ಸಿಎಂ ಸೂಚನೆ ಬೆನ್ನಲ್ಲೇ ಪೊಲೀಸ್ ಕಾರ್ಯಾಚರಣೆ: ಬೀದಿಬದಿ ಸೇರಿ ಎಪಿಎಂಸಿಯಲ್ಲಿ ಕೆಲಸ ಮಾಡ್ತಿದ್ದ 29 ಬಾಲ ಕಾರ್ಮಿಕರ ರಕ್ಷಣೆ
ಬೆಂಗಳೂರಿನ ಯಶವಂತಪುರ APMC ಮಾರುಕಟ್ಟೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ ಬಳಿಕ ಬಾಲ ಕಾರ್ಮಿಕರ ರಕ್ಷಣೆಗೆ ಆದೇಶಿಸಿದರು. ಪೊಲೀಸರು 29 ಬಾಲ ಕಾರ್ಮಿಕರನ್ನು ರಕ್ಷಿಸಿ, 4 ಅಂಗಡಿ ಮಾಲೀಕರನ್ನು ಬಂಧಿಸಿದ್ದಾರೆ. ಸಿಎಂ ಭೇಟಿಯಿಂದ APMC ಯಲ್ಲಿ ರೈತರಿಂದ ಕಮಿಷನ್ ವಸೂಲಿ, ಮೂಲ ಸೌಕರ್ಯಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಬೆಳಕಿಗೆ ಬಂದಿದ್ದು, ತಕ್ಷಣ ಸರಿಪಡಿಸಲು ಸೂಚಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 08: ಸಿಎಂ ಡಿಕೆ ಶಿವಕುಮಾರ್ ಇಂದು ಬೆಳಗ್ಗೆ ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾರುಕಟ್ಟೆಯಲ್ಲಿ ಮಕ್ಕಳು ಕೂಲಿ ಕೆಲಸ ಮಾಡುತ್ತಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳ ಭವಿಷ್ಯವನ್ನು ಹಾಳುಮಾಡಿ ದುಡಿಮೆಗೆ ಹಚ್ಚಿರುವ ಮಾಲೀಕರನ್ನು ಇಂದೇ ಸಂಜೆಯೊಳಗೆ ಬಂಧಿಸುವಂತೆ ಸೂಚಿಸಿದ್ದರು. ಈ ಬೆನ್ನಲ್ಲೇ ಅಲರ್ಟ್ ಆದ ಪೊಲೀಸರು ಬೀದಿಬದಿ ಸೇರಿದಂತೆ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿದ್ದ ಹೊರ ರಾಜ್ಯದ 29 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. 4 ಕೇಸ್ ದಾಖಲಿಸಿ ನಾಲ್ವರು ಶಾಪ್ ಮಾಲೀಕರನ್ನು ಬಂಧಿಸಲಾಗಿದೆ.
ಸಿಎಂ ಸೂಚನೆ ಬೆನ್ನಲ್ಲೇ ಪೊಲೀಸರ ಮಿಂಚಿನ ಕಾರ್ಯಾಚರಣೆ: 29 ಮಕ್ಕಳ ರಕ್ಷಣೆ
ಸಿಎಂ ಡಿಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ ಬೆಂಗಳೂರು ನಗರ ಉತ್ತರ ವಿಭಾಗದ ಪೊಲೀಸರು ಮಾರುಕಟ್ಟೆಯಾದ್ಯಂತ ವಿಶೇಷ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ. ಐದು ಪ್ರತ್ಯೇಕ ಪೊಲೀಸ್ ತಂಡ ರಚಿಸಿ ಅಂಗಡಿಗಳು ಮತ್ತು ಗೋಡೌನ್‌ಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಈ ವೇಳೆ ಹೊರ ರಾಜ್ಯದ ಮಕ್ಕಳು ಸೇರಿದಂತೆ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿದ್ದ 19 ಬಾಲಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಿದರು.
ಇದನ್ನೂ ಓದಿ: ಚಿಕ್ಕ ಮಕ್ಕಳಿಂದ ದುಡಿಮೆ ಮಾಡಿಸಿದರೆ ಜೈಲು ಗ್ಯಾರಂಟಿ: ಪೊಲೀಸ್ ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಡೆಡ್‌ಲೈನ್
ಈ ಸಂಬಂಧ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ನಾಲ್ವರು ಅಂಗಡಿ ಮಾಲೀಕರನ್ನು ಬಂಧಿಸಲಾಗಿದೆ. ಇದೇ ವೇಳೆ ಮಾರುಕಟ್ಟೆಯ ಸುತ್ತಮುತ್ತಲಿನ ರಸ್ತೆಬದಿಯ ವ್ಯಾಪಾರ ಹಾಗೂ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಇನ್ನೂ 10 ಮಕ್ಕಳನ್ನ ರಕ್ಷಣೆ ಮಾಡಲಾಗಿದೆ.
