ಪೊಲೀಸ್ ಇಲಾಖೆಗೆ ನಕಲಿ ದಾಖಲೆಗಳು ನೀಡಿದ್ದ ಕೇಸ್: ಪಿಎಸ್ಐ ಅಮಾನತು
ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಾಶಿಲಿಂಗೇಗೌಡ ಅವರು ಪೊಲೀಸ್ ಇಲಾಖೆಗೆ ನಕಲಿ ದಾಖಲೆಗಳನ್ನು ಸಲ್ಲಿಸಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ಈ ಆದೇಶ ಹೊರಡಿಸಿದ್ದಾರೆ. ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಅವರು ಜಾಮೀನು ಪಡೆದಿದ್ದರು.
ಬೆಂಗಳೂರು, ಜನವರಿ 06: ಪೊಲೀಸ್ ಇಲಾಖೆಗೆ ನಕಲಿ ದಾಖಲೆಗಳು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಠಾಣೆ ಸಬ್ಇನ್ಸ್ಪೆಕ್ಟರ್ (PSI) ಕಾಶಿಲಿಂಗೇಗೌಡರನ್ನು ಅಮಾನತು ಮಾಡಿ, ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಆದೇಶ ಹೊರಡಿಸಿದ್ದಾರೆ. ನಕಲಿ ದಾಖಲೆ ನೀಡಿದ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಸಬ್ಇನ್ಸ್ಪೆಕ್ಟರ್ ಕಾಶಿಲಿಂಗೇಗೌಡ ಜಾಮೀನು ಪಡೆದುಕೊಂಡಿದ್ದರು. ನಂತರ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಇದೀಗ ಪಿಎಸ್ಐ ಅಮಾನತು ಮಾಡಲಾಗಿದೆ.
ನಕಲಿ ಜನ್ಮ ದಿನಾಂಕ ಹೊಂದಿರುವ ದಾಖಲೆಯನ್ನು ನೀಡಿ ಕೆಲಸ ಪಡೆದುಕೊಂಡ ಆರೋಪದಡಿ ಸಬ್ಇನ್ಸ್ಪೆಕ್ಟರ್ ಕಾಶಿಲಿಂಗೇಗೌಡ ವಿರುದ್ಧ ಬೆಂಗಳೂರು ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಅಧಿಕಾರಿ ಎಸ್. ಟಿ. ಚಂದ್ರಶೇಖರ್ ನೀಡಿರುವ ದೂರಿನ ಮೇರೆಗೆ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ಇದನ್ನೂ ಓದಿ: ರಾಜು ಕಪನೂರು ಗ್ಯಾಂಗ್ ಎಲ್ಲಿ ಬಚ್ಚಿಟ್ಟಿದ್ದೀರಿ ಸುಪಾರಿ ಕಿಲ್ಲರ್ ಪ್ರಿಯಾಂಕ್ ಖರ್ಗೆ: ಬಿಜೆಪಿ ಪ್ರಶ್ನೆ
ಪಿಎಸ್ಐ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ವಯಸ್ಸು 30 ವರ್ಷ ಮೀರಿರಬಾರದೆಂದು ಸರ್ಕಾರದ ನಿಯಮ ಇದೆ. ಹೀಗಿರುವಾಗ ಅರ್ಹ ಅಭ್ಯರ್ಥಿ ಅಲ್ಲದಿದ್ದರು ಕೂಡ ಕಾಶಿಲಿಂಗೇಗೌಡ ತಮ್ಮ ಜನ್ಮ ದಿನಾಂಕವನ್ನು 1988 ಏಪ್ರಿಲ್ 15 ಎಂದು ನೀಡುವ ಮೂಲಕ 2017-18ರ ಸಾಲಿನ ಸಬ್ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ನೇಮಕವಾಗಿದ್ದಾರೆ ಎಂದು ದೂರು ನೀಡಲಾಗಿತ್ತು.
ಅಕ್ರಮ ಮರಳುಗಾರಿಕೆಗೆ ಸಹಕಾರ ಆರೋಪ: ಕಾಪು ಠಾಣಾಧಿಕಾರಿ ಅಮಾನತು
ಅಕ್ರಮ ಮರಳುಗಾರಿಕೆಗೆ ಸಹಕಾರ ಮಾಡಿರುವ ಆರೋಪದಲ್ಲಿ ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್ ಅಮಾನತುಗೊಂಡಿದ್ದಾರೆ. ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮರಳುಗಾರಿಕೆ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಈ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಎಸ್ಪಿ ಡಾ.ಅರುಣ್ ಕುಮಾರ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದರು.
ಇದನ್ನೂ ಓದಿ: ಸಾರಿಗೆ ನೌಕರರ ಕನಸು ನನಸು: ನಗದು ರಹಿತ ವೈದ್ಯಕೀಯ ಚಿಕಿತ್ಸೆ ಆರಂಭ
ಆದರೆ ಅಕ್ರಮ ಮರಳುಗಾರಿಕೆ ನಡೆಸಲು ಕಾಪು ಠಾಣಾಧಿಕಾರಿಯವರು ಸಹಕರಿಸಿದ್ದಾರೆ ಎಂಬುದನ್ನು ತಿಳಿಸುವ ಆಡಿಯೋವೊಂದು ಎಸ್ಪಿ ಡಾ.ಅರುಣ್ ಅವರಿಗೆ ಲಭಿಸಿದ್ದು, ಈ ಆಡಿಯೋವನ್ನು ಕಾರ್ಕಳ ಡಿವೈಎಸ್ಪಿ ಅರವಿಂದ್ ಕಲ್ಲುಗುಜ್ಜಿಯವರ ಮೂಲಕ ವಿಚಾರಣೆ ನಡೆಸಿದ್ದಾರೆ. ಡಿವೈಎಸ್ಪಿಯವರ ವರದಿಯಲ್ಲಿ ಕಾಪು ಠಾಣಾಧಿಕಾರಿ ವಿರುದ್ಧದ ಆರೋಪವು ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:57 pm, Mon, 6 January 25