Bangarpet: ಕೂಲಿಕಾರರು ಸಿಗದಿದ್ದಾಗ ಇದೇ ರೈತರ ಮಾಸ್ಟರ್ ಪ್ಲಾನ್! ಕಳೆ ತೆಗೆಯಲು ಸಿಂಪಲ್ ಯಂತ್ರ
ರೈತರು ಇಂದಿನ ದುಬಾರಿ ದುನಿಯಾದಲ್ಲಿ ಕೃಷಿ ಮಾಡಲಾಗದೆ ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಆದರೆ ಸುಜಾತಮ್ಮ ಹಾಗೂ ಕುಟುಂಬಸ್ಥರು ಮಾತ್ರ ಬದುಕಿಗಾಗಿ ಸವಾಲಿನ ಕೃಷಿ ಮಾಡುತ್ತಿದ್ದಾರೆ. ಹಾಗಾಗಿ ಸರ್ಕಾರ ಕೃಷಿ ಮಾಡುವ ರೈತರಿಗೆ ಸುಲಭ ಹಾಗೂ ರಿಯಾಯಿತಿ ದರದಲ್ಲಿ ಕೃಷಿ ಸಲಕರಣೆಗಳನ್ನು ನೀಡುವ ಮೂಲಕ ಸಣ್ಣ ಕೃಷಿಕರಿಗೆ ನೆರವಿಗೆ ಬಂದಾಗ ಕೃಷಿ ಮಾಡಿ ಬದುಕಬೇಕೆಂದುಕೊಂಡಿರುವ ಇನ್ನು ಅದೆಷ್ಟೋ ಜನರಿಗೆ ನೆರವು ನೀಡಿದಂತಾಗುತ್ತದೆ.
ವಿಶ್ವದಲ್ಲಿ ಕೃಷಿ ಹಾಗೂ ತಂತ್ರಜ್ಞಾನ ಅಂದ್ರೆ ಮೊದಲು ನೆನಪಾಗೋದೆ ಇಸ್ರೇಲ್ ರಾಷ್ಟ್ರ, ಇನ್ನು ನಮ್ಮ ರಾಜ್ಯದಲ್ಲಿ ಕೃಷಿ ಮತ್ತು ತಂತ್ರಜ್ಞಾನ ಅಂದರೆ ಮೊದಲು ನೆನಪಾಗುವುದು ಬರದನಾಡು ಕೋಲಾರ! ಯಾಕಂದ್ರೆ ಕಷ್ಟಪಟ್ಟು ಕೃಷಿ ಮಾಡುವ ಇಲ್ಲಿನ ರೈತರು ಕೃಷಿಯಲ್ಲಿ ತಮ್ಮದೇ ಆದ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಆಗಾಗ ಗಮನ ಸೆಳೆಯುತ್ತಾರೆ.
ರಸ್ತೆಯಲ್ಲಿ ಹೋಗುತ್ತಿದ್ದಾಗ ಗಮನ ಸೆಳೆದ ಕೃಷಿ ಚಟುವಟಿಕೆ! ಆವತ್ತು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಗಡಿಭಾಗದ ಬಲಮಂದೆ ಗ್ರಾಮದಲ್ಲಿ ರಾಜಕೀಯ ಕಾರ್ಯಕ್ರಮವೊಂದಕ್ಕೆ ಹೋಗಿ ಬೈಕ್ನಲ್ಲಿ ವಾಪಸ್ ಬರುತ್ತಿದ್ದೆವು. ಈ ವೇಳೆ ಬಂಗಾರಪೇಟೆ ತಾಲ್ಲೂಕು ಎಳೆಸಂದ್ರ ಗ್ರಾಮದ ಬಳಿ ಹೊಲದಲ್ಲಿ ಕುಟುಂಬವೊಂದು ಕೃಷಿ ಚಟುವಟಿಕೆಯಲ್ಲಿ ತೊಡಗಿತ್ತು. ಅತ್ತ ತಿರುಗಿ ನೋಡಿದ ಪ್ರತಿಯೊಬ್ಬರಿಗೂ ಅದು ಗಮನ ಸೆಳೆಯುವಂತಿತ್ತು. ಯಾಕಂದ್ರೆ ಅಲ್ಲಿ ಒಂದು ಸೈಕಲ್ ಚಕ್ರವನ್ನು ಬಳಸಿಕೊಂಡು ಅದಕ್ಕೊಂದು ಪುಟ್ಟ ನೇಗಿಲು ಕಟ್ಟಿಕೊಂಡು ಹೊಲದಲ್ಲಿ ಕಳೆ ತೆಗೆಯುತ್ತಿರುವ ಮಹಿಳೆ, ಅವರಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿರುವ ಕುಟುಂಬಸ್ಥರು.
