BBC: ಬಿಬಿಸಿ ಕಚೇರಿಯಲ್ಲಿ ಐಟಿ ಸರ್ವೆಯ ಮರ್ಮವೇನು? ಟ್ರಾನ್ಸ್ಫರ್ ಪ್ರೈಸಿಂಗ್ನಿಂದ ಜಾಗತಿಕವಾಗಿ ಆಗುವ ತೆರಿಗೆನಷ್ಟ ಎಷ್ಟು?
What Is Transfer Pricing: ಬಿಬಿಸಿಯಿಂದ ಅಕ್ರಮವಾಗಿ ಟ್ರಾನ್ಸ್ಫರ್ ಪ್ರೈಸಿಂಗ್ ನಡೆದಿದೆ. ಈ ಕಾರಣಕ್ಕೆ ಐಟಿ ಸರ್ವೆಯಾಗಿರಬಹುದು ಎನ್ನಲಾಗುತ್ತಿದೆ. ಅಷ್ಟಕ್ಕೂ ಟ್ರಾನ್ಸ್ಫರ್ ಪ್ರೈಸಿಂಗ್ನಿಂದ ಜಾಗತಿಕವಾಗಿ ಆಗುತ್ತಿರುವ ತೆರಿಗೆ ನಷ್ಟ ವರ್ಷಕ್ಕೆ ಬರೋಬ್ಬರಿ 50 ಲಕ್ಷ ಕೋಟಿಗಿಂತಲೂ ಹೆಚ್ಚಂತೆ. ಈ ಬಗ್ಗೆ ಒಂದು ವರದಿ:
ಬೆಂಗಳೂರು: ಲಂಡನ್ ಮೂಲದ ಬ್ರಿಟಿಷ್ ಬ್ರಾಡ್ಕ್ಯಾಸ್ಟಿಂಗ್ ಕಾರ್ಪೊರೇಶನ್ (BBC- British Broadcasting Corporation) ಸಂಸ್ಥೆಯ ಕೆಲ ಭಾರತೀಯ ಕಚೇರಿಗಳ ಮೇಲೆ ಎರಡು ದಿನ ಐಟಿ ಸರ್ವೆ ನಡೆದ ಬೆಳವಣಿಗೆ ಹಲವು ಕಾರಣಗಳಿಗೆ ಗಮನ ಸೆಳೆದಿದೆ. ಟ್ರಾನ್ಸ್ಫರ್ ಪ್ರೈಸಿಂಗ್ನಲ್ಲಿ ಅಕ್ರಮ ನಡೆದ ಕಾರಣಕ್ಕೆ ಐಟಿ ಸರ್ವೇ ಆಗಿರುವ ಶಂಕೆ ಇದೆ. ಬಿಬಿಸಿಯ ದೆಹಲಿ ಮತ್ತು ಮುಂಬೈನ ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ವಿವಿಧ ದಾಖಲೆಗಳನ್ನು ಪರಿಶೀಲಿಸಿ ನಕಲು ಮಾಡಿಕೊಂಡು ಮರಳಿಸಿದ್ದಾರೆ. ಆದರೆ, ಈ ಕಚೇರಿಗಳಲ್ಲಿ ನಡೆದದ್ದು ಐಟಿ ದಾಳಿಯಾಗಲೀ ಐಟಿ ಶೋಧವಾಗಲೀ ಅಲ್ಲ ಎಂದು ಹೇಳಲಾಗಿದೆ. ಆದರೆ ಕೆಲ ಮೂಲಗಳು ಹೇಳುವ ಪ್ರಕಾರ, ಐಟಿ ಇಲಾಖೆಗೆ ಸರ್ವೆ ವೇಳೆ ಕೆಲ ಮಹತ್ವದ ಸುಳಿವುಗಳು ಸಿಕ್ಕು, ಅದರ ಆಧಾರದ ಮೇಲೆ ಐಟಿ ಸರ್ಚ್ ಕೂಡ ನಡೆದಿರಬಹುದು.
