ಗುರುಕುಲದಲ್ಲಿ 11 ವರ್ಷದ ವಿದ್ಯಾರ್ಥಿಯ ಬರ್ಬರ ಹತ್ಯೆ; ಮೈಮೇಲಿತ್ತು 42 ಗಾಯ
ಲಕ್ನೋದ ಗುರುಕುಲದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. 11 ವರ್ಷದ ಬಾಲಕನನ್ನು ಹತ್ಯೆ ಮಾಡಲಾಗಿದೆ. ಆತನ ದೇಹದ ಮೇಲೆ 42 ಗಾಯಗಳು ಉಂಟಾಗಿದ್ದು, ಸಿಗರೇಟಿನಲ್ಲಿ ಸುಟ್ಟ ಗಾಯಗಳೂ ಆಗಿವೆ. ದಿವ್ಯಾಂಶ್ ಮೃತದೇಹವು ಮನೆಗೆ ತಲುಪಿದಾಗ, ಹಲವಾರು ಗಾಯದ ಗುರುತುಗಳನ್ನು ಗಮನಿಸಿದ ಅವರ ಪೋಷಕರು ಕಳವಳ ವ್ಯಕ್ತಪಡಿಸಿದರು. ಆತನನ್ನು ಕೋಲಿನಿಂದ ಹೊಡೆದ ಕಾರಣದಿಂದ ದೇಹದ ಮೇಲೆ ಸುಮಾರು 42 ಆಳವಾದ ಗಾಯದ ಗುರುತುಗಳಿತ್ತು ಎಂದು ಅವರು ಆರೋಪಿಸಿದ್ದಾರೆ.

ಲಕ್ನೋ, ಏಪ್ರಿಲ್ 24: ಲಕ್ನೋದ (Lucknow) ಗುರುಕುಲವೊಂದರಲ್ಲಿ ವಿದ್ಯಾರ್ಥಿಯಾಗಿದ್ದ 11 ವರ್ಷದ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುಕುಲಕ್ಕೆ ಸೇರಿಸಿ 7 ದಿನಗಳಲ್ಲೇ ಆತ ಶವವಾಗಿ ಪತ್ತೆಯಾಗಿದ್ದಾನೆ. ಮನೆಗೆ ತರುವಾಗ ಆತನ ದೇಹದಲ್ಲಿ ಹಲವಾರು ಗಾಯದ ಗುರುತುಗಳಿತ್ತು ಎಂದು ಆತನ ಕುಟುಂಬ ಆರೋಪಿಸಿದೆ.
11 ವರ್ಷದ ದಿವ್ಯಾಂಶ್ ಅವರನ್ನು ಏಪ್ರಿಲ್ 15ರಂದು ಲಕ್ನೋದ ರಾಮಾನುಜ್ ಭಾಗವತ್ ವೇದ ವಿದ್ಯಾಪೀಠ ಗುರುಕುಲಕ್ಕೆ ದಾಖಲಿಸಲಾಗಿತ್ತು. ಏಪ್ರಿಲ್ 22ರಂದು ಆತನ ಕುಟುಂಬಕ್ಕೆ ಆತನ ಸಾವಿನ ಸುದ್ದಿ ಬಂದಿತ್ತು. ಪೊಲೀಸ್ ಮೂಲಗಳ ಪ್ರಕಾರ, ಗುರುಕುಲದ ಮ್ಯಾನೇಜರ್ ಕನ್ಹಯ್ಯಾ ಲಾಲ್ ಮಿಶ್ರಾ ಮನಸಿಗೆ ಬಂದಂತೆ ಹೊಡೆದಿದ್ದರಿಂದ ಆ ಬಾಲಕ ಸಾವನ್ನಪ್ಪಿದ್ದಾನೆ. ಗುರುವಾರ ತಡರಾತ್ರಿ ಮ್ಯಾನೇಜರ್ ಹಾಗೂ ಆತನ ಗೆಳತಿ ಹರ್ಷಿತಾ ಸೋನಿಯಾಳನ್ನು ಬಂಧಿಸಲಾಯಿತು. ಸಾಕ್ಷ್ಯ ನಾಶಪಡಿಸಿದ ಮತ್ತು ಇತರ ಶಿಷ್ಯರನ್ನು ಮನೆಗೆ ಕಳುಹಿಸಿದ ಆರೋಪ ಹರ್ಷಿತಾ ಮೇಲಿದೆ.
