‘ಬಡವರಾಗಿ ಹುಟ್ಟಿದ್ದೇ ತಪ್ಪಾ?’: ಇಡಿ ದಾಳಿ ಬೆನ್ನಲ್ಲೇ ಕಣ್ಣೀರಿಟ್ಟ ಪಶುವೈದ್ಯಾಧಿಕಾರಿ ಅಭ್ಯರ್ಥಿ ಸುಗುರೇಶ್ ತಾಯಿ
KPSC Scam News: ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ತಮ್ಮ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ನಿನ್ನೆ ಬರೋಬ್ಬರಿ 15ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಆದರೆ, ಇದೇ ದಾಳಿಯ ಭಾಗವಾಗಿ ಪಶುವೈದ್ಯಾಧಿಕಾರಿ ಅಭ್ಯರ್ಥಿ ಸುಗುರೇಶ್ ಅವರ ಬಡ ಕುಟುಂಬಕ್ಕೂ ಈಗ ಇಡಿ ಸಂಕಷ್ಟ ಎದುರಾಗಿದ್ದು, ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ರಾಯಚೂರು, ಆಗಸ್ಟ್ 19: ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ (KPSC Scam) ನಡೆದಿದೆ ಎನ್ನುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳ ತನಿಖೆ ಚುರುಕುಗೊಂಡಿದೆ. ನಿನ್ನೆಯಷ್ಟೇ ಇಡಿ ಅಧಿಕಾರಿಗಳ ತಂಡ ರಾಯಚೂರು (raichur), ಕಲಬುರಗಿ, ಬೆಂಗಳೂರು ಸೇರಿ 15ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ, ಮಹತ್ವದ ದಾಖಲೆಗಳು ಮತ್ತು ಸಾಕ್ಷಗಳನ್ನ ಪಡೆದಿದ್ದರು. ಇನ್ನು ಈ ದಾಳಿಗೆ ಸಂಬಂಧಿಸಿದಂತೆ ರಾಯಚೂರಿನ ಅಭ್ಯರ್ಥಿ ಸುಗುರೇಶ್ ಪೋಷಕರು ಕಣ್ಣಿರಿಟ್ಟಿದ್ದಾರೆ. ನಮಗೂ ಪ್ರಕರಣಕ್ಕೂ ಸಂಬಂಧಿವಿಲ್ಲ ಅಂತ ಗೋಳಾಡಿದ್ದಾರೆ.
ತಗಡಿನ ಶೆಡ್ ಮನೆಯಲ್ಲಿ ವಾಸ; ಆತಂಕದಲ್ಲಿ ಪೋಷಕರು
ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ED ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಹಂತಹಂತವಾಗಿ ತನಿಖೆ ಆರಂಭಿಸಿದೆ. ರಾಯಚೂರು ಸೇರಿದಂತೆ ಹಲವು ಕಡೆಗಳಲ್ಲಿ ನಿನ್ನೆ ED ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ದಾಳಿಗೆ ಸಂಬಂಧಿಸಿದ ಸೀಜರ್ ಮೆಮೋ ಟಿವಿ9ಗೆ ಲಭ್ಯವಾಗಿದ್ದು, ಮಹತ್ವದ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ನಿವಾಸಗಳ ಮೇಲೆ ಇಡಿ ದಾಳಿ: ಸತತ 22 ಗಂಟೆಗಳಿಂದ ನಡೆಯುತ್ತಿರುವ ಪರಿಶೀಲನೆ
ಪಶುವೈದ್ಯಾಧಿಕಾರಿಯಾಗಿ ನೇಮಕಗೊಂಡಿರುವ ಸುಗುರೇಶ್ ಹಾಗೂ ಆತನ ಕುಟುಂಬಕ್ಕೆ ED ಸಂಕಷ್ಟ ಎದುರಾಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಶಾವಂತಗೇರಾ ಗ್ರಾಮದ ಹಳೆಯ ಟಿನ್ ಶೆಡ್ ರೀತಿಯ ಮನೆಯಲ್ಲೇ ಸುಗುರೇಶ್ ಕುಟುಂಬ ವಾಸವಿದೆ. ನಿನ್ನೆ ನಡೆದ ED ದಾಳಿ ಬಳಿಕ ಕುಟುಂಬಸ್ಥರು ಆತಂಕದಲ್ಲಿದ್ದಾರೆ. ಟಿವಿ9 ಕ್ಯಾಮೆರಾ ಎದುರು ಸುಗುರೇಶ್ ತಾಯಿ ಕಣ್ಣೀರಿಟ್ಟಿದ್ದಾರೆ.