ಇಂಥ ದೃಶ್ಯ ಎಳೆಸಂದ್ರ ಗ್ರಾಮದ ಬಳಿ ಕಂಡು ಬಂದಿತ್ತು. ಕುತೂಹಲ ತಡೆಯಲಾಗದೆ ಅಲ್ಲಿ ಹೋಗಿ ನೋಡಿದಾಗ ಎಳೆಸಂದ್ರ ಗ್ರಾಮದ ರೈತ ಮಹಿಳೆ ಸುಜಾತಮ್ಮ ಅನ್ನೋರು ತಮ್ಮ ಮೂರು ಎಕರೆ ಭೂಮಿಯಲ್ಲಿ ಸವಾಲಿನ ಕೃಷಿ ಮಾಡುತ್ತಿದ್ದರು. ಸುಮ್ಮನೆ ಅವರನ್ನು ಮಾತಿಗೆ ಎಳೆದಾಗ ಅವರು ಹೇಳಿದ್ದು ಇಷ್ಟೇ… ಇವತ್ತಿನ ಕಾಲದಲ್ಲಿ ಕೂಲಿಯವರು ಸಿಗೋದೆ ಕಷ್ಟ, ಸಿಕ್ಕಿದರೂ ಅವರು ಕೇಳಿದಷ್ಟು ಹಣ ಕೊಡಲು ಸಾಧ್ಯವಿಲ್ಲ. ಹಾಗಾಗಿ ನಾವು ನಮ್ಮ ಕುಟುಂಬಸ್ಥರೇ ನಮ್ಮ ಮೂರು ಎಕರೆ ಭೂಮಿಯಲ್ಲಿ ಹಾಕಲಾಗಿದ್ದ ಎಲೆಕೋಸಿನ ನಿರ್ವಹಣೆ ಮಾಡುತ್ತಿದ್ದೇವೆ. ಡ್ರಿಪ್ ಮೂಲಕ ನೀರು ಹಾಯಿಸುವುದು ಜೊತೆಗೆ ಕಳೆ ತೆಗೆಯಲು ಕೂಲಿಯವರಿಗೆ ಹಣ ಕೊಡಲು ಸಾಧ್ಯವಾಗದೆ, ಸುಜಾತಮ್ಮ ಹಾಗೂ ಅವರ ಮಕ್ಕಳು ಸೇರಿ ಒಂದು ಹೊಸದೊಂದು ಯಂತ್ರವನ್ನೇ ಮಾಡಿಕೊಂಡಿದ್ದೇವೆ ಅಂದರು.
