ಕಿಡ್ನ್ಯಾಪ್ ಕೇಸ್: ಭವಾನಿ ಜಾಮೀನು ಅರ್ಜಿ ವಜಾ, ಇಂದು ರೇವಣ್ಣ ಕುಟುಂಬಕ್ಕೆ ಡಬಲ್ ಶಾಕ್
Bhavani Revanna: ಅತ್ತ ಪುತ್ರ ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್ ಆರು ದಿನ ಎಸ್ಐಟಿ ಕಸ್ಟಡಿಗೆ ನೀಡಿದೆ. ಅಲ್ಲದೇ ಅವರ ಜಾಮೀನು ಅರ್ಜಿ ಜೂನ್ ಏಳಕ್ಕೆ ಮುಂದೂಡಿಕೆಯಾಗಿದೆ. ಇದರ ಮಧ್ಯ ಇದೀಗ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ಸಹ ವಜಾಗೊಂಡಿದೆ. ಇದರೊಂದಿಗೆ ಎಚ್ಡಿ ರೇವಣ್ಣ ಕುಟುಂಬಕ್ಕೆ ಆಘಾತದ ಮೇಲೆ ಆಘಾತವಾಗಿದೆ.
ಬೆಂಗಳೂರು, (ಮೇ 31): ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ (victim woman kidnap case ) ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ(bhavani revanna) ಅವರ ಜಾಮೀನು ಅರ್ಜಿ ವಜಾಗೊಂಡಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಇಂದು (ಮೇ 31) ಭವಾನಿ ರೇವಣ್ಣ ಅವರಿಗೆ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಭವಾನಿ ರೇವಣ್ಣಗೆ ಬಂಧನದ ಭೀತಿ ಎದುರಾಗಿದ್ದು, ಎಚ್ಡಿ ರೇವಣ್ಣ ಕುಟುಂಬಕ್ಕೆ ಇಂದು ಡಬಲ್ ಶಾಕ್ ಆಗಿದೆ.
ಮೈಸೂರಿನ ಕೆಆರ್ ಪೇಟೆಯಲ್ಲಿ ದಾಖಲಾಗಿರುವ ಕಿಡ್ನ್ಯಾಪ್ ಕೇಸ್ನಲ್ಲಿ ಬಂಧನದ ಭೀತಿ ಎದುರಾದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಇಂದಿಗೆ (ಮೇ 31) ಜಾಮೀನು ಆದೇಶ ಕಾಯ್ದಿರಿಸಿತ್ತು. ಇದೀಗ ಕೋರ್ಟ್, ಭವಾನಿ ರೇವಣ್ಣ ಅವರಿಗೆ ಜಾಮೀನು ತಿರಸ್ಕರಿಸಿದೆ. ಮತ್ತೊಂದೆಡೆ ಪುತ್ರ ಪ್ರಜ್ವಲ್ ರೇವಣ್ಣನನ್ನು ಕೋರ್ಟ್ , ಆರು ದಿನ ಎಸ್ಐಟಿ ಕಸ್ಟಡಿಗೆ ನೀಡಿದೆ. ಅಲ್ಲದೇ ಪ್ರಜ್ವಲ್ ಜಾಮೀನು ಅರ್ಜಿ ವಿಚಾರಣೆ ಜೂ.7ಕ್ಕೆ ಮುಂದೂಡಿಕೆಯಾಗಿದೆ. ಹೀಗಾಗಿ ಇಂದು ಎಚ್ಡಿ ರೇವಣ್ಣ ಕುಟುಂಬಕ್ಕೆ ಆಘಾತದ ಮೇಲೆ ಆಘಾತವಾಗಿದೆ.
ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣಗೆ ಎಸ್ಐಟಿ ನೊಟೀಸ್ ನೀಡಿತ್ತು. ಆದರೆ, ಈ ನೊಟೀಸ್ಗೆ ಭವಾನಿ ರೇವಣ್ಣ ಉತ್ತರ ನೀಡಿಲ್ಲ. ಅಲ್ಲದೆ, ಕಳೆದ ಹದಿನೈದು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಮೇ 4 ರಂದು ಸಂತ್ರಸ್ತೆಯರ ಸ್ಥಳ ಮಹಜರಿನ ವೇಳೆ ಹೊಳೆನರಸೀಪುರ ಮನೆಯಲ್ಲಿ ಭವಾನಿ ಹಾಜರಿದ್ದರು. ಆ ನಂತರ ಮೇ 6 ರಂದು ಹೊಳೆನರಸೀಪುರದ ಮನೆಯಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರು ಹಾಗೂ ಮಾಜಿ ಶಾಸಕರು ಭವಾನಿಯನ್ನು ಬೇಟಿಯಾಗಿದ್ದರು. ಶಾಸಕರನ್ನು ಭೇಟಿಯಾದ ನಂತರ ಹೊಳೆನರಸೀಪುರ ಮನೆಯಿಂದ ಭವಾನಿ ರೇವಣ್ಣ ಹೊರ ಹೋಗಿದ್ದರು.ಆ ನಂತರ, ಅಂದರೆ ಮೇ 8 ರಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ 6 ದಿನ ಎಸ್ಐಟಿ ಕಸ್ಟಡಿಗೆ: ವಕೀಲರ ವಾದ-ಪ್ರತಿವಾದ ವಿವರ ಇಲ್ಲಿದೆ
