ಹೆತ್ತವರು ಕಬ್ಬು ಕಟಾವಿಗೆ, ಮಕ್ಕಳು ಮನೆಗೆಲಸಕ್ಕೆ! ಒಟ್ಟಿನಲ್ಲಿ ಬಾಲ್ಯದಲ್ಲಿ ಮಕ್ಕಳಿಗೆ ಶಾಲೆ ಕಲಿಯುವ ಭಾಗ್ಯ ಇಲ್ಲವಾಗಿದೆ
ಹೆತ್ತವರ ಜೊತೆಗೆ ಬರುವ ಮಕ್ಕಳು ಕಲಿಯುವ ವಯಸ್ಸಿನಲ್ಲಿ ಹೆತ್ತವರ ಕೆಲಸಕ್ಕೆ ನೆರವಾಗುತ್ತಾರೆ. ಅವರೊಡನೆ ಅಲೆಮಾರಿ ಜೀವನ ನಡೆಸುವುದರಿಂದ ಮಕ್ಕಳ ಸುಂದರ ಬಾಲ್ಯದ ಜೀವನ ಮುಸುಕಾಗುತ್ತಿದೆ. ಬಡತನದ ಬೇಗೆಗೆ ಮಕ್ಕಳ ಹಕ್ಕುಗಳು ಮೊಟಕಾಗುತ್ತಿವೆ.
ಆ ಜಿಲ್ಲೆಗೆ ಪ್ರತಿ ವರ್ಷ ಸಾವಿರಾರು ಕಾರ್ಮಿಕರು ಕಬ್ಬು ಕಟಾವು (sugarcane cut) ಮಾಡುವ ಕೂಲಿ ಕೆಲಸಕ್ಕೆ ಬರುತ್ತಾರೆ. ಆದರೆ ಆ ಸಂದರ್ಭದಲ್ಲಿ ತಂದೆ ತಾಯಿಯ ಜೊತೆ (Parents) ಶಾಲೆಯನ್ನ ಅರ್ಧಕ್ಕೆ ಮೊಟಕುಗೊಳಿಸಿ ಮಕ್ಕಳು ಜೊತೆಗೆ ಬರುತ್ತಾರೆ. ಅಂತಹ ಮಕ್ಕಳನ್ನ ಗುರುತಿಸಿ ಅವರಿದ್ದಲ್ಲಿಯೇ ತಾತ್ಕಾಲಿಕ ಟೆಂಟ್ ಸ್ಕೂಲ್ ತೆರೆಯೋ ಸರಕಾರದ ಯೋಜನೆ ವಿಫಲವಾಗಿದೆ. ಹೀಗಾಗಿ ಬಾಲ್ಯದಲ್ಲಿಯೇ ಮಕ್ಕಳಿಗೆ ಶಾಲೆ ಕಲಿಯುವ ಭಾಗ್ಯ ಮರೀಚಿಕೆಯಾಗಿದೆ.
ಮಕ್ಕಳು ಶಿಕ್ಷಣದಿಂದ ವಂಚಿತವಾಗದಂತೆ ಸರಕಾರ ಹತ್ತಾರು ಯೋಜನೆಗಳ ತಂದರೂ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪ್ರತಿವರ್ಷ ಕಬ್ಬು ಕಟಾವಿಗೆ ಗಡಿ ಜಿಲ್ಲೆ ಬೀದರ್ ಗೆ (Bidar) ಬರುವ ನೂರಾರು ಕುಟುಂಬದ ಚಿಕ್ಕ ಚಿಕ್ಕಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ.ಕೂಲಿ ಕೆಲಸಕ್ಕೆ ಅಂತಾ ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಯಿಂದ ವಲಸೆ ಬಂದಿರುವ ಮಕ್ಕಳಿಗೆ ಟೆಂಟ್ ಸ್ಕೂಲ್ ನಿರ್ಮಾಣ ಮಾಡಿ ಶಿಕ್ಷಣ ಕೊಡಬೇಕು ಅನ್ನೋ ಸರ್ಕಾರದ ಯೋಜನೆ ವಿಫಲವಾಗಿದೆ. ಹೌದು, ಗಡಿ ಜಿಲ್ಲೆ ಬೀದರ್ ನಲ್ಲಿ ಆರು ಸಕ್ಕರೆ ಕಾರ್ಖಾನೆಗಳಿದ್ದು ಈ ಕಾರ್ಖಾನೆಗೆ ಕಬ್ಬು ಕಟಾವು ಮಾಡಿ ಸಾಗಿಸಲು ನೆರೆಯ ಮಹಾರಾಷ್ಟ್ರ, ತೆಲಂಗಾಣದ ಜೊತೆಗೆ ನಮ್ಮದೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ಪ್ರತಿವರ್ಷ ಸಾವಿರಾರು ಕುಟುಂಬಗಳು ಜಿಲ್ಲೆಗೆ ವಲಸೆ ಬರುತ್ತಾರೆ.