ಎಲೆಕೂಸು ಬೆಳೆಯಲ್ಲಿ ಕಳೆ ತೆಗೆಯಲು ವಿನೂತನ ಆವಿಷ್ಕಾರ ಮಾಡಿದ ರೈತ..! ಸುಜಾತಮ್ಮ ಹಾಗೂ ಅವರ ಮಕ್ಕಳು ಸೇರಿಕೊಂಡು ಕಳೆ ತೆಗೆಯಲು ಸುಲಭ ಹಾಗೂ ಸಿಂಪಲ್ ಆಗಿರುವ ಒಂದು ಯಂತ್ರವನ್ನು ಕಂಡು ಹಿಡಿದಿದ್ದರು, ಅದು ಒಂದು ಸೈಕಲ್ ಚಕ್ರಕ್ಕೆ ಎರಡು ಕಬ್ಬಿಣದ ರಾಡ್ ಗಳನ್ನು ಸೇರಿಸಿಕೊಂಡು ಅದಕ್ಕೆ ಕಳೆ ಅಗೆಯಲು ಸಹಾಯಕವಾಗುವ ಹಾಗೂ ಉಳುಮೆ ಮಾಡುವಂತೆ ಮಾಡಿ ಕಳೆಯನ್ನು ಸುಲಭವಾಗಿ ತೆಗೆಯುವಂತೆ ಮಾಡಲಾಗಿತ್ತು.
ಗಂಟೆಗಟ್ಟಲೆ ಹೊಲದಲ್ಲಿ ಕೂತು ಕಳೆ ತೆಗೆಯುವ ಬದಲು ಸಿಂಪಲ್ ಆಗಿ ಒಂದು ಒಂದು ಒಂದುವರೆ ಗಂಟೆಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ಕಳೆ ತೆಗೆಯುವಂತೆ ಮಾಡಲಾಗಿತ್ತು. ತಳ್ಳೊಗಾಡಿ ರೀತಯಲ್ಲಿ ಅದನ್ನು ಹೊಲದ ಸಾಲುಗಳ ಮಧ್ಯೆ ಉರುಳಿಸಿಕೊಂಡು ಹೋದರೆ ಸಾಕು ಅದು ತಂತಾನೆ ಕಳೆ ಕಿತ್ತು ಬರುತ್ತಿತ್ತು, ನೆಲ ಗಟ್ಟಿ ಇದ್ದರೆ ಅದಕ್ಕೊಂದು ಹಗ್ಗ ಕಟ್ಟಿಕೊಂಡು ಮುಂದೆ ಒಬ್ಬರು ಎಳೆದುಕೊಂಡು ಹೋಗುತ್ತಿದ್ದರೆ, ಹಿಂದೆ ಸೈಕಲ್ ಚಕ್ರಕ್ಕೆ ಅಳವಡಿಸಿದ್ದ ಪುಟ್ಟ ನೇಗಿಲನ್ನು ಹಿಡಿದುಕೊಂಡರೆ ಸಾಕು ಕಳೆ ಸರಾಗವಾಗಿ ತೆಗೆದು ಹಾಕುತ್ತಿತ್ತು.
ಸಣ್ಣ ರೈತರಿಗೆ ಸಿಗುತ್ತಿಲ್ಲ ಕೃಷಿ ಸಲಕರಣೆಗಳು ಅನ್ನೋದು ಸುಜಾತಮ್ಮ ಕೊರಗು..! ಸುಜಾತಮ್ಮ ಸೇರಿ ತಮ್ಮ ಕುಟುಂಬದಲ್ಲಿರುವ ತನ್ನ ಮಗ ಹಾಗೂ ಪತಿ ಎಲ್ಲರೂ ಕೃಷಿಯಲ್ಲಿ ಕೆಲಸ ಮಾಡುತ್ತಾರೆ ಇವರ ಜೊತೆಗೆ ಒಬ್ಬರು ಅಥವಾ ಇಬ್ಬರನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ತಮ್ಮ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಸದ್ಯ ಕಳೆ ನಾಶ ಮಾಡಲು ಔಷದಿ ಹೊಡೆದರೆ ಔಷದಿಗೆ ಹಣ ಕೊಡಬೇಕು ಜೊತೆಗೆ ಬೆಳೆಗೆ ವಿಷ ಉಣಿಸಿ ಭೂಮಿಯು ಹಾಳಾಗುತ್ತದೆ ಎಂದು ಬಾವಿಸಿರುವ ಸುಜಾತಮ್ಮ, ತಾನು ಹಾಗೂ ತಮ್ಮ ಮಗನ ಸಹಾಯದಿಂದ ಮಾಡಿದ ಈ ಯಂತ್ರದ ಸಹಾಯದಿಂದ ತಕ್ಕ ಮಟ್ಟಿಗೆ ಕಳೆ ತೆಗೆದಿದ್ದಾರೆ.
