SIR: ಮತದಾರರ ಪಟ್ಟಿ ಪರಿಷ್ಕರಣೆ; 4.8 ಕೋಟಿ ಉಚಿತ ಜಾತಿ ಪ್ರಮಾಣಪತ್ರ ವಿತರಣೆಗೆ ರಾಜ್ಯ ಸರ್ಕಾರ ಮುಂದು!
ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಸುಲಭಗೊಳಿಸಲು ರಾಜ್ಯ ಸರ್ಕಾರವು ಸಾರ್ವಜನಿಕರಿಗೆ 4.8 ಕೋಟಿಗೂ ಹೆಚ್ಚು ಉಚಿತ ಜಾತಿ ಪ್ರಮಾಣಪತ್ರಗಳನ್ನು ವಿತರಿಸಲು ಮುಂದಾಗಿದೆ. ಈ ಸಂಬಂಧ ಕಂದಾಯ ಇಲಾಖೆಯು ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದು, ಮೊಬೈಲ್ ಆ್ಯಪ್, ಎಸ್‌ಎಂಎಸ್ ಹಾಗೂ ವಾಟ್ಸಾಪ್ ಲಿಂಕ್ ಮೂಲಕ ಮನೆ ಮನೆಗೆ ಪಾರದರ್ಶಕವಾಗಿ ಪ್ರಮಾಣಪತ್ರ ತಲುಪಿಸಲು ಸಿದ್ಧತೆ ನಡೆಸಿದೆ.

ಮುಖ್ಯಾಂಶಗಳು
- ಎಸ್‌ಐಆರ್ ಪರಿಷ್ಕರಣೆಗೆ 4.8 ಕೋಟಿ ಉಚಿತ ಜಾತಿ ಪ್ರಮಾಣಪತ್ರ ವಿತರಣೆಗೆ ರಾಜ್ಯ ನಿರ್ಧಾರ.
- ಕಂದಾಯ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಉಚಿತ ಪ್ರಮಾಣಪತ್ರ ಮುದ್ರಣ ಮತ್ತು ವಿತರಣೆಗೆ ಸುತ್ತೋಲೆ.
- ಫಲಾನುಭವಿಗಳ ಮೊಬೈಲ್‌ಗೆ ಎಸ್‌ಎಂಎಸ್ ಹಾಗೂ ವಾಟ್ಸಾಪ್ ಮೂಲಕ ಲಿಂಕ್ ರವಾನಿಸಲು ಕ್ರಮ.
ಬೆಂಗಳೂರು, ಆಗಸ್ಟ್ 02: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಾಂದ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಸುಲಭಗೊಳಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಉಚಿತವಾಗಿ ಜಾತಿ ಪ್ರಮಾಣಪತ್ರ ವಿತರಣೆ ಅಭಿಯಾನ ಆರಂಭಿಸಿದ ಬೆನ್ನಲ್ಲೇ, ರಾಜ್ಯಾದ್ಯಂತ ಸುಮಾರು 4.8 ಕೋಟಿಗೂ ಹೆಚ್ಚು ಉಚಿತ ಜಾತಿ ಪ್ರಮಾಣಪತ್ರಗಳನ್ನು ವಿತರಿಸಲು ಕಂದಾಯ ಇಲಾಖೆ ಸಿದ್ಧತೆ ನಡೆಸಿದೆ.
ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ
ಈ ಬೃಹತ್ ಅಭಿಯಾನವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕಂದಾಯ ಇಲಾಖೆಯ ಆಯುಕ್ತರಾದ ಮೀನಾ ನಾಗರಾಜ್ ಸಿ.ಎನ್. ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಅಟಲ್ ಜಿ ಜನಸ್ನೇಹಿ ನಿರ್ದೇಶನಾಲಯದ ಬಳಿ ಲಭ್ಯವಿರುವ 4.8 ಕೋಟಿಗೂ ಹೆಚ್ಚು ಜಾತಿ ಪ್ರಮಾಣಪತ್ರಗಳ ಪಿಡಿಎಫ್ (PDF) ಪ್ರತಿಗಳನ್ನು ಜಿಲ್ಲೆ, ತಾಲೂಕು ಮತ್ತು ಗ್ರಾಮವಾರು ವಿಂಗಡಿಸಿ ಒದಗಿಸಲಾಗುತ್ತದೆ.
ಜಿಲ್ಲಾಧಿಕಾರಿಗಳು ತಾಲೂಕು ಅಥವಾ ಹೋಬಳಿ ಮಟ್ಟದ ಅಧಿಕೃತ ಸಂಸ್ಥೆಗಳ ಮೂಲಕ ಇವುಗಳನ್ನು ಮುದ್ರಿಸಿ ವಿತರಿಸಲಿದ್ದಾರೆ. ಪ್ರತಿ ಸೆಟ್ ಮುದ್ರಣ ವೆಚ್ಚವನ್ನು ಗರಿಷ್ಠ 2.25 ರೂ.ಗೆ ನಿಗದಿಪಡಿಸಲಾಗಿದೆ. ಫಲಾನುಭವಿಗಳ ಮೊಬೈಲ್ ಸಂಖ್ಯೆಗಳಿಗೆ ಎಸ್‌ಎಂಎಸ್ (SMS) ಹಾಗೂ ವಾಟ್ಸಾಪ್ (WhatsApp) ಮೂಲಕವೂ ಪ್ರಮಾಣಪತ್ರ ಡೌನ್‌ಲೋಡ್ ಮಾಡುವ ಲಿಂಕ್ ಕಳುಹಿಸಲಾಗುವುದು.
ಪಾರದರ್ಶಕತೆಗೆ ಮೊಬೈಲ್ ಆ್ಯಪ್
ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಗೆ (SIR) ಅನುಮೋದಿಸಿರುವ 11 ಪ್ರಮುಖ ದಾಖಲೆಗಳಲ್ಲಿ ಜಾತಿ ಪ್ರಮಾಣಪತ್ರ ಹಾಗೂ ಖಾಯಂ ನಿವಾಸಿ ಪ್ರಮಾಣಪತ್ರವೂ ಸೇರಿದೆ. ದಾಖಲೆಗಳ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರ ವಿಶೇಷ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಅಧಿಕಾರಿಗಳು ಮನೆ ಮನೆಗೆ ತೆರಳಿ ಪ್ರಮಾಣಪತ್ರ ತಲುಪಿಸಿದಾಗ ಫಲಾನುಭವಿಗಳ ಆಧಾರ್ ಅಥವಾ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಆಧಾರದ ಮೇಲೆ ತಲುಪಿಸಿರುವುದನ್ನು ಆ್ಯಪ್‌ನಲ್ಲಿ ದಾಖಲಿಸಬೇಕಾಗುತ್ತದೆ.
ಜಾತಿ ಪ್ರಮಾಣಪತ್ರದ ಜೊತೆಗೆ ಮುಖ್ಯಮಂತ್ರಿಗಳ ಜಾಗೃತಿ ಸಂದೇಶವನ್ನು ಬಣ್ಣದ ಮುದ್ರಣದಲ್ಲಿ ಹಾಗೂ ಹಿಂಭಾಗದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಅಗತ್ಯವಿರುವ ದಾಖಲೆಗಳ ಪಟ್ಟಿಯನ್ನು ಮುದ್ರಿಸಿ ಸಾರ್ವಜನಿಕರಿಗೆ ತಲುಪಿಸಲಾಗುವುದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




