ಹಾವೇರಿ: ತುಂಬಿದ ಕೆರೆಯಲ್ಲಿ ಗ್ಲಾಸ್ ಹೌಸ್ ನಿರ್ಮಿಸೋಕ್ಕೆ ಮುಂದಾದರು, ಆಮೇಲೆ ಕೆರೆಯಲ್ಲಿ ಕಾಮಗಾರಿಗೆ ಅವಕಾಶ ಇಲ್ಲಾಂದ್ರು, ಮುಂದೇನು?
ಹಾವೇರಿ ನಗರದ ಹೊರವಲಯದಲ್ಲಿರುವ ಐತಿಹಾಸಿಕ ಹೆಗ್ಗೆರಿ ಕೆರೆಯಲ್ಲಿ ಐದು ಕೋಟಿ ವೆಚ್ಚದಲ್ಲಿ ಗ್ಲಾಸ್ ಹೌಸ್ ನಿರ್ಮಿಸೋಕ್ಕೆ ಮುಂದಾದರು. ಆಮೇಲೆ ಕೆರೆಯಲ್ಲಿ ಕಾಮಗಾರಿಗೆ ಅವಕಾಶ ಇಲ್ಲಾಂದ್ರು.. ಆದರೆ ಆ ವೇಳೆಗೆ ಕೋಟ್ಯಂತರ ಹಣ ಕೆರೆ ಪಾಲಾಗಿತ್ತು! ಮುಂದೇನು?
ಸರಕಾರದ ಯೋಜನೆಗಳು ಅಂದರೆ ನೀರಿನಲ್ಲಿ ಹೋಮ ಮಾಡಿದ ಹಾಗೆ ಅನ್ನೊದಕ್ಕೆ ಇಲ್ಲೊಂದು ಯೋಜನೆ ಸ್ಪಷ್ಟ ಉದಾಹರಣೆ ಅಂತ ಹೇಳಬಹುದು. ಅದು ಕಣ್ಣು ಕಾಣಿಸುವಷ್ಟು ವಿಶಾಲವಾದ ಕೆರೆ, ಕೆರೆಯ ಮಧ್ಯೆ ಅರ್ಧಕ್ಕೆ ನಿಂತಿರುವ ಕಾಮಗಾರಿ, ಕಾಮಗಾರಿಗಾಗಿ ತಂದಿರುವ ಕಬ್ಬಿಣದ ವಸ್ತುಗಳು ಬೇಕಾಬಿಟ್ಟಿ ಬಿದ್ದಿವೆ. ಹೌದು, ಇದು ಹಾವೇರಿ (Haveri) ನಗರದ ಹೊರವಲಯದಲ್ಲಿರುವ ಐತಿಹಾಸಿಕ ಹೆಗ್ಗೆರಿ ಕೆರೆಯಲ್ಲಿ (Heggeri lake) ಕಂಡು ಬಂದ ದೃಶ್ಯಗಳು. ಹಾವೇರಿ ನಗರದ ರಾಷ್ಟ್ರೀಯ ಹೆದ್ದಾರಿಯ ಬಳಿ 2016 ರಲ್ಲಿ ಟೆಂಡರ್ ಕರೆದು ವಿಶೇಷ ಅನುದಾನದಲ್ಲಿ ಒಟ್ಟು ಐದು ಕೋಟಿ ಗ್ಲಾಸ್ ಹೌಸ್ (‘ಗಾಜಿನ ಮನೆ’ Glass house) ಮತ್ತು ಒಂದು ಕೋಟಿ ರೂಪಾಯಿ ತಡೆಗೋಡೆಗಾಗಿ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಒಂದು ಕೋಟಿ ರೂ. ತಡೆಗೋಡೆ ಕಾಮಗಾರಿ ಸಂಪೂರ್ಣವಾಗಿದೆ. 60 ಲಕ್ಷ ರೂಪಾಯಿ ಗ್ಲಾಸ್ ಹೌಸ್ ಕಾಮಗಾರಿ ಪೂರ್ಣವಾಗಿದೆ. ಆದರೆ ಮುಂದಿನ ಕಾಮಗಾರಿಗೆ ವಿಘ್ನದ ತಡೆಗೋಡೆ ಎದ್ದಿದೆ.
