ಹಿಮಯುಗದ ಮಾನವರು ಗುಹೆಗಳಲ್ಲಿ ರಚಿಸುತ್ತಿದ್ದ ಚಿತ್ರಗಳ ಅರ್ಥವನ್ನು ಡಿಕೋಡ್ ಮಾಡುವಲ್ಲಿ ಯಶಕಂಡ ಯುಕೆ ಸಂಶೋಧಕರು!

ಬ್ರಿಟಿಷ್ ಲೈಬ್ರರಿಯೊಂದರಲ್ಲಿ ಕುಳಿತು ಆನ್ಲೈನಲ್ಲಿ ಗುಹೆಕಲೆಗಳ ಅಸಂಖ್ಯಾತ ಚಿತ್ರ ಮತ್ತು ಮಾಹಿತಿಯನ್ನು ಕಲೆಹಾಕಿದ ಬೇಕನ್ ಅವುಗಳ ವಿನ್ಯಾಸವನ್ನು ಅಧ್ಯಯನ ಮಾಡಲಾರಂಭಿಸಿದರು. ಸುಮಾರು 20,000 ಕ್ಕೂ ಹೆಚ್ಚು ಗುಹೆಗಳಲ್ಲಿನ ಚಿತ್ರಗಳನ್ನು ವಿಶ್ಲೇಷಿಸಿದ ಅವರು, ಅವು ಚಂದ್ರ-ಆಧಾರಿತ ಕ್ಯಾಲೆಂಡರ್ ಗಳಾಗಿರಬಹುದು ಎಂಬ ನಿರ್ಣಯಕ್ಕೆ ಬಂದರು.

ಹಿಮಯುಗದ ಮಾನವರು ಗುಹೆಗಳಲ್ಲಿ ರಚಿಸುತ್ತಿದ್ದ ಚಿತ್ರಗಳ ಅರ್ಥವನ್ನು ಡಿಕೋಡ್ ಮಾಡುವಲ್ಲಿ ಯಶಕಂಡ ಯುಕೆ ಸಂಶೋಧಕರು!
ಹಿಮಯುಗದ ರೇಖಾಚಿತ್ರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 06, 2023 | 2:22 PM

ಪ್ರಾಚೀನ ಕಾಲದಲ್ಲಿ ನಮ್ಮ ಆದಿಮಾನವರು ಗುಹೆಗಳಲ್ಲಿ (caves) ಮತ್ತು ಇನ್ನಿತರ ಸ್ಥಳಗಳಲ್ಲಿ ಚಿತ್ರಗಳನ್ನು ರಚಿಸುತ್ತಿದ್ದ ಸಂಗತಿ ನಮಗೆ ಗೊತ್ತಿದೆ ಮತ್ತು ಅಂಥ ಹಲವಾರು ಚಿತ್ರಗಳನ್ನು ನಾವು ನೋಡಿದ್ದೇವೆ. ಆದರೆ ಅವರು ಯಾಕೆ ಚಿತ್ರ ಬರೆಯುತ್ತಿದ್ದರು, ಅವುಗಳ ಅರ್ಥ ಏನು ಅನ್ನೋದು ತಜ್ಞರಿಗೆ ಹರಸಾಹಸಪಟ್ಟರೂ ಗೊತ್ತಾಗಿರಲಿಲ್ಲ. ಆದರೆ ಬ್ರಿಟಿಷ್ ವಿಜ್ಞಾನಿಗಳು ಹಿಮಯುಗದ ಬೇಟೆಗಾರರು (Ice Age hunters) ಯಾಕೆ ಗುಹೆಗಳಲ್ಲಿ ಚಿತ್ರಗಳನ್ನು ರಚಿಸುತ್ತಿದ್ದರು, ಅವು ಏನನ್ನು ಹೇಳುತ್ತವೆ ಅನ್ನೋದನ್ನು ಡಿಕೋಡ್ ಮಾಡಿದ್ದಾರೆ. ಒಬ್ಬ ಸ್ವತಂತ್ರ ಸಂಶೋಧಕರಾಗಿರುವ ಬೆನ್ ಬೇಕನ್ (Ben Bacon) ಅವರಿಗೆ ಗುಹೆಯಲ್ಲಿ ರಚಿಸಿದ ಚಿತ್ರಗಳ ಮೇಲೆ ಅಪಾರ ಆಸಕ್ತಿ ಮತ್ತು ಕುತೂಹಲ. ‘ಗುಹೆಗಳಲ್ಲಿನ ಚಿತ್ರಗಳ ಅರ್ಥ ಏನಾಗಿರಬಹುದು ಅನ್ನೋ ಅಂಶ ನನ್ನನ್ನು ಸದಾ ಕಾಡುತಿತ್ತು, ಹಾಗಾಗೇ ಅವುಗಳನ್ನು ಡಿಕೋಡ್ ಮಾಡುವ ಕಾರ್ಯಕ್ಕೆ ಮುಂದಾದೆ,’ ಎಂದು ಬೆನ್ ಬೇಕನ್ ಬಿಬಿಸಿ ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಬ್ರಿಟಿಷ್ ಲೈಬ್ರರಿಯೊಂದರಲ್ಲಿ ಕುಳಿತು ಆನ್ಲೈನಲ್ಲಿ ಗುಹೆಕಲೆಗಳ ಅಸಂಖ್ಯಾತ ಚಿತ್ರ ಮತ್ತು ಮಾಹಿತಿಯನ್ನು ಕಲೆಹಾಕಿದ ಬೇಕನ್ ಅವುಗಳ ವಿನ್ಯಾಸವನ್ನು ಅಧ್ಯಯನ ಮಾಡಲಾರಂಭಿಸಿದರು. ಸುಮಾರು 20,000 ಕ್ಕೂ ಹೆಚ್ಚು ಗುಹೆಗಳಲ್ಲಿನ ಚಿತ್ರಗಳನ್ನು ವಿಶ್ಲೇಷಿಸಿದ ಅವರು, ಅವು ಚಂದ್ರ-ಆಧಾರಿತ ಕ್ಯಾಲೆಂಡರ್ ಗಳಾಗಿರಬಹುದು ಎಂಬ ನಿರ್ಣಯಕ್ಕೆ ಬಂದರು.