ನಮಗೂ ಶಿವಶಂಕ್ರಪ್ಪ ಸಾಹುಕಾರ್‌ಗೂ ಯಾವುದೇ ಸಂಬಂಧವಿಲ್ಲ
ದಾಳಿ ಸಂಬಂಧಿ ಅಭ್ಯರ್ಥಿ ಸುಗುರೇಶ್ ತಾಯಿ ಅಕ್ಷರಶಃ ಮನನೊಂದಿದ್ದಾರೆ. ‘ನಾವು ಬಡವರಾಗಿ ಹುಟ್ಟಿದ್ದೇ ತಪ್ಪಾ. ನಮಗೂ ಶಿವಶಂಕ್ರಪ್ಪ ಸಾಹುಕಾರ್‌ಗೂ ಯಾವುದೇ ಸಂಬಂಧವಿಲ್ಲ’ ಎಂದು ಕಣ್ಣೀರಿಟ್ಟಿದ್ದಾರೆ.
ತಂದೆಯ ಮೊಬೈಲ್ ಜಪ್ತಿ; ಬ್ಯಾಂಕ್ ವಹಿವಾಟಿನ ಮಾಹಿತಿ ಸಂಗ್ರಹ
ಇತ್ತ ಇಡಿ ಅಧಿಕಾರಿಗಳು ದಾಳಿ ವೇಳೆ ಸುಗುರೇಶ್ ಪೋಷಕರಿಂದ ಇಂಚಿಂಚು ಮಾಹಿತಿ ಪಡೆದಿದ್ದಾರೆ. ಅಧಿಕಾರಿಗಳು ಸುಗುರೇಶ್‌ಗೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಬ್ಯಾಂಕ್ ವಹಿವಾಟು, ಜಮೀನು ಹಾಗೂ ಆಸ್ತಿ-ಪಾಸ್ತಿಗಳ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ. ಇನ್ನು, ದಾಳಿ ವೇಳೆ ಸುಗುರೇಶ್ ಮನೆಯಲ್ಲಿ ಇರಲಿಲ್ಲ ಎಂದು ED ಅಧಿಕಾರಿಗಳ ಸೀಜರ್ ಮೆಮೋದಲ್ಲೇ ಉಲ್ಲೇಖಿಸಲಾಗಿದೆ. ಮೆಮೋನಲ್ಲಿ, ಸುಗುರೇಶ್ ತಂದೆ ಸತೀಶ್ ಬಾಬು ಅವರ ಮೊಬೈಲ್ ಫೋನ್ ಅನ್ನು ED ಅಧಿಕಾರಿಗಳು ಜಪ್ತಿ ಮಾಡಿರೋದಾಗಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕೆಪಿಎಸ್ಸಿ ಅಕ್ರಮ ಪ್ರಕರಣ: ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ 21 ಕಡೆ ಇಡಿ ಮೆಗಾ ರೇಡ್!
ಇತ್ತ PMLA, 2002ರ ಸೆಕ್ಷನ್ 17ರ ಅಡಿಯಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಇದೇ ಕಾಯ್ದೆಯಡಿ ಸತೀಶ್ ಬಾಬು ಅವರ ಹೇಳಿಕೆಯನ್ನೂ ED ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಇತ್ತ ಸುಗುರೇಶ್ ಕುಟುಂಬಸ್ಥರು ಸಕಾರಾತ್ಮಕವಾಗಿ ಇಡಿ ಅಧಿಕಾರಿಗಳಿಗೆ ಸ್ಪಂದಿಸಿದ್ದಾರೆ. ಸದ್ಯ ಇಡಿ ಅಧಿಕಾರಿಗಳ ತನಿಖೆ ಮುಂದುವರೆದಿದ್ದು, ಮುಂದೆ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




