ಎಫ್ಡಿಎ ನಿಗೂಢ ಅತ್ಮಹತ್ಯೆ ಪ್ರಕರಣ; ಕೆದಕಿದಷ್ಟು ಬಯಲಾಗುತ್ತಿದೆ ಕೋಟಿ ಕೋಟಿ ಅಕ್ರಮ
2016 ನೇ ಸಾಲಿನಲ್ಲಿ ಆರೋಪಿ ತನ್ನ ಅತ್ತೆಯ ಖಾತೆಗೆ ರೂಪಾಯಿ 18,47,518 ಗಳನ್ನು ಜಮಾ ಮಾಡಿದ್ದಾರೆ. 2017 ನೇ ಸಾಲಿನಲ್ಲಿ ತನ್ನ ಅತ್ತೆಯ ಖಾತೆಗೆ ರೂಪಾಯಿ 20 ಲಕ್ಷಗಳನ್ನು ಜಮಾ ಮಾಡಿದ್ದಾರೆ. ಹಾಗೂ 2018 ನೇ ಸಾಲಿನಲ್ಲಿ ಆರೋಪಿ ತನ್ನ ಅತ್ತೆಯ ಖಾತೆಗೆ ರೂಪಾಯಿ 5,36,834 ಗಳನ್ನು ಜಮಾ ಮಾಡಿದ್ದು 2020 ನೇ ಸಾಲಿನಲ್ಲಿ ತನ್ನ ಹೆಂಡತಿ ಖಾತೆಗೆ ರೂಪಾಯಿ 20 ಲಕ್ಷಗಳನ್ನು ಕೊವಿಡ್ ಸಮಯದಲ್ಲಿ ನಕಲಿ ಸಹಿ ಮಾಡಿ ಜಮಾ ಮಾಡಿದ್ದಾನೆ.
ರಾಯಚೂರು: ಜಿಲ್ಲೆಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಕಾಶ್ ಬಾಬು ನಿಗೂಢ ಅತ್ಮಹತ್ಯೆ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಹಾಯಕ ಆಯುಕ್ತರ ನಕಲಿ ಸಹಿ ಮಾಡಿ ಸುಮಾರು ಒಂದು ಕೋಟಿಗೂ ಅಧಿಕ ಹಣ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೊಟಕ್ಕೆ ಸಾಬೀತಾಗಿದೆ. ಹೀಗಾಗಿ ಮೃತ ಎಫ್ಡಿಎ ವಿರುದ್ದ ಸಹಾಯಕ ಆಯುಕ್ತ ಸಂತೋಷಕುಮಾರ್ ಪಶ್ಚಿಮ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ಸರ್ಕಾರದ ಹಣ ದೋಚಿದ್ದೆಷ್ಟು? ಭೂಸ್ವಾಧೀನ, ದೇವಸ್ಥಾನ, ವಿಪತ್ತು ನಿರ್ವಹಣೆ ಮುಂತಾದ ಅಕೌಂಟ್ಗಳನ್ನು ನಿರ್ವಹಿಸುವಲ್ಲಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಸಂಶಯದ ಮೇಲೆ ಸಹಾಯಕ ಆಯುಕ್ತರು ಆಂತರಿಕವಾಗಿ ವಿಶೇಷ ಲೆಕ್ಕಪರಿಶೋಧನೆಯನ್ನು ಮಾಡಲಾಗಿದ್ದು, ಪ್ರಾಥಮಿಕ ತನಿಖೆ ವೇಳೆಯಲ್ಲಿ 2016ನೇ ಸಾಲಿನಿಂದಲೂ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡು ತನ್ನ ಅತ್ತೆ ಮಾವ ಮತ್ತು ಹೆಂಡತಿ ಹೆಸರಿನಲ್ಲಿ ಖಾತೆಗಳನ್ನು ತೆರೆದು ನಕಲು ಸಹಿ ಮಾಡಿ ಹಣ ವರ್ಗಾವಣೆ ಮಾಡಿಕೊಂಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸದರಿ ಹಣ ಸರ್ಕಾರದ ಹಣ ದುರುಪಯೋಗದ ಕಾರಣಕ್ಕಾಗಿ ಅವರ ವಿರುದ್ಧ ಸೈಬರ್ ಅಪರಾಧ, ಆರ್ಥಿಕ ಅಪರಾಧ ಪೊಲೀಸ್ ಠಾಣೆ ರಾಯಚೂರು ಇಲ್ಲಿ ಪ್ರಕರಣ ಸಂಖ್ಯೆ 14/2021 ರ ಮೂಲಕ ಭಾರತೀಯ ದಂಡ ಸಂಹಿತೆ ಸೆಕ್ಷನ್ 409, 419, 465, 468, 470, 471, 417, 420 ಅಡಿಯಲ್ಲಿ ಸಹಾಯಕ ಆಯುಕ್ತರು ದೂರು ದಾಖಲಿಸಿದ್ದಾರೆ.
ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದ್ದು 2016 ನೇ ಸಾಲಿನಲ್ಲಿ ಆರೋಪಿ ತನ್ನ ಅತ್ತೆಯ ಖಾತೆಗೆ ರೂಪಾಯಿ 18,47,518 ಗಳನ್ನು ಜಮಾ ಮಾಡಿದ್ದಾರೆ. 2017 ನೇ ಸಾಲಿನಲ್ಲಿ ತನ್ನ ಅತ್ತೆಯ ಖಾತೆಗೆ ರೂಪಾಯಿ 20 ಲಕ್ಷಗಳನ್ನು ಜಮಾ ಮಾಡಿದ್ದಾರೆ. ಹಾಗೂ 2018 ನೇ ಸಾಲಿನಲ್ಲಿ ಆರೋಪಿ ತನ್ನ ಅತ್ತೆಯ ಖಾತೆಗೆ ರೂಪಾಯಿ 5,36,834 ಗಳನ್ನು ಜಮಾ ಮಾಡಿದ್ದು 2020 ನೇ ಸಾಲಿನಲ್ಲಿ ತನ್ನ ಹೆಂಡತಿ ಖಾತೆಗೆ ರೂಪಾಯಿ 20 ಲಕ್ಷಗಳನ್ನು ಕೊವಿಡ್ ಸಮಯದಲ್ಲಿ ನಕಲಿ ಸಹಿ ಮಾಡಿ ಜಮಾ ಮಾಡಿದ್ದಾನೆ. 2021 ನೇ ಸಾಲಿನಲ್ಲಿ ಆರೋಪಿಯು ತನ್ನ ಅತ್ತೆ ಮಾವ ಮತ್ತು ಹೆಂಡತಿ ಖಾತೆಗೆ ಬೇರೆಬೇರೆಯಾಗಿ ತಲಾ 9 ಲಕ್ಷ ರೂಪಾಯಿ ಚಿಲ್ಲರೆಯಂತೆ ಒಟ್ಟು ಖಾತೆಗೆ ರೂಪಾಯಿ 28,78,260ಗಳನ್ನು ತಾನು ನಾಪತ್ತೆಯಾಗುವ ಮುಂಚೆ ಒಂದು ವಾರದ ಹಿಂದೆ ನಕಲು ಸಹಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣವನ್ನು ದುರ್ಬಳಕೆ ಮಾಡಿಕೊಂಡು ಜಮಾ ಮಾಡಿದ್ದಾನೆ.
ಸದ್ಯ ಇಷ್ಟು ಅಕ್ರಮದ ಬಗ್ಗೆ ಮಾಹಿತಿ ಸಿಕ್ಕಿದ್ದು ಹೆಚ್ಚಿನ ವಿವರಣೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು ನಿಯೋಜಿಸಿರುವ ವಿಶೇಷ ಲೆಕ್ಕಪರಿಶೋಧನಾ ತಂಡದ ತನಿಖೆಯ ನಂತರ ಮತ್ತು ಪೊಲೀಸ್ ವಿಚಾರಣೆಯ ನಂತರ ಬಯಲಾಗಲಿದೆ.
ಇದನ್ನೂ ಓದಿ: ರಾಯಚೂರಿನಲ್ಲಿ ನಾಪತ್ತೆಯಾಗಿ ಬೆಂಗಳೂರಿನಲ್ಲಿ ಶವವಾಗಿ ಪತ್ತೆ; ಎಫ್‌ಡಿಎ ಸಾವಿಗೆ ಸಿಕ್ತು ಟ್ವಿಸ್ಟ್
Published On - 11:36 am, Fri, 3 September 21