ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಚಿಕಿತ್ಸಾ ಶುಲ್ಕ ಏರಿಕೆ, ಸಾರ್ವಜನಿಕರ ಆಕ್ರೋಶ
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸಾ ಶುಲ್ಕ ಏರಿಕೆಯಾಗಿದ್ದು, ಇದರಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹೊರ ಮತ್ತು ಒಳ ರೋಗಿಗಳ ನೋಂದಣಿ ಶುಲ್ಕ ಹೆಚ್ಚಳಗೊಂಡಿದೆ. ಜನನ ಮತ್ತು ಮರಣ ಪ್ರಮಾಣಪತ್ರ ಶುಲ್ಕವೂ ಏರಿಕೆಯಾಗಿದೆ. ಆದರೆ ಆಸ್ಪತ್ರೆ ನಿರ್ದೇಶಕರು ಈ ಏರಿಕೆ ಬಡವರಿಗೆ ಹೊರೆಯಾಗುವುದಿಲ್ಲ ಎಂದು ಹೇಳಿದ್ದಾರೆ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ, ಮಾರ್ಚ್ 04: ಹುಬ್ಬಳ್ಳಿಯ (Hubballi) ಕಿಮ್ಸ್ (KIMS) ಆಸ್ಪತ್ರೆ ಉತ್ತರ ಕರ್ನಾಟಕ ಜನರ ಸಂಜೀವಿನಿಯಾಗಿದೆ. ನಿತ್ಯ ನೂರಾರು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇದೀಗ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸಾ ಶುಲ್ಕ ಏರಿಕೆಯಾಗಿದೆ. ಹೊರ ರೋಗಿಗಳ ನೊಂದಣಿ ವಿಭಾಗದ ಶುಲ್ಕ 10 ರೂಪಾಯಿಂದ 20 ರೂಪಾಯಿಗೆ ಏರಿಕೆಯಾಗೊದೆ. ಒಳ ರೋಗಿಗಳ ನೊಂದಣಿ ವಿಭಾಗದ ಶುಲ್ಕ 30 ರೂಪಾಯಿಂದ 50 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ಜೊತೆಗೆ ಎಕ್ಸರೇ, ಸ್ಕ್ಯಾನಿಂಗ್, ಜನನ, ಮರಣ ಪ್ರಮಾಣ ಪತ್ರ ನೀಡುವಿಗೆ ದರದಲ್ಲೂ ಬದಲಾವಣೆ ಮಾಡಿದೆ. ಜನನ, ಮರಣ ಪ್ರಮಾಣ ಪತ್ರ ನೀಡಲು ಈ ಮುಂಚೆ 5 ರೂಪಾಯಿ ತೆಗೆದುಕೊಳ್ಳಲಾಗುತ್ತಿತ್ತು. ಇದೀಗ, ಈ ದರವನ್ನು ಕಿಮ್ಸ್ ಆಡಳಿತ ಮಂಡಳಿ 50 ರೂಪಾಯಿಗೆ ಏರಿಸಿದೆ. ಕಿಮ್ಸ್ ಬರೊಬ್ಬರಿ ಎಂಟು ವರ್ಷಗಳ ನಂತರ ದರ ಬದಲಾವಣೆ ಮಾಡಿದೆ.
ಬಡವರಿಗೆ ಹೊರೆ ಆಗಲ್ಲ: ಎಸ್. ಎಫ್ ಕಮ್ಮಾರ
ಈ ಬಗ್ಗೆ ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ ಮಾತನಾಡಿ, ಕಿಮ್ಸ್ನಲ್ಲಿ ಶೇ.5ರಿಂದ 10ರಷ್ಟು ಶುಲ್ಕ ಹೆಚ್ಚಳ ಮಾಡಿದ್ದೇವೆ. ದಿಢೀರ್ ದರ ಏರಿಕೆಯಾಗಿಲ್ಲ, ಒಂದು ವರ್ಷದಿಂದ ಚರ್ಚೆಯಾಗುತ್ತಿತ್ತು. ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಸಭೆ ನಂತರ ದರ ಬದಲಾವಣೆ ಮಾಡಿದ್ದೇವೆ. ಇದು ಬಡವರಿಗೆ ಹೊರೆ ಆಗಲ್ಲ ಎಂದು ಹೇಳಿದರು. ಅಕಸ್ಮಾತ್ ರೋಗಿಗಳ ಬಳಿ ಹಣ ಇಲ್ಲದಿದ್ದರೂ ಚಿಕಿತ್ಸೆ ನೀಡುತ್ತೇವೆ. ಒಳ್ಳೆಯ ಚಿಕಿತ್ಸೆ ಕೊಡುವ ಕಾರಣಕ್ಕೆ ಅಲ್ಪ ಪ್ರಮಾಣದ ದರ ಏರಿಕೆ ಮಾಡಿದ್ದೇವೆ. ಬಿಪಿಎಲ್ ಕಾರ್ಡ್ ಬಳಕೆ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಇದನ್ನೂ ಓದಿ: ಮಾವು ಬೆಳೆಗಾರರಿಗೆ ಮತ್ತೆ ಸಂಕಷ್ಟ: ಏಕಾಏಕಿ ಉದುರಿ ಬೀಳುತ್ತಿರುವ ಕಾಯಿಗಳು
ದರ ಏರಿಕೆಗೆ ಸಾರ್ವಜನಿಕರ ವಿರೋಧ
ಕಿಮ್ಸ್ನಲ್ಲಿ ಚಿಕಿತ್ಸಾ ಶುಲ್ಕ ಹೆಚ್ಚಳ ಮಾಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಮ್ಸ್ ಆಸ್ಪತ್ರೆಗೆ ಬಡವರೇ ಹೆಚ್ಚಾಗಿ ಬರುವುದು. ದಿಢೀರ್ 20 ರೂ., 50 ರೂ. ಹೆಚ್ಚಳ ಮಾಡಿರುವುದು ತಪ್ಪು. ರಕ್ತ ತಪಾಸಣೆ ದರವೂ ಹೆಚ್ಚಿಸಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Tue, 4 March 25