AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಟು ತಿಂಗಳಿಂದ ಸಂಬಳವಿಲ್ಲ: ನೀರು ಪೂರೈಕೆ ಬಂದ್​ ಮಾಡಿ ಬೀದರ್ ಪಾಲಿಕೆ ಸಿಬ್ಬಂದಿ ಆಕ್ರೋಶ

ಬೀದರ್ ನಗರಕ್ಕೆ ಕುಡಿಯುವ ನೀರು ಪೂರೈಸುವ 54 ಸಿಬ್ಬಂದಿ ಕಳೆದ ಎಂಟು ತಿಂಗಳಿಂದ ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಮನವಿಗಳ ನಂತರವೂ ವೇತನ ಸಿಗದ ಕಾರಣ, ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಪರಿಣಾಮವಾಗಿ ನಗರಕ್ಕೆ ನೀರು ಪೂರೈಕೆ ಬಂದ್ ಆಗಿದ್ದು, ಬೀದರ್ ಜನರಿಗೆ ನೀರಿನ ಅಭಾವ ಎದುರಾಗಿದೆ.

ಎಂಟು ತಿಂಗಳಿಂದ ಸಂಬಳವಿಲ್ಲ: ನೀರು ಪೂರೈಕೆ ಬಂದ್​ ಮಾಡಿ ಬೀದರ್ ಪಾಲಿಕೆ ಸಿಬ್ಬಂದಿ ಆಕ್ರೋಶ
ನೀರು ಸರಬರಾಜು ಸಿಬ್ಬಂದಿಯಿಂದ ಪ್ರತಿಭಟನೆ
ಸುರೇಶ್ ನಾಯಕ್
| Edited By: |

Updated on:Nov 03, 2026 | 3:11 PM

Share

ಮುಖ್ಯಾಂಶಗಳು

  • ಸಂಬಳವಿಲ್ಲದೆ ಮಹಾನಗರ ಪಾಲಿಕೆಯ ಸಿಬ್ಬಂದಿ ಪರದಾಟ
  • 8 ತಿಂಗಳಿಂದ 54 ನೀರು ಸರಬರಾಜು ಸಿಬ್ಬಂದಿ ಕೈ ಸೇರಿದ ‌ಸಂಬಳ
  • ಕೆಲಸ, ಕಾರ್ಯ ಸ್ಥಗಿತಗೊಳಿಸಿ ಪ್ರತಿಭಟನೆ ಕುಳಿತ ನೀರು ಸರಬರಾಜು ಸಿಬ್ಬಂದಿ

ಬೀದರ್​, ನವೆಂಬರ್​​ 03: ಬೀದರ್​ ನಗರದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮಹಾನಗರ ಪಾಲಿಕೆಯ ಸಿಬ್ಬಂದಿ ಕಂಗಾಲಾಗಿದ್ದಾರೆ. ಕಳೆದ 8 ತಿಂಗಳಿಂದ ಸಂಬಳವಿಲ್ಲದೆ 54 ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕೊನೆಗೆ ನೀರು ಪೂರೈಕೆಯನ್ನೆ ಬಂದ್ ಮಾಡಿ ಪ್ರತಿಭಟನೆಗೆ ಇಳಿದಿದ್ದಾರೆ. ಸಂಬಳ ಕೊಡುವ ಭರವಸೆ ಸಿಗುವವರೆಗೂ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ದುಡಿದರೂ ವೇತನವಿಲ್ಲ: ಖರ್ಚು, ವೆಚ್ಚ ಹೊಂದಿಸಲಾಗದೆ ಪರದಾಟ

