ನಿರ್ವಹಣಾ ಕಾಮಗಾರಿ ಹಿನ್ನೆಲೆ ನಮ್ಮ ಮೆಟ್ರೋ ನೇರಳೆ ಮಾರ್ಗದ ರೈಲುಗಳ ವೇಗದ ಮಿತಿ ಕಡಿತ
ನಮ್ಮ ಮೆಟ್ರೋ ನೇರಳೆ ಮಾರ್ಗದ ಬೆನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ನಡುವೆ ಓಪನ್ ವೆಬ್ ಗರ್ಡರ್ ನಿರ್ವಹಣಾ ಕಾಮಗಾರಿ ಹಿನ್ನೆಲೆ, ರೈಲುಗಳ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 40 ಕಿ.ಮೀ.ಗೆ ಕಡಿತಗೊಳಿಸಲಾಗಿದೆ. ನಿರ್ವಹಣಾ ಕಾರ್ಯವು 2026ರ ಅಕ್ಟೋಬರ್ ಎರಡನೇ ವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾರ್ಯ ಪೂರ್ಣಗೊಂಡ ನಂತರ ತಾಂತ್ರಿಕ ಮೌಲ್ಯಮಾಪನದ ಆಧಾರದ ಮೇಲೆ ತಾತ್ಕಾಲಿಕ ವೇಗ ನಿರ್ಬಂಧವನ್ನು ಮರುಪರಿಶೀಲಿಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಬೆಂಗಳೂರು, ಆಗಸ್ಟ್ 28: ನಿರ್ವಹಣೆ ಕಾಮಗಾರಿಯ ಹಿನ್ನೆಲೆ ನಮ್ಮ ಮೆಟ್ರೋ ನೇರಳೆ ಮಾರ್ಗದ ಬೆನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ನಡುವಿನ ರೈಲುಗಳ ವೇಗ ಕಡಿಮೆಯಾಗಲಿದೆ. ಟ್ರೋ ನಿಲ್ದಾಣಗಳ ನಡುವೆ ಇರುವ ಓಪನ್ ವೆಬ್ ಗರ್ಡ‌್ರನಲ್ಲಿ (OWG) ಪ್ರಸ್ತುತ ನಿಗದಿತ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಕಾರ್ಯದ ಭಾಗವಾಗಿ, ತಾಂತ್ರಿಕ ಮೇಲ್ವಿಚಾರಣೆಯಲ್ಲಿ ವಿಶೇಷ ಪರಿಣತ ತಂಡವು ಗರ್ಡರ್ ನ ನಿಯತಕಾಲಿಕ ತಪಾಸಣೆ ನಡೆಸುತ್ತಿದ್ದು, ಅಗತ್ಯ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.
BMRCL ಪ್ರಕಟಣೆಯಲ್ಲಿ ಏನಿದೆ?
ಬೆನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ನಡುವೆ ತಾತ್ಕಾಲಿಕ ವೇಗ ನಿರ್ಬಂಧ / Temporary Speed Restriction between Benniganahalli and Baiyappanahalli. pic.twitter.com/6SuIkwWO4I
— ನಮ್ಮ ಮೆಟ್ರೋ (@OfficialBMRCL) August 28, 2026
ಹೆಚ್ಚುವರಿ ಸುರಕ್ಷತಾ ಕ್ರಮವಾಗಿ, ನಿರ್ವಹಣಾ ಅವಧಿಯಲ್ಲಿ ಗರ್ಡರ್ ಮೇಲಿನ ಸಾಮಾನ್ಯ ಅನುಮತಿಸಲಾದ ಗರಿಷ್ಠ ವೇಗವಾದ ಗಂಟೆಗೆ 65ಕಿ.ಮೀ, ಬದಲಾಗಿ, ರೈಲುಗಳನ್ನು ತಾತ್ಕಾಲಿಕವಾಗಿ ಗಂಟೆಗೆ ಗರಿಷ್ಠ 40 ಕಿ.ಮೀ. ವೇಗದಲ್ಲಿ ಚಲಾಯಿಸಲಾಗುತ್ತಿದೆ. ನಿರ್ವಹಣೆ ಮತ್ತು ತಾಂತ್ರಿಕ ಮೇಲ್ವಿಚಾರಣಾ ಚಟುವಟಿಕೆಗಳ ಸಂದರ್ಭದಲ್ಲಿ ಇಂತಹ ತಾತ್ಕಾಲಿಕ ವೇಗ ನಿರ್ಬಂಧಗಳನ್ನು ವಿಧಿಸುವುದು ರೈಲ್ವೆಯಲ್ಲಿ ಅನುಸರಿಸಲಾಗುವ ಪ್ರಮಾಣಿತ ಸುರಕ್ಷತಾ ಕ್ರಮವಾಗಿದೆ. ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ಎಂದಿನಂತೆ ಮುಂದುವರಿಯುತ್ತಿದ್ದು, ಒಟ್ಟಾರೆ ಪ್ರಯಾಣದ ಸಮಯದಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಷ್ಟೇ ಉಂಟಾಗಲಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: 1 ವರ್ಷದಲ್ಲಿ 15 ಬಾರಿ ತಾಂತ್ರಿಕ ದೋಷ: ನಮ್ಮ ಮೆಟ್ರೋ ವಿರುದ್ಧ ಪ್ರಯಾಣಿಕರ ಆಕ್ರೋಶ, ನಿರ್ವಹಣೆ ಇಲ್ಲ ಎಂದು ಅಸಮಾಧಾನ
ಅಕ್ಟೋಬರ್ ಎರಡನೇ ವಾರದೊಳಗೆ ಕಾಮಗಾರಿ ಪೂರ್ಣ ನಿರೀಕ್ಷೆ
ನಿರ್ವಹಣಾ ಕಾರ್ಯವು 2026ರ ಅಕ್ಟೋಬರ್ ಎರಡನೇ ವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾರ್ಯ ಪೂರ್ಣಗೊಂಡ ನಂತರ ತಾಂತ್ರಿಕ ಮೌಲ್ಯಮಾಪನದ ಆಧಾರದ ಮೇಲೆ ತಾತ್ಕಾಲಿಕ ವೇಗ ನಿರ್ಬಂಧವನ್ನು ಮರುಪರಿಶೀಲಿಸಲಾಗುವುದು. ಮೆಟ್ರೋ ಸೇವೆಗಳ ನಿರಂತರ ಸುರಕ್ಷಿತ ಮತ್ತು ವಿಶ್ವಾಸಾರ್ಹ ಕಾರ್ಯಾಚರಣೆಯನ್ನು ಖಚಿತಪಡಿಸಲು ಬಿಎಂಆರ್‌ಸಿಎಲ್ ಮುಂಜಾಗ್ರತಾ ನಿರ್ವಹಣಾ ವಿಧಾನವನ್ನು ಅನುಸರಿಸುತ್ತಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