ಆದರೆ ಇಂಥಹ ಎಷ್ಟೋ ಜನ ರೈತರು ಇಂದಿನ ದುಬಾರಿ ದುನಿಯಾದಲ್ಲಿ ಕೃಷಿ ಮಾಡಲಾಗದೆ ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಆದರೆ ಸುಜಾತಮ್ಮ ಹಾಗೂ ಕುಟುಂಬಸ್ಥರು ಮಾತ್ರ ಬದುಕಿಗಾಗಿ ಸವಾಲಿನ ಕೃಷಿ ಮಾಡುತ್ತಿದ್ದಾರೆ. ಹಾಗಾಗಿ ಸರ್ಕಾರ ಕೃಷಿ ಮಾಡುವ ರೈತರಿಗೆ ಸುಲಭ ಹಾಗೂ ರಿಯಾಯಿತಿ ದರದಲ್ಲಿ ಕೃಷಿ ಸಲಕರಣೆಗಳನ್ನು ನೀಡುವ ಮೂಲಕ ಸಣ್ಣ ಕೃಷಿಕರಿಗೆ ನೆರವಿಗೆ ಬಂದಾಗ ಕೃಷಿ ಮಾಡಿ ಬದುಕಬೇಕೆಂದುಕೊಂಡಿರುವ ಇನ್ನು ಅದೆಷ್ಟೋ ಜನರಿಗೆ ನೆರವು ನೀಡಿದಂತಾಗುತ್ತದೆ.
ಒಟ್ಟಾರೆ ಎಷ್ಟೋ ಜನರಿಗೆ ಕೃಷಿ ಮಾಡಬೇಕೆಂಬ ಬಯಕೆ ಇರುತ್ತದೆ ಮತ್ತೆ ಎಷ್ಟೋ ಜನರಿಗೆ ಕೃಷಿ ಮಾಡದೇ ಬೇರೆ ದಾರಿಯೇ ಇರೋದಿಲ್ಲ, ಇನ್ನು ಕೆಲವು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಕೃಷಿ ಮಾಡುತ್ತಾರೆ. ಹೀಗೆ ವಿವಿದ ದೃಷ್ಟಿಕೋನದಲ್ಲಿ ಕೃಷಿ ಮಾಡುತ್ತಾ ತಾವು ಬದುಕಿ ನಾಲ್ಕು ಜನರಿಗೆ ಅನ್ನ ಕೊಡುವ ರೈತರಿಗೆ ಸರ್ಕಾರ ಸೂಕ್ತ ಕೃಷಿ ಸಲಕರಣೆಗಳನ್ನು ಒದಗಿಸಿದ್ರೆ ಮತ್ತಷ್ಟು ಕೃಷಿ ಪರಿಣಾಮಕಾರಿಯಾಗಿ ಬೆಳೆವಣಿಗೆ ಯಾಗುತ್ತದೆ. ಒಂದು ವೇಳೆ ಸರ್ಕಾರ ಕೃಷಿ ಸಲಕರಣೆಗಳನ್ನು ಒದಗಿಸದೆ ನಿರ್ಲ್ಯಕ್ಷ ಮಾಡಿದರೆ ಸುಜಾತಮ್ಮರ ಕುಟುಂಬ ಮಾಡಿರುವ ರೀತಿಯಲ್ಲಿ ಇಂಥ ಹತ್ತು ಹಲವು ಸಲಕರಣೆಗಳು ಇನ್ನು ಹೆಚ್ಚಾಗಿ ಅನ್ವೇಷಣೆಗೊಳ್ಳುತ್ತದೆ ಹೊರತು ಕೃಷಿ ಮಾತ್ರ ನಿಲ್ಲೋದಿಲ್ಲ… – ರಾಜೇಂದ್ರ ಸಿಂಹ