ಭಕ್ತವತ್ಸಲ ವರದಿಯನ್ನು ತಿರಸ್ಕರಿಸಲು ತೀರ್ಮಾನಿಸಿದ ಸಿದ್ದರಾಮಯ್ಯ ಸರ್ಕಾರ, ಏನಿದು ಭಕ್ತವತ್ಸಲ ?
ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ರಚಿಸಿರುವ ಭಕ್ತವತ್ಸಲ ಆಯೋಗವು ಸಲ್ಲಿಸಿರುವ ವರದಿಯನ್ನು ತಿರಸ್ಕರಿಸಲು ಕರ್ನಾಟಕರ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಇಂದು(ಜುಲೈ 04) ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಅಕ್ಟೋಬರ್ನಲ್ಲಿ ನಡೆದಿದ್ದ ಕ್ಯಾಬಿನೆಟ್ ಸಭೆಯಲ್ಲಿ ಈ ವರದಿಯಲ್ಲಿನ ಕೆಲ ಬದಲಾವಣೆ ಮಾಡಿ ಅನುಮೋದನೆ ನೀಡಿತ್ತು. ಆದ್ರೆ, ಇದೀಗ ಏಕಾಏಕಿ ರಿಜೆಕ್ಟ್ ಮಾಡಲು ತೀರ್ಮಾನಿಸಿದ್ದು, ಅಚ್ಚರಿಗೆ ಕಾರಣವಾಗಿದೆ. ಹಾಗಾದ್ರೆ, ಏನಿದು ಭಕ್ತವತ್ಸಲ? ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಜುಲೈ 04): ನಗರ ಮತ್ತು ಗ್ರಾಮೀನ ಸ್ಥಳೀಯ ಸಂಸ್ಥೆಗಳಲ್ಲಿನ ಶೇ.33ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಿಡುವ ಬಗ್ಗೆ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೆ ಭಕ್ತವತ್ಸಲ ನೇತೃತ್ವದ ಆಯೋಗ ನೀಡಿದ ವರದಿಯನ್ನು ಸಿದ್ದರಾಮಯ್ಯ ಸರ್ಕಾರ ತಿರಸ್ಕರಿಸಿದೆ. ಇಂದು(ಜುಲೈ 04) ನಡೆದ ಸಚಿವ ಸಂಪುಟದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಹಿಂದೆ ಇದೇ ಸರ್ಕಾರ ವರದಿಯಲ್ಲಿ ಕೆಲ ಅಂಶಗಳನ್ನು ಕೈಬಿಟ್ಟು ಬಾಗಶಃ ಒಪ್ಪಿಕೊಂಡಿತ್ತು. ಇದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಬಲ ಬರಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಇದೀಗ ಏಕಾಏಕಿ ಈ ವರದಿಯನ್ನು ತಿರಸ್ಕರಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ಏನಿದು ಭಕ್ತವತ್ಸಲ ಆಯೋಗ ವರದಿ?
ಹಿಂದುಳಿದಿರುವಿಕೆ ಆಧಾರದ ಮೇಲೆ ರಾಜಕೀಯ ಮೀಸಲಾತಿ ಕಲ್ಪಿಸುವುದನ್ನು ಪ್ರಶ್ನಿಸಿದ ಪ್ರಕರಣವೊಂದನ್ನು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಡ್ಡಿಯಾಗಿತ್ತು. ಹಿಂದುಳಿದ ಜಾತಿಗಳ ಜನ ಸಂಖ್ಯೆಗೆ ಅನುಗುಣವಾಗಿ ಪಡೆದಿರುವ ರಾಜಕೀಯ ಪ್ರಾತಿನಿಧ್ಯವನ್ನು ನಿಖರವಾಗಿ ಗುರುತಿಸಿ, ಹಿಂದುಳಿದಿರುವಿಕೆಯನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ರಾಜಕೀಯ ಮೀಸಲಾತಿ ನಿಗದಿಪಡಿಸಬೇಕು ಎಂದು ಕೋರ್ಟ್ ಹೇಳಿತ್ತು. ಹೀಗಾಗು ಹಿಂದುಳಿದ ವರ್ಗಗಳ ರಾಜಕೀಯ ಹಿಂದುಳಿವಿಕೆಯನ್ನು ಗುರುತಿಸಲು ಮತ್ತು ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡುವ ಬಗ್ಗೆ ಅಧ್ಯಯನ ನಡೆಸಿ ಶಿಫಾರಸು ಮಾಡಲು 2022ರ ಮೇ 16ರಂದ ನ್ಯಾಯಮೂರ್ತಿ ಭಕ್ತವತ್ಸಲ ನೇತೃತ್ವದ ಆಯೋಗವನ್ನು ಅಂದಿನ ಬಿಜೆಪಿ ಸರ್ಕಾರ ರಚನೆ ಮಾಡಿತ್ತು.
