ಕಲಬುರಗಿ: ಜಿಲ್ಲೆಗೆ ಇಂದು ಸಿಟಿ ರವಿ, ನಳಿನ್ ಕುಮಾರ್ ಕಟೀಲ್ ಭೇಟಿ
ಬಿಜೆಪಿ ನೂತನ ಕಚೇರಿ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಸಮಾರಂಭದಲ್ಲಿಯೂ ಅವರು ಪಾಲ್ಗೊಳ್ಳಲಿದ್ದಾರೆ.
ಕಲಬುರಗಿ: ಜಿಲ್ಲೆಗೆ ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಭೇಟಿ ನೀಡಲಿದ್ದು, ವಿವಿಧ ಪ್ರಕೋಷ್ಠಗಳ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕಲಬುರಗಿ ನಗರದ ಖಾಸಗಿ ಹೊಟೆಲ್ನಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ. ಮಧ್ಯಾಹ್ನ ಬಿಜೆಪಿ ನೂತನ ಕಚೇರಿ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಸಮಾರಂಭದಲ್ಲಿಯೂ ಅವರು ಪಾಲ್ಗೊಳ್ಳಲಿದ್ದಾರೆ. ಮುಂಜಾನೆ ಹತ್ತು ಗಂಟೆಗೆ ಸಿ.ಟಿ.ರವಿ ನಗರಕ್ಕೆ ಆಗಮಿಸಿದರೆ, ನಳಿನ್ ಕುಮಾರ್ ಕಟೀಲ್ ಮಧ್ಯಾಹ್ನ 3 ಗಂಟೆಗೆ ನಗರಕ್ಕೆ ಆಗಮಿಸಲಿದ್ದಾರೆ.
ಬಿಜೆಪಿ ಕೋರ್ ಕಮಿಟಿಯಿಂದ 20 ಹೆಸರುಗಳು ಶಿಫಾರಸು
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಬಿಜೆಪಿ ರಾಜ್ಯ ಕೋರ್ ಕಮಿಟಿಯಿಂದ ಕೇಂದ್ರೀಯ ಚುನಾವಣಾ ಸಮಿತಿಗೆ 20 ಹೆಸರುಗಳು ಶಿಫಾರಸು ಮಾಡಲಾಗಿದೆ. ನಾಲ್ಕು ಸ್ಥಾನಗಳಿಗೆ 1:5 ಅನುಪಾತದಲ್ಲಿ 20 ಹೆಸರುಗಳು ಶಿಫಾರಸು ಮಾಡಲಾಗಿದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೆಸರು ಕೂಡಾ ಶಿಫಾರಸು ಮಾಡಲಾಗಿದೆ. ವರಿಷ್ಠರು ಯಾವುದೇ ಆಕ್ಷೇಪ ಎತ್ತದೇ ಇದ್ದರೆ ವಿಜಯೇಂದ್ರಗೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎಂ. ರಾಜೇಂದ್ರ, ಎಂ.ಬಿ. ನಂದೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ತೆಂಗಿನಕಾಯಿ, ಸಿದ್ಧರಾಜು, ಎಸ್.ಸಿ. ಮೋರ್ಛಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಓಬಿಸಿ ಮೋರ್ಛಾ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರ ಬಾಬು, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ, ಹಾಲಿ ಎಂಎಲ್ಸಿ ಲಕ್ಷ್ಮಣ ಸವದಿ ಸೇರಿದಂತೆ 20 ಸಂಭಾವ್ಯ ಅಭ್ಯರ್ಥಿಗಳು ಶಿಫಾರಸಿನಲ್ಲಿದ್ದಾರೆ. ಸಾಮಾಜಿಕ ನ್ಯಾಯದಡಿ ಟಿಕೆಟ್ ಹಂಚಿಕೆ ಹೈಕಮಾಂಡ್ ಉದ್ದೇಶವಾಗಿದ್ದು, 20 ಸಂಭಾವ್ಯ ಅಭ್ಯರ್ಥಿಗಳ ಪೈಕಿ 4 ಅಭ್ಯರ್ಥಿಗಳನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ.
ವಿಧಾನ ಪರಿಷತ್ 4 ಸ್ಥಾನಗಳಿಗೆ ಜೂನ್ 15ಕ್ಕೆ ಮತದಾನ
ವಿಧಾನ ಪರಿಷತ್ನ ನಾಲ್ಕು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಪದವೀಧರ ಕ್ಷೇತ್ರಗಳ ಎರಡು ಮತ್ತು ಶಿಕ್ಷಕರ ಕ್ಷೇತ್ರಗಳ ಎರಡು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರ, ವಾಯವ್ಯ ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 19ರಂದು ಪರಿಷತ್ ಚುನಾವಣೆಯ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಮೇ 26 ಕೊನೆಯ ದಿನ. ಜೂನ್ 13ರಂದು ಮತದಾನ ಮತ್ತು ಜೂನ್ 15ರಂದು ಮತ ಎಣಿಕೆ ನಡೆಯಲಿದೆ. ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಹನುಮಂತ ನಿರಾಣಿ, ಶ್ರೀಕಂಠೇಗೌಡ ಮತ್ತು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಸವರಾಜ ಹೊರಟ್ಟಿ, ಅರುಣ ಶಹಾಪುರ ಅವಧಿ ಜುಲೈ 7ಕ್ಕೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:37 am, Mon, 16 May 22