ಕಾಡಂಚಿನ ಗ್ರಾಮಗಳ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ; ಕಾಡು ಪ್ರಾಣಿಗಳಿಂದ ಮುಕ್ತಿ ಪಡೆಯಲು ಜಿರೋ ಕಾಸ್ಟ್ ಯೋಜನೆ
ಸೀಮೆಕಳ್ಳಿ ಅಥವಾ ಎಲೆಗಳ್ಳಿಯನ್ನು ಕಾಡಂಚಿನಲ್ಲಿ ನಿರ್ಮಾಣ ಆಗಿರುವ ಕಂದಕದ ಮಣ್ಣಿನ ಮೇಲೆ ನೆಡುವುದು. ಕಾಡಂಚಿನ ಊರು ಇಲ್ಲವೇ ಅರಣ್ಯದಲ್ಲಿಯೇ ಹೇರಳವಾಗಿ ಉಚಿತವಾಗಿ ಸಿಗುವ ಈ ಗಿಡವನ್ನು ನೆಟ್ಟರೆ 6 ತಿಂಗಳಲ್ಲಿ ಇಡೀ ಗಿಡ 10 ಅಡಿಗೂ ಅಧಿಕ ಎತ್ತರಕ್ಕೆ ಬೆಳೆಯುತ್ತದೆ.
ಚಾಮರಾಜನಗರ: ಅವುಗಳೇಲ್ಲ ಕಾಡಂಚಿನ ಗ್ರಾಮಗಳು. ಬೇಸಿಗೆ ಬಂತೆಂದರೆ, ಆಹಾರ, ನೀರು ಅರಸಿ ಆನೆ ಸೇರಿದಂತೆ ಕಾಡು ಪ್ರಾಣಿಗಳು ಗ್ರಾಮಗಳಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಸೇರಿದಂತೆ ಪ್ರಾಣ ಹಾನಿ ಉಂಟು ಮಾಡುತ್ತಿದ್ದವು. ಅರಣ್ಯದಂಚಿನ ಜನರು ಮತ್ತು ಕಾಡು ಪ್ರಾಣಿಗಳ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿಯೂ ಕೈ ಸುಟ್ಟು ಕೊಂಡಿತ್ತು. ಸೋಲಾರ್ ಫೆನ್ಸ್, ಕಂದಕ ನಿರ್ಮಿಸಿ ವಿಫಲವಾಗಿತ್ತು. ಆದರೆ ಈಗ ಜಿರೋ ಕಾಸ್ಟ್ನಲ್ಲಿ ಆನೆಗಳು ಕಾಡಿನಿಂದ ನಾಡಿಗೆ ಬರದ ರೀತಿ ಹೊಸ ಯೋಜನೆ ರೂಪಿಸಿದೆ.
ಕಣ್ಣು ಹಾಯಿಸಿದಷ್ಟು ದೂರು ಸುಂದರವಾಗಿ ಕಾಣುತ್ತಿರುವ ಅಚ್ಚ ಹಸಿರಿನಿಂದ ಕೂಡಿರುವ ಬೆಟ್ಟಗುಡ್ಡಗಳು. ಬೆಟ್ಟವನ್ನೇ ಹೊದ್ದು ಮಲಗಿರುವಂತೆ ಕಾಣುತ್ತಿರುವ ಮೋಡಗಳು. ಸುಂದರ ನಿಸರ್ಗದ ಮಡಿಲಿನ ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ಇರುವ ಊರು. ಊರುಗಳ ಪಕ್ಕದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಬೆಳೆಗಳು. ಇವುಗಳನ್ನು ನೋಡಿದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಅನುಭವ ಪ್ರತಿಯೊಬ್ಬರಲ್ಲಿಯೂ ಮೂಡದೇ ಇರುವುದಿಲ್ಲ. ಆದರೆ ಇದೇ ನೈಸರ್ಗಿಕ ಸೌಂದರ್ಯದ ಮಧ್ಯೆ ವಾಸವಿರುವ ಮಂದಿಯ ಬದುಕು ಮಾತ್ರ ಹೇಳ ತೀರದು.
ಕಾಡಂಚಿನ ಗ್ರಾಮಗಳ ಜನರ ಬದುಕು ಮೂರಾಬಟ್ಟೆಯಾಗಲು ಕಾರಣ ವನ್ಯಜೀವಿಗಳು. ಕಾಡಿನಿಂದ ಬರುವ ವನ್ಯಜೀವಿಗಳು ಕಾಡಂಚಿನ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಹೌದು, ಚಾಮರಾಜನಗರ ಜಿಲ್ಲೆ ಹೇಳಿ ಕೇಳಿ ಶೇಕಡ 51ರಷ್ಟು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ. ಅಲ್ಲದೇ ಬಂಡಿಪುರ ಮತ್ತು ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದುವುದರ ಜೊತೆಗೆ ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿ ಪ್ರದೇಶಗಳನ್ನು ಹೊಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಯಥೇಚ್ಚವಾದ ವನ್ಯಜೀವಿಗಳು ಇವೆ. ಈ ವನ್ಯಜೀವಿಗಳೇ ಈಗ ಕಾಡಂಚಿನ ಜನರಿಗೆ ಕಂಟಕವಾಗಿವೆ.