ಈ ಆಯೋಗದ ವರದಿಯಲ್ಲಿ ಏನಿತ್ತು?
ಆಯಾ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಖಾತರಿಪಡಿಸಿದ ಬಳಿಕವೇ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ವರ್ಗೀಕರಿಸಿ ಚುನಾವಣೆ ನಡೆಸಬೇಕೆಂಕೆಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅದರಂತೆ ಸರ್ಕಾರ ಭಕ್ತವತ್ಸಲ ಆಯೋಗವನ್ನು ರಚಿಸಿದ್ದು, ಅಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಆಯೋಗ ವರದಿಯನ್ನು ಸಹ ಸಲ್ಲಿಸಿತ್ತು. ಇನ್ನು ವರದಿಯಲ್ಲಿ ಏನೆಲ್ಲ ಅಂಶಗಳು ಇದ್ದವು ಎನ್ನುವುದನ್ನು ನೋಡುವುದಾರೆ, ಬಿಬಿಎಂಪಿ ಸೇರಿದಂತೆ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಎ ಮತ್ತು ಬಿ ಪ್ರವರ್ಗದ ಸಮುದಾಯಗಳಿಗೆ ಈಗಿರುವ ರಾಜಕೀಯ ಮೀಸಲಾತಿಯನ್ನು ಶೇ .33ರಷ್ಟು ಹೆಚ್ಚಿಸುವಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಒಟ್ಟು ಸ್ಥಾನಗಳ ಪೈಕಿ ಮೂರನೇ ಒಂದರಷ್ಟು ಅಂದರೆ 33ರಷ್ಟು ಮೀಸಲಾತಿಯನ್ನು ಹಿಂದುಳಿವರ್ಗಗಳ ಎ ಮತ್ತು ಬಿ ಪ್ರವರ್ಗದ ಸಮುದಾಯಗಳಿಗೆ (ಅಲ್ಪಸಂಖ್ಯಾತರು ಸೇರಿ) ನೀಡುವುದು ನ್ಯಾಯೋಚಿತ. ಆದ್ರೆ, ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಒಟ್ಟು ಮೀಸಲಾತಿಯ ಪ್ರಮಾಣ ಶೇ.50 ಮೀರಬಾರದು ಎಂದೂ ಶಿಫಾರಸಿನಲ್ಲಿ ಆಯೋಗ ತಿಳಿಸಿತ್ತು.
ತಿದ್ದುಪಡಿಯೊಂದಿಗೆ ವರದಿ ಅಂಗೀಕರಿಸಿದ್ದ ಸಿದ್ದರಾಮಯ್ಯ ಸರ್ಕಾರ
ಬಿಜೆಪಿ ಸರ್ಕಾರ ಹೋದ ಬಳಿಕ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಈ ಭಕ್ತವತ್ಸಲ ವರದಿಯನ್ನು ಗಮನಿಸಿದ್ದು, ಭಕ್ತವತ್ಸಲ ಸಮಿತಿಯ 5 ಶಿಫಾರಸುಗಳ ಪೈಕಿ ಮೂರು ಶಿಫಾರಸ್ಸಿಗೆ ಈ ಹಿಂದಿನ ಅಂದರೆ ಅಕ್ಟೋಬರ್ನಲ್ಲಿ ನಡೆದಿದ್ದ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು.
ಯಾವುದಕ್ಕೆ ಸಿಕ್ಕಿಲ್ಲ ಸರ್ಕಾರದ ಒಪ್ಪಿಗೆ?
2027-28ರಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಹಿಂದುಳಿದ ವರ್ಗಗಳ ಕೆಟಗರಿ ಎ ಮತ್ತು ಬಿ ಜತೆಗೆ ಅಲ್ಪಸಂಖ್ಯಾತರು ಸೇರಿದಂತೆ ಇತರ ಹಿಂದುಳಿದ ವರ್ಗದವರಿಗಾಗಿ ಪರಿಣಾಮಕಾರಿಯಾದ ರಾಜಕೀಯ ಮೀಸಲು ವ್ಯವಸ್ಥೆ ಕಲ್ಪಿಸಲು ಎರಡು ಹೆಚ್ಚುವರಿ ಕೆಟಗರಿಗಳನ್ನು ಸೇರಿಸಿ ಹಿಂದುಳಿದ ವರ್ಗಗಳ ಮರು ವರ್ಗೀಕರಣ ಮಾಡಲು ಕ್ರಮ ಕೈಗೊಳ್ಳಬೇಕೆಂಬ ಶಿಫಾರಸನ್ನು ಸಚಿವ ಸಂಪುಟ ಒಪ್ಪಿರಲಿಲ್ಲ.
