ಅವಮಾನಿಸಿದ ಸಮಾಜದಲ್ಲೇ ಶಿಕ್ಷಕಿಯಾಗಿ ನೇಮಕವಾದ ರಾಯಚೂರಿನ ಮಂಗಳಮುಖಿ, ಸಾಧನೆಗೆ ಜನರಿಂದ ಮೆಚ್ಚುಗೆ
ಹೆತ್ತವರು ಮಗ ಲಿಂಗ ಪರಿವರ್ತನೆಯಾಗಿದ್ದನ್ನ ದಿಕ್ಕರಿಸಲಿಲ್ಲ. ಬದಲಾಗಿ ಅದು ಒಂದು ಜೀವ, ಕರುಳ ಬಳ್ಳಿ ಅಂತ ಒಪ್ಪಿಕೊಂಡಿದ್ದರು. ಆದ್ರೆ ಆ ಐದು ವರ್ಷ ಸಮಾಜದಲ್ಲಿ ಅನುಭವಿಸಿದ್ದ ಅವಮಾನದ ವಿರುದ್ಧ ಪೂಜಾ ತೊಡೆತಟ್ಟಿದ್ದರು.
ರಾಯಚೂರು: ರಾಷ್ಟ್ರ ಪ್ರಶಸ್ತಿ ಗೆದ್ದು ಬೀಗಿದ ಕನ್ನಡದ ನಾನು ಅವನಲ್ಲ, ಅವಳು ಸಿನೆಮಾದಂತೆ ಗಡಿ ಜಿಲ್ಲೆಯಲ್ಲೊಂದು ಅಪರೂಪದ ಕಥೆ ನಡೆದಿದೆ. ಹುಟ್ಟಿನಿಂದಲೂ ಮಗನಾಗಿದ್ದವರು, ಅದೊಂದು ದಿನ ಮಗಳಾಗಿ ಪರಿವರ್ತನೆಯಾಗಿ ಮನೆ ಬಿಟ್ಟು ಹೋಗಿದ್ದರು. ನಿತ್ಯ ಕಣ್ಣೀರು, ಗೋಳಾಟ, ಅವಮಾನದ ಮಧ್ಯೆ ಚಿಗುರೊಡೆದು ಇಡೀ ಊರೆ ಬೆನ್ನು ತಟ್ಟುವಂತಹ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಿಕ್ಷಕಿಯಾಗಿ ಸಮಾಜದಲ್ಲಿ ಗೆದ್ದು ತೋರಿಸಿದ್ದಾರೆ.
ರಾಯಚೂರು ಜಿಲ್ಲೆ ಮಾನ್ಬಿ ತಾಲ್ಲೂಕಿನ ನೀರಮಾನ್ವಿ ಗ್ರಾಮದ ಪೂಜಾ ಎಂಬ ಮಂಗಳಮುಖಿಯೊಬ್ಬರು ಇಂಥದ್ದೊಂದು ಸಾಧನೆ ಮಾಡಿ ಇಡೀ ಕುಟುಂಬಕ್ಕೆ ಗೌರವ ತಂದಿದ್ದಾರೆ. ಇದೇ ನೀರಮಾನ್ವಿ ನಿವಾಸಿ ಯಲ್ಲಮ್ಮ ಅನ್ನೋ ಬಡ ಕುಟುಂಬದ ಮಹಿಳೆಯೊಬ್ಬರ ಮಗಳಾಗಿ ಹುಟ್ಟಿದ ಅಶ್ವತ್ಥಾಮ ಈಗ ಪೂಜಾ ಆಗಿದ್ದಾರೆ. ಯಲ್ಲಮ್ಮರಿಗೆ ನಾಲ್ಕು ಜನ ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಸೇರಿ ಒಟ್ಟು ಆರು ಜನ ಮಕ್ಕಳಿದ್ದಾರೆ. ಗಂಡು ಮಕ್ಕಳ ಪೈಕಿ ಹಿರಿ ಮಗನಾಗಿದ್ದ ಈ ಅಶ್ವತ್ಥಾಮನೇ ಈಗ ಪೂಜಾ ಆಗಿ ಪರಿವರ್ತನೆಯಾಗಿದ್ದಾರೆ.
