ಅಕ್ಷಯ ತೃತೀಯಕ್ಕೆ ಹಿಂದೂಗಳ ಜ್ಯುವೆಲರಿ ಅಂಗಡಿಗಳಲ್ಲೇ ಚಿನ್ನ ಖರೀದಿಸಿ: ಪ್ರಮೋದ್ ಮುತಾಲಿಕ್ ತಾಕೀತು

ಅಕ್ಷಯ ತೃತೀಯಕ್ಕೆ ಹಿಂದೂಗಳ ಜ್ಯುವೆಲರಿ ಅಂಗಡಿಗಳಲ್ಲೇ ಚಿನ್ನ ಖರೀದಿಸಿ: ಪ್ರಮೋದ್ ಮುತಾಲಿಕ್ ತಾಕೀತು
ಶ್ರೀರಾಮಸೇನೆಯ ನಾಯಕ ಪ್ರಮೋದ ಮುತಾಲಿಕ್

ಅಕ್ಷಯ ತೃತೀಯಕ್ಕೆ ಹಿಂದೂಗಳ ಜ್ಯುವೆಲ್ಲರಿ ಅಂಗಡಿಯಲ್ಲಿಯೇ ಚಿನ್ನ ಖರೀದಿಸಿ ಎನ್ನುವ ಟ್ವಿಟರ್ ಅಭಿಯಾನವೊಂದು ಆರಂಭವಾಗಿದೆ. ಈ ಅಭಿಯಾನಕ್ಕೆ ಶ್ರೀರಾಮಸೇನೆ ಸಂಪೂರ್ಣ ಬೆಂಬಲ ಘೋಷಿಸಿದೆ

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 24, 2022 | 2:19 PM

ಬಾಗಲಕೋಟೆ: ಕರ್ನಾಟಕದಲ್ಲಿ ಹಿಜಾಬ್, ಹಲಾಲ್ ವಿವಾದಗಳ ನಂತರ ಇದೀಗ ಅಕ್ಷಯ ತೃತೀಯದ ಚಿನ್ನದ ಖರೀದಿಯೂ ವಿವಾದಕ್ಕೀಡಾಗುವ ಸಾಧ್ಯತೆಯಿದೆ. ಅಕ್ಷಯ ತೃತೀಯಕ್ಕೆ ಹಿಂದೂಗಳ ಜ್ಯುವೆಲ್ಲರಿ ಅಂಗಡಿಯಲ್ಲಿಯೇ ಚಿನ್ನ ಖರೀದಿಸಿ ಎನ್ನುವ ಟ್ವಿಟರ್ ಅಭಿಯಾನವೊಂದು ಆರಂಭವಾಗಿದೆ. ಈ ಅಭಿಯಾನಕ್ಕೆ ಶ್ರೀರಾಮಸೇನೆ ಸಂಪೂರ್ಣ ಬೆಂಬಲ ಘೋಷಿಸಿದೆ. ಕರ್ನಾಟಕದಲ್ಲಿ ಕೇರಳ ಮೂಲದ ಮುಸ್ಲಿಮ್ ಮಾಲೀಕತ್ವದ ಜ್ಯುವೆಲರಿ ಮಳಿಗೆಗಳು ಇವೆ. ಅದರಲ್ಲಿ ಚಿನ್ನ ಖರೀದಿಸಬಾರದು ಎಂದು ಬಾಗಲಕೋಟೆಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಕರೆ ನೀಡಿದರು. ಜಟ್ಕಾ ಅಭಿಯಾನದ ಮೂಲಕ ಸಮಾಜದಲ್ಲಿ ಅಗತ್ಯ ಜಾಗೃತಿ ಮೂಡಿಸುವ ಕೆಲಸ ಯಶಸ್ಬಿಯಾಗಿದೆ. ಈಗ ಅಕ್ಷಯ ತೃತೀಯ ಸಂದರ್ಭದಲ್ಲಿ ಹಿಂದೂಗಳ ಮಾಲೀಕತ್ವದ ಜ್ಯುವೆಲ್ಲರಿ ಅಂಗಡಿಗಳಲ್ಲಿಯೇ ಚಿನ್ನದ ಆಭರಣಗಳನ್ನು ಖರೀದಿಸಬೇಕು ಎಂದು ಮುತಾಲಕ್ ಸಲಹೆ ಮಾಡಿದ್ದಾರೆ.