ಇಲ್ಲಿಗೆ ಬರುವ ಕಾರ್ಮಿಕರ ಜೊತೆಗೆ ಅವರ ಮಕ್ಕಳು ಕೂಡಾ ಬರುತ್ತಿದ್ದು, ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಬ್ಬು ನುರಿಸಲು ಕಾರ್ಖಾನೆ ಆರಂಭವಾಗುವುದರಿಂದ ಹಿಡಿದು ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯವನ್ನು ಸ್ಥಗಿತಗೊಳಿಸುವವರೆಗೆ 5 ರಿಂದ 6 ತಿಂಗಳುಗಳ ಕಾಲ ನೆರೆಯ ಮಹಾರಾಷ್ಟ್ರ -ತೆಲಂಗಾಣ ಪಕ್ಕದ ಕಲ್ಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಂದ ಜನ ತಂಡೋಪತಂಡವಾಗಿ ಕಬ್ಬು ಕಟಾವು ಮಾಡುವ ಕೆಲಸಕ್ಕೆಂದು ಬೀದರ್ ಜಿಲ್ಲೆಗೆ ಬರುತ್ತಾರೆ.
ಬಡತನ, ನಿರುದ್ಯೋಗ ಸಮಸ್ಯೆ ಹಾಗೂ ಆರ್ಥಿಕ ಅಭದ್ರತೆ ನೀಗಿಸಿಕೊಳ್ಳಲು 6 ತಿಂಗಳುವರೆಗೆ ಇಲ್ಲಿಯೇ ನೆಲಸುತ್ತಾರೆ. ಈ ಜನ, ತಮ್ಮೊಡನೆ ಮಕ್ಕಳನ್ನು ಕರೆ ತರುತ್ತಾರೆ. ಹೆತ್ತವರ ಜತೆ ಬರುವ ಮಕ್ಕಳು ಅನಿವಾರ್ಯವಾಗಿ ಶಿಕ್ಷಣವನ್ನು ಮೊಟಕುಗೊಳಿಸಬೇಕಾಗುತ್ತದೆ. ಕಲಿಯುವ ವಯಸ್ಸಿನಲ್ಲಿ ಇಂತಹ ನೂರಾರು ಮಕ್ಕಳ ಶಿಕ್ಷಣ ಮೊಟಕುಗೊಳ್ಳುತ್ತಿದೆ. ಹೆತ್ತವರಿಗೆ ನೆರವಾಗುವುದರ ಜೊತೆಗೆ ಅವರ ಅಲೆಮಾರಿ ಜೀವನದಿಂದ ಮಕ್ಕಳ ಬಾಲ್ಯದ ಮೇಲೆ ಮುಸುಕು ಆವರಿಸುವಂತಾಗಿದೆ. ಹೆತ್ತವರು ಬೆಳಗಿನ ಜಾವ ಕಬ್ಬು ಕಟಾವಿಗೆ ಹೋದರೆ, ಮಕ್ಕಳು ಗುಡಿಸಲುಗಳ ಕಾವಲು ಕಾಯುವುದು, ಮನೆ ಕೆಲಸ ಮಾಡುವುದರಿಂದ ಅವರ ಶಿಕ್ಷಣದ ಹಕ್ಕಿಗೆ ಹೊಡೆತ ಬೀಳುತ್ತಿದೆ. ಇಂತಹ ಮಕ್ಕಳನ್ನ ಗುರುತಿಸಿ ಅವರಿಗೆ ಶಿಕ್ಷಣ ಕೊಡಿ ಎಂದು ಇಲ್ಲಿನ ಜನರು ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಇನ್ನು, ಹೆತ್ತವರ ಜೊತೆಗೆ ಬರುವ ಮಕ್ಕಳು ಕಲಿಯುವ ವಯಸ್ಸಿನಲ್ಲಿ ಹೆತ್ತವರ ಕೆಲಸಕ್ಕೆ ನೆರವಾಗುತ್ತಾರೆ. ಅವರೊಡನೆ ಅಲೆಮಾರಿ ಜೀವನ ನಡೆಸುವುದರಿಂದ ಮಕ್ಕಳ ಸುಂದರ ಬಾಲ್ಯದ ಜೀವನ ಮುಸುಕಾಗುತ್ತಿದೆ. ಬಡತನದ ಬೇಗೆಗೆ ಮಕ್ಕಳ ಹಕ್ಕುಗಳು ಮೊಟಕಾಗುತ್ತಿವೆ. ಹೆತ್ತವರು ಬೆಳಗಿನ ಜಾವದಲ್ಲೇ ಕಬ್ಬು ಕಟಾವು ಮಾಡಲು ತೆರಳುವುದರಿಂದ ಮಕ್ಕಳು ತಮ್ಮ ಗುಡಿಸಲಿನ ಕಾವಲು ಕಾಯುವುದು, ಮನೆ ಕೆಲಸ ಮಾಡುವುದು, ತಮ್ಮ ತಂದೆ- ತಾಯಂದರಿಗೆ ಬುತ್ತಿ ತೆಗೆದುಕೊಂಡು ಹೋಗುವುದು ಮಾಡುತ್ತಾರೆ.