ಕಾಡು ಪ್ರಾಣಿಗಳು ಮಳೆ ಮತ್ತು ಚಳಿಗಾಲದಲ್ಲಿ ಹೇರಳವಾಗಿ ಸಿಗುವ ನೀರು ಮತ್ತು ಆಹಾರ ತಿಂದು ಜೀವಿಸುತ್ತವೆ. ಆದರೆ ಬೇಸಿಗೆ ಕಾಲ ಬಂದರೆ ಕಾಡಂಚಿನ ಜನರಿಗೆ ಎಲ್ಲಿಲ್ಲದ ಆತಂಕ ಮತ್ತು ಭಯ. ಕಾಡು ಪ್ರಾಣಿಗಳು ಯಾವಾಗ ದಾಳಿ ಮಾಡುತ್ತವೆ, ಎಷ್ಟು ಬೆಳೆ ನಾಶ ಮಾಡುತ್ತವೆ, ಯಾರು ಕಾಡು ಪ್ರಾಣಿಗಳ ದಾಳಿಗೆ ತುತ್ತಾಗುತ್ತಾರೆ ಎಂಬ ಆತಂಕ ಸಹಜವಾಗಿಯೇ ಕಾಡಂಚಿನ ಜನರಲ್ಲಿ ಕಾಡಲಾರಂಭಿಸುತ್ತದೆ. ಬೆಳೆ ಹಾನಿ ಮತ್ತು ಪ್ರಾಣಿ ಹಾನಿ ಸಂಭವಿಸಿದ ವೇಳೆ ಕಾಡಂಚಿನ ಜನರು ವನ್ಯಜೀವಿಗಳನ್ನು ಬಲಿ ಪಡೆದ ನಿದರ್ಶನ ಕೂಡ ಇದೆ.
ವನ್ಯಜೀವಿ ಮತ್ತು ಮಾನವನ ನಡುವಿನ ಸಂಘರ್ಷ ತಪ್ಪಿಸುವ ಸಲುವಾಗಿ ಆರಂಭದಲ್ಲಿ ಅರಣ್ಯ ಇಲಾಖೆ ಸೋಲಾರ್ ಫೆನ್ಸಿಂಗ್ ನಿರ್ಮಾಣ ಮಾಡಿತ್ತು. ಸರಿಯಾದ ರೀತಿಯಲ್ಲಿ ನಿರ್ವಹಣೆ ಇಲ್ಲದೇ ಇದುದ್ದರಿಂದ ಸೋಲಾರ್ ಕೈಕೊಟ್ಟಿತ್ತು. ಬಳಿಕ 8 ಅಡಿ ಅಗಲ, 8 ಅಡಿ ಆಳ ವಿಸ್ತೀರ್ಣದಲ್ಲಿ ಕಂದಕ ನಿರ್ಮಾಣ ಮಾಡಲಾಗಿತ್ತು. ಮಳೆಗಾಲದಲ್ಲಿ ಜೋರು ಮಳೆ ಬಿದ್ದಾಗ ಕಂದಕಗಳು ಮುಚ್ಚಿ ಹೋಗಿ ಆನೆಗಳು ಎಂದಿನಂತೆ ನಾಡಿನತ್ತ ಮುಖ ಮಾಡುತ್ತಿವು. ಸೋಲಾರ್ ಫೆನ್ಸ್ ಮತ್ತು ಕಂದಕ ನಿರ್ಮಾಣ ಮಾಡಲು ಹತ್ತಾರು ಕೋಟಿ ರುಪಾಯಿ ಹಣವನ್ನು ಅರಣ್ಯ ಇಲಾಖೆ ವ್ಯಯ ಮಾಡಿತ್ತು. ಇಷ್ಟೇಲ್ಲ ಪ್ರಯತ್ನ ಪಟ್ಟರು ಸಂಪೂರ್ಣವಾಗಿ ತಡೆಯಲು ಆಗದೇ ಇದ್ದಾಗ ಅರಣ್ಯ ಇಲಾಖೆ ನೂತನ ಯೋಜನೆ ರೂಪಿಸಿದೆ.