ನಿನ್ನೆ ಬಂದ ಮಾಹಿತಿ ಪ್ರಕಾರ, ಟ್ರಾನ್ಸ್ಫರ್ ಪ್ರೈಸಿಂಗ್ ನೀತಿಯನ್ನು ಬಿಬಿಸಿ ಸರಿಯಾಗಿ ಅನುಸರಿಸಿಲ್ಲ. ಲಂಡನ್ ಮೂಲದ ಈ ಮಾಧ್ಯಮ ಸಂಸ್ಥೆ ತಮ್ಮ ಹೆಚ್ಚಿನ ಲಾಭವನ್ನು ಅಕ್ರಮವಾಗಿ ವರ್ಗಾಯಿಸಿದ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಹಿಂದೆ ಹಲವು ಬಾರಿ ಬಿಬಿಸಿಗೆ ನೋಟೀಸ್ ಕೂಡ ನೀಡಲಾಗಿತ್ತಂತೆ. ಆದರೆ, ಬಿಬಿಸಿ ಈ ನೋಟೀಸ್ಗಳ್ಯಾವುದಕ್ಕೂ ಸ್ಪಂದಿಸಿರಲಿಲ್ಲ. ಹೀಗಾಗಿ, ಐಟಿ ಅಧಿಕಾರಿಗಳು ಬಿಬಿಸಿಯ ಮುಂಬೈ ಮತ್ತು ದೆಹಲಿ ಕಚೇರಿಗಳಿಗೆ ಹೋಗಿ ಸಮೀಕ್ಷೆ ಕೈಗೊಂಡಿದ್ದಾರೆ ಎಂಬ ಮಾಹಿತಿ ಇದೆ.
ಇನ್ನೂ ಒಂದು ಸಾಧ್ಯತೆ ಎಂದರೆ, ಕೇಂದ್ರ ಸರ್ಕಾರ ಅಡ್ವಾನ್ಸ್ ಪ್ರೈಸಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇದು ಪೂರ್ವನಿಗದಿ ಬೆಲೆ ವ್ಯವಸ್ಥೆ. ಟ್ರಾನ್ಸ್ಫರ್ ಪ್ರೈಸಿಂಗ್ ಅಕ್ರಮ ತಡೆಗಟ್ಟಲು ಈ ವ್ಯವಸ್ಥೆ ಮಾಡಲಾಗಿದೆ. ಅಭಿವೃದ್ಧಿಶೀಲ ದೇಶಗಳ ಪೈಕಿ ಭಾರತದಂಥ ಕೆಲ ದೇಶಗಳು ಮಾತ್ರ ಅಡ್ವಾನ್ಸ್ ಪ್ರೈಸಿಂಗ್ ಮೆಕ್ಯಾನಿಸಂ ಹೊಂದಿರುವುದು. ಭಾರತದಲ್ಲಿರುವ ಹಲವು ಐಟಿ ಕಂಪನಿಗಳು ಈ ವ್ಯವಸ್ಥೆಯನ್ನು ಪಾಲಿಸುತ್ತಿವೆ. ಅವುಗಳ ಮೇಲೆ ಐಟಿ ಕಣ್ಣಿಡುವುದಿಲ್ಲ. ಆದರೆ, ಬಿಬಿಸಿಯಿಂದ ಇದು ಅನುಸರಣೆ ಆಗುತ್ತಿಲ್ಲದಿರಬಹುದು. ಹೀಗಾಗಿ, ಐಟಿ ಸರ್ವೆ ಮತ್ತು ಸರ್ಚ್ ಆಗಿರಬಹುದು ಎಂದು ಹೇಳಲಾಗುತ್ತಿದೆ.
ಟ್ರಾನ್ಸ್ಫರ್ ಪ್ರೈಸಿಂಗ್ ಎಂದರೇನು?
ಒಂದು ಕಂಪನಿ ತನ್ನ ಮಾಲಿಕತ್ವದ ಇನ್ನೊಂದು ಕಂಪನಿಗೆ ಸರಕು ಮತ್ತು ಸೇವೆ ಸರಬರಾಜಿಗೆ ವಿಧಿಸುವ ದರ. ಕಂಪನಿಯೊಳಗೆ ಆಂತರಿಕವಾಗಿ ವರ್ಗಾವಣೆಯಾಗುವ ದರ. ಇಲ್ಲಿ ಸಾಮಾನ್ಯವಾಗಿ ಮಾರುಕಟ್ಟೆ ದರಕ್ಕಿಂತ ವ್ಯತ್ಯಾಸವಾಗಿರುವ ದರವನ್ನು ಈ ಕಾರ್ಯಕ್ಕಾಗಿ ನಿಗದಿ ಮಾಡುತ್ತದೆ. ಹೆಚ್ಚಿನ ಸಂದರ್ಭದಲ್ಲಿ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವ ಉದ್ದೇಶ ಅಡಗಿರುತ್ತದೆ.
