ಹೆಬ್ಬಾಳ ಸುರಂಗ ರಸ್ತೆಗಾಗಿ ಸಾವಿರಾರು ಮರಗಳ ಮಾರಣಹೋಮ?: ಪರಿಸರ ಪ್ರಿಯರಿಂದ ತೀವ್ರ ಆಕ್ರೋಶ
ಬೆಂಗಳೂರಿನ ಹೆಬ್ಬಾಳದಲ್ಲಿ 2.3 ಕಿ.ಮೀ ಉದ್ದದ ಸುರಂಗ ರಸ್ತೆ ಯೋಜನೆಗಾಗಿ 1,128 ಮರಗಳನ್ನು ಕಡಿಯಲು ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಸ್ತಾವನೆಗೆ ಪರಿಸರ ಪ್ರೇಮಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆನ್‌ಲೈನ್ ಅಭಿಯಾನ ಆರಂಭವಾಗಿದೆ. 2 ಕಿ.ಮೀ ವ್ಯಾಪ್ತಿಯಲ್ಲಿ ನಡೆಸಲಾದ ಸಸ್ಯವರ್ಗ ಸಮೀಕ್ಷೆಯಲ್ಲಿ 1,400ಕ್ಕೂ ಹೆಚ್ಚು ಮರಗಳನ್ನು ಗುರುತಿಸಲಾಗಿದೆ. ಆದರೆ ಅಧಿಕೃತವಾಗಿ ಯೋಜನೆಯಿಂದ 1,128 ಮರಗಳು ಬಾಧಿತವಾಗಲಿವೆ ಎಂದು ತಿಳಿಸಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 25: ನಗರದಲ್ಲಿ ಸುರಂಗ ರಸ್ತೆ ಯೋಜನೆಗಳಿಗೆ ವಿರೋಧ ಹೆಚ್ಚುತ್ತಿರುವ ನಡುವೆಯೇ, ಹೆಬ್ಬಾಳದಲ್ಲಿ 2.3 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕಾಗಿ 1,128 ಮರಗಳನ್ನು ಕಡಿಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಪ್ರಸ್ತಾವನೆ ಮುಂದಿಟ್ಟಿದೆ. ಪರಿಸರ ಪ್ರಿಯರಿಂದ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಯೋಜನೆ ವಿರುದ್ಧ ಆರಂಭಿಸಿರುವ ಆನ್‌ಲೈನ್ ಅಭಿಯಾನಕ್ಕೆ ಈಗಾಗಲೇ 20,000ಕ್ಕೂ ಹೆಚ್ಚು ಸಹಿಗಳು ಲಭಿಸಿವೆ.
ಪರಿಸರ ಪ್ರಿಯರ ಆತಂಕ
2 ಕಿ.ಮೀ ವ್ಯಾಪ್ತಿಯಲ್ಲಿ ನಡೆಸಲಾದ ಸಸ್ಯವರ್ಗ ಸಮೀಕ್ಷೆಯಲ್ಲಿ 1,400ಕ್ಕೂ ಹೆಚ್ಚು ಮರಗಳನ್ನು ಗುರುತಿಸಲಾಗಿದೆ. ಆದರೆ ಅಧಿಕೃತವಾಗಿ ಯೋಜನೆಯಿಂದ 1,128 ಮರಗಳು ಬಾಧಿತವಾಗಲಿವೆ ಎಂದು ತಿಳಿಸಲಾಗಿದೆ. ಹೆಬ್ಬಾಳ ಟ್ರೀ ಪಾರ್ಕ್, ಹೆಬ್ಬಾಳ ಕೆರೆ, ಪಶುವೈದ್ಯಕೀಯ ಕಾಲೇಜು ಆವರಣ, ಯುಎಎಸ್ ಸಿಬ್ಬಂದಿ ವಸತಿ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಪಾರಂಪರಿಕ ಮರಗಳು, ಸ್ಥಳೀಯ ಪ್ರಭೇದಗಳು, ಹೂ ಬಿಡುವ ಹಾಗೂ ಹಣ್ಣು ನೀಡುವ ಮರಗಳು ಇದರಲ್ಲಿ ಸೇರಿವೆ.