ಈ ಪೂಜಾ ಅಶ್ವತ್ಥಾಮಳ ಕಥೆ ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ಆದ್ರೆ ಆ ಕುಟುಂಬ ಮಾತ್ರ ಎಲ್ಲವನ್ನೂ ಸಹಿಸಿಕೊಂಡು ತಮ್ಮ ಕಣ್ಣೀರ ಕಥೆಯನ್ನ ಹೇಳಿಕೊಳ್ತಿಲ್ಲ. ತಮ್ಮ ಎದೆಯಲ್ಲೆ ಬಚ್ಚಿಟ್ಟುಕೊಂಡು ಕೇವಲ ಆಕೆ ಸಾಧನೆಯನ್ನ ಮಾತ್ರ ಕೊಂಡಾಡುತ್ತಿದ್ದಾರೆ. ಯಲ್ಲಮ್ಮಳ ಹಿರಿಮಗನಾಗಿದ್ದ ಅಶ್ವತ್ಥಾಮ, ಏಕಾಏಕಿ ಅದೊಂದು ದಿನ ಪೂಜಾ ಆಗಿ ಬದಲಾಗಿದ್ದ. ಅಷ್ಟೇ ಅಲ್ಲ, ಹೀಗೆ ಲಿಂಗ ಬದಲಾವಣೆಯಾದ ಬಳಿಕ ಪೂಜಾ ನಾಪತ್ತೆಯಾಗಿದ್ದರು. ನಾನು ಅವನಲ್ಲ, ಅವಳು ಸಿನೆಮಾದಂತೆ ಆ ಕುಟುಂಬ ಕೂಡ ಅಪಮಾನ ಅನುಭವಿಸಿತ್ತು. ಸಮಾಜದ ಹಿಡಿ ಶಾಪ, ಅಪಹಾಸ್ಯ, ಅವಮಾನಕ್ಕೆ ಬೇಸತ್ತು ಪೂಜಾ ಊರು ಬಿಟ್ಟು ಹೋಗಿದ್ದರು.
ಇದನ್ನೂ ಓದಿ: ‘ಮಂಗಳಮುಖಿಯರು ಪ್ರಪಂಚವನ್ನು ನೋಡುವ ಪರಿಯೇ ಬೇರೆ’; ನವಾಜುದ್ದೀನ್ ಸಿದ್ದಿಕಿ
ಹೀಗೆ ಸಮಾಜದಲ್ಲಿ ತಮ್ಮನ್ನ ನಡೆಸಿಕೊಳ್ತಿದ್ದ ರೀತಿಗೆ ಕಂಗೆಟ್ಟಿದ್ದ ಪೂಜಾ ಹುಟ್ಟೂರು ನೀರಮಾನ್ವಿ ಬಿಟ್ಟು ಊರೂರು, ಜಿಲ್ಲೆಜಿಲ್ಲೆಗಳಲ್ಲೂ ತಿರುಗಾಡಿದ್ದರು. ರಾಯಚೂರು, ಆಂಧ್ರ-ತೆಲಂಗಾಣ ಗಡಿಯಲ್ಲಿರೊ ಹಿನ್ನೆಲೆ ಅಲ್ಲಿಯೂ ಪೂಜಾಳಿಗಾಗಿ ಆಕೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಅಷ್ಟೇ ಅಲ್ಲ ಬೆಂಗಳೂರಿಗೂ ಹೋಗಿ ಅಲ್ಲಿಯೂ ಪೂಜಾ ಪತ್ತೆ ಮಾಡಲು ಹಗಲಿರುಳು ಓಡಾಟ ನಡೆಸಿದ್ದರು. ಕೊನೆಗೆ ಮಗ ಕೈತಪ್ಪಿ ಹೋದ ಅಂತ ತಾಯಿ ಯಲ್ಲಮ್ಮ ಹಾಗೂ ಕುಟುಂಬಸ್ಥರು ಕಣ್ಣೀರಲ್ಲೇ ಕಾಲ ಕಳೆದಿದ್ದರು. ಹೀಗೆ ಆ ಗೋಳಾಟದಲ್ಲೇ ಐದು ವರ್ಷ ಕಳೆದುಹೋಗಿತ್ತು. ಇದಾದ ಬಳಿಕ ಮಗ ಅಶ್ವತ್ಥಾಮ, ಪೂಜಾ ಆಗಿ ಮನೆಗೆ ಹಿಂದಿರುಗಿದ್ದಳು.
ಮಗ ಮಗಳಾಗಿ ಮನೆಗೆ ಬಂದಾಗ ಎದೆಗಪ್ಪಿ ಬರಮಾಡಿಕೊಂಡ ತಾಯಿ
ಆಗ ಹೆತ್ತವರು ಮಗ ಲಿಂಗ ಪರಿವರ್ತನೆಯಾಗಿದ್ದನ್ನ ದಿಕ್ಕರಿಸಲಿಲ್ಲ. ಬದಲಾಗಿ ಅದು ಒಂದು ಜೀವ, ಕರುಳ ಬಳ್ಳಿ ಅಂತ ಒಪ್ಪಿಕೊಂಡಿದ್ದರು. ಆದ್ರೆ ಆ ಐದು ವರ್ಷ ಸಮಾಜದಲ್ಲಿ ಅನುಭವಿಸಿದ್ದ ಅವಮಾನದ ವಿರುದ್ಧ ಪೂಜಾ ತೊಡೆತಟ್ಟಿದ್ದರು. ಮತ್ತೆ ಓದು ಮುಂದುವರಿಸ್ತೀನಿ, ದೊಡ್ಡ ಸಾಧನೆ ಮಾಡಿ ತೋರಿಸ್ತೀನಿ ಅಂತ ಪಣ ತೊಟ್ಟಿದ್ದಳು. ನಂತರ ಆಕೆ ತಾಯಿ ಕೂಲಿ ಮಾಡಿ ಪೂಜಾಳನ್ನ ಓದಿಸಿದ್ದಳು. ಅದರ ಭಾಗವಾಗಿ ಪೂಜಾ ಕಾಂಚನಾ ಸಿನೆಮಾದಂತೆ ಓದಲು ಶುರುಮಾಡಿದ್ದರು. ಕಾಂಚನಾ ಸಿನೆಮಾದಲ್ಲಿ ಮಂಗಳಮುಖಿಯೊಬ್ರು ಡಾಕ್ಟರ್ ಆದ್ರೆ, ಇಲ್ಲಿ ನಿಜ ಜೀವನದಲ್ಲಿ ಎಂಎ ಬಿಎಡ್ ಕಂಪ್ಲೀಟ್ ಮಾಡಿದ್ದ ಪೂಜಾ ಟೀಚರ್ ಆಗಿದ್ದಾರೆ. ಇತ್ತೀಚೆಗೆ ಸರ್ಕಾರ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆದಿದ್ದ ಪೂಜಾ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಆಕೆ ಮಂಗಳಮುಖಿಯಾಗಿದ್ರೂ ಎಲ್ಲರಂತೆ ತಾನೂ ಕೂಡ ಸಮಾಜದಲ್ಲಿ ಒಂದೇ ಅಂತ ತೋರಿಸಿಕೊಟ್ಟು ಸರ್ಕಾರಿ ಶಿಕ್ಷಕಿಯಾಗಿ ಆಯ್ಕೆಯಾಗಿದ್ದಾರೆ.
