IPL 2025: ಮುಂದಿನ ಸೀಸನ್ಗೆ… ಸೋಲುವ ಮುನ್ನವೇ ಸೋಲೊಪ್ಪಿಕೊಂಡ ಧೋನಿ
IPL 2025 CSK vs MI: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 38ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 176 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ 15.4 ಎಸೆತಗಳಲ್ಲಿ ಗುರಿ ಮುಟ್ಟುವ ಮೂಲಕ ಭರ್ಜರಿ ಜಯ ಸಾಧಿಸಿದೆ.

IPL 2025: ಐಪಿಎಲ್ ಸೀಸನ್-18 ರಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಆಡಿರುವ 8 ಪಂದ್ಯಗಳಲ್ಲಿ ಸಿಎಸ್ಕೆ ತಂಡವು ಕೇವಲ 2 ರಲ್ಲಿ ಮಾತ್ರ ಜಯ ಸಾಧಿಸಿದೆ. ಅದರಲ್ಲೂ ದ್ವಿತೀರ್ಯಾಧದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯವಾಗಿ ಸೋಲೊಪ್ಪಿಕೊಂಡಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಅಜೇಯ 76 ರನ್ ಬಾರಿಸಿದರು. ಈ ಅರ್ಧಶತಕದೊಂದಿಗೆ ಮುಂಬೈ ಇಂಡಿಯನ್ಸ್ ತಂಡವು 15.4 ಓವರ್‌ಗಳಲ್ಲಿ 177 ರನ್ ಬಾರಿಸಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಸಿಎಸ್ಕೆ ತಂಡವು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ.
ಈ ಸೋಲಿನ ಬಳಿಕ ಮಾತನಾಡಿದ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ನಾವು ತುಂಬಾ ಕೆಳಮಟ್ಟದಲ್ಲಿದ್ದೆವು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ದ್ವಿತೀಯಾರ್ಧದಲ್ಲಿ ಇಬ್ಬನಿ ಬೀಳುತ್ತದೆ ಎಂದು ನಮಗೆಲ್ಲರಿಗೂ ತಿಳಿದಿತ್ತು. ಹೀಗಾಗಿ ನಾವು ಮಧ್ಯಮ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಲು ಪ್ಲ್ಯಾನ್ ರೂಪಿಸಿದ್ದೆವು. ಆದರೆ ಈ ಹಂತದಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಿ ನಮ್ಮ ಯೋಜನೆಗಳನ್ನು ವಿಫಲಗೊಳಿಸಿದರು.
ಬುಮ್ರಾ ಈಗ ವಿಶ್ವದ ಅತ್ಯುತ್ತಮ ಡೆತ್ ಬೌಲರ್‌ಗಳಲ್ಲಿ ಒಬ್ಬರು. ಹೀಗಾಗಿ ಅವರು ಬೌಲಿಂಗ್ ಆರಂಭಿಸುವ ಮುನ್ನವೇ ನಾವು ಬಿರುಸಿನ ಬ್ಯಾಟಿಂಗ್ ಆರಂಭಿಸಬೇಕಿತ್ತು. ಆ ಬಳಿಕ ಬುಮ್ರಾ ಓವರ್ನಲ್ಲಿ ರನ್ ಗಳಿಸಿದ್ದರೆ ಅದು ಪ್ಲಸ್ ಪಾಯಿಂಟ್ ಆಗುತ್ತಿತ್ತು. ಆದರೆ ಅದು ನಮ್ಮಿಂದ ಸಾಧ್ಯವಾಗಲಿಲ್ಲ. ಇದಾಗ್ಯೂ ಕೆಲ ಓವರ್‌ಗಳಲ್ಲಿ ನಾವು ಮತ್ತಷ್ಟು ರನ್ಗಳನ್ನು ಗಳಿಸಬಹುದಿತ್ತು ಎಂಬುದು ನನ್ನ ಭಾವನೆ ಎಂದು ಧೋನಿ ಹೇಳಿದರು.