ಬೇರೆ ಸಂಶೋಧಕರು ಜೊತೆಗೂಡಿದರು

ತನ್ನ ಸಂಶೋಧನೆ ಮತ್ತು ಕಲ್ಪನೆಯು ಮುಂದೆ ಸಾಗುತ್ತಿದಂತೆ, ಶಿಕ್ಷಣತಜ್ಞರು ತಮ್ಮ ಅಧ್ಯಯನದಲ್ಲಿ ಭಾಗಿಯಾಗುವಂತೆ ಬೇಕನ್ ಆಹ್ವಾನಿಸಿದರು. ಕೇಂಬ್ರಿಡ್ಜ್ ಆರ್ಕಿಯಾಲಾಜಿಕಲ್ ಜರ್ನಲ್‌ನಲ್ಲಿ ಡುರ್ಹಮ್ ವಿಶ್ವವಿದ್ಯಾಲಯ ಮತ್ತು ಯೂನಿವರ್ಸಿಟಿ ಕಾಲೇಜ್ ಲಂಡನ್‌ನ (ಯುಸಿಎಲ್) ಹಿರಿಯ ಶಿಕ್ಷಣ ತಜ್ಞರೊಂದಿಗೆ ಸೇರಿ ಅವರು ಅಧ್ಯಯನವೊಂದನ್ನು ಪ್ರಕಟಿಸಿದ್ದಾರೆ. ಆ ಅಧ್ಯಯನದ ಪ್ರಕಾರ ಹಿಮಯುಗದ ಬೇಟೆಗಾರರು ಅತ್ಯಾಧುನಿಕ ಮಾಹಿತಿ ಕಲೆಹಾಕಲು ಮತ್ತು ಸಂವಹನ ಮಾಡಲು ಪ್ರಾಣಿಗಳ ಬೇಟೆಯ ರೇಖಾಚಿತ್ರಗಳೊಂದಿಗೆ ಗುರುತುಗಳನ್ನು ಬಳಸುತ್ತಿದ್ದರು. ಸುಮಾರು 20,000 ವರ್ಷಗಳ ಹಿಂದೆ ಅವರು ತಮ್ಮ ಉಳಿವಿಗಾಗಿ ಪ್ರಾಣಿಗಳ ವರ್ತನೆಯನ್ನು ಅಭ್ಯಾಸ ಮಾಡುತ್ತಿದ್ದರು ಅಂತ ಅಧ್ಯಯನದಲ್ಲಿ ಹೇಳಲಾಗಿದೆ.