ಆರು ಮಕ್ಕಳಲ್ಲಿ ಈತ ಮನೆ ಬಿಟ್ಟು ಹೋಗಿದ್ದ. ಜನ ನಮ್ಮನ್ನ ಅವಮಾನಿಸಿದ್ದರು. ಆದ್ರೆ ಗಂಡು ಮಗ ಆಗ್ಲಿ ಈಗ ಮಗಳಾಗ್ಲಿ ನಮಗೆ ಖುಷಿ ಇದೆ. ನಾಲ್ಕಕ್ಷರ ಕಲಿಸಿದ್ದಕ್ಕು ಸಾರ್ಥಕವಾಗಿದೆ ಎಂದು ಯಲ್ಲಮ್ಮ ಸಂತಸ ಹಂಚಿಕೊಂಡಿದ್ದಾರೆ.
ಹೀಗೆ ಬರೀ ಕಣ್ಣೀರು, ಕಷ್ಟಗಳಲ್ಲೇ ಬೆಳೆದು ಕೊನೆಗೆ ಸಮಾಜದ ವಿರುದ್ಧವೇ ಹೋರಾಡಿ ಗೆದ್ದಿರುವ ಮಂಗಳಮುಖಿ ಪೂಜಾ ಈಗ ಇಡೀ ತೃತೀಯ ಲಿಂಗ ಸಮುದಾಯಕ್ಕೆ ಸ್ಪೂರ್ತಿಯಾಗಿದ್ದಾರೆ. ಸಮಾಜ ವಿಜ್ಞಾನ ವಿಷಯದ ಶಿಕ್ಷಕಿಯಾಗಿ ಆಯ್ಕೆಯಾಗಿರೊ ಪೂಜಾ ಸದ್ಯ ಪೋಸ್ಟಿಂಗ್ ಗಾಗಿ ಕಾದು ಕುಳಿತಿದ್ದಾರೆ. ಇದಷ್ಟೇ ಅಲ್ಲ, ಲಿಂಗ ಪರಿವರ್ತನೆಯಾದ ಮಗ, ಮಗಳನ್ನ ಒಪ್ಪಿಕೊಳ್ಳದ ಪೋಷಕರಿಗೆ ಪೂಜಾಳ ತಾಯಿ ಯಲ್ಲಮ್ಮ ಕೂಡ ಪ್ರೇರಣೆಯಾಗಿದ್ದು, ಸದ್ಯ ಪೂಜಾ ಹಾಗೂ ಆಕೆಯ ಇಡೀ ಕುಟುಂಬ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಪೂಜಾ, ನಮ್ಮಂಥವರನ್ನ ಸಮಾಜ ಇಷ್ಟಪಡಲ್ಲ. ಹೆತ್ತವರು ಒಪ್ಪಲ್ಲ. ಆದ್ರೆ ನಮ್ಮ ಪೋಷಕರು ಬೇಜಾರಾಗದೇ ನನ್ನನ್ನ ಓದಿಸಿದ್ದಾರೆ. ನಮ್ಮನ್ನ ಕಂಡ್ರೆ ಮೂಗು ಮುರಿಯೋ ಸಮಾಜದಲ್ಲಿ ಸಾಧಿಸಿ ತೋರಿಸಿದ್ದೇನೆ. ನನ್ನಿಂದ ನಮ್ಮ ಇಡೀ ಮಂಗಳಮುಖಿ ಸಮುದಾಯ ಹೆಮ್ಮೆ ಪಡುತ್ತಿದೆ ಎಂದರು
ವರದಿ: ಭೀಮೇಶ್ ಪೂಜಾರ್, ರಾಯಚೂರು
Published On - 1:51 pm, Tue, 22 November 22