AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಧನೂರಿನಲ್ಲಿ ಕಾಂಗ್ರೆಸ್ ಶಾಸಕ, ಎಂಎಲ್​ಸಿ ಕಿತ್ತಾಟ: ತಾತ ಮೊಮ್ಮಗನ ಪೈಪೋಟಿ ತಾರಕಕ್ಕೆ

ಇಬ್ಬರು ಕಾಂಗ್ರೆಸ್​ನ ಕಟ್ಟಾಳುಗಳ. ಒಬ್ಬರು ಹಿರಿಯ ಶಾಸಕರಾಗಿದ್ದರೆ, ಮತ್ತೊಬ್ಬರು ವಿಧಾನಪರಿಷತ್ ಸದ್ಯರು. ಅಚ್ಚರಿ ಅಂದ್ರೆ ಇಬ್ಬರು ಸಂಬಂಧಿಗಳು ಅಜ್ಜ, ಮೊಮ್ಮಗ. ಆದ್ರೆ, ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಇದ್ದು, ರಾಜಕೀಯ ವಿಚಾರದಲ್ಲಿ ಪರಸ್ಪರ ಕಿತ್ತಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸಿಂಧನೂರು ನಗರಸಭೆ ಪೌರಾಯುಕ್ತರನ್ನು ಒಬ್ಬರು ಅಮಾನತು ಮಾಡಿಸಿದ್ದರೆ, ಇನ್ನೊಬ್ಬರು ಈ ಅಮಾನತು ಆದೇಶವನ್ನು ರದ್ದುಪಡಿಸಿದ್ದಾರೆ.

ಸಿಂಧನೂರಿನಲ್ಲಿ ಕಾಂಗ್ರೆಸ್ ಶಾಸಕ, ಎಂಎಲ್​ಸಿ ಕಿತ್ತಾಟ: ತಾತ ಮೊಮ್ಮಗನ ಪೈಪೋಟಿ ತಾರಕಕ್ಕೆ
ಬಸನಗೌಡ ಬಾದರ್ಲಿ, ಹಂಪನಗೌಡ ಬಾದರ್ಲಿ
ಭೀಮೇಶ್​​ ಪೂಜಾರ್
| Edited By: |

Updated on: May 18, 2025 | 5:28 PM

Share

ರಾಯಚೂರು, (ಮೇ 18): ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದ ರಾಜಕೀಯವೇ ವಿಚಿತ್ರ, ವೈಶಿಷ್ಟ್ಯ. ಕಾಂಗ್ರೆಸ್​ ಹಿರಿಯ ನಾಯಕ ಹಂಪನಗೌಡ ಬಾದರ್ಲಿ ಸದ್ಯ ಅವರು ಹಾಲಿ ಶಾಸಕರು. ಮತ್ತೊಂದೆಡೆ ಇವರ ಮೊಮ್ಮಗ ಬಸನಗೌಡ ಬಾದರ್ಲಿ ಸಹ ವಿಧಾನಪರಿಷತ್ ಸದಸ್ಯರು. ಆದ್ರೆ, ರಾಜಕೀಯ ವಿಚಾರದಲ್ಲಿ ಇಬ್ಬರ ನಡುವೆ ಕಿತ್ತಾಟವಾಗಿದ್ದು, ಇದೀಗ ಆಡಳಿತ ವ್ಯವಸ್ಥೆಯಲ್ಲೂ ಸಹ ಪೈಪೋಟಿಗಿಳಿದಿದ್ದಾರೆ. ಇದರಿಂದ ಕಾಂಗ್ರೆಸ್​ ಕಾರ್ಯಕರ್ತರು ಯಾರ ಹಿಂದೆ ಹೋಗಬೇಕೆಂದು ಗೊಂದಲಕ್ಕೆ ಸಿಲುಕಿದ್ದಾರೆ. ಅಲ್ಲದೇ ಶಾಸಕರು ಒಂದು ಸೂಚನೆ ಕೊಟ್ಟರೆ, ವಿಧಾನಪರಿಷತ್ ಸದಸ್ಯರು ಇನ್ನೊಂದು ಹೇಳುತ್ತಾರೆ. ಹೀಗಾಗಿ ಯಾರ ಮಾತು ಕೇಳಬೇಕೆನ್ನುವುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ. ಅದರಂತೆ ಇದೀಗ ನಗರಸಭೆ ಪೌರಾಯುಕ್ತ ಮಂಜುನಾಥ್ ಗುಡುದೂರು ಅವರನ್ನು ದುರುಪಯೋಗದ ಆರೋಪದ ಮೇಲೆ ಎಂಎಲ್​ಸಿ ಬಸನಗೌಡ ಬಾದರ್ಲಿ ಅವರು ಅಮಾನತು ಮಾಡಿಸಿದ್ದರು. ಆದ್ರೆ, ಶಾಸಕ ಹಂಪನಗೌಡ ಬಾದರ್ಲಿ ಈ ಅಮಾನತು ಆದೇಶವನ್ನು ರದ್ದು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ಮೇ 13ರಂದು ಸಿಂಧನೂರು ನಗರಸಭೆ ಪೌರಾಯುಕ್ತ ಮಂಜುನಾಥ್ ಗುಂಡೂರುರನ್ನ ಅಮಾನತ್ತು ಮಾಡಿ ಪೌರಾಡಳಿತ ಇಲಾಖೆ ಆದೇಶಿಸಿತ್ತು. ವಿವಿಧ ಯೋಜನೆಗಳಲ್ಲಿ ಅವ್ಯವಹಾರ,ಸರ್ಕಾರದ ಹಣ ದುರುಪಯೋಗ ಆರೋಪ ಕೇಳಿ ಬಂದಿತ್ತು. ಅಷ್ಟೇ ಅಲ್ಲದೇ ನಗರಭೆಯಲ್ಲಿ ಅನಧಿಕೃತ ಕಟ್ಟಡ, ತೆರಿಗೆ ವಸೂಲಾತಿ ದುರುಪಯೋಗ ಆರೋಪವಿದ್ದ ಹಿನ್ನೆಲೆ ಅಮಾನತ್ತು ಮಾಡಲಾಗಿತ್ತು. ಈ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಅಮಾನತ್ತು ಮಾಡಿಸಿದ್ದು ಎಂಎಲ್​ಸಿ ಬಸನಗೌಡ ಬಾದರ್ಲಿ. ಅಲ್ಲದೇ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಪೌರಾಯುಕ್ತ ಮಂಜುನಾಥ್​ರನ್ನ ಅಮಾನತ್ತು ಮಾಡಿಸಿದ್ದರು.

