Parenting Tips : ಪೋಷಕರೇ, ಎಲ್ಲರ ಮುಂದೆ ನಿಮ್ಮ ಮಕ್ಕಳನ್ನು ಹೊಗಳುತ್ತೀರಾ? ಹಾಗಾದ್ರೆ ಈ ವಿಷಯ ತಿಳಿದಿರಲಿ
ಇತ್ತೀಚೆಗಿನ ದಿನಗಳಲ್ಲಿ ಬಹುತೇಕ ದಂಪತಿಗಳಿಗೆ ಒಂದೋ ಎರಡೋ ಮಕ್ಕಳು. ಹೀಗಾಗಿ ಮಕ್ಕಳನ್ನು ಅತೀ ಮುದ್ದಾಗಿ, ಸಣ್ಣ ಪುಟ್ಟ ವಿಷಯಕ್ಕೂ ಹೊಗಳಿ ಮಕ್ಕಳನ್ನು ಅಟ್ಟಕ್ಕೆ ಏರಿಸಿ ಬಿಡುತ್ತಾರೆ. ಮಕ್ಕಳ ಮನಸ್ಸು ತುಂಬಾನೇ ಸೂಕ್ಷ್ಮವಾಗಿರುತ್ತದೆ. ಹೆತ್ತವರು ಏನಾದರೂ ಹೇಳಿದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಹೀಗಾಗಿ ಮಕ್ಕಳನ್ನು ಹೊಗಳುವ ವಿಷಯದಲ್ಲಿ ಪೋಷಕರು ಕೆಲವು ಸೂಕ್ಷ್ಮ ವಿಷಯಗಳ ಬಗ್ಗೆ ಗಮನ ಕೊಡಬೇಕು. ನಿಮ್ಮ ಮುದ್ದಿನ ಮಕ್ಕಳನ್ನು ಹೊಗಳಲು ಈ ಕೆಲವು ನಿಯಮಗಳನ್ನು ಪಾಲಿಸುವುದು ಉತ್ತಮ.
ಹೊಗಳಿಕೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ನಾಲ್ಕು ಜನರ ಮುಂದೆ ನಮ್ಮನ್ನು ಯಾರಾದರೂ ಹೊಗಳಿದರೆ ಆಗುವ ಖುಷಿ ಅಷ್ಟಿಷ್ಟಲ್ಲ. ಹೀಗಾಗಿ ಹೊಗಳಿಕೆ ಎನ್ನುವ ಪದವು ದೊಡ್ಡವರಿಂದ ಹಿಡಿದು ಮಕ್ಕಳಿಗೂ ಖುಷಿ ನೀಡುತ್ತದೆ. ಆದರೆ ಕೆಲವು ಪೋಷಕರು ಮಕ್ಕಳನ್ನು ಅತಿಯಾಗಿ ಹೊಗಳುತ್ತಾರೆ. ಹೊಗಳಿಕೆಯೂ ಮಕ್ಕಳ ಬೆಳವಣಿಗೆಯ ಮೇಲೆ ಧನಾತ್ಮಕ ಪರಿಣಾಮ ಬಿರುತ್ತದೇನೊ ನಿಜ. ಆದರೆ ಮಕ್ಕಳನ್ನು ಹೊಗಳುವ ಭರದಲ್ಲಿ ಪೋಷಕರರಿಂದಲೂ ಕೆಲವು ತಪ್ಪುಗಳು ಆಗುತ್ತವೆ. ಹೀಗಾಗಿ ಮಕ್ಕಳನ್ನು ಹೊಗಳುವ ಪೋಷಕರಿಗಾಗಿ ಇಲ್ಲಿದೆ ಈ ಕೆಲವು ಟಿಪ್ಸ್ ಗಳು.
* ಮಕ್ಕಳ ಪ್ರಕ್ರಿಯೆಯನ್ನು ಹೊಗಳುವತ್ತ ಗಮನ ಕೊಡಿ : ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಹೊಗಳುತ್ತಾರೆ. ಆ ತಪ್ಪನ್ನು ಎಂದಿಗೂ ಮಾಡಲೇ ಬಾರದು. ಮಕ್ಕಳ ಬದಲಾಗಿ, ಆ ಮಗುವು ಮಾಡುವ ಕೆಲಸ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ. ಇದರಿಂದ ನಿಮ್ಮ ಮಗುವು ಒಳ್ಳೆಯ ಕೆಲಸವನ್ನೇ ಮಾಡಲು ಮುಂದಾಗುತ್ತದೆ, ಇದರಿಂದಾಗಿ ಆತ್ಮವಿಶ್ವಾಸವು ಹೆಚ್ಚಾಗುತ್ತದೆ.
* ಮಕ್ಕಳನ್ನು ನಿಯಂತ್ರಿಸಬೇಡಿ, ಬೆಂಬಲಿಸುವುದನ್ನು ಕಲಿಯಿರಿ : ಮಕ್ಕಳ ಕೆಲಸವನ್ನು ಹೊಗಳುವುದರಿಂದ ಸ್ವಂತ ನಿರ್ಣಯಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸಿದಂತಾಗುತ್ತದೆ. ಹೀಗಾಗಿ ಮಕ್ಕಳನ್ನು ಯಾವುದೇ ವಿಷಯದಲ್ಲಾದರೂ ನಿಯಂತ್ರಿಸುವ ಬದಲು, ಹೊಗಳಿಕೆಯಿಂದ ಬೆಂಬಲಿಸುವುದು ಅಗತ್ಯವಾಗಿದೆ.
