ರೈಲು ನಿಲ್ದಾಣಗಳಲ್ಲಿನ ಕೌಂಟರ್ಗಳಲ್ಲಿ ಖರೀದಿಸಿದ ಟಿಕೆಟ್ಗಳಿಗೂ ಅ. 27ರಿಂದ ವಿಮೆ ಕವರೇಜ್ ಕಡ್ಡಾಯ; ಸುಪ್ರೀಂಕೋರ್ಟ್ ಆದೇಶ
ಆನ್ಲೈನ್ ಟಿಕೆಟ್ಗಳಂತೆ ರೇಲ್ವೆ ಕೌಂಟರ್ಗಳಲ್ಲಿ ಖರೀದಿಸುವ ಆಫ್ಲೈನ್ ಟಿಕೆಟ್ಗಳಿಗೂ ವಿಮಾ ಸೌಲಭ್ಯವನ್ನು ವಿಸ್ತರಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ರೈಲ್ವೆಗೆ ನಿರ್ದೇಶನ ನೀಡಿದೆ. ಅಕ್ಟೋಬರ್ 27, 2026ರಿಂದ ಇದು ಕಡ್ಡಾಯವಾಗಿ ಜಾರಿಗೆ ಬರಬೇಕು ಎಂದು ರೈಲ್ವೆ ಇಲಾಖೆಗೆ ಕೋರ್ಟ್ ಆದೇಶಿಸಿದೆ. ರೈಲ್ವೆ ಪ್ರಯಾಣಿಕರಿಗೆ ಏನೇನು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವರದಿ ನೀಡುವಂತೆಯೂ ಇಲಾಖೆಗೆ ಆದೇಶಿಸಲಾಗಿದೆ.

ನವದೆಹಲಿ, ಅಕ್ಟೋಬರ್ 14: ದೇಶದ ಎಲ್ಲಾ ರೈಲು ಪ್ರಯಾಣಿಕರಿಗೆ ವಿಮಾ ರಕ್ಷಣೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಆನ್ಲೈನ್ನಲ್ಲಿ ಖರೀದಿಸುವ ಟಿಕೆಟ್ಗಳಂತೆ, ರೈಲ್ವೆ ರಿಸರ್ವೇಷನ್ ಕೌಂಟರ್ಗಳಲ್ಲಿ ನೇರವಾಗಿ ಖರೀದಿಸುವ ಎಲ್ಲಾ ಆಫ್ಲೈನ್ ಟಿಕೆಟ್ಗಳಿಗೂ ವಿಮೆ ಕಡ್ಡಾಯಗೊಳಿಸಲಾಗಿದೆ. ಅಕ್ಟೋಬರ್ 27ರಿಂದ ಇದನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ರೈಲ್ವೆ ಇಲಾಖೆಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಸಾಮಾನ್ಯವಾಗಿ ಕೌಂಟರ್ಗಳಲ್ಲಿ ಟಿಕೆಟ್ ಪಡೆಯುವ ಪ್ರಯಾಣಿಕರಿಗೂ ವಿಮಾ ಸೌಲಭ್ಯ ಕಲ್ಪಿಸಲು ಸಾಕಷ್ಟು ಸಮಯ ನೀಡಿದ್ದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮುಂದಿನ ಎರಡು ವಾರಗಳಲ್ಲಿ, ಅಂದರೆ ಅಕ್ಟೋಬರ್ 27, 2026ರಿಂದ ಈ ಆದೇಶವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ರೈಲ್ವೆ ಮಂಡಳಿಗೆ (Railway Board) ಪೀಠ ಸೂಚಿಸಿದೆ. ತಪ್ಪಿದ್ದಲ್ಲಿ ನೇರ ಜವಾಬ್ದಾರಿಯು ರೈಲ್ವೆ ಮಂಡಳಿಯ ಮೇಲಿರಲಿದೆ ಎಂದೂ ಎಚ್ಚರಿಸಲಾಗಿದೆ.