ಇದನ್ನೂ ಓದಿ: ಅಜ್ಜ-ಮೊಮ್ಮಗನ ನಡುವೆ ಜಿದ್ದು: ಒಂದೇ ಕಚೇರಿಗೆ 2 ಬೀಗ ಜಡಿದ ಕಾಂಗ್ರೆಸ್ MLA, MLC ಬೆಂಬಲಿಗರು

ಒಂದೇ ದಿನದಲ್ಲಿ ಆಮಾನತು ಆದೇಶ ವಾಪಸ್

ಈ ವಿಚಾರ ತಿಳಿದ ಶಾಸಕ ಹಂಪನಗೌಡ ಬಾದರ್ಲಿ ಈ ಕೇಸ್ ಫೈಲ್ ಸ್ಟಡಿ ಮಾಡಿದ್ದು, ಒಳ್ಳೆಯ ಅಧಿಕಾರಿಯನ್ನ ರಾಜಕೀಯ ದುರುದ್ದೇಶಕ್ಕೆ ಅಮಾನತ್ತು ಮಾಡಿಸಲಾಗಿದೆ ಎಂದು ಅಧಿಕಾರಿ ಮಂಜುನಾಥ್​ ಗುಡದೂರು ಪರ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೇ ಯಾವುದೇ ಒಬ್ಬ ಸರ್ಕಾರಿ ಅಧಿಕಾರಿ ವಿರುದ್ಧ ಆರೋಪಗಳು ಕೇಳಿ ಬಂದಾಗ ಮೂರು ನೋಟಿಸ್​ಗಳನ್ನ ನೀಡಿ, ಸಮಜಾಯಿಸಿ, ಸ್ಪಷ್ಟೀಕರಣ ಪಡೆದು ಅಮಾನತ್ತು ಮಾಡಬೇಕು. ಆದ್ರೆ ಈ ಕೇಸ್​ನಲ್ಲಿ ಹಿರಿಯ ಅಧಿಕಾರಿಗಳು ಪ್ರಭಾವಕ್ಕೊಳಗಾಗಿ ಅಮಾನತ್ತಾದ ಮಂಜುನಾಥ್​ಗೆ ಈ ಎಲ್ಲಾ ನಿಯಮಗಳನ್ನ ಪಾಲಿಸಿಲ್ಲ. ಹೀಗಾಗಿ ಈ ಅಮಾನತು ಆದೇಶವನ್ನು ಒಂದೇ ದಿನಲ್ಲಿ ವಾಪಸ್ ಪಡೆಯುವಂತೆ ಮಾಡಿದ್ದಾರೆ.

ಇತ್ತ ಈ ಕೇಸ್​ನಲ್ಲಿ ಅಜ್ಜ ಗೆದ್ದು ಬೀಗಿದ್ರೆ ಮೊಮ್ಮಗ ಮತ್ತೇನು ದಾಳ ಉರುಳಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ. ಸದ್ಯ ಈ ಬಗ್ಗೆ ತುಮಕೂರು ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರ ನೇತೃತ್ವದಲ್ಲಿ ತನಿಖೆ ಮುಂದುವರೆದಿದ್ದು, ಮುಂದೆ ಏನಾಗಲಿದೆ ಎನ್ನುವುದು ತಿಳಿದುಬರಬೇಕಿದೆ.