* ಹೋಲಿಕೆಯ ಹೊಗಳಿಕೆ ಬೇಡ : ಕೆಲವು ಪೋಷಕರು ತಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಿ ಹೊಗಳುತ್ತಾರೆ. ಇದರಿಂದ ಮಕ್ಕಳು ತಮ್ಮ ಗುರಿಗಳನ್ನು ತಲುಪುವ ಬದಲು ಇತರರಿಗೆ ಹೋಲಿಕೆ ಮಾಡಿಕೊಂಡು ತಮ್ಮ ಕೆಲಸ ಕಾರ್ಯಗಳನ್ನು ನಿರ್ಣಯಿಸುತ್ತಾರೆ. ಹೀಗಾಗಿ ಮಕ್ಕಳ ಸ್ವಂತ ಕೆಲಸವನ್ನು ಇತರರೊಂದಿಗೆ ಹೋಲಿಕೆ ಮಾಡಿ ಹೊಗಳಬೇಡಿ.
* ನಿರ್ದಿಷ್ಟ ಕೆಲಸದ ಬಗ್ಗೆ ಬಾಯಿಬಿಟ್ಟು ಹೇಳಿ ಹೊಗಳಿ : ಪೋಷಕರು ಮಕ್ಕಳನ್ನು ಎಲ್ಲರ ಮುಂದೆ ಹೊಗಳುವಾಗ ತನ್ನ ಮಗುವಿನ ಎಲ್ಲಾ ವಿಷಯಗಳ ಬಗ್ಗೆ ಹೇಳುತ್ತಾರೆ. ನಿರ್ದಿಷ್ಟ ವಿಷಯದ ಬಗೆಗಿನ ಹೊಗಳಿಕೆಯೂ ಮಕ್ಕಳಿಗೆ ಭವಿಷ್ಯಕ್ಕೆ ಸಹಕಾರಿಯಾಗಿದೆ. ಇದು ನೀನು ಮಾಡಿದ ಒಳ್ಳೆಯ ಕೆಲಸ ಎಂದು ಹೇಳಿದರೆ ಮಕ್ಕಳು ಅಂತಹ ಕೆಲಸವನ್ನೇ ಮಾಡಲು ಪ್ರೋತ್ಸಾಹಿಸಿದಂತೆ ಆಗುತ್ತದೆ. ಅದಲ್ಲದೇ ಮಕ್ಕಳು ತಮ್ಮ ವರ್ತನೆಗಳನ್ನು ಸುಧಾರಿಸಿಕೊಳ್ಳುತ್ತಾರೆ. ಮಕ್ಕಳಿಗೆ ಯಾವುದರ ಬಗ್ಗೆ ಹೇಳಿದಿರಿ ಎಂದು ಸ್ಪಷ್ಟವಾಗಿ ಹೇಳುವುದು ಬಹಳ ಮುಖ್ಯ.
ಸನ್ನೆಗಳಿಂದ ಕೂಡಿದ ಪ್ರಶಂಸೆಯಿರಲಿ : ನಿಮ್ಮ ಮಕ್ಕಳನ್ನು ಹೊಗಳುವಾಗ ಸನ್ನೆಗಳನ್ನು ಬಳಸುವುದು ಮಕ್ಕಳ ಮೇಲೆ ಬಹಳಷ್ಟು ಪರಿಣಾಮ ಬಿರುತ್ತದೆ. ಇದು ಮಕ್ಕಳು ತಾವು ಮಾಡಿದ ಕೆಲಸದ ಬಗ್ಗೆ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ಸಹಕಾರಿಯಾಗಿದೆ. ಪೋಷಕರು ಕಣ್ಣ ಸನ್ನೆ, ಕೈ ಸನ್ನೆಯ ಮೂಲಕವು ಹೊಗಳುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತಮ.
* ಪ್ರಾಮಾಣಿಕ ಹೊಗಳುವಿಕೆಯಿರಲಿ : ಪೋಷಕರು ತಮ್ಮ ಮಕ್ಕಳ ಕೆಲಸವನ್ನು ಪ್ರಾಮಾಣಿಕವಾಗಿ ಪ್ರಶಂಸಿಸುವುದು ಮುಖ್ಯ. ಮಕ್ಕಳಿಗೆ ತಮ್ಮ ಪೋಷಕರು ಅತಿಯಾಗಿ ಹೊಗಳುತ್ತಿದ್ದಾರೆ, ಇಲ್ಲವಾದರೆ ಕಡಿಮೆ ಹೊಗಳುತ್ತಿದ್ದಾರೆ ಎಂದು ತಿಳಿದಾಗ ನೋವಾಗಬಹುದು. ಇದು ಮಕ್ಕಳ ವಿದ್ಯಾಭ್ಯಾಸದ ಮೇಲು ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ಈ ಬಗ್ಗೆ ಪೋಷಕರು ಹೆಚ್ಚು ಗಮನ ಕೊಡುವುದು ಅಗತ್ಯ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