SA vs AUS, Semi Final 2: ವಿಶ್ವಕಪ್ನಲ್ಲಿಂದು ದ್ವಿತೀಯ ಸೆಮಿಫೈನಲ್: ದ. ಆಫ್ರಿಕಾ-ಆಸ್ಟ್ರೇಲಿಯಾ ನಡುವೆ ಹೈವೋಲ್ಟೇಜ್ ಪಂದ್ಯ
South Africa vs Australia, ICC ODI World Cup 2023 Semi Final 2: ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಇಂದು ದ್ವಿತೀಯ ಸೆಮಿಫೈನಲ್ ಏರ್ಪಡಿಸಲಾಗಿದೆ. ಈ ಪಂದ್ಯವನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಯೋಜಿಸಲಾಗಿದ್ದು, ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ಮತ್ತು ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಲಿವೆ.
ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈಗಾಗಲೇ ಮೊದಲ ಸೆಮಿಫೈನಲ್ ಮುಕ್ತಾಯಗೊಂಡಿದ್ದು, ನ್ಯೂಝಿಲೆಂಡ್ ವಿರುದ್ಧ 70 ರನ್ಗಳ ಅಮೋಘ ಜಯ ಸಾಧಿಸಿ ಟೀಮ್ ಇಂಡಿಯಾ ಫೈನಲ್ಗೆ ಲಗ್ಗೆಯಿಟ್ಟಿದೆ. ಇಂದು ದ್ವಿತೀಯ ಸೆಮಿಫೈನಲ್ ಏರ್ಪಡಿಸಲಾಗಿದೆ. ಈ ಪಂದ್ಯವನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಯೋಜಿಸಲಾಗಿದ್ದು, ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ಮತ್ತು ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ (South Africa vs Australia) ತಂಡಗಳು ಮುಖಾಮುಖಿ ಆಗಲಿವೆ. ಇಲ್ಲಿ ಗೆದ್ದ ತಂಡ ಫೈನಲ್ನಲ್ಲಿ ಭಾರತ ವಿರುದ್ಧ ಪ್ರಶಸ್ತಿಗೆ ಹೋರಾಡಲಿದೆ.
ದಕ್ಷಿಣ ಆಫ್ರಿಕಾ ತಂಡ:
ಸೆಮೀಸ್ಗು ಮುನ್ನ ಹರಿಣಗಳ ಪಡೆಗೆ ದೊಡ್ಡ ಆಘಾತ ಉಂಟಾಗಿದೆ. ತಂಡದ ನಾಯಕ ಟೆಂಬಾ ಬವುಮಾ ಇಂದು ಆಡುವುದು ಅನುಮಾನ. ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಇವರು ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಪ್ರೋಟೀಸ್ ತಂಡವು ತಮ್ಮ ವಿಶ್ವಕಪ್ 2023 ರ ಅಭಿಯಾನದ ಉದ್ದಕ್ಕೂ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪರಾಕ್ರಮ ಮೆರೆದಿದೆ. ತಂಡ ಎಲ್ಲ ಆಟಗಾರರು ಸಮನಾಗಿ ಕೊಡುಗೆ ನೀಡುತ್ತಿದ್ದಾರೆ. ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆನ್, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್ ಬ್ಯಾಟಿಂಗ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ, ದಕ್ಷಿಣ ಆಫ್ರಿಕಾ ಮಾರಕವಾಗಿದೆ. ಜಾನ್ಸೆನ್ ಮತ್ತು ರಬಾಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಸ್ಪಿನ್ನರ್ ಕೇಶವ್ ಮಹಾರಾಜ್ ನಂಬರ್ ಒನ್ ಬೌಲರ್ ಆಗಿದ್ದಾರೆ.
ಆಸ್ಟ್ರೇಲಿಯಾ ತಂಡ:
ಆಸೀಸ್ ತನ್ನ ಬ್ಯಾಟಿಂಗ್ ವಿಭಾಗದ ಮೇಲೆ ಹೆಚ್ಚು ಅವಲಂಬಿತರಾಗಿದೆ. ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ ಕ್ರಿಕೆಟ್ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ವಾರ್ನರ್ ಈಗಾಗಲೇ 9 ಪಂದ್ಯಗಳಿಂದ 499 ರನ್ ಗಳಿಸಿದ್ದಾರೆ. ಸ್ಟೀವ್ ಸ್ಮಿತ್ ಕಡೆಯಿಂದ ಸೆಮೀಸ್ನಲ್ಲಿ ಒಂದೊಳ್ಳೆ ಇನ್ನಿಂಗ್ಸ್ ಬರಬೇಕು. ಗ್ಲೆನ್ ಮ್ಯಾಕ್ಸ್‌ವೆಲ್ ಅಫ್ಘಾನಿಸ್ತಾನ ವಿರುದ್ಧ ದ್ವಿಶತಕ ಸಿಡಿಸಿ ಅಬ್ಬರಿಸಿದ್ದರು. ಬೌಲಿಂಗ್ ವಿಭಾಗಕ್ಕೆ ಸಂಬಂಧಿಸಿದಂತೆ, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ಸೀನ್ ಅಬಾಟ್, ಮಾರ್ಕಸ್ ಸ್ಟೊಯಿನಿಸ್ ಇದ್ದಾರೆ. ಆ್ಯಡಂ ಝಂಪಾ ಕೋಲ್ಕತ್ತಾದ ನಿಧಾನಗತಿಯ ಮತ್ತು ತಿರುವಿನ ಪಿಚ್‌ನಲ್ಲಿ ಮ್ಯಾಜಿಕ್ ಮಾಡಲು ಸಿದ್ದರಾಗಿದ್ದಾರೆ.