ಮಕ್ಕಳನ್ನು ಶಾಲೆಗೆ ಕಳಿಸುವ ವ್ಯವಸ್ಥೆ ಆಗಬೇಕು ಎಂದ ಸಿಎಂ
ಇನ್ನು ಈ ಕುರಿತಾಗಿ ಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ‘ಇಲ್ಲಿ ಚಿಕ್ಕ ಮಕ್ಕಳು ಕೂಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಕೂಲಿ ಮಾಡೋದನ್ನು ನಿಲ್ಲಿಸಿ ಮಕ್ಕಳನ್ನು ಶಾಲೆಗೆ ಕಳಿಸಬೇಕು. ಮಕ್ಕಳನ್ನು ಶಾಲೆಗೆ ಕಳಿಸುವ ವ್ಯವಸ್ಥೆ ಆಗಬೇಕು’ ಎಂದಿದ್ದಾರೆ.
‘ಎಪಿಎಂಸಿ ಮಾರುಕಟ್ಟೆಯಲ್ಲಿನ ಸಮಸ್ಯೆಗಳನ್ನು ಆಲಿಸಿದ್ದೇನೆ. ರೈತರು, ವರ್ತಕರು, ಹಮಾಲಿಗಳು, ಕೂಲಿ ಕಾರ್ಮಿಕರು, ವ್ಯಾಪಾರಿಗಳು, ಮಹಿಳಾ ವ್ಯಾಪಾರಿಗಳು ಮತ್ತು ಕೆಲಸ ಮಾಡುವವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಎಪಿಎಂಸಿಯ ಹಲವು ವಿಚಾರ ಖುದ್ದು ಮಾಹಿತಿ ಪಡೆದಿದ್ದೇನೆ. ಮಾರುಕಟ್ಟೆಯಲ್ಲಿ ಮೂಲ ಸೌಲಭ್ಯಗಳ ಕೊರತೆ ಬಗ್ಗೆ, ಎಲ್ಲವನ್ನೂ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದೇನೆ. ಸಮಸ್ಯೆಗಳನ್ನು ನಿವಾರಿಸುವ ಕೆಲಸ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಕಮಿಷನ್ ದಂಧೆಗೆ ಬ್ರೇಕ್: ಮೂಲಸೌಕರ್ಯ ಕಲ್ಪಿಸಲು ಸಿಎಂ ಖಡಕ್ ಸೂಚನೆ
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿನ ತೀವ್ರ ಅವ್ಯವಸ್ಥೆ, ಮೂಲಸೌಕರ್ಯಗಳ ಕೊರತೆ ಹಾಗೂ ಮಧ್ಯವರ್ತಿಗಳ ಕಾಟದ ಕುರಿತು ಸರಣಿ ದೂರುಗಳು ಬಂದ ಹಿನ್ನೆಲೆ ಸಿಎಂ ಡಿಕೆ ಶಿವಕುಮಾರ್ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಭೇಟಿಯ ವೇಳೆ ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯದಂತಹ ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಅನ್ನದಾತರು ಹಾಗೂ ವ್ಯಾಪಾರಿಗಳು ಪರದಾಡುತ್ತಿರುವುದನ್ನು ಖುದ್ದು ಗಮನಿಸಿದ ಅವರು, ತಕ್ಷಣವೇ ವ್ಯವಸ್ಥೆ ಸರಿಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದನ್ನೂ ಓದಿ: ಡಿಕೆಶಿ ಸರ್, ಕಾಫಿ ಕುಡಿದಿದ್ದಕ್ಕೆ ದುಡ್ಡು ಕೊಡಬೇಡಿ ನಾವು ಕೊಡ್ತೀವಿ ಎಂದ ಮಹಿಳೆ!
ಇನ್ನು ಬೆಳೆಗಳ ಮೇಲೆ ಕಮಿಷನ್ ಲೆಕ್ಕ ಹಾಕಿ ಕಿರುಕುಳ ನೀಡುತ್ತಿರುವ ಆರೋಪಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಸಿಎಂ, ‘ಯಾವುದೇ ಕಾರಣಕ್ಕೂ ರೈತರಿಂದ ನಯಾಪೈಸೆ ಕಮಿಷನ್ ಪಡೆಯುವಂತಿಲ್ಲ. ಇಂತಹ ಅಕ್ರಮ ದಂಧೆಯಲ್ಲಿ ತೊಡಗಿರುವ ಮಧ್ಯವರ್ತಿಗಳ ಮಾಹಿತಿಯನ್ನು ತಕ್ಷಣ ಕಲೆಹಾಕಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