ಕೇರಳದಲ್ಲಿ 800 ಹಿಂದೂಗಳ ಕೊಲೆಯಾಗಿದೆ. ಚಿನ್ನದ ಆಭರಣ ಖರೀದಿಸುವಾಗ ನೀವು ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಮಾಲೀಕತ್ವದ ಯಾರದು ಎಂದು ತಿಳಿಯದೆ ನೀವು ಆಭರಣ ಖರೀದಿಸಿದರೆ ಅದರ ಲಾಭ ಕೇರಳದ ಮುಸ್ಲಿಂ ಸಂಘಟನೆಗಳಿಗೆ ಹೋಗುತ್ತದೆ. ಅದೇ ಹಣವು ಅಲ್ಲಿ ಹಿಂದೂಗಳ ಕೊಲೆ, ದೌರ್ಜನ್ಯಕ್ಕೆ ಬಳಕೆಯಾಗುತ್ತದೆ ಎಂದು ಆಕ್ಷೇಪಿಸಿದರು.

ಲವ್ ಜಿಹಾದ್ ಎನ್ನುವುದು ಇಂದಿನ ವಾಸ್ತವ. 12 ಸಾವಿರ ಹುಡುಗಿಯರನ್ನು ಮುಸ್ಲಿಮರು ಮತಾಂತರ ಮಾಡಿದ್ದಾರೆ. ನೀವು ಅವರ ಅಂಗಡಿಯಲ್ಲಿ ಬಂಗಾರ ಖರೀದಿ ಮಾಡಿದರೆ ನಮ್ಮ ತಲೆ ಮೇಲೆ ಚಪ್ಪಡಿ ಎಳೆದುಕೊಂಡಂತಾಗುತ್ತದೆ. ಹೀಗಾಗಿ ಅಕ್ಷಯ ತೃತೀಯಕ್ಕೆ ಹಿಂದೂ ಜುವೇಲರಿ ಅಂಗಡಿಗಳಲ್ಲಿಯೇ ಖರೀದಿ ಮಾಡಿ ಎಂದು ಪ್ರಮೋದ್ ಮುತಾಲಿಕ್ ಸಲಹೆ ಮಾಡಿದರು.

ನ್ಯಾಯಾಧೀಶರಿಂದ ತನಿಖೆ ನಡೆಯಲಿ

ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕುರಿತು ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್, ಈ ಕುರಿತು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ಸಮಗ್ರ ತನಿಖೆ ನಡೆಯಬೇಕು. ಸಿಐಡಿಯವರು ಇವರೆಲ್ಲ ಭ್ರಷ್ಟರು, ಒನ್​ಸೈಡ್ ಆಗಿದ್ದಾರೆ. ಯಾವ ಸರ್ಕಾರ ಇರುತ್ತದೆಯೋ ಆ ಸರ್ಕಾರದ ಕಡೆಗೆ ಇಲಾಖೆ ಇರುತ್ತೆ. ತನಿಖೆಯೂ ಅದೇ ರೀತಿ ನಡೆಯುತ್ತೆ. ಇಡೀ ಪ್ರಕರಣ ಭಯಾನಕವಾಗಿದೆ. ಭ್ರಷ್ಟಾಚಾರದ ದೊಡ್ಡ ಜಾಲವೇ ಇದೆ. ಎಲ್ಲ ಪಕ್ಷಗಳ ರಾಜಕಾರಣಿಗಳು ಭ್ರಷ್ಡಾಚಾರದಲ್ಲಿ ತೊಡಗಿದ ಪರಿಣಾಮ ಈ ಹಗರಣ ನಡೆದಿದೆ. ಕಾಂಗ್ರೆಸ್ ಮೇಲೆ ಬಿಜೆಪಿ, ಬಿಜೆಪಿ ಮೇಲೆ ಕಾಂಗ್ರೆಸ್ ಮೇಲೆ ಆರೋಪಗಳನ್ನು ಹೊರಿಸುತ್ತಿದೆ. ಆಂತರಿಕ ಸುರಕ್ಷ ಇರುವ ಆರಕ್ಷಕ ಇಲಾಖೆಯನ್ನು ಭ್ರಷ್ಟ ಮಾಡಿದ ವ್ಯವಸ್ಥೆ ಈ ಹಗರಣದಲ್ಲಿದೆ ಎಂದು ಹೇಳಿದರು.