ಬಿಬಿಎಂಪಿ ಕಾಯ್ದೆ 2020ರಂತೆ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ 30 ತಿಂಗಳು ಕಾಲಾವಧಿ ನಿಗದಿ ಪಡಿಸುವ ವ್ಯವಸ್ಥೆಯನ್ನು ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸಲು ಕರ್ನಾಟಕ ಮುನ್ಸಿಪಲ್ ಕಾಯ್ದೆಯ ಕಲಂ 10ಕ್ಕೆ ತಿದ್ದುಪಡಿ ತರುವುದು ಸೂಕ್ತ ಎಂದು ನ್ಯಾ. ಭಕ್ತವತ್ಸಲ ಆಯೋಗವು ವರದಿಯಲ್ಲಿ ಶಿಫಾರಸು ಮಾಡಿತ್ತು. ಅದನ್ನೂ ಸಹ ತಿರಸ್ಕರಿಸಲಾಗಿತ್ತು.
ಇದರಿಂದ ರಾಜಕೀಯವಾಗಿ ಏನು ಲಾಭ?
ಸ್ಥಳೀಯ ಸಂಸ್ಥೆಗಳ ನಗರ ಹಾಗೂ ಗ್ರಾಮೀಣ ಚುನಾವಣೆಗಳಲ್ಲಿ ಎಸ್‌ಸಿ-ಎಸ್‌ಟಿ ಮೀಸಲು ಜತೆಗೆ ಒಬಿಸಿ ವರ್ಗಕ್ಕೂ ಮೀಸಲಾತಿಯನ್ನು ಕಲ್ಪಿಸಬೇಕಿತ್ತು. ಒಟ್ಟಾರೆ ಗರಿಷ್ಠ ಶೇ.33ರಷ್ಟು ಸ್ಥಾನಗಳು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಲು ಅವಕಾಶ ಇತ್ತು. ಶೇ.50ರ ಮೀಸಲು ಮಿತಿಯಲ್ಲಿ ಎಸ್‌ಸಿ-ಎಸ್‌ಟಿ ಮೀಸಲಾತಿಯನ್ನುನ್ನು ಹೆಚ್ಚು ಪಡೆಯುವ ಕಡೆ ಕನಿಷ್ಠ ಶೇ.23ರವರೆಗಾದರೂ ಒಬಿಸಿಗೆ ಅವಕಾಶ ಸಿಗುವ ಸಾಧ್ಯತೆ ಇತ್ತು.
ಇದೀಗ ಏಕಾಏಕಿ ಭಕ್ತವತ್ಸಲ ವರದಿ ರಿಜೆಕ್ಟ್
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚಿಸಲಾಗಿದ್ದ ಭಕ್ತವತ್ಸಲ ಆಯೋಗ ನೀಡಿದ್ದ ವರದಿಯನ್ನು ಸಿದ್ದರಾಮಯ್ಯ ಸರ್ಕಾರ ಮೊದಲು ಕೆಲವೊಂದು ಅಂಶಗಳನ್ನು ಕೈಬಿಟ್ಟು ಉಳಿದವುಗಳನ್ನ ಒಪ್ಪಿಕೊಂಡಿತ್ತು. ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿರುವ ಬಗ್ಗೆಯೂ ಕಾನೂನು ಸಚಿವ ಎಚ್ಕೆ ಪಾಟೀಲ್ ಹೇಳಿದ್ದರು. ಆದ್ರೆ, ಇದೀಗ ಇದೇ ಸಿದ್ದರಾಮಯ್ಯನವರ ಸರ್ಕಾರ ಏಕಾಏಕಿ ಇಡೀ ಭಕ್ತವತ್ಸಲ ವರದಿಯನ್ನೇ ತಿರಸ್ಕಾರ ಮಾಡಲು ನಿರ್ಣಯ ಕೈಗೊಂಡಿದೆ. ಆದ್ರೆ, ಯಾಕೆ ಈ ನಿರ್ಣಯ ಕೈಗೊಂಡಿದೆ ಎನ್ನುವ ಬಗ್ಗೆ ಸರ್ಕಾರವಾಗಲಿ, ಸಂಬಂಧಪಟ್ಟ ಸಚಿವರಾಗಲಿ ಸ್ಪಷ್ಟನೆ ನೀಡಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.