HR Keshavamurthy: ಖ್ಯಾತ ಗಮಕ ಕಲಾವಿದ ಹೆಚ್.ಆರ್.ಕೇಶವಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ
ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಡುವುದನ್ನು ರೂಢಿಸಿಕೊಂಡರು. 100ಕ್ಕೂ ಹೆಚ್ಚು ವಿಭಿನ್ನ ರಾಗಗಳಲ್ಲಿ ವಾಚನ ಮಾಡುವ ಮೂಲಕ ಶತರಾಗಿ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ.
ಶಿವಮೊಗ್ಗ: ಖ್ಯಾತ ಗಮಕ ಕಲಾವಿದರಾದ ಹೆಚ್.ಆರ್.ಕೇಶವಮೂರ್ತಿ ಅವರಿಗೆ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ಕಳೆದ ಹಲವಾರು ದಶಕಗಳಿಂದ ಹೆಚ್.ಆರ್.ಕೇಶವಮೂರ್ತಿ ಅವರು ನಿರಂತರವಾಗಿ ಗಮಕ ಕಾರ್ಯಕ್ರಮಗಳ ಮೂಲಕ ಮಾಡಿರುವ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ.
ಹೆಚ್.ಆರ್.ಕೇಶವಮೂರ್ತಿ ಅವರದು ಶಿವಮೊಗ್ಗ ಸಮೀಪದ ಮತ್ತೂರು ಹೊಸಳ್ಳಿ. ರಾಮಸ್ವಾಮಿ ಶಾಸ್ತ್ರಿ–ಲಕ್ಷ್ಮೀದೇವಮ್ಮ ದಂಪತಿ ಪುತ್ರ. 22 ಫೆಬ್ರವರಿ 1934ರಲ್ಲಿ ಜನಿಸಿದ್ದ ಅವರು ಬಾಲ್ಯದಿಂದಲೇ ಗಮಕ ಕಲೆ ಕರಗತ ಮಾಡಿಕೊಂಡಿದ್ದರು. ತಂದೆ, ತಾಯಿ ರಾಗವಾಗಿ ಹಾಡುತ್ತಿದ್ದ ಪುರಾಣಗಳಿಂದ ಉತ್ತೇಜಿತರಾದ ಅವರು 16ನೇ ವಯಸ್ಸಿನಲ್ಲೇ ಗ್ರಾಮದ ವೆಂಕಟೇಶಯ್ಯ ಅವರ ಬಳಿ ಗಮಕ ವಾಚನ ಅಧ್ಯಯನ ಆರಂಭಿಸಿದ್ದರು. ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಡುವುದನ್ನು ರೂಢಿಸಿಕೊಂಡರು. 100ಕ್ಕೂ ಹೆಚ್ಚು ವಿಭಿನ್ನ ರಾಗಗಳಲ್ಲಿ ವಾಚನ ಮಾಡುವ ಮೂಲಕ ಶತರಾಗಿ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ.
ರಾಜ್ಯ, ದೇಶದ ಹಲವೆಡೆ ನಡೆದ ಕಾರ್ಯಕ್ರಮಗಳಲ್ಲಿ ಗಮಕ ವಾಚನದ ಮೂಲಕ ಗಮನ ಸೆಳೆದಿರುವ ಅವರ ಸಾಧನೆಗೆ ಕುಮಾರವ್ಯಾಸ, ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಪ್ರಸ್ತುತ ಹೊಸಳ್ಳಿಯಲ್ಲಿ ನೆಲೆಸಿದ್ದಾರೆ. ಖ್ಯಾತ ಗಮಕ ಕಲಾವಿದ ಹೆಚ್.ಆರ್. ಕೇಶವಮೂರ್ತಿ ಅವರು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೆಚ್.ಆರ್.ಕೇಶವಮೂರ್ತಿ ಅವರು ಗಮಕ ಕಲೆಗೆ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದು, ನೂರಾರು ವಿದ್ಯಾರ್ಥಿಗಳಿಗೆ ಗಮಕ ಕಲೆಯನ್ನು ಉಚಿತವಾಗಿ ಕಲಿಸುವ ಮೂಲಕ ಮಾದರಿಯಾಗಿದ್ದಾರೆ. ಅವರ ಶೈಲಿಯು ಕೇಶವಮೂರ್ತಿ ಘರಾನಾ ಎಂದೇ ಖ್ಯಾತವಾಗಿದ್ದು, ಇದೀಗ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯುವ ಮೂಲಕ ಜಿಲ್ಲೆಗೆ ಮಾತ್ರವಲ್ಲದೇ, ಇಡೀ ರಾಜ್ಯಕ್ಕೆ ಖ್ಯಾತಿ ತಂದಿದ್ದಾರೆ.
ಹೆಚ್.ಆರ್.ಕೇಶವಮೂರ್ತಿ ಅವರು ಹೆಗ್ಗೋಡು, ಮತ್ತೂರು, ಶಿವಮೊಗ್ಗ, ಮೈಸೂರು, ಬೆಂಗಳೂರು, ಗದಗ ಹಾಗೂ ಹೊರ ರಾಜ್ಯಗಳು ಸೇರಿದಂತೆ ಅನೇಕ ಕಡೆ ಸುಮಾರು ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದ್ದಾರೆ. ಹಿರಿಯ ವ್ಯಾಖ್ಯಾನಕಾರರಾಗಿದ್ದ ವ್ಯಾಖ್ಯಾನ ವಾಚಸ್ಪತಿ ಮತ್ತೂರು ಲಕ್ಷ್ಮೀಕೇಶವ ಶಾಸ್ತ್ರಿಯವರ ವ್ಯಾಖ್ಯಾನದೊಂದಿಗೆ ಸಮಗ್ರ ಕುಮಾರವ್ಯಾಸ ಭಾರತದ 135 ಧ್ವನಿ ಸುರುಳಿಗಳು, ಮಾರ್ಕಂಡೇಯ ಅವಧಾನಿ ಅವರ ವ್ಯಾಖ್ಯಾನದೊಂದಿಗೆ 35 ಧ್ವನಿ ಸುರುಳಿಗಳಲ್ಲಿ ಜೈಮಿನಿ ಭಾರತ ಹೊರ ಬಂದಿದೆ. ಡಾ. ಮತ್ತೂರು ಕೃಷ್ಣಮೂರ್ತಿ ಮತ್ತು ಕೇಶವಮೂರ್ತಿಗಳ ಜೋಡಿ ಜಗತ್ಪ್ರಸಿದ್ಧವಾಗಿದೆ. ಇವರಿಬ್ಬರ ವಾಚನ ವ್ಯಾಖ್ಯಾನದಲ್ಲಿ ಕುಮಾರವ್ಯಾಸ ಭಾರತದ 200 ಕ್ಯಾಸೆಟ್ಟುಗಳು ಬಿಡುಗಡೆಯಾಗಿವೆ.