ಕ್ಯಾಲೆಂಡರ್  ಸೂಚಿಸುತ್ತವೆ

ಯುರೋಪಿನಾದ್ಯಂತ ಇರುವ ಗುಹೆಗಳ ಗೋಡೆ ಮತ್ತು ವಸ್ತುಗಳ ಮೇಲಿನ 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಂಡುಬರುವ ಗುರುತುಗಳು ಸಂಖ್ಯಾತ್ಮಕವಾಗಿ ಮಾಹಿತಿಯನ್ನು ದಾಖಲಿಸುತ್ತವೆ ಮತ್ತು ಮಾತುಗಳನ್ನು ಉಲ್ಲೇಖಿಸುವ ಬದಲು ಕ್ಯಾಲೆಂಡರ್ ಅನ್ನು ಸೂಚಿಸುತ್ತವೆ. ಅವುಗಳನ್ನು ಕ್ರಿಪೂ 3,400 ರಿಂದ ಸುಮರ್‌ನಲ್ಲಿ ಹೊರಹೊಮ್ಮಿದ ಆರಂಭಿಕ ಬರವಣಿಗೆಯ ಚಿತ್ರಾತ್ಮಕ ಮತ್ತು ಕ್ಯೂನಿಫಾರ್ಮ್ ವ್ಯವಸ್ಥೆಗಳು ಅಂತ ಹೇಳಬಹುದೇ ಹೊರತು ‘ಬರಹ‘ ಎಂದು ಕರೆಯಲಾಗದು ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ. ಬೇಕನ್ ಅವರ ಅಧ್ಯಯನ ತಂಡವು ಅವುಗಳನ್ನು ‘ಪ್ರೋಟೋ-ರೈಟಿಂಗ್ ಸಿಸ್ಟಮ್’ ಎಂದು ಉಲ್ಲೇಖಿಸುತ್ತದೆ.

ಇದನ್ನೂ ಓದಿ:  Kannada Sahitya Sammelana 2023: ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗುತ್ತಿದೆ ಬಾಯಲ್ಲಿ ನೀರೂರಿಸುವ ಉತ್ತರ ಕರ್ನಾಟಕದ ವಿಶೇಷ ಖಾದ್ಯಗಳು

ಸಂಶೋಧಕರು ಕೆಲ ರಚನೆಗಳಲ್ಲಿ ನಿರ್ದಿಷ್ಟವಾಗಿ ‘Y’ ಆಕಾರದ ಚಿಹ್ನೆ ಇರುವುದರ ಮೇಲೆ ಹೆಚ್ಚು ಅಧ್ಯಯನ ನಡೆಸಿದ್ದು ಅದರಲ್ಲಿ ಒಂದು ಗೆರೆಯಿಂದ ಮತ್ತೊಂದು ಗೆರೆ ರಚನೆಗೊಂಡಿದ್ದು ‘ಜನ್ಮ ನೀಡುವುದನ್ನು’ ಸೂಚಿಸುತ್ತದೆ ಅಂತ ಹೇಳಿದ್ದಾರೆ. ಅನುಕ್ರಮಗಳು, ಸಂಯೋಗ ಮತ್ತು ಜನನದ ಋತುಗಳನ್ನು ಚಿತ್ರಗಳು ದಾಖಲಿಸುತ್ತವೆ ಮತ್ತು ‘Y’ ಚಿಹ್ನೆಯ ಸ್ಥಾನ ಮತ್ತು ಆಧುನಿಕ ಪ್ರಾಣಿಗಳು ಕ್ರಮವಾಗಿ ಸಂತಾನೋತ್ಪತ್ತಿಗಾಗಿ ಮಿಲನ ಮತ್ತು ಜನನದ ತಿಂಗಳುಗಳ ನಡುವಿನ ‘ಸಂಖ್ಯಾಶಾಸ್ತ್ರದ ಮಹತ್ವ’ ವಿವರಿಸುತ್ತವೆ ಎಂದು ಅಧ್ಯಯನ ಹೇಳುತ್ತದೆ.

ಪ್ರೊಫೆಸರ್ ಪಾಲ್ ಪೆಟ್ಟಿಟ್ ಮಾತು

‘ಇದು ಬಹಳ ಕುತೂಹಲಕಾರಿಯಾದ ಅಧ್ಯಯನವಾಗಿದ್ದು ಸ್ವತಂತ್ರ ಮತ್ತು ವೃತ್ತಿಪರ ಸಂಶೋಧಕರ ಜೊತೆ ಪುರಾತತ್ವ ಶಾಸ್ತ್ರದ ಪರಿಣಿತರು ಮತ್ತು ದೃಷ್ಟಿ ಮನಶಾಸ್ತ್ರದ ತಜ್ಞರನ್ನು ಒಂದುಗೂಡಿಸಿ ಸಾವಿರಾರು ವರ್ಷಗಳ ಹಿಂದಿನ ಭಾಷೆಯನ್ನು ಡಿಕೋಡ್ ಮಾಡಲು ನೆರವಾಗಿದೆ, ಎಂದು ಡುರ್ಹಮ್ ವಿಶ್ವವಿದ್ಯಾಲಯದ ಪ್ರೊಫೆಸರ್ ಪಾಲ್ ಪೆಟ್ಟಿಟ್ ಹೇಳಿದ್ದಾರೆ.