ಒಂದೆಡೆ ಬೀದರ್ ನಗರದ ಜನರಿಗೆ ಕುಡಿಯುವ ನೀರು ಪೂರೈಸುವ ಜವಾಬ್ದಾರಿ. ಮತ್ತೊಂದೆಡೆ ಎಂಟು ತಿಂಗಳಿಂದ ಕೈ ಸೇರದ ಸಂಬಳ. ದುಡಿದರೂ ವೇತನವಿಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ. ಇದು ಬೀದರ್ ಮಹಾನಗರ ಪಾಲಿಕೆಯ ನೀರು ಸರಬರಾಜು ವಿಭಾಗದ ಸಿಬ್ಬಂದಿಯ ದುಸ್ಥಿತಿ. ಇಂಜಿನಿಯರ್‌ಗಳು, ಪ್ರಯೋಗಾಲಯ ತಂತ್ರಜ್ಞರು, ಪಂಪ್ ಆಪರೇಟರ್‌ಗಳು, ವಾಲ್ವ್‌ಮ್ಯಾನ್‌ಗಳು, ನೀರಿನ ಬಿಲ್ ಕಲೆಕ್ಟರ್‌ಗಳು ಸೇರಿದಂತೆ ಒಟ್ಟು 54 ಸಿಬ್ಬಂದಿಗೆ ಕಳೆದ ಎಂಟು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ದಿನನಿತ್ಯದ ಖರ್ಚುಗಳಿಗೆ ಹಣ ಹೊಂದಿಸಲಾಗದೆ ಸಿಬ್ಬಂದಿ ಪರದಾಡುತ್ತಿದ್ದಾರೆ.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರ್‌ನಲ್ಲಿ ಕುಡಿಯುವ ನೀರಿಗಾಗಿ ಪರದಾಟ

ಸಂಬಳ ಬಿಡುಗಡೆ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ ಸಿಬ್ಬಂದಿಯ ಮನವಿಗೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸಿಬ್ಬಂದಿ, ಭಾಲ್ಕಿ ತಾಲೂಕಿನ ನೀಲಮ್ಮನಹಳ್ಳಿ ತಾಂಡಾ ಸಮೀಪದ ನೀರು ಶುದ್ಧೀಕರಣ ಘಟಕದ ಬಳಿ ಧರಣಿ ನಡೆಸಿದ್ದಾರೆ.

LIVE TV

ಬೀದರ್ ನಗರಕ್ಕೆ ನೀರು ಪೂರೈಕೆ ಬಂದ್​ ಮಾಡಿ ಆಕ್ರೋಶ 

ಕೇವಲ ಧರಣಿಗೆ ಸೀಮಿತವಾಗದ ಸಿಬ್ಬಂದಿ, ಕೆಲಸ ಕಾರ್ಯ ಸ್ಥಗಿತಗೊಳಿಸಿ ಬೀದರ್ ನಗರಕ್ಕೆ ನೀರು ಪೂರೈಕೆಯನ್ನೂ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಬಾಕಿ ಇರುವ ಎಂಟು ತಿಂಗಳ ಸಂಬಳವನ್ನು ತಕ್ಷಣ ಬಿಡುಗಡೆ ಮಾಡಬೇಕು. ವೇತನ ಪಾವತಿ ಕುರಿತು ಸ್ಪಷ್ಟ ಭರವಸೆ ಸಿಗುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ: ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!

ಒಟ್ಟಿನಲ್ಲಿ ಜನರಿಗೆ ಕುಡಿಯುವ ನೀರು ಒದಗಿಸುವ ಸಿಬ್ಬಂದಿಯೇ ಇಂದು ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಬ್ಬಂದಿಯ ಪ್ರತಿಭಟನೆಯಿಂದ ಕುಡಿಯುವ ನೀರು ಪೂರೈಕೆಗೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಇನ್ನಾದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಿಬ್ಬಂದಿಯ ಬಾಕಿ ವೇತನ ಬಿಡುಗಡೆ ಮಾಡುತ್ತಾರಾ ಅಥವಾ ಸಿಬ್ಬಂದಿಯ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಾ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:05 pm, Tue, 3 November 26

Follow Us
ಸುರೇಶ್ ನಾಯಕ್
ಸುರೇಶ್ ನಾಯಕ್

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More