ಉದಾಹರಣೆಗೆ, ಒಂದು ದೇಶದಲ್ಲಿ ತೆರಿಗೆ ಹೆಚ್ಚು ಇರುತ್ತದೆ, ಮತ್ತೊಂದು ದೇಶದಲ್ಲಿ ತೆರಿಗೆ ಕಡಿಮೆ ಇರುತ್ತದೆ. ತೆರಿಗೆ ಹೆಚ್ಚು ಇರುವ ದೇಶದ ಕಚೇರಿಯಿಂದ ಕಡಿಮೆ ಬೆಲೆ ನಿಗದಿ ಮಾಡುತ್ತದೆ. ಅದರ ಲಾಭ ಕಡಿಮೆ ಆಗುತ್ತದೆ. ಆದರೆ, ತೆರಿಗೆ ಕಡಿಮೆ ಇರುವ ದೇಶದ ಕಚೇರಿಗೆ ಆದಾಯ ಹೆಚ್ಚಾಗುತ್ತದೆ. ಯಾಕೆಂದರೆ ಅದು ಕಡಿಮೆ ಬೆಲೆಗೆ ವಸ್ತು ಅಥವಾ ಸೇವೆಯನ್ನು ಖರೀದಿಸಿರುತ್ತದೆ. ಅಲ್ಲದೇ, ಹೆಚ್ಚು ತೆರಿಗೆಯೂ ಬೀಳುವುದಿಲ್ಲ. ಈ ರೀತಿಯ ಆಂತರಿಕ ಬೆಲೆ ವರ್ಗಾವಣೆಯಿಂದ ಕಂಪನಿಯು ತೆರಿಗೆಯಿಂದ ತಪ್ಪಿಸಿಕೊಳ್ಳುತ್ತದೆ. ದೊಡ್ಡ ಮೊತ್ತದ ವಹಿವಾಟು ಇರುವ ಕಂಪನಿಗಳು ಇಂಥ ಕೆಲಸಕ್ಕೆ ಮುಂದಾಗುತ್ತವೆ. ಇದಕ್ಕೆ ಬೇಸ್ ಎರೋಶನ್ ಅಂಡ್ ಪ್ರಾಫಿಟ್ ಶಿಫ್ಟಿಂಗ್ ಎಂದೂ ಕರೆಯುತ್ತಾರೆ.
ಭಾರತದಂಥ ದೇಶಗಳಿಗೆ ಅನ್ಯಾಯ
ಈ ರೀತಿ ತೆರಿಗೆಗಳ್ಳತನ ಅಂಥ ದೊಡ್ಡ ನಷ್ಟ ತರುತ್ತದಾ ಎಂದು ಯಾರಿಗಾದರೂ ಅನಿಸಬಹುದು. ಇಲ್ಲಿ ಒಂದು ಅಂಕಿ ಅಂಶ ಉಲ್ಲೇಖಿಸಬಹುದು. ಒಇಸಿಡಿ ಎಂಬ ಸಂಸ್ಥೆ ನಡೆಸಿರುವ ಸಂಶೋಧನೆ ಪ್ರಕಾರ ಜಾಗತಿಕವಾಗಿ ಪ್ರತೀ ವರ್ಷವೂ ತೆರಿಗೆಗಳ್ಳತನ ಆಗುತ್ತಿರುವ ಮೊತ್ತ 800 ಬಿಲಿಯನ್ ಡಾಲರ್ನಿಂದ 1 ಟ್ರಿಲಿಯನ್ ಡಾಲರ್ವರೆಗೆ. ಅಂದರೆ ವರ್ಷಕ್ಕೆ 82 ಲಕ್ಷ ಕೋಟಿ ರೂಪಾಯಿಯಷ್ಟು ತೆರಿಗೆಯ ಮೊತ್ತ ಕಣ್ತಪ್ಪಿಹೋಗುತ್ತಿದೆ. ಇದು ಜಾಗತಿಕವಾಗಿ ಇರುವ ಒಟ್ಟು ಆದಾಯ ತೆರಿಗೆ ಮೊತ್ತದ ಶೇ. 10ರಷ್ಟು ಹಣ.