2023ರ ಚುನಾವಣೆಯಲ್ಲಿ ಶ್ರೀರಾಮಸೇನೆ ಸ್ಪರ್ಧೆ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ರಾಜಕೀಯದಿಂದ ದೂರ ಇದ್ದೇವೆ. ಬಿಜೆಪಿಯವರು ನಮ್ಮಂಥ ಪ್ರಾಮಾಣಿಕರಿಗೆ ಟಿಕೆಟ್ ಕೊಡುವುದೇ ಇಲ್ಲ ಎಂದರು.

ಆರ್​ಎಸ್​​ಎಸ್​ ನಿಷೇಧಿಸಬೇಕು ಎನ್ನುವ ಎಂಬ ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಆರ್​ಎಸ್​ಎಸ್​, ಶ್ರೀರಾಮಸೇನೆಯಂಥ ಹಿಂದೂ ಸಂಘಟನೆಗಳನ್ನು ಎಸ್​ಡಿಪಿಐ ಮತ್ತು ಪಿಎಫ್​ಐನಂಥ ಸಂಘಟನೆಗಳಿಗೆ ಹೋಲಿಸುವುದು ಮೂರ್ಖತನವಾಗುತ್ತದೆ. ನಮ್ಮ ಹಿಂದೂ ಸಂಘಟನೆಗಳು ಎಂದೂ ದೇಶವಿರೋಧಿ ಚಟುವಟಿಕೆಗಳನ್ನು ಮಾಡಿಲ್ಲ. ಬಾಂಬ್ ಮತ್ತು ಬಂದೂಕುಗಳನ್ನು ಹಿಡಿದಿಲ್ಲ. ಎಸ್​ಡಿಪಿಐ ಮತ್ತು ಪಿಎಫ್ಐನವರಿಗೆ ಭಯೋತ್ಪಾದಕ ಸಂಘಟನೆಗಳ ಸಂಪರ್ಕ ಇದೆ ಎಂಬುದು ನಮ್ಮ ಮಾತಲ್ಲ. ಸರ್ಕಾರ ಮತ್ತು ದಾಖಲೆಗಳು ಈ ಮಾತು ಹೇಳುತ್ತಿವೆ. ಕೇರಳದ ಮುಖ್ಯಮಂತ್ರಿ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಭಯೋತ್ಪಾದಕ ಸಂಘಟನೆಗಳ ಜೊತೆ ಸಂಬಂಧ ಇದೆ ಎಂದು ದೂರಿದ್ದಾರೆ. ಈ ಪತ್ರ ಬರೆದವರು ಬಿಜೆಪಿ ಮುಖ್ಯಮಂತ್ರಿಯಲ್ಲ, ಕಮ್ಯುನಿಸ್ಟ್ ಸರ್ಕಾರದ ಮುಖ್ಯಮಂತ್ರಿ ಎಂದರು.

ಅಂದಿನ ಪ್ರಧಾನಿ ನೆಹರು ಅವರೇ ಜನವರಿ 26ರ ಗಣರಾಜ್ಯೋತ್ಸವ ಪರೇಡ್​ಗೆ ಕರೆದಿದ್ದರು. ಈ ಅಂಶ ನಿಮಗೆ ಅರ್ಥವಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಹಿಂದೂ ಸಮಾಜವು ಈಗ ಜಾಗೃತವಾಗಿದೆ. ಒಳ್ಳೆಯದು ಕೆಟ್ಟದ್ದು, ಶತ್ರು-ಮಿತ್ರರು ಯಾರು ಎಂಬುದು ಹಿಂದೂಗಳಿಗೆ ಗೊತ್ತಾಗುತ್ತಿದೆ. ಎಂ.ಬಿ.ಪಾಟೀಲ್ ಮಾತನಾಡಬೇಕಾದರೆ ನಾಲಿಗೆ ಬಿಗಿ ಹಿಡಿಯಬೇಕು. ಹೋಲಿಕೆ ಮಾಡಬಾರದು ಎಂದರು.