ಇಷ್ಟು ದೊಡ್ಡ ಪ್ರಮಾಣದಲ್ಲಿ ಹಸಿರು ಹೊದಿಕೆ ನಷ್ಟವಾಗುವುದರ ಜೊತೆಗೆ, ಹಲವು ವರ್ಷಗಳ ಕಾಲ ನಡೆಯುವ ಅಗೆಯುವಿಕೆ, ಶಬ್ದ, ಧೂಳು, ಮಾಲಿನ್ಯ ಹಾಗೂ ವಾಸಸ್ಥಳಗಳ ನಾಶವು ಜೀವವೈವಿಧ್ಯದ ಮೇಲೆ ತೀವ್ರ ಪರಿಣಾಮ ಬೀರಿ, ಸ್ಥಳೀಯ ಸೂಕ್ಷ್ಮ ಹವಾಮಾನವನ್ನು ಶಾಶ್ವತವಾಗಿ ಬದಲಾಯಿಸಲಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಟನಲ್ ರಸ್ತೆ ಯೋಜನೆಗೆ ಐಐಎಸ್ಸಿ ಆಕ್ಷೇಪ, ರಾಜ್ಯಪಾಲರಿಗೆ ವರದಿ ಸಲ್ಲಿಕೆ: ಮೆಟ್ರೋವೇ ಟ್ರಾಫಿಕ್‌ಗೆ ಪರಿಣಾಮಕಾರಿ ಎಂದ ತಜ್ಞರು
ಹೆಬ್ಬಾಳ ಜಂಕ್ಷನ್‌ನಿಂದ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ (KVAFSU) ಆವರಣದವರೆಗೆ 2.3 ಕಿ.ಮೀ ಉದ್ದದ ಅವಳಿ ಭೂಗತ ಸುರಂಗ ರಸ್ತೆ ನಿರ್ಮಿಸಲು ಸರ್ಕಾರ ಪ್ರಸ್ತಾಪಿಸಿರುವ ಯೋಜನೆ ಇದಾಗಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಈ ಕಾಮಗಾರಿಗೆ ಸುಮಾರು ₹1,130 ಕೋಟಿ ವೆಚ್ಚವಾಗಲಿದೆ. ಇದೇ ಮಾರ್ಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ (KIA) ಸಂಪರ್ಕ ಕಲ್ಪಿಸುತ್ತದೆ.
ಹೆಬ್ಬಾಳ ಸುರಂಗ ರಸ್ತೆ ಯೋಜನೆ ಕುರಿತ FAQs
ಹೆಬ್ಬಾಳ ಸುರಂಗ ರಸ್ತೆ ಯೋಜನೆ ಯಾಕೆ?
ಹೆಬ್ಬಾಳ ಮತ್ತು ಮೇಕ್ರಿ ಸರ್ಕಲ್ ನಡುವಿನ ತೀವ್ರ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಹೆಬ್ಬಾಳ ಸುರಂಗ ರಸ್ತೆ ಯೋಜನೆ ಘೋಷಿಸಲಾಗಿದೆ.
ಹೆಬ್ಬಾಳ ಸುರಂಗ ರಸ್ತೆ ಎಲ್ಲಿಂದ ಎಲ್ಲಿಗೆ ಸಂಪರ್ಕ ಕಲ್ಪಿಸಲಿದೆ?
ಹೆಬ್ಬಾಳ ಜಂಕ್ಷನ್‌ನಿಂದ ಕೃಷಿ ವಿಶ್ವವಿದ್ಯಾಲಯದ (UAS) ಸಿಬ್ಬಂದಿ ಕ್ವಾರ್ಟರ್ಸ್ವರೆಗೆ ಸುರಂಗ ರಸ್ತೆ ಸಂಪರ್ಕ ಕಲ್ಪಿಸಲಿದೆ.
ಸುರಂಗ ರಸ್ತೆ ಉದ್ದ ಮತ್ತು ಯೋಜನೆಯ ವೆಚ್ಚ ಎಷ್ಟು?
ಸುಮಾರು 2.2 ರಿಂದ 2.3 ಕಿ.ಮೀ ಉದ್ದದ ಸುರಂಗ ರಸ್ತೆ ಇದಾಗಿರಲಿದ್ದು, ಅಂದಾಜು ವೆಚ್ಚ 1,139 ಕೋಟಿ ರೂಪಾಯಿಗಳಾಗಿವೆ.
ಸುರಂಗ ರಸ್ತೆ ಯೋಜನೆಗೆ ಪರಿಸರ ಪ್ರಿಯರ ವಿರೋಧ ಯಾಕೆ?
ಈ ಯೋಜನೆಗಾಗಿ ಸುಮಾರು 1,128 ಮರಗಳನ್ನು ಕಡಿಯಲು ತೀರ್ಮಾನಿಸಲಾಗಿದೆ. ಹಾಗೆಯೇ ಐಐಎಸ್ಸಿ (IISc) ವರದಿಯು ನೀರಿನ ಹರಿವು ಮತ್ತು ಪರಿಸರದ ಬಗ್ಗೆ ಕೆಲವು ಆತಂಕಗಳನ್ನು ವ್ಯಕ್ತಪಡಿಸಿದೆ.
Published On - 7:15 am, Fri, 25 September 26