ಭವಾನಿ ರೇವಣ್ಣ ಪರ ವಾದ ಮಾಡಿದ್ದ ಸಂದೇಶ್ ಚೌಟ,
ಭವಾನಿ ರೇವಣ್ಣ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ, ಎಸ್ಐಟಿ ವಾದ ಕೇಳಿದರೆ ಭವಾನಿ ವಿರುದ್ಧ ನೇರ ಆರೋಪಗಳಿಲ್ಲ. ಬೇರೊಬ್ಬರ ಮೊಬೈಲ್ ಕರೆಗಳನ್ನು ಆಧರಿಸಿ ಲಿಂಕ್ ಮಾಡಲಾಗುತ್ತಿದೆ. ಸಾಂದರ್ಭಿಕ ಸಾಕ್ಷಿಗಳನ್ನು ಉಲ್ಲೇಖಿಸಿ ವಾದಿಸಲಾಗುತ್ತಿದೆ. ಭವಾನಿ ಬಂಧಿಸಿ ತನಿಖೆ ನಡೆಸಬೇಕೆಂದು ಕೇಳಿದ್ದಾರೆ. ಭವಾನಿ ಸೂಚನೆ ಮೇರೆಗೆ ಬಂದ ಮಹಿಳೆಯನ್ನು ಏ. 26 ರಂದೇ ಮನೆಗೆ ಕಳುಹಿಸಲಾಗಿದೆ. ದೂರಿನಲ್ಲೇ ಈ ಅಂಶ ಸ್ಪಷ್ಟವಿದ್ದರೂ ಭವಾನಿಯನ್ನು ಆರೋಪಿ ಮಾಡಲಾಗುತ್ತಿದೆ. ಅಪಹರಣ ಕೇಸ್ನಲ್ಲಿ ಭವಾನಿಯ ಯಾವುದೇ ಪಾತ್ರವಿಲ್ಲ. ಎಫ್ಐಆರ್ ದಾಖಲಿಸಿ 27 ದಿನಗಳಾದರೂ ಎಸ್ಐಟಿ ನೋಟಿಸ್ ನೀಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಂತರ ಬೆಟ್ಟದಷ್ಟು ದಾಖಲೆ ಇವೆ ಎನ್ನುತ್ತಿದ್ದಾರೆ. ಹಾಗಿದ್ದರೆ ಈವರೆಗೂ ಏಕೆ ತನಿಖೆಗೆ ಕರೆಯಲಿಲ್ಲ. ತನಿಖೆಗೆ ಸಹಕರಿಸುವುದಾಗಿ ಈ ಹಿಂದೆಯೇ ಎಸ್ಐಟಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಭವಾನಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ವಾದ ಮಂಡಿಸಿದ್ದರು.
ಎಸ್ಐಟಿ ಪರ ಎಸ್ಪಿಪಿ ಬಿ.ಎನ್.ಜಗದೀಶ್ ವಾದ
ಇನ್ನು SIT ಪರ ವಾದ ಮಾಡಿದ್ದ ಎಸ್ಪಿಪಿ ಬಿ.ಎನ್.ಜಗದೀಶ್ , ಭವಾನಿ ಅವರು ಸತೀಶ್ ಬಾಬು ಮತ್ತಿತರರಿಗೆ ಮೊಬೈಲ್ ಕರೆಗಳನ್ನು ಮಾಡಿಸಿದ್ದಾರೆ. ಭವಾನಿಯನ್ನು ಬಂಧಿಸದೇ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಿಲ್ಲ. ಭವಾನಿ ಹಣಬಲ ಹೊಂದಿದ್ದು ರಾಜಕೀಯವಾಗಿ ಬಲಾಢ್ಯರಾಗಿದ್ದಾರೆ. ಹೀಗಾಗ ಅವರ ಬಂಧನ ಅನಿವಾರ್ಯ ಇದೆ. ಭವಾನಿ ರೇವಣ್ಣ ಎಸ್ಐಟಿ ನೀಡಿರುವ ಪತ್ರದ ವೈಖರಿ ಗಮನಿಸಬೇಕು. ಎಸ್ಐಟಿ ಯಾವಾಗ ನೋಟಿಸ್ ನೀಡಬೇಕೆಂದು ಭವಾನಿ ನಿರ್ಧರಿಸುವಂತಿಲ್ಲ. ಪ್ರಕರಣದಲ್ಲಿ ಸಾಕ್ಷಿಯಾಗಲು ಅವರು ಪ್ರಯತ್ನಿಸಿದಂತಿದೆ. ಸಂತ್ರಸ್ತೆ ಇಟ್ಟಿದ್ದ ಸ್ಥಳದಿಂದ ತಪ್ಪಿಸಿಕೊಂಡು ಸಹೋದರಿ ಮನೆಗೆ ತೆರಳಿದ್ದಾಳೆ. ಸಂತ್ರಸ್ತೆ ತನ್ನ ಪುತ್ರನ ವಿರುದ್ಧ ದೂರು ನೀಡದಂತೆ ತಡೆಯಲು ಭವಾನಿ ಯತ್ನಿಸಿದ್ದಾರೆ. ಸಂತ್ರಸ್ತೆಯ ಸಿಆರ್ಪಿಸಿ 161, 164 ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಭವಾನಿ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯ ಸಂಗ್ರಹಸಲಾಗಿದೆ ಎಂದು ವಾದ ಮಂಡಿಸಿದ್ದರು.
ಈ ವಾದ ಪ್ರತಿವಾದ ಆಲಿಸಿದ್ದ ವಿಶೇಷ ನ್ಯಾಯಾಲಯವು ಜಾಮೀನು ಆದೇಶವನ್ನು ಇಂದಿಗೆ ಅಂದರೆ ಮೇ 31ಕ್ಕೆ ಕಾಯ್ದಿರಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.