ಕೊಕಾ ಕಾಯ್ದೆ ದಾಖಲಿಸಿ

ಹುಬ್ಬಳ್ಳಿ ‌ಗಲಭೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಬರೀ ಮಾತಲ್ಲಿ ಮಾತ್ರ ಹೇಳುತ್ತಾರೆ. ಸೂಕ್ತ ಕ್ರಮ ತೆಗೆದುಕೊಳ್ಳಲು ಅವರಿಗೆ ಧೈರ್ಯವಿಲ್ಲ. ಸರ್ಕಾರ ಈವರೆಗೂ ಗಟ್ಟಿ ಕ್ರಮಕೈಗೊಳ್ಳುತ್ತಿಲ್ಲ. ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿಯೂ 300 ಜನರನ್ನು ಬಂಧಿಸಿದರು. ಅವರೆಲ್ಲರೂ ನಂತರದ ದಿನಗಳಲ್ಲಿ ಜಾಮೀನುಗಳ ಮೇಲೆ ಹೊರಬಂದರು. ಇಂಥದ್ದೇ ಕ್ರಮವನ್ನು ಈಗ ಹುಬ್ಬಳ್ಳಿಯಲ್ಲಿಯೂ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಬಿಟ್ಟು ಏನೂ ಮಾಡೋದಿಲ್ಲ. ಕೋಕಾ ಕಾಯ್ದೆ ಹಾಕಿ ಅಂದ್ರು ಕೇಳುತ್ತಿಲ್ಲ. ಅದು ಸಾಮೂಹಿಕ, ಸಂಘಟಿತ ಗಲಭೆ. ಹೀಗಾಗಿ ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸಿದರೆ ತಪ್ಪಿತಸ್ಥರು ಜೈಲಿನಲ್ಲಿ ಕೊಳೆಯುವಂತೆ ಆಗುತ್ತದೆ. ಯೋಗಿ ಮಾದರಿಯ ಅಧಿಕಾರ ಬೇಕು ಎಂಬ ಮಾತು ಜನಸಾಮಾನ್ಯರಲ್ಲಿ ಕೇಳಿಬರುತ್ತಿದೆ. ಹಾಗಾದರೆ ಉತ್ತರಪ್ರದೇಶ ಬೇರೆ, ಕರ್ನಾಟಕ ಬೇರೆಯೇ. ದಂಗೆಗಳು ಒಂದೇ, ಕಲ್ಲು ಒಂದೇ, ಕಾನೂನು ಸಹ ಎಲ್ಲರಿಗೂ ಒಂದೇ ಎಂದು ಆಗ್ರಹಿಸಿದರು.

ಇದನ್ನೂ ಓದಿ: ಮುಸ್ಲಿಂ ಯುವಕರಿಗೆ ತರಬೇತಿ ನೀಡಲು ಲವ್-ಜಿಹಾದ್ ಟ್ರೇನಿಂಗ್ ಸೆಂಟರ್ ಗಳನ್ನು ತೆರೆಯಲಾಗಿದೆ: ಪ್ರಮೋದ್ ಮುತಾಲಿಕ್

ಇದನ್ನೂ ಓದಿ: ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ: ಠಾಣೆಗೆ ಭೇಟಿ ನೀಡಿ ಚರ್ಚೆ ನಡೆಸಿದ ಪ್ರಮೋದ್ ಮುತಾಲಿಕ್, ದಿಡ್ಡಿ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ

Follow us on

Related Stories

Most Read Stories

Click on your DTH Provider to Add TV9 Kannada