ಸೀಮೆಕಳ್ಳಿ ಅಥವಾ ಎಲೆಗಳ್ಳಿಯನ್ನು ಕಾಡಂಚಿನಲ್ಲಿ ನಿರ್ಮಾಣ ಆಗಿರುವ ಕಂದಕದ ಮಣ್ಣಿನ ಮೇಲೆ ನೆಡುವುದು. ಕಾಡಂಚಿನ ಊರು ಇಲ್ಲವೇ ಅರಣ್ಯದಲ್ಲಿಯೇ ಹೇರಳವಾಗಿ ಉಚಿತವಾಗಿ ಸಿಗುವ ಈ ಗಿಡವನ್ನು ನೆಟ್ಟರೆ 6 ತಿಂಗಳಲ್ಲಿ ಇಡೀ ಗಿಡ 10 ಅಡಿಗೂ ಅಧಿಕ ಎತ್ತರಕ್ಕೆ ಬೆಳೆಯುತ್ತದೆ. ಈ ಗಿಡವನ್ನು ತುಳಿದು ಆನೆಗಳು ಪ್ರವೇಶ ಮಾಡುವ ವೇಳೆ ಕಳ್ಳಿಯ ಹಾಲು ಆನೆ ಸೊಂಡಿಲು ಇಲ್ಲವೇ ಕಣ್ಣಿಗೆ ಹಾರಿದರೆ ಸಿಕ್ಕಾಬಟ್ಟೆ ಉರಿಯುತ್ತದೆ. ಇದನ್ನು ಬಿಳಿಗಿರಿಯ ರಂಗನಾಥ ಹುಲಿ ಸಂರಕ್ಷಿತ ಪ್ರವೇಶ ವ್ಯಾಪ್ತಿಯ ಯಳಂದೂರು ತಾಲೂಕಿನಲ್ಲಿ ಬರುವ ಗೌಡಗಳ್ಳಿ, ಕೆ.ದೇವರಹಳ್ಳಿ, ಮುಂಟಿಪಾಳ್ಯ, ಕೃಷ್ಣಯ್ಯನಕಟ್ಟೆ, ಯಣಗುಂಬ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಡಿಎಫ್ಓ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಈ ನೂತನ ಪ್ರಯೋಗ ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಸುಮಾರು 4 ಕಿಲೋಮೀಟರ್ ದೂರ ಸೀಮೆಕಳ್ಳಿ ನೆಟ್ಟಿರುವುದರಿಂದ ಆನೆ ಸೇರಿದಂತೆ ವನ್ಯಜೀವಿಗಳು ಹೊರ ಬರಲು ಸಾಧ್ಯವಾಗುವುದಿಲ್ಲ. ಜೊತೆಗೆ ಸ್ಥಳೀಯವಾಗಿಯೇ ಸಿಗುವ ಸೀಮೆಕಳ್ಳಿಯನ್ನೇ ಬಳಸಿ, ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೂಲಕ ಸೀಮೆಕಳ್ಳಿ ನೆಟ್ಟಿರುವುದರಿಂದ ಝಿರೋ ವೆಚ್ಚದಲ್ಲಿ ಕೆಲಸ ಮಾಡಲಾಗಿದೆ. ಸದ್ಯಕ್ಕೆ ಇಡೀ ರಾಜ್ಯದಲ್ಲಿ ಪೈಲಟ್ ಪ್ರಾಜೆಕ್ಟ್ ರೀತಿ ಅನುಷ್ಠಾನಗೊಳಿಸಲಾಗಿದೆ. 6 ತಿಂಗಳಿಂದ 1 ವರ್ಷದವರೆಗೆ ಝಿರೋ ಕಾಸ್ಟ್ ಯೋಜನೆ ಫಲಿತಾಂಶ ಸಿಗಲಿದೆ. ಸೋಲಾರ್ ಫೆನ್ಸ್, ಇಪಿಟಿ ಜೊತೆಗೆ ಸೀಮೆಕಳ್ಳಿ ಯೋಜನೆ ಕಾರ್ಯರೂಪಕ್ಕೆ ಬಂದರೆ, ರೈತರು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ.
ಒಟ್ಟಿನಲ್ಲಿ ನೆರೆಯ ತಮಿಳುನಾಡಿನ ನೀಲಗಿರಿ ವ್ಯಾಪ್ತಿಯಲ್ಲಿ ಕಾಡಂಚಿನ ಜನರು ಅನುಸರಿಸುತ್ತಿರುವ ಝಿರೋ ಕಾಸ್ಟ್ ಯೋಜನೆಯನ್ನು ಅರಣ್ಯ ಸಂಪತ್ತು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿಯೂ ಅರಣ್ಯ ಇಲಾಖೆ ಅನುಷ್ಠಾನಗೊಳಿಸಿದೆ. ಯೋಜನೆ ಒಂದಷ್ಟು ಯಶಸ್ಸು ಕಂಡರೆ ರಾಜ್ಯದಲ್ಲಿ ಅರಣ್ಯ ಇಲಾಖೆ ಅನುಷ್ಠಾನಗೊಳಿಸಿ ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ತಪ್ಪಿಸಲು ಸಹಕಾರಿಯಾಗಲಿದೆ. ವರದಿ: ಎಂ ಇ ಮಂಜುನಾಥ್
ಇದನ್ನೂ ಓದಿ: ಕಾಡಾನೆಗಳ ದಾಳಿಯಿಂದ ಬನ್ನೇರುಘಟ್ಟದಲ್ಲಿ ಅಪಾರ ಪ್ರಮಾಣದ ಬೆಳೆ ನಾಶ
Published On - 7:41 am, Wed, 15 September 21