ಹುಲಿಕಲ್ ಘಾಟಿ, ತೀರ್ಥಹಳ್ಳಿ ಮೂಲಕ ವಾಹನಗಳ ಸಂಚಾರಕ್ಕೆ ಆಕ್ರೋಶ; ಲಾರಿಗಳನ್ನು ತಡೆದು ಗ್ರಾಮಸ್ಥರಿಂದ ಪ್ರತಿಭಟನೆ
ಭಾರಿ ವಾಹನಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟ ಹಿನ್ನೆಲೆ ಹೊಸನಗರ ತಾಲೂಕಿನ ಯಡೂರ್ ಬಳಿ ಲಾರಿಗಳಿಗೆ ತಡೆಯೊಡ್ಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗ: ಕೆಲವು ದಿನಗಳಿಂದ ಮಳೆರಾಯನ ಆರ್ಭಟ ಜೋರಾಗಿದ್ದು, ರಾಜ್ಯಾದ್ಯಂತ ನೆರೆ, ಪ್ರವಾಹದ ಭೀತಿ ಎದುರಾಗಿತ್ತು. ಅದರಲ್ಲೂ ಮಲೆನಾಡಿನಲ್ಲಿ ಭಾರೀ ಮಳೆಯಾಗಿದ್ದು, ಮುನ್ನೆಚ್ಚರಿಕೆಯಾಗಿ ಚಾರ್ಮಾಡಿ, ಶಿರಾಡಿ ಘಾಟ್ನಲ್ಲಿ ಭಾರಿ ವಾಹನಕ್ಕೆ ನಿಷೇಧ ಹೇರಲಾಗಿದೆ. ಹೀಗಾಗಿ ಶಿವಮೊಗ್ಗ ಜಿಲ್ಲೆಯ ಹುಲಿಕಲ್ ಘಾಟಿ, ತೀರ್ಥಹಳ್ಳಿ ಮೂಲಕ ವಾಹನಗಳು ಸಂಚಾರಿಸುತ್ತಿದ್ದವು. ಸದ್ಯ ಭಾರಿ ಗಾತ್ರದ ವಾಹನಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟ ಹಿನ್ನೆಲೆ ಹೊಸನಗರ ತಾಲೂಕಿನ ಯಡೂರ್ ಬಳಿ ಲಾರಿಗಳಿಗೆ ತಡೆಯೊಡ್ಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಕೇರಳ, ಮಂಗಳೂರು, ಉಡುಪಿ ಭಾಗದಿಂದ ಬೆಂಗಳೂರು, ಮೈಸೂರು ಮುಂತಾದ ಭಾಗಗಳಿಗೆ ಸಂಚರಿಸುತ್ತಿರುವ ಲಾರಿಗಳು, ಹೈವೇ ಮೂಲಕ ಸಂಚರಿಸುವ ಬದಲು ಹಳ್ಳಿ ಮಾರ್ಗದ ಮೂಲಕ ಸಂಚರಿಸುತ್ತಿವೆ. ಇದರಿಂದಾಗಿ ಹಳ್ಳಿಯ ರಸ್ತೆಗಳು ಹಾಳಾಗಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು: ತಲಪಾಡಿಯಲ್ಲಿ ಕೇರಳದ SDPI ಕಾರ್ಯಕರ್ತರ ಧರಣಿ ಕೊವಿಡ್ ನೆಗೆಟಿವ್ ವರದಿ ಇಲ್ಲದಿದ್ದರೆ ಕರ್ನಾಟಕಕ್ಕೆ ಪ್ರವೇಶವಿಲ್ಲ ಎಂಬ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ ಕೇರಳದ SDPI ಕಾರ್ಯಕರ್ತರು, ತಲಪಾಡಿಯಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಮಂಗಳೂರಿನಿಂದ ಕೇರಳಕ್ಕೆ ಹೋಗುವ ವಾಹನಗಳಿಗೆ ತಡೆವೊಡ್ಡಿದ್ದು, ಕರ್ನಾಟಕ ತನ್ನ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಮಂಗಳೂರಿನ ತಲಪಾಡಿ ಗಡಿ ಸೇರಿದಂತೆ ಸುಳ್ಯದ ಸಾರಡ್ಕ, ಜಾಲ್ಸೂರು ಗಡಿಯಲ್ಲಿ ಕಟ್ಟೆಚ್ಚರ ವಿಚಾರಕ್ಕೆ ಸಂಬಂಧಿಸಿದಂತೆ SDPI ಕಾರ್ಯಕರ್ತರು ಧರಣಿ ನಡೆಸಿದ್ದಾರೆ. ಗಡಿ ಚೆಕ್ ಪೋಸ್ಟ್ನಲ್ಲಿ ಭಾರೀ ಪೊಲೀಸ್ ಬಂದೋದಸ್ತ್, RTPCT ನೆಗೆಟಿವ್ ರಿಪೋರ್ಟ್ ಇಲ್ಲದವರಿಗೆ ಗಡಿಯಲ್ಲಿ ಪ್ರವೇಶವಿಲ್ಲ ಎಂಬ ಕರ್ನಾಟಕ ಸರ್ಕಾರದ ಆದೇಶ ವಿರೋಧಿಸಿ ಕೇರಳಿಗರು ಪ್ರತಿಭಟನೆ ನಡೆಸಿದ್ದಾರೆ.