ಇಲ್ಲಿ ಒಂದು ವಿಚಾರ ಸ್ಪಷ್ಟವಾಗಿ ತಿಳಿದಿರಬೇಕು. ಜಾಗತಿಕವಾಗಿ ತೆರಿಗೆಗಳ್ಳತನ ಆಗುತ್ತಿರುವ ಹಣ ಭಾರತದಂಥ ಅಭಿವೃದ್ಧಿಶೀಲ ದೇಶಗಳದ್ದೇ. ಶ್ರೀಮಂತ ದೇಶಗಳ ಉದ್ಯಮಿಗಳು ಅಭಿವೃದ್ಧಿಶೀಲ ದೇಶಗಳಿಗೆ ಸಲ್ಲಬೇಕಾದ ತೆರಿಗೆ ಹಣವನ್ನು ಅಕ್ರಮ ಮಾರ್ಗಗಳ ಮೂಲಕ ಬೇರೆಡೆ ವರ್ಗಾಯಿಸುತ್ತಾರೆ. ಅದಕ್ಕೆಂದೇ ವಿಶ್ವದಲ್ಲಿ ಟ್ಯಾಕ್ಸ್ ಹೇವನ್ ಎನಿಸುವ ದೇಶಗಳಿವೆ. ಅಭಿವೃದ್ಧಿಶೀಲ ದೇಶಗಳಿಗೆ ವಿದೇಶೀ ನೇರ ಬಂಡವಾಳದ ಹೆಸರಿನಲ್ಲಿ ಬರುವ ಬಂಡವಾಳವು ಇಂಥ ಟ್ಯಾಕ್ಸ್ ಹೇವನ್ ಮಾರ್ಗದ ಮೂಲಕವೇ ಎಂದು ತಜ್ಞರು ಹೇಳುತ್ತಾರೆ.
ಬ್ರಿಟಿಷರ ಜಾಯಮಾನವೇ ಅದು?
ಬ್ರಿಟಿಷರ ತೆರಿಗೆ ವಂಚನೆಯ ದೊಡ್ಡ ಇತಿಹಾಸವೇ ಇದೆ. ಗಮನಿಸಬೇಕಾದ ಮತ್ತೂ ಒಂದು ಅಂಶವೆಂದರೆ, ಟ್ಯಾಕ್ಸ್ ಹೇವನ್ ಎನಿಸಿದ ಬಹುತೇಕ ದೇಶಗಳು ಬ್ರಿಟನ್ಗೆ ಸೇರಿದ್ದವರಾಗಿವೆ. ಅಥವಾ ಬ್ರಿಟಿಷರ ಆಳ್ವಿಕೆಗೆ ಹಿಂದೆ ಒಳಪಟ್ಟಿರುವಂಥವೇ ಆಗಿವೆ. ಕೇಮನ್ ಐಲೆಂಡ್ಸ್, ಚಾನಲ್ ಐಲೆಂಡ್ಸ್, ಜೆರ್ಸಿ ಮೊದಲಾದ ದೇಶಗಳು ಇದಕ್ಕೆ ನಿದರ್ಶನ. ಈಗ ಐರೋಪ್ಯ ಒಕ್ಕೂಟಕ್ಕೆ ಸೇರಿದ ಲುಕ್ಸಂಬರ್ಗ್, ಸ್ವಿಟ್ಜರ್ಲೆಂಡ್, ಬೆಲ್ಜಿಯಂ ಮೊದಲಾದ ದೇಶಗಳು ಟ್ಯಾಕ್ಸ್ ಹೇವನ್ ಎನಿಸುತ್ತಿವೆ.
ಇಲ್ಲಿ ಕಡಿಮೆ ತೆರಿಗೆ ಇರುವುದರಿಂದ ಬಹಳಷ್ಟು ಉದ್ಯಮಿಗಳು ನಕಲಿ ಕಂಪನಿಗಳ ಮೂಲಕ ಈ ದೇಶಗಳಿಗೆ ತಮ್ಮ ಅಕ್ರಮ ಹಣ ಮತ್ತು ಲಾಭದ ಹಣವನ್ನು ವರ್ಗಾಯಿಸುತ್ತಾರೆ. ಇದರಿಂದ ಈ ದೇಶಗಳಿಗೆ ಅಪಾರ ಪ್ರಮಾಣದ ಬಂಡವಾಳ ಬರುತ್ತದೆ. ಸುಖಾಸುಮ್ಮನೆ ಹರಿದುಬರುವ ಹಣ ಯಾರಿಗೆ ಬೇಡ ಹೇಳಿ?
Published On - 3:14 pm, Thu, 16 February 23