ಇದನ್ನೂ ಓದಿ: 11.5 ಲಕ್ಷ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನದ ಬೋನಸ್; 2009 ಕೋಟಿ ರೂ ಬೋನಸ್ ವಿತರಣೆಗೆ ಸಂಪುಟ ಅನುಮೋದನೆ
ರೈಲ್ವೆ ಸುರಕ್ಷತಾ ಕ್ರಮಗಳ ಬಗ್ಗೆ ಕಳವಳ
ಕವಚ್ (Kavach) ತಂತ್ರಜ್ಞಾನ ವಿಸ್ತರಣೆ, ರೈಲ್ವೆ ಹಳಿಗಳ ಸುತ್ತ ಬೇಲಿ ನಿರ್ಮಾಣ ಮತ್ತು ಕಾಲ್ನಡಿಗೆ ಮೇಲ್ಸೇತುವೆಗಳ (Foot overbridges) ನಿರ್ಮಾಣದಂತಹ ಪ್ರಮುಖ ಸುರಕ್ಷತಾ ಕ್ರಮಗಳ ಪ್ರಗತಿಯ ಬಗ್ಗೆಯೂ ನ್ಯಾಯಾಲಯ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ. ಬಜೆಟ್ನಲ್ಲಿ ಅನುದಾನವಿದ್ದರೂ ಮೂಲಭೂತ ಸುರಕ್ಷತಾ ಅವಶ್ಯಕತೆಗಳನ್ನು ಪೂರೈಸುವಲ್ಲಿ ವಿಳಂಬವಾಗುತ್ತಿರುವುದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
ಒಡಿಶಾ ರೈಲು ಅಪಘಾತ ಘಟನೆಯ ಬಳಿಕ ಸುಪ್ರೀಂನಲ್ಲಿ ಅರ್ಜಿ
2023ರ ಜೂನ್ ತಿಂಗಳಲ್ಲಿ ಒಡಿಶಾದಲ್ಲಿ ರೈಲು ಅಪಘಾತ ದುರಂತ ಸಂಭವಿಸಿದ ಬಳಿಕ ಸುಪ್ರೀಂಕೋರ್ಟ್ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಕವಚ್ ಸುರಕ್ಷಾ ವ್ಯವಸ್ಥೆಯನ್ನು ಅಳವಡಿಸದೇ ಇದ್ದರಿಂದ ಈ ದುರಂತ ಸಂಭವಿಸಿದೆ. ಈ ಘಟನೆಯ ತನಿಖೆ ನಡೆಸಬೇಕು. ಮತ್ತು ಕವಚ್ ಸಿಸ್ಟಂ ಅನ್ನು ಎಲ್ಲಾ ರೈಲುಗಳಿಗೂ ಬೇಗ ಅಳವಡಿಕೆ ಮಾಡುವಂತೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆರ್ ಮಹದೇವನ್ ಅವರಿದ್ದ ಸುಪ್ರೀಂ ನ್ಯಾಯಪೀಠವು ಕವಚ್ ಸಿಸ್ಟಂ ಬಗ್ಗೆ ಮಾತ್ರವಲ್ಲದೆ, ರೈಲ್ವೆ ಪಾದಚಾರಿ ಸೇತುವೆ, ಟ್ರ್ಯಾಕ್ಗಳ ಫೆನ್ಸಿಂಗ್, ಕೌಂಟರ್ ಟಿಕೆಟ್ಗಳಿಗೆ ಇನ್ಷೂರೆನ್ಸ್ ಇತ್ಯಾದಿ ಪ್ರಯಾಣಿಕ ಸುರಕ್ಷತಾ ವ್ಯವಸ್ಥೆ ವಿಚಾರವನ್ನು ಕೈಗೆತ್ತಿಕೊಂಡು, ಒಂದು ವರದಿ ಸಲ್ಲಿಸುವಂತೆ ರೈಲ್ವೆ ಇಲಾಖೆಗೆ ಆದೇಶಿತು.
ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡಾ ವಿರುದ್ಧ ಕೋರ್ಟ್ ಕಟೆಕಟೆ ಹತ್ತಿದ ಬಿ.ಆರ್. ಶೆಟ್ಟಿ; ಕನ್ನಡಿಗ ಉದ್ಯಮಿಯಿಂದ 1.44 ಲಕ್ಷ ಕೋಟಿ ರೂ ಮೊಕದ್ದಮೆ
ಆದರೆ, ರೈಲ್ವೆ ಇಲಾಖೆಯಿಂದ ಇವುಗಳ ಬಗ್ಗೆ ಯಾವುದೇ ಮಾಹಿತಿ ಬರದೇ ಹೋಗಿರುವುದು ಸುಪ್ರೀಂಕೋರ್ಟ್ ನ್ಯಾಯಪೀಠವನ್ನು ಕುಪಿತಗೊಳಿಸಿದೆ.
ರೈಲ್ವೆ ಇಲಾಖೆ ಕೇವಲ ಆಶ್ವಾಸನೆ ನೀಡುತ್ತಿದೆಯೇ ಹೊರತು, ಅದನ್ನು ಜಾರಿಗೊಳಿಸುತ್ತಿಲ್ಲ. ಇದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮ್ಜೀತ್ ಬ್ಯಾನರ್ಜಿ ಅವರು ರೈಲ್ವೆ ಇಲಾಖೆ ಕೈಗೊಂಡ ಕೆಲಸಗಳು ಹಾಗೂ ಗುರಿ ಮುಟ್ಟಲು ವಿಳಂಬಗೊಳ್ಳಲು ಕಾರಣಗಳನ್ನು ವಿವರಿಸಲು ಕೊನೆಯ ಕಾಲಾವಕಾಶ ಕೊಡಬೇಕೆಂದು ಕೇಳಿಕೊಂಡರು. ಇದಕ್ಕೆ ಕೋರ್ಟ್ ಸಮ್ಮತಿಸಿದೆ. ನವೆಂಬರ್ 16ರಂದು ಮುಂದಿನ ವಿಚಾರಣೆ ನಡೆಯುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