ಮಹಾರಾಜ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಗೌರೈಯಾ ಗ್ರಾಮದ ನಿವಾಸಿ ದಿವ್ಯಾಂಶ್ ಅವರ ತಂದೆ ನರೇಂದ್ರ ಕುಮಾರ್ ದ್ವಿವೇದಿ ಅವರು ತಮ್ಮ ಮಗನನ್ನು ಗುರುಕುಲದಲ್ಲಿ ಉಚಿತ ವೇದ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದ ನಂತರ ಅಲ್ಲಿಗೆ ಸೇರಿಸಿದ್ದರು. ದಿವ್ಯಾಂಶ್ ಮಂಗಳವಾರ ರಾತ್ರಿ ತನ್ನ ಅಕ್ಕನೊಂದಿಗೆ ಫೋನ್ನಲ್ಲಿ ಮಾತನಾಡಿದ್ದ. ಆದರೆ, ಮರುದಿನ ಬೆಳಿಗ್ಗೆ ಆತ ಮೃತಪಟ್ಟಿದ್ದಾನೆ ಎಂದು ಕುಟುಂಬಕ್ಕೆ ತಿಳಿಸಲಾಯಿತು.
ಇದನ್ನೂ ಓದಿ: 41 ನಿಮಿಷದಲ್ಲಿ ಅತ್ಯಾಚಾರ, ಕೊಲೆ, ದರೋಡೆ; ಐಆರ್ಎಸ್ ಅಧಿಕಾರಿ ಮನೆಯಲ್ಲಿ ನಡೆದಿದ್ದೇನು? ಆರೋಪಿ ಸಿಕ್ಕಿದ್ದು ಹೇಗೆ?
ಆತನನ್ನು ಕೋಲಿನಿಂದ ಹೊಡೆದ ಕಾರಣದಿಂದ ದೇಹದ ಮೇಲೆ ಸುಮಾರು 42 ಆಳವಾದ ಗಾಯದ ಗುರುತುಗಳಿತ್ತು. ಆತನ ಕೈ ಮತ್ತು ಕಾಲುಗಳನ್ನು ಹಗ್ಗಗಳಿಂದ ಕಟ್ಟಲಾಗಿತ್ತು. ಆತನಿಗೆ ತೀವ್ರ ಚಿತ್ರಹಿಂಸೆ ನೀಡಲಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಗುರುಕುಲದ ಮ್ಯಾನೇಜರ್ ಮಿಶ್ರಾ ಅವರು ಆ ಬಾಲಕ ಮೆಟ್ಟಿಲುಗಳಿಂದ ಕೆಳಗೆ ಬಿದ್ದಿದ್ದಾನೆ ಎಂದು ಕುಟುಂಬಕ್ಕೆ ದೂರವಾಣಿ ಮೂಲಕ ತಿಳಿಸಿದ ನಂತರ ಅನುಮಾನ ಮತ್ತಷ್ಟು ಹೆಚ್ಚಾಯಿತು.
ಮಗುವಿನ ತಂದೆ ನೀಡಿದ ದೂರಿನ ಮೇರೆಗೆ, ಮಿಶ್ರಾ ಮತ್ತು ಚಾಲಕನ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ನಾಶದ ಆರೋಪದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರಾದ (ಪೂರ್ವ) ಅಂಜಲಿ ವಿಶ್ವಕರ್ಮ ಹೇಳಿದ್ದಾರೆ. ಗುರುಕುಲವನ್ನು ಪರೀಕ್ಷಿಸಲು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ತಂಡವು ಲಕ್ನೋಗೆ ಭೇಟಿ ನೀಡಲಿದೆ.
ಇದನ್ನೂ ಓದಿ: ರಸ್ತೆ ಬದಿ ನಡೆದು ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ: ಇಬ್ಬರು ಡೆಲಿವರಿ ಬಾಯ್ಸ್ ಅರೆಸ್ಟ್
ವಿಡಿಯೋಗ್ರಫಿ ಅಡಿಯಲ್ಲಿ ವೈದ್ಯರು ನಡೆಸಿದ ಶವಪರೀಕ್ಷೆಯಲ್ಲಿ ಕೋಲು ಮತ್ತು ಬೆಲ್ಟ್‌ನಿಂದ ಉಂಟಾದ ಗಾಯದ ಗುರುತುಗಳು ದೃಢಪಟ್ಟವು. ಆದರೆ ಮಗುವಿನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ಕಂಡುಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನ ದೇಹದ ಮೇಲೆ 42 ಗಾಯಗಳಿರುವುದು ಕಂಡುಬಂದಿದೆ. ಇವುಗಳಲ್ಲಿ ಬೆನ್ನು, ತೋಳುಗಳು, ಕಾಲುಗಳು ಮತ್ತು ಎದೆಯ ಮೇಲೆ ಆಳವಾದ ಏಟುಗಳು ಸೇರಿವೆ. ವೈದ್ಯರು 11 ಕಡೆ ಸಿಗರೇಟ್ನಿಂದ ಸುಟ್ಟ ಗುರುತುಗಳನ್ನು ಸಹ ಪತ್ತೆಹಚ್ಚಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