Virat Kohli: ವಿರಾಟ್ ಕೊಹ್ಲಿಯ ಸಾಧನೆಯ ಪಯಣ ಇನ್ನು ಮುಗಿದಿಲ್ಲ: ಸೌರವ್ ಗಂಗೂಲಿ
ಮಳೆ ಸಾಧ್ಯತೆ:
ದಿ ವೆದರ್ ಚಾನೆಲ್ ಪ್ರಕಾರ, ಗುರುವಾರ ಕೋಲ್ಕತ್ತಾದಲ್ಲಿ 50 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. ಮಧ್ಯಾಹ್ನದ ಆರ್ದ್ರತೆಯು 77 ಪ್ರತಿಶತದಷ್ಟು ಇರಬಹುದೆಂದು ನಿರೀಕ್ಷಿಸಲಾಗಿದೆ, ಗರಿಷ್ಠ ತಾಪಮಾನವು 26 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ರಾತ್ರಿಯ ತಾಪಮಾನವು ಸುಮಾರು 23 ಡಿಗ್ರಿ ಸೆಲ್ಸಿಯಸ್‌ಗೆ ಮತ್ತಷ್ಟು ಕಡಿಮೆಯಾಗುತ್ತದೆ. ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿದ್ದರೂ, ಶುಕ್ರವಾರ ಕೂಡ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹವಾಮಾನ ವರದಿ ಸೂಚಿಸುತ್ತದೆ. ಎರಡು ದಿನಗಳಲ್ಲಿ ಪ್ರತಿ ತಂಡಕ್ಕೆ ಕನಿಷ್ಠ 20 ಓವರ್‌ಗಳನ್ನು ಪೂರ್ಣಗೊಳಿಸಬೇಕು ಎಂಬ ನಿಯಮವಿದೆ. ಪಂದ್ಯ ನಡೆಯದೇ ಇದ್ದರೆ ಆಫ್ರಿಕಾ ಫೈನಲ್ ತಲುಪುತ್ತದೆ.
ಈಡನ್ ಗಾರ್ಡನ್ಸ್ ಪಿಚ್ ರಿಪೋರ್ಟ್:
ಈಡನ್ ಗಾರ್ಡನ್ಸ್ ದೊಡ್ಡ ಸ್ಕೋರ್ ಮಾಡುವ ಸ್ಥಳವೆಂದು ಪರಿಗಣಿಸದಿದ್ದರೂ, ಇಲ್ಲಿನ ಮೇಲ್ಮೈ ಬ್ಯಾಟಿಂಗ್‌ಗೆ ಸಹಕಾರಿ ಆಗಿದೆ. ಮೈದಾನವು ಬ್ಯಾಟ್ ಮತ್ತು ಬಾಲ್ ಎರಡಕ್ಕೂ ನೆರವಾಗುತ್ತದೆ ಎನ್ನಬಹುದು. ಏಕೆಂದರೆ ಸ್ಪಿನ್ನರ್‌ಗಳು ಈ ಪಿಚ್‌ನಲ್ಲಿ ಯಶಸ್ಸು ಸಾಧಿಸುತ್ತಾರೆ. ವೇಗಿಗಳು ಹೊಸ ಚೆಂಡಿನ ಮೂಲಕ ಪ್ರಭಾವ ಬೀರಬಹುದು. ಇಬ್ಬನಿಯು ಟಾರ್ಗೆಟ್ ಬೆನ್ನಟ್ಟುವ ತಂಡಕ್ಕೆ ಸಹಾಯ ಮಾಡಲಿದೆ.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡುಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ ಕಗಿಸೊ ರಬಾಡ, ಲಿಜಾಡ್ ವಿಲಿಯಮ್ಸ್ ಹೆಂಡ್ರಿಕ್ಸ್, ಆಂಡಿಲೆ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಶಾನ್ ಅಬಾಟ್, ಮಾರ್ನಸ್ ಲಾಬುಶೇನ್, ಕ್ಯಾಮೆರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ, ಮಿಚೆಲ್ ಸ್ಟಾರ್ಕ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:01 am, Thu, 16 November 23