ಏಕೆಂದರೆ ಇಬ್ಬನಿ ಇದ್ದ ಕಾರಣ, 175 ರನ್‌ಗಳು ಸಮಾನ ಸ್ಕೋರ್ ಅಲ್ಲ. ಆಯುಷ್ ಮ್ಹಾತ್ರೆ ಪವರ್ಪ್ಲೇನಲ್ಲಿ ನಿಜವಾಗಿಯೂ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಆತನು ಬಾರಿಸಿದ ಕೆಲ ಬಿಗ್ ಹಿಟ್ಗಳು ಉತ್ತಮವಾಗಿತ್ತು. ಅಂತಹ ಬಿಟ್ ಹಿಟ್ಗಳನ್ನು ಆರಿಸಿಕೊಳ್ಳುವಾಗ ಅಗತ್ಯವಿರುವ ವಿಧಾನ ಆತನ ಬ್ಯಾಟಿಂಗ್ನಲ್ಲಿತ್ತು. ಹೀಗಾಗಿ ಆಯುಷ್ ಮ್ಹಾತ್ರೆ ಆಯ್ಕೆಯು ನಮಗೆ ಒಳ್ಳೆಯ ಸಂಕೇತವಾಗಿದೆ.
ಸೋಲುವ ಮುನ್ನವೇ ಸೋಲೊಪ್ಪಿಕೊಂಡ ಧೋನಿ:
2020 ರಂತೆ ಈ ವರ್ಷ ಕೂಡ ನಮಗೆ ಉತ್ತಮವಾಗಿಲ್ಲ. ಆದರೆ ನಾವು ಸರಿಯಾದ ರೀತಿಯ ಕ್ರಿಕೆಟ್ ಆಡುತ್ತಿದ್ದೇವೆಯೇ, ನಾವು ನಮ್ಮನ್ನು ನಾವು ಅನ್ವಯಿಸಿಕೊಳ್ಳುತ್ತಿದ್ದೇವೆಯೇ ಎಂದು ನೋಡಬೇಕಿದೆ. ಇದುವೇ ಈಗ ನಮ್ಮ ಮುಂದಿರುವ ಪ್ರಶ್ನಾರ್ಥಕ ಚಿಹ್ನೆಗಳು.
ಕ್ಯಾಚ್ಗಳನ್ನು ಹಿಡಿಯುವ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ. ಇದು ಸಹ ಪಂದ್ಯಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ. ಇದಲ್ಲದೆ, ನಾವು ಗೆಲ್ಲಬೇಕಾದ ಎಲ್ಲಾ ಪಂದ್ಯಗಳಲ್ಲಿಯೂ ಅಂತರವನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಇದೀಗ ನಮ್ಮ ಮುಂದಿರುವ ಪಂದ್ಯಗಳಲ್ಲಿ ಒಂದೊಂದೇ ಜಯ ಸಾಧಿಸಿ ಮುಂದುವರೆಯಬೇಕು.
ಒಂದು ವೇಳೆ ಮುಂದಿನ ಕೆಲವು ಪಂದ್ಯಗಳಲ್ಲಿ ಸೋತರೆ, ಮುಂದಿನ ವರ್ಷಕ್ಕೆ ಸರಿಯಾದ ಸಂಯೋಜನೆಯನ್ನು ರೂಪಿಸುವುದು ಸಹ ನಮಗೆ ಮುಖ್ಯವಾಗುತ್ತದೆ. ಅದರಂತೆ ಮುಂದಿನ ಸೀಸನ್ಗಾಗಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಿ ಕಂಬ್ಯಾಕ್ ಮಾಡುವುದು ಅತ್ಯಗತ್ಯವಾಗುತ್ತದೆ ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಇದನ್ನೂ ಓದಿ: VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ
ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್ ಹಂತದಿಂದ ಹೊರಬೀಳುವ ಮುನ್ನವೇ ಮಹೇಂದ್ರ ಸಿಂಗ್ ಧೋನಿ, ಮುಂದಿನ ಸೀಸನ್ಗಾಗಿ ಈಗಲೇ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಬೇಕೆಂದಿರುವುದು, ಸೋಲುವ ಮುನ್ನವೇ ಸೋಲೊಪ್ಪಿಕೊಂಡಂತೆ ಎಂದು ಅನೇಕರು ವಿಶ್ಲೇಷಿಸಿದ್ದಾರೆ. ಇದಾಗ್ಯೂ ಸಿಎಸ್ಕೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದು ಪ್ಲೇಆಫ್ಗೇರಲಿದೆಯಾ ಕಾದು ನೋಡಬೇಕಿದೆ.