Sovereign Gold Bonds V: ಸವರನ್ ಗೋಲ್ಡ್ ಬಾಂಡ್ V ಇಂದಿನಿಂದ ಸಬ್ಸ್ಕ್ರಿಪ್ಷನ್; ಗ್ರಾಮ್ಗೆ 4740 ರೂ. ನಿಗದಿ
ಸವರನ್ ಗೋಲ್ಡ್ ಬಾಂಡ್ಸ್ ಐದನೇ ಕಂತಿನ ಸಬ್ಸ್ಕ್ರಿಪ್ಷನ್ ಇಂದಿನಿಂದ (ಆಗಸ್ಟ್ 9, 2021) ಆರಂಭವಾಗಲಿದೆ. ಇದರ ಬಗ್ಗೆ ವಿವರಣೆ ಇಲ್ಲಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (Reserve Bank Of India) ಐದನೇ ಕಂತಿನ ಸವರನ್ ಗೋಲ್ಡ್ ಬಾಂಡ್ಸ್ (SGBs) ಆಗಸ್ಟ್ 9, 2021ರ ಸೋಮವಾರದಿಂದ ಸಬ್ಸ್ಕ್ರಿಪ್ಷನ್ ಆರಂಭವಾಗಿದೆ. ಪ್ರತಿ ಬಾಂಡ್ಗೆ 4790 ರೂಪಾಯಿಯಂತೆ ಸವರನ್ ಗೋಲ್ಡ್ ಬಾಂಡ್ಗಳನ್ನು ವಿತರಿಸಲಾಗುತ್ತದೆ. ಪ್ರತಿ ಬಾಂಡ್ ಒಂದು ಗ್ರಾಮ್ ಚಿನ್ನದ ದರಕ್ಕೆ ಸಮವಾಗಿರುತ್ತದೆ. ಡಿಜಿಟಲ್ ಪಾವತಿ ವಿಧಾನವನ್ನು ಬಳಸಿದಲ್ಲಿ ರೂ. 50 ರಿಯಾಯಿತಿ ದೊರೆಯುತ್ತದೆ. ಆಗ ಹೂಡಿಕೆದಾರರಿಗೆ ಪ್ರತಿ ಬಾಂಡ್ಗೆ 4740 ರೂಪಾಯಿಗೆ ದೊರೆಯುತ್ತದೆ. ಹೂಡಿಕೆದಾರರಿಗೆ ಶೇ 2.5ರ ಬಡ್ಡಿಯು ಅರ್ಧ ವಾರ್ಷಿಕವಾಗಿ ದೊರೆಯುತ್ತದೆ. ಈ ಬಾಂಡ್ಗಳು ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟಿಂಗ್ ಆಗುತ್ತದೆ. ಮೆಚ್ಯೂರಿಟಿ ಅವಧಿಯಲ್ಲಿ ಚಿನ್ನದ ಮೌಲ್ಯ ಎಷ್ಟಿರುತ್ತದೋ ಅದನ್ನೋ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನೀಡಲಾಗುತ್ತದೆ.
ಸವರನ್ ಗೋಲ್ಡ್ ಬಾಂಡ್ಸ್ ದೀರ್ಘಾವಧಿಯ ಹೂಡಿಕೆಗೆ ಅತ್ಯುತ್ತಮ. ಹೂಡಿಕೆಗೆ ಬಡ್ಡಿ ಹಾಗೂ ಮೆಚ್ಯೂರಿಟಿ ತನಕ ಉಳಿಸಿಕೊಂಡಲ್ಲಿ ಕ್ಯಾಪಿಟಲ್ ಗೇಯ್ನ್ಸ್ ಮೇಲೆ ತೆರಿಗೆ ಕೂಡ ಇಲ್ಲ ಎನ್ನುತ್ತಾರೆ ತಜ್ಞರು. ಸವರನ್ ಗೋಲ್ಡ್ ಬಾಂಡ್ಗಳ ಅವಧಿ 8 ವರ್ಷ. 5 ವರ್ಷಗಳ ಅವಧಿ ನಂತರ, ಪ್ರತಿ ಬಡ್ಡಿ ಪಾವತಿ ದಿನಾಂಕದ ಸಂದರ್ಭದಲ್ಲಿ ಈ ಹೂಡಿಕೆಯಿಂದ ಹೊರಗೆ ಬರಬಹುದು. ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ಹಾಗೈ ಗೋಲ್ಡ್ ಫಂಡ್ ಆಫ್ ಫಂಡ್ ಮೂಲಕವೂ ಖರೀದಿ ಮಾಡಬಹುದು. ಆದರೆ ಈ ಎರಡೂ ಹೂಡಿಕೆಗೆ ಅರ್ಧ ಪರ್ಸೆಂಟ್ನಷ್ಟು ವೆಚ್ಚವನ್ನು ವಿಧಿಸಲಾಗುತ್ತದೆ.
ಸವರನ್ ಗೋಲ್ಡ್ ಬಾಂಡ್ಗಳಿಗೆ ಯಾವುದೇ ವೆಚ್ಚ ಇರುವುದಿಲ್ಲ. ದೀರ್ಘಾವಧಿ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್ಗಿಂತ ಚಿನ್ನ ಹೆಚ್ಚು ಆಕರ್ಷಕ. ಒಂದು ವೇಳೆ ಸವರನ್ ಗೋಲ್ಡ್ ಬಾಂಡ್ಸ್ಗಳನ್ನು ಮೆಚ್ಯೂರಿಟಿ ತನಕ ಇಟ್ಟುಕೊಂಡಿದ್ದಲ್ಲಿ ಎಲ್ಲ ಲಾಭಕ್ಕೂ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆಯಿಂದ ವಿನಾಯಿತಿ ಇದೆ. ಬಡ್ಡಿಯನ್ನು ಆದಾಯಕ್ಕೆ ಸೇರ್ಪಡೆ ಮಾಡಲಾಗುತ್ತದೆ ಮತ್ತು ಯಾವ ಸ್ಲ್ಯಾಬ್ ದರ ಬರುತ್ತದೋ ಅದಕ್ಕೆ ತಕ್ಕಂತೆ ವಿಧಿಸಲಾಗುತ್ತದೆ.
ಈ ಬಾಂಡ್ಗಳು ಲಿಕ್ವಿಡ್ ಅಲ್ಲ (ಸುಲಭವಾದ ನಗದೀಕರಣ ಸಾಧ್ಯ ಇಲ್ಲ). ಬಾಂಡ್ ಸರಣಿಯಲ್ಲಿ ಕೆಲವು ಒಂದೋ ನಿರಂತರವಾಗಿ ವಹಿವಾಟು ನಡೆಸಲ್ಲ ಅಥವಾ ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಸ್ಪಾಟ್ ದರಕ್ಕಿಂತ ರಿಯಾಯಿತಿಯಲ್ಲಿ ವಹಿವಾಟು ಮಾಡುತ್ತದೆ. ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಸರಾಸರಿ ವ್ಯಾಲ್ಯೂಮ್ ಕ್ರಮೇಣವಾಗಿ ಹೆಚ್ಚುತ್ತಾ ಬರುತ್ತಿದೆ. ಈಚೆಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಲವು ಪ್ರಕರಣಗಳಲ್ಲಿ ಎಸ್ಜಿಬಿಗಳು ಸ್ವಲ್ಪ ಮಟ್ಟಿಗೆ ಸ್ಪಾಟ್ ದರದಲ್ಲಿ ಸ್ವಲ್ಪ ಮಟ್ಟಿಗೆ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತದೆ.
ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?