- Kannada News Photo gallery In Dharwad Students resplendent in traditional dress; Entry to college in tractors
ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು; ಟ್ರ್ಯಾಕ್ಟರ್, ಚಕ್ಕಡಿಗಳಲ್ಲಿ ಕಾಲೇಜಿಗೆ ಎಂಟ್ರಿ
ಶಾಲೆ, ಕಾಲೇಜು ಅಂದ ಕೂಡಲೇ ಓದು, ಆಟ, ಶಿಸ್ತು ಇರಬೇಕಾಗಿದ್ದೇ. ಇದೆಲ್ಲದರ ಜೊತೆಗೆ ವಿದ್ಯಾರ್ಥಿಗಳಿಗೆ ಬೇರೆ ಬೇರೆಯ ಚಟುವಟಿಕೆಗಳೂ ಇರಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳು ಖುಷಿಯಿಂದ ಕಾಲೇಜಿಗೆ ಬರುತ್ತಾರೆ. ಇದೇ ಕಾರಣಕ್ಕೆ ಧಾರವಾಡದ ಒಂದು ಕಾಲೇಜಿನಲ್ಲಿ ಒಂದು ವಾರದವರೆಗೆ ಫನ್ ವೀಕ್ ಎಂದು ಆಚರಿಸಲಾಯಿತು. ಈ ವಾರದ ಕೊನೆಯ ದಿನ ಸಾಂಪ್ರದಾಯಿಕ ದಿನ ಆಚರಿಸೋ ಮೂಲಕ ಶಾಲೆಯ ಆವರಣದಲ್ಲಿ ಹೊಸ ಜಗತ್ತನ್ನೇ ನಿರ್ಮಾಣ ಮಾಡಲಾಗಿತ್ತು.
Updated on: May 25, 2024 | 8:01 PM

ಇಳಕಲ್ ಸೀರೆ, ಸೊಂಟಕ್ಕೆ ಡಾಬು, ತಲೆ ತುಂಬ ಸೆರಗು, ಮೂಗಿಗೆ ಫಳ ಫಳ ಹೊಳೆಯೋ ಮೂಗುತಿ, ಕಿವಿಯಲ್ಲಿ ನೇತಾಡುತ್ತಿರುವ ಬೆಂಡೋಲಿ(ಕಿವಿ ಓಲೆ). ಇಲ್ಲಿ ಯಾವುದೋ ಸೌಂದರ್ಯ ಸ್ಪರ್ಧೆ ಅಥವಾ ಉಡುಗೆ ಸ್ಪರ್ಧೆ ನಡೆದಿಲ್ಲ. ಇದೆಲ್ಲ ನಡೆದಿದ್ದು ಧಾರವಾಡದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಾಲೇಜಿನ ಆವರಣದಲ್ಲಿ.

ಈ ಕಾಲೇಜಿನ ಪದವಿ ವಿದ್ಯಾರ್ಥಿ-ವಿದ್ಯಾರ್ಥಿಗಳಿಗಾಗಿ ಉಪನ್ಯಾಸಕರು ಒಂದು ವಾರದವರೆಗೆ ಫನ್ ಡೇ ಆಚರಿಸಿದ್ದರು. ನಿತ್ಯವೂ ಒಂದೊಂದು ಬಗೆಯ ಬಟ್ಟೆ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಕೊನೆಯ ದಿನದಂದು ಸಾಂಪ್ರದಾಯಿಕ ಉಡುಗೆ ಧರಿಸಲು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶರ್ಟ್, ಲುಂಗಿ ಧರಿಸಿ ಬಂದಿದ್ದರೆ, ವಿದ್ಯಾರ್ಥಿನಿಯರು ಇಳಕಲ್ ಸೀರೆ ಉಟ್ಟುಕೊಂಡು ಬಂದು ಸಂಭ್ರಮಿಸಿದರು.

ಕಾಲೇಜಿಗೆ ಟ್ರ್ಯಾಕ್ಟರ್ ಹಾಗೂ ಚಕ್ಕಡಿಗಳಲ್ಲಿ ಬಂದಿದ್ದ ವಿದ್ಯಾರ್ಥಿಗಳು, ಸಂಭ್ರಮದ ವಾತಾವರಣ ನಿರ್ಮಾಣ ಮಾಡಿದ್ದರು. ಬಳಿಕ ಕಾಲೇಜಿನ ಆವರಣದಲ್ಲಿ ಚಕ್ಕಡಿಯಲ್ಲಿ ಸುತ್ತಾಡಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮದುವೆ ದಿಬ್ಬಣದ ವಾತಾವರಣ ನಿರ್ಮಾಣ ಮಾಡಿದರು.

ವಿದ್ಯಾರ್ಥಿಗಳು ಶರ್ಟ್, ಲುಂಗಿ ಧರಿಸಿ ಬಂದಿದ್ದರೆ, ವಿದ್ಯಾರ್ಥಿನಿಯರು ಮಾತ್ರ ಸಾಂಪ್ರದಾಯಿಕ ಶೈಲಿಯಲ್ಲಿ ಶೃಂಗರಿಸಿಕೊಂಡು ಬಂದಿದ್ದರು. ಥೇಟ್ ಹಳ್ಳಿ ಮಹಿಳೆಯರಂತೆ ಕಾಣುತ್ತಿದ್ದ ವಿದ್ಯಾರ್ಥಿನಿಯರು ಆವರಣದ ತುಂಬೆಲ್ಲಾ ಓಡಾಡಿ ಸಂಭ್ರಮಿಸಿದರು.

ಬಗೆ ಬಗೆಯ ಮುತ್ತುಗಳನ್ನು ಹೊಂದಿರೋ ನತ್ತು, ಕಿವಿಗೆ ದೊಡ್ಡ ದೊಡ್ಡ ಬೆಂಡೋಲೆ, ಕೈಗೆ ಬಗೆ ಬಗೆಯ ಬಳೆ, ಕೊರಳಲ್ಲಿ ಕಾಸಿನ ಸರ ಧರಿಸಿದ್ದ ವಿದ್ಯಾರ್ಥಿನಿಯರ ಸಂಭ್ರಮ ಹೇಳತೀರದು. ನಿತ್ಯವೂ ಪಾಠ-ಪ್ರವಚನ ಅಂತಾ ಕಾಲ ಕಳೆಯೋ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮ ಒಂದು ಹೊಸ ಬಗೆಯ ಅನುಭವ ನೀಡಿತ್ತು.

ಆಧುನಿಕ ದಿನಗಳಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆಗಳು ಮರೆಯಾಗುತ್ತಿವೆ. ನಮ್ಮ ಸಾಂಪ್ರದಾಯಿಕ ಉಡುಗೆಯನ್ನು ಮತ್ತು ಆಭರಣಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕಾಗಿದ್ದು ಅನಿವಾರ್ಯ. ಇದೇ ಕಾರಣಕ್ಕೆ ಈ ಕಾಲೇಜಿನಲ್ಲಿ ಆಯೋಜಿಸಿದ್ದ ಈ ಸಾಂಪ್ರದಾಯಿಕ ದಿನ ಎಲ್ಲ ವಿದ್ಯಾರ್ಥಿಗಳಿಗೆ ಒಂದು ಹೊಸ ಅನುಭವ ನೀಡಿದ್ದಂತೂ ಸತ್ಯ.



