ಬಡತನದ ಅನಿವಾರ್ಯತೆಯಿಂದಾಗಿ ಆಟವಾಡಿ ಬೆಳೆಯುವ ವಯಸ್ಸಲ್ಲಿ ಮನೆ ಕೆಲಸ ಮಾಡುತ್ತ ಶಿಕ್ಷಣದಿಂದ ವಂಚಿತರಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ವಲಸೆ ಬರೋ ಕಾರ್ಮಿಕರ ಮಕ್ಕಳಿಗಾಗಿ ಟೆಂಟ್ ಸ್ಕೂಲ್ ನಿರ್ಮಾಣ ಮಾಡಿ ಶಿಕ್ಷಣ ನೀಡಬೇಕು ಎಂಬ ಸರ್ಕಾರದ ಯೋಜನೆಯೂ ಇದೆ. ಆದರೆ, ಈ ಯೋಜನೆ ಜಿಲ್ಲೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಕಬ್ಬು ಕಟಾವು ಮಾಡಲು ಬರುವ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಹೆಸರಿಗೆ ಮಾತ್ರ ಇದ್ದು ಇಂತಹ ಮಕ್ಕಳನ್ನ ಗುರುತಿಸಿ ಅವರಿಗೆ ಶಿಕ್ಷಣ ಕೊಡಲು ವಿಫಲವಾದಂತಾಗಿದೆ. ಈ ಬಗ್ಗೆ ಡಿಡಿಪಿಐ ಅವರನ್ನು ಕೇಳಿದರೆ ಯಾವುದೇ ಮಗು ಶಿಕ್ಷಣ ಕಲಿಯುತ್ತೇನೆಂದು ಮುಂದೆ ಬಂದರೆ ಅವರಿಗೆ ಶಿಕ್ಷಣ ಕಲ್ಪಿಸುವುದು ನಮ್ಮ ಕರ್ತವ್ಯ. ಅದನ್ನ ನಾವು ಮಾಡುತ್ತೇವೆ, ಯಾವುದೇ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಅನ್ನೋದು ನಮ್ಮ ಆಶಯವಾಗಿದೆ.
ಈ ಹಿಂದಿನ ವರ್ಷಗಳಲ್ಲಿ ಮಕ್ಕಳಿರುವಲ್ಲಿಗೆ ಹೋಗಿ ಆ ಮಕ್ಕಳನ್ನ ಅಕ್ಕಪಕ್ಕದ ಶಾಲೆಗಳಿಗೆ ಸೇರಿಸುವ ಕೆಲಸ ಮಾಡಿದ್ದೇವೆ. ಈ ವರ್ಷವೂ ಕೂಡಾ ಮಕ್ಕಳು ವಾಸ ಮಾಡುವ ಅಕ್ಕ ಪಕ್ಕದಲ್ಲಿರುವ ಶಾಲೆಗಳಿಗೆ ಅವರನ್ನ ದಾಖಲು ಮಾಡಿಸಿ ಶಿಕ್ಷಣ ಕೊಡಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆಂಬ ಸಿದ್ದ ಉತ್ತರ ನೀಡುತ್ತಾರೆ ಬೀದರ್ ಡಿಡಿಪಿಐ ಸಲೀಂ ಪಾಷಾ.
ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಚಿಣ್ಣರ ಅಂಗಳ, ಟೆಂಟ್ ಶಾಲೆ, ಬಾ ಮರಳಿ ಶಾಲೆಗೆ ಸೇರಿದಂತೆ ಹಲವಾರು ಯೋಜನೆಗಳಿವೆ. ಇಷ್ಟೆಲ್ಲಾ ಇದ್ದರೂ ಕರ್ನಾಟಕದ ಗಡಿ ಜಿಲ್ಲೆ ಬೀದರ್ ನಲ್ಲಿ ಕೂಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಇನ್ನೂ ಗಗನ ಕುಸುಮವಾಗಿಯೇ ಉಳಿದಿದೆ. ಶಿಕ್ಷಣ ಮಕ್ಕಳ ಹಕ್ಕು. ಆದರೆ, ಹೊಟ್ಟೆಪಾಡಿಗಾಗಿ ವಲಸೆ ಬರೋ ಕಾರ್ಮಿಕ ಕುಟುಂಬಗಳಿಗೆ ಅದನ್ನು ನೀಡಲಾಗುತ್ತಿಲ್ಲ. ಈ ಅಸಹಾಯಕತೆಯನ್ನು ಹೋಗಲಾಡಿಸಬೇಕಾಗಿರುವುದು ಶಿಕ್ಷಣ ಇಲಾಖೆಯ ಕರ್ತವ್ಯವಾಗಿದೆ. (ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್)
ಇನ್ನಷ್ಟು ಜಿಲ್ಲಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