ಡಿಸಿ ಆದೇಶ ಉಲ್ಲಂಘಿಸಿ ಲಾರಿಗಳ ಓಡಾಟ ಭಾರೀ ಮಳೆಯಿಂದಾಗಿ ಶಿರಾಡಿ ಘಾಟ್ ಬಳಿ ರಸ್ತೆ ಕುಸಿತ ಸಂಭವಿಸಿದ ಪರಿಣಾಮ ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಚಾರ್ಮಾಡಿ ಘಾಟ್ ಮೂಲಕ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು. ಆದರೆ, ಬಹುತೇಕ ವಾಹನಗಳು ಚಾರ್ಮಾಡಿ ಘಾಟ್ ಮೂಲಕ ಸಂಚರಿಸುತ್ತಿದ್ದ ಕಾರಣದಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಪರಿಣಾಮ ಮರಗಳು ನೆಲಕ್ಕುರುಳಲಾರಂಭಿಸಿದ್ದು, ಹಠಾತ್ತಾಗಿ ಚಾರ್ಮಾಡಿ ಘಾಟ್ ಮಾರ್ಗವನ್ನು ಸಂಜೆ 7 ರಿಂದ ಬೆಳಗ್ಗೆ 6 ರ ತನಕ ಬಂದ್ ಮಾಡುವುದಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಜುಲೈ 21 ರಂದು ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿ ಆದೇಶ ಪ್ರಕಟಗೊಂಡ ನಂತರ ಪೊಲೀಸರು ಕೊಟ್ಟಿಗೆಹಾರದ ಬಳಿಯೇ ವಾಹನಗಳನ್ನು ತಡೆದು ನಿಲ್ಲಿಸಿದ್ದರು. ಜನರ ಪರದಾಟದ ಬಗ್ಗೆ ಟಿವಿ9ನಲ್ಲಿ ವರದಿ ಪ್ರಕಟವಾಗಿತ್ತು. ಜನರ ಸಂಕಷ್ಟವನ್ನು ಗಮನಕ್ಕೆ ತೆಗೆದುಕೊಂಡ ಜಿಲ್ಲಾಡಳಿತ ನಂತರ ಅಂದರೆ ಜುಲೈ 23 ರಿಂದ ರಾತ್ರಿ 10 ಗಂಟೆಯವರೆಗೂ ವಾಹನ ಸಂಚಾರಕ್ಕೆ ಅವಕಾಶ ನೀಡಿತು.
ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಇನ್ನೂ ಕೂಡ ದೊಡ್ಡ ಲಾರಿ ಮತ್ತು ಬಸ್ಸುಗಳ ಸಂಚಾರಕ್ಕೆ ಅವಕಾಶ ಇಲ್ಲ. ಆದರೆ ಲಾರಿ- ಬಸ್ಸುಗಳು ಓಡಾಡುತ್ತಿದ್ದು, ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ಉಂಟಾಗಿ ಜನ ಸಮಸ್ಯೆ ಎದುರಿಸುವಂತಾಗಿದೆ. ಕೊಟ್ಟಿಗೆಹಾರದಿಂದ ನಾಲ್ಕೈದು ಕಿಲೋಮೀಟರ್ ವರೆಗೂ ವಾಹನಗಳು ನಿಂತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಅಲ್ಲದೆ ಭಾರಿ ಗಾತ್ರದ ಲಾರಿ-ಬಸ್ಸುಗಳು ಸಂಚರಿಸಲು ಜಿಲ್ಲಾಡಳಿತ ನಿರ್ಬಂಧಿಸಿತ್ತು, ಆದರೆ ಡಿಸಿ ಆದೇಶದ ಮಧ್ಯೆಯೂ ಕಿರಿದಾದ ರಸ್ತೆಯಲ್ಲಿ ದೊಡ್ಡ ಲಾರಿ, ಬಸ್ಸುಗಳ ಸಂಚಾರಕ್ಕೆ ಅವಕಾಶ ಕಲ್ಪಸಿದ್ದು, ಸಂಚಾರ ಬಂದ್ ಆಗಲು ಇದು ಪ್ರಮುಖ ಕಾರಣವಾಗಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಡಿಸಿ ಆದೇಶ ಉಲ್ಲಂಘಿಸಿ ಲಾರಿಗಳ ಓಡಾಟ; ಚಾರ್ಮಾಡಿ ಘಾಟ್ ಬಳಿ ಬೆಳಗ್ಗೆಯಿಂದಲೇ ಟ್ರಾಫಿಕ್ ಜಾಮ್
Heavy Rain: ಭಾರೀ ಮಳೆಗೆ ನದಿಯಂತಾದ ವಾಣಿಜ್ಯ ನಗರಿ ರಸ್ತೆಗಳು; ತೇಲಿಹೋದ ಐಷಾರಾಮಿ ಕಾರುಗಳು
Published On - 1:29 pm, Mon, 2 August 21