ಇಬ್ಬರ ನಡುವೆ ಜಿದ್ದಾಜಿದ್ದಿ

ಹಂಪನಗೌಡ ಬಾದರ್ಲಿ ಹಾಗೂ ಬಸನಗೌಡ ಬಾದರ್ಲಿ ನಡುವೆ ಕೌಟುಂಬಿಕ ಕಲಹ ರಾಜಕೀಯಕ್ಕೂ ಮಾರ್ಪಟ್ಟಿದ್ದು, ಚುನಾವಣೆಗಳಲ್ಲು ಪ್ರತ್ಯೇಕ ಪ್ರಚಾರಗಳನ್ನು ಮಾಡಿಕೊಂಡು ಬಂದಿದ್ದಾರೆ. ಇನ್ನು ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದ ಬಸನಗೌದ ಬಾದರ್ಲಿ ಡಿಕೆ ಶಿವಕುಮಾರ್​ ಬೆಂಬಲಗರಾಗಿದ್ದು, ವಿಧಾನಸಭೆ ಚುನಾವಣೆ ಟಿಕೆಟ್​ಗೆ ಪ್ರಬಲ ಪೈಪೋಟಿ ನಡೆಸಿದ್ದರು. ಆದ್ರೆ, ಸಿದ್ದರಾಮಯ್ಯ ಬಣದ ಹಂಪನಗೌಡ ಬಾದರ್ಲಿಗೆ ಟಿಕೆಟ್​ ಸಿಕಿತ್ತು. ಇದರಿಂದ ಅಸಮಾಧಾನಗೊಂಡ ಬಸವಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಸನಗೌಡ ಅವರಿಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮೇಲೆ ಅಸಮಾಧಾನ ಇರಲಿಲ್ಲ. ಆದ್ರೆ, ಅವರಿಗೆ ತಮ್ಮ ತಾತನನ್ನು ಸೋಲಿಸಲೇಬೇಕೆಂದು ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದರು.

ಪಕ್ಷದಲ್ಲಿನ ಈ ಒಳಜಗಳವನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್, ಬಸನಗೌಡ ಬಾದರ್ಲಿ ಅವರನ್ನು ಸಮಾಧಾನಪಡಿಸಲು ಖುದ್ದು ರಣದೀಪ್ ಸಿಂಗ್ ಸುರ್ಜೆವಾಲ ಅವರೇ ಸಿಂಧನೂರಿಗೆ ಆಗಮಿಸಿದ್ದರು. ಮುಂದಿನ ದಿನಗಳ ಒಳ್ಳೆಯ ಸ್ಥಾನಮಾನ ನೀಡಲಾಗುತ್ತೆ ತಮ್ಮ ನಾಮಪತ್ರ ವಾಪಸ್ ಹಿಂತೆಗೆದುಕೊಳ್ಳುವುಂತೆ ಮನವೊಲಿಸಿದ್ದರು. ಇದಕ್ಕೆ ಬಸನಗೌಡ ಬಾದರ್ಲಿ ಅವರು ಒಪ್ಪಿ ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡಿದ್ದರು. ಬಳಿಕ ಬಸನಗೌಡ ಬಾದರ್ಲಿ ಅವರಿಗೆ ಕೊಟ್ಟ ಮಾತಿನಂತೆ ಎಂಎಲ್​ಸಿ ಮಾಡಲಾಯ್ತು. ಆದ್ರೆ, ಇದೀಗ ಶಾಸಕ ಹಂಪನಗೌಡ ಹಾಗೂ ಎಂಎಲ್​ಸಿ ಬಸನಗೌಡ ಬಾದರ್ಲಿ ನಡುವೆ ಕ್ಷೇತ್ರದಲ್ಲಿ ಒಂದಲ್ಲ ಒಂದು ವಿಚಾರದಲ್ಲಿ ಜಿದ್ದಿಗೆ ಬೀಳುತ್ತಿದ್ದಾರೆ. ಇತ್ತೀಚೆಗೆ ಸಿಂಧನೂರಿನ ನೀರಾವರಿ ಇಲಾಖೆ ಕಟ್ಟಡವೊಂದನ್ನ ಕಚೇರಿಯಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಇಬ್ಬರ ನಡುವೆ ಭಾರೀ ಪೈಪೋಟಿ ನಡೆದಿತ್ತು. ಯಾವುದೇ ಕಾರಣಕ್ಕೂ ಕಚೇರಿಯನ್ನು ಎಂಎಲ್​ಸಿಗೆ ಕೊಡಬಾರದು ಎಂದು ಶಾಸಕರ ಬೆಂಬಲಿಗರು ಬೀಗಹಾಕಿದ್ದರೆ, ಮತ್ತೊಂದೆಡೆ ಶಾಸಕರಿಗೆ ಈ ಕಚೇರಿ ನೀಡಬಾರದು ಎಂದು ಎಂಎಲ್​ಸಿ ಬೆಂಬಲಿಗರು ಬೀಗ ಹಾಕಿದ್ದರು.

ಹೀಗೆ ಒಂದಲ್ಲ ಒಂದು ವಿಚಾರದಲ್ಲಿ ಶಾಸಕರು ಹಾಗೂ ಎಂಎಲ್​ಸಿ ನಡುವೆ ಪೈಪೋಟಿ ನಡೆದಿದ್ದು, ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದು ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತೆ ಎನ್ನುವುದು ನೋಡಬೇಕಿದೆ.