ಇದನ್ನೂ ಓದಿ:  ಭಾರತೀಯ ಮೂಲದ ಅಮೇರಿಕನ್ ಧರ್ಮೇಶ್ ಪಟೇಲ್ ಉದ್ದೇಶಪೂರ್ವಕವಾಗಿ ಕಾರನ್ನು ಪ್ರಪಾತಕ್ಕೆ ಉರುಳಿಸಿ ಹೆಂಡತಿ ಮಕ್ಕಳನ್ನು ಕೊಲ್ಲಲು ಪ್ರಯತ್ನಿಸಿದನೇ?

‘ಹಿಮಯುಗದ ಬೇಟೆಗಾರರೇ ಮೊಟ್ಟ ಮೊದಲಿಗೆ ಒಂದು ಕ್ರಮವಾದ ಕ್ಯಾಲೆಂಡರ್ ಬಳಸಿದರು ಎಂಬುದನ್ನು ಅಧ್ಯಯನ ಸಾಬೀತು ಮಾಡುತ್ತದೆ ಮತ್ತು ಅವರು ಪ್ರಾಕೃತಿಕ ಬದಲಾವಣೆಗಳನ್ನು ಕ್ಯಾಲೆಂಡರ್ ನೊಳಗೆ ಚಿಹ್ನೆಗಳ ಮೂಲಕ ನಿದರ್ಶಿಸುತ್ತಿದ್ದರು ಅಂತಲೂ ಗೊತ್ತಾಗುತ್ತದೆ. ಲ್ಯಾಸ್ಕಾಕ್ಸ್ ಮತ್ತು ಅಲ್ಟಮೀರ ಗುಹೆಗಳಲ್ಲಿ ಆ ಜನ ಬಿಟ್ಟುಹೋಗಿರುವ ಪರಂಪರೆಯನ್ನು ನಾವು ಜನರಿಗೆ ಹೇಳಲು ಸಾಧ್ಯವಾಗುತ್ತಿದೆ,’ ಎಂದು ಪೆಟ್ಟಿಟ್ ಹೇಳಿದ್ದಾರೆ.

ಆಕಾಶದಲ್ಲಿ ಹಾರಾಡುತ್ತಿರುವ ಬೆನ್ ಬೇಕನ್!

ಹಲವಾರು ಕಷ್ಟಗಳ ಹೊರತಾಗಿಯೂ ಕೆಲ ಚಿಹ್ನೆಗಳ ಅರ್ಥಗಳನ್ನು ಡಿಕೋಡ್ ಮಾಡುವುದು ಸಂಶೋಧಕರಿಗೆ ಸಾಧ್ಯವಾಯಿತು ಅನ್ನೋದನ್ನು ಅಧ್ಯಯನ ಸೂಚಿಸುತ್ತದೆ. ಈ ಅಧ್ಯಯನದ ಒಟ್ಟಾರೆ ಫಲಿತಾಂಶದಿಂದ ಬೇಕನ್ ಎಲ್ಲರಿಗಿಂತ ಹೆಚ್ಚು ಸಂತುಷ್ಟರಾಗಿದ್ದಾರೆ. ‘ನಾವು ಸಂಶೋಧನೆಯ ಅಳಕ್ಕೆ ಇಳಿದಂತೆ, ಹಿಮಯುಗದ ಅ ಜನ ನಾವು ಈ ಹಿಂದೆ ಅಂದುಕೊಂಡದಕ್ಕಿಂತ ಹೆಚ್ಚು ಜಾಣರಾಗಿದ್ದರು ಅಂತ ಗೊತ್ತಾಗುತ್ತದೆ. ಸಾವಿರಾರು ವರ್ಷಗಳಿಂದ ನಮ್ಮಿಂದ ಬೇರ್ಪಟ್ಟಿದ್ದ ಜನ ಈಗ ಇದ್ದಕ್ಕಿದ್ದಂತೆ ನಮಗೆ ಹತ್ತಿರವಾಗತೊಡಗಿದ್ದಾರೆ,’ ಎಂದು ಬೇಕನ್ ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.