ಗ್ಲಾಸ್ ಹೌಸ್ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿ ಐದು ವರ್ಷಗಳೆ ಕಳೆದಿದೆ. ಇದೀಗ ಕೆರೆ ಅಭಿವೃದ್ಧಿ ಪ್ರಾಧಿಕಾರವು ಅದಕ್ಕೆ ಶಾರ್ಟ್ ಬ್ರೇಕ್ ಹಾಕಿ ಕೆರೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಲು ಬರುವುದಿಲ್ಲ ಎಂದು ಜಿಲ್ಲಾಡಳಿತಕ್ಕೆ ತಿಳಿಸಿದೆ. ಇನ್ನು ಜಿಲ್ಲಾಡಳಿತ ಮತ್ತು ನಗರಸಭೆ ಕಾಮಗಾರಿಗೆ ಬ್ರೇಕ್ ಹಾಕಿದೆ. ಇದೇ ಯೋಜನೆಯನ್ನು ಹಾವೇರಿ ತಾಲೂಕಿನ ನೆಲೊಗಲ್ ಬಳಿ ಇರುವ ಗುಡ್ಡದಲ್ಲಿ ನಿರ್ಮಾಣ ಮಾಡಲು ಮುಂದಾಗಿದೆ.
ಆದರೆ ಸರಕಾರ ಬಿಡುಗಡೆ ಮಾಡಿದ್ದ ಒಂದು ಕೋಟಿ 60 ಲಕ್ಷ ರೂಪಾಯಿ ಅದೇ ಕೆರೆಯ ನೀರಲ್ಲಿ ಹೋಮ ಮಾಡಿದ ಹಾಗಾಗಿದೆ. ಆದರೆ ಅದೇ ಹಣದಲ್ಲಿ ಕೆರೆಯ ಪಕ್ಕದಲ್ಲಿ ಇರುವ ಖಾಸಗಿ ಜಮೀನನ್ನು ಖರೀದಿಸಿ, ಅದರಲ್ಲಿ ಗ್ಲಾಸ್ ಹೌಸ್ ನಿರ್ಮಾಣ ಮಾಡಿದರೆ ಹಾವೇರಿ ನಗರದ ಜನತೆಗೆ ಅನುಕುಲವಾದೀತು ಅನ್ನೋದು ಹಾವೇರಿ ನಗರ ಜನರ ಅಭಿಪ್ರಾಯವಾಗಿದೆ.
ಒಟ್ಟಾರೆ ಅಧಿಕಾರಿಗಳು, ರಾಜಕಾರಣಿಗಳ ನಿಷ್ಕಾಳಜಿಯಿಂದಾಗಿ ಸರಕಾರದ ಹಣ ಪೋಲಾಗಿರುವದಂತೂ ಸುಳ್ಳಲ್ಲ. ಕಾಮಗಾರಿ ಸರಿಯಾಗಿ ನಡೆದರು ಅದು ನಗರದಿಂದ ಬಹಳ ದೂರ ಆಗುವುದರಿಂದ ಗ್ಲಾಸ್ ಹೌಸ್ ಉಪಯೋಗ ಆಗದೆ ಇರೋದೂ ದುರಂತವೇ ಸರಿ. (ವರದಿ: ರವಿ ಹೂಗಾರ, ಹಾವೇರಿ)
ಇದನ್ನೂ ಓದಿ: ಸಿತಾರ್ ರತ್ನ ರಹಿಮತ್ ಖಾನ್ 68ನೇ ಪುಣ್ಯಸ್ಮರಣೆ ಅಂಗವಾಗಿ ಧಾರವಾಡದಲ್ಲಿ ಡಿ.2ರಿಂದ ಸಂಗೀತ ಕಾರ್ಯಕ್ರಮ
Published On - 1:17 pm, Thu, 1 December 22