಿ ಎದುರಾಗಿದೆ. ತೀವ್ರ ಲಕ್ಷಣಗಳಿರುವವರಿಗೆ ಮಾತ್ರ ಕೋವಿಡ್ ಮತ್ತು ಇನ್‌ಫ್ಲುಯೆನ್ಜಾ ಪರೀಕ್ಷೆ ನಡೆಸಲಾಗುತ್ತಿರುವುದರಿಂದ, ಸೌಮ್ಯ ಕೋವಿಡ್ ಸೋಂಕಿನ ಕೆಲವು ಪ್ರಕರಣಗಳು ಪತ್ತೆಯಾಗದೇ ಉಳಿಯುವ ಸಾಧ್ಯತೆಯೂ ಇದೆ ಎಂದು ಅವರು ತಿಳಿಸಿದ್ದಾರೆ.

ವೈರಲ್ ಸೋಂಕು ಹರಡುವಿಕೆಗೆ ಇದೂ ಪ್ರಮುಖ ಕಾರಣ

ಸಾಕ್ರಾ ವರ್ಲ್ಡ್ ಆಸ್ಪತ್ರೆಯ ಹಿರಿಯ ಆಂತರಿಕ ವೈದ್ಯಕೀಯ ತಜ್ಞ ಡಾ.ಎಂ.ರವಿ ಕುಮಾರ್ ಅವರ ಪ್ರಕಾರ, ಕೋವಿಡ್ ಈಗ ಸ್ಥಳೀಯವಾಗಿ ನಿರಂತರವಾಗಿ ಕಾಣಿಸಿಕೊಳ್ಳುವ (ಎಂಡೆಮಿಕ್) ಸೋಂಕಾಗಿ ಪರಿಣಮಿಸಿದೆ. JN.1 ರೂಪಾಂತರಿ ಸುಲಭವಾಗಿ ಹರಡಬಹುದಾದರೂ, ಬಹುತೇಕ ಪ್ರಕರಣಗಳಲ್ಲಿ ರೋಗದ ತೀವ್ರತೆ ಕಡಿಮೆಯೇ ಇರುತ್ತದೆ ಎಂದು ಅವರು ಹೇಳಿದ್ದಾರೆ. ವೈದ್ಯರ ಪ್ರಕಾರ, ಶಾಲೆಗಳು ಪುನರಾರಂಭವಾಗಿರುವುದೂ ವೈರಲ್ ಸೋಂಕು ಹರಡುವಿಕೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಮಕ್ಕಳು ಶಾಲೆಗಳಲ್ಲಿ ಪರಸ್ಪರ ಸೋಂಕು ತಗುಲಿ, ನಂತರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಎಚ್ಚರಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:40 am, Thu, 2 July 26

Follow Us