AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಿಗ್ಗೆ 6 ಗಂಟೆಗೆಲ್ಲ ಬಾರ್ ಓಪನ್ ಮಾಡಿದ್ರೆ ಅಧಿಕಾರಿಗಳೇ ಸಸ್ಪೆಂಡ್: ಸಚಿವ ಕೆ.ಎಂ. ಶಿವಲಿಂಗೇಗೌಡ ಖಡಕ್ ವಾರ್ನಿಂಗ್

ಹಾಸನದಲ್ಲಿ ಪ್ರಜಾ ಸೇವೆ ಆಂದೋಲನ ಸಭೆಯಲ್ಲಿ ಸಾರ್ವಜನಿಕರ ದೂರಿನಂತೆ, ಸಚಿವ ಕೆ.ಎಂ. ಶಿವಲಿಂಗೇಗೌಡರು ಬಾರ್‌ಗಳ ಅಕ್ರಮ ಸಮಯದ ಬಗ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ಬೆಳಿಗ್ಗೆ 10:30 ರಿಂದ ರಾತ್ರಿ 10:30 ರವರೆಗೆ ಮಾತ್ರ ಬಾರ್ ತೆರೆಯಬೇಕು ಎಂದು ಆದೇಶಿಸಿದ್ದಾರೆ. ನಿಯಮ ಉಲ್ಲಂಘಿಸಿದರೆ ಬಾರ್ ಮಾಲೀಕರ ಬದಲು ಅಧಿಕಾರಿಗಳನ್ನೇ ಅಮಾನತು ಮಾಡುವುದಾಗಿ ಎಚ್ಚರಿಸಿದರು. ಸಭೆಯಲ್ಲಿ 1076 ಅರ್ಜಿ ಸ್ವೀಕೃತವಾಗಿ, 62 ಅರ್ಜಿ ಇತ್ಯರ್ಥಗೊಂಡಿವೆ.

ಬೆಳಿಗ್ಗೆ 6 ಗಂಟೆಗೆಲ್ಲ ಬಾರ್ ಓಪನ್ ಮಾಡಿದ್ರೆ ಅಧಿಕಾರಿಗಳೇ ಸಸ್ಪೆಂಡ್: ಸಚಿವ ಕೆ.ಎಂ. ಶಿವಲಿಂಗೇಗೌಡ ಖಡಕ್ ವಾರ್ನಿಂಗ್
ಅಬಕಾರಿ ಸಚಿವ ಶಿವಲಿಂಗೇಗೌಡImage Credit source: Google
ಮಂಜುನಾಥ ಕೆಬಿ
| Edited By: |

Updated on: Sep 05, 2026 | 10:36 PM

Share

ಹಾಸನ, ಸೆ.5: ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಐತಿಹಾಸಿಕ ‘ಪ್ರಜಾ ಸೇವೆ ಆಂದೋಲನ’ ಸಭೆಯಲ್ಲಿ ಸಾರ್ವಜನಿಕರು ಬಾರ್‌ಗಳ ಅಕ್ರಮ ಸಮಯದ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಅಧಿಕಾರಿಗಳು ಹಾಗೂ ಬಾರ್ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಬೆಳಿಗ್ಗೆ 6ಗಂಟೆಗೇ ಬಾರ್‌ಗಳ ಬಾಗಿಲು ತೆರೆಯುತ್ತಿದ್ದು, ಯುವಕರು ಮದ್ಯಪಾನಕ್ಕೆ ದಾಸರಾಗುತ್ತಿದ್ದಾರೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ ಎಂದು ಸಾರ್ವಜನಿಕರು ದೂರಿಕೊಂಡರು.

ಸಾರ್ವಜನಿಕರ ದೂರಿಗೆ ಸ್ಥಳದಲ್ಲೇ ಸ್ಪಂದಿಸಿದ ಸಚಿವರು, ಅಬಕಾರಿ ನಿಯಮಗಳಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದರು. “ಬೆಳಿಗ್ಗೆ 10:30ಕ್ಕೆ ಬಾರ್ ಬಾಗಿಲು ತೆರೆಯಬೇಕು ಹಾಗೂ ರಾತ್ರಿ 10:30ಕ್ಕೆ ಬಂದ್ ಆಗಬೇಕು. ನಾಳೆಯಿಂದಲೇ ಹಾಸನ ಜಿಲ್ಲೆಯಾದ್ಯಾಂತ ಈ ನಿಯಮ ಜಾರಿಯಾಗಬೇಕು,” ಎಂದು ಆದೇಶಿಸಿದರು.

“ಯಾರಾದರೂ ಸಮಯಕ್ಕಿಂತ ಮುಂಚಿತವಾಗಿ ಬಾರ್ ತೆಗೆದರೆ ಅಥವಾ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಿದರೆ ನಾನು ಬಾರ್ ಮಾಲೀಕರ ಮೇಲಲ್ಲ, ಅಬಕಾರಿ ಅಧಿಕಾರಿಗಳ ಮೇಲೆಯೇ ಕ್ರಮ ಕೈಗೊಳ್ಳುತ್ತೇನೆ. ನಿಯಮ ಉಲ್ಲಂಘನೆ ಕಂಡುಬಂದರೆ ಅಧಿಕಾರಿಗಳನ್ನು ಸ್ಪಾಟ್‌ನಲ್ಲೇ ಸಸ್ಪೆಂಡ್ ಮಾಡಲಾಗುವುದು,” ಎಂದು ಖಡಕ್ ಎಚ್ಚರಿಕೆ ನೀಡಿದರು.

“ಕುಡಿಯುವವರು ಬಾರ್ ತೆರೆದ ನಂತರ ಬೇಕಿದ್ದಷ್ಟು ಕುಡಿಯಲಿ, ನಾವೇನು ಬೇಡ ಎನ್ನಲ್ಲ. ರಾತ್ರಿ ೧೦:೩೦ರೊಳಗೆ ಕುಡಿದು ಹೋಗಲಿ, ಇಲ್ಲವೇ ಮನೆಗೆ ತೆಗೆದುಕೊಂಡು ಹೋಗಿ ಕುಡಿಯಲಿ,” ಎಂದು ನೇರ ಮಾತುಗಳಲ್ಲಿ ಹೇಳಿದರು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ‘ಪ್ರಜಾ ಸೇವೆ ಆಂದೋಲನ’ ಸಭೆಯು ಸತತ 10 ಗಂಟೆಗಳ ಕಾಲ ನಡೆದು ಮುಕ್ತಾಯಗೊಂಡಿತು. ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿದ ಸಚಿವರು ಹಾಗೂ ಜನಪ್ರತಿನಿಧಿಗಳು ಸ್ಥಳದಲ್ಲೇ ಹಲವು ದೂರುಗಳನ್ನು ವಿಲೇವಾರಿ ಮಾಡಿದರು.

ಸಭೆಯಲ್ಲಿ ಒಟ್ಟು 1,076 ಅರ್ಜಿಗಳು ಸಾರ್ವಜನಿಕರಿಂದ ಸ್ವೀಕೃತವಾಗಿದ್ದು, 62 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದೆ. ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ಮುಂದಿನ ಎರಡು ತಿಂಗಳ ಒಳಗಾಗಿ ಇತ್ಯರ್ಥಪಡಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಖಚಿತ ಎಂದು ಸಚಿವರು ತಾಕೀತು ಮಾಡಿದರು.

ಇದನ್ನೂ ಓದಿ: “ಬೆಂಗಳೂರಿನಲ್ಲಿ ಪ್ರತ್ಯೇಕ AI ಯೂನಿವರ್ಸಿಟಿ ಸ್ಥಾಪನೆ ಆಲೋಚನೆ”: ಸಚಿವ ಬಸವರಾಜ ರಾಯರೆಡ್ಡಿ

“ಮುಖ್ಯಮಂತ್ರಿಗಳು ರೂಪಿಸಿರುವ ಈ ಕಾರ್ಯಕ್ರಮದಲ್ಲಿ ಸತತ 10 ಗಂಟೆಗಳ ಕಾಲ ಪ್ರತಿಯೊಬ್ಬರಿಗೂ ಮೈಕ್ ನೀಡಿ ಸಮಸ್ಯೆ ಕೇಳಿರುವುದು ಒಂದು ಇತಿಹಾಸ. ಅರ್ಜಿಗಳಿಗೆ ಹಿಂಬರಹ ನೀಡಿರುವುದರಿಂದ ಅಧಿಕಾರಿಗಳು ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸಲೇಬೇಕು,” ಎಂದು ಸಚಿವ ಶಿವಲಿಂಗೇಗೌಡ